ಹೊಸ ವರುಷದ ಮೊದ ಮೊದಲ ಕವಿತೆ
ಹೊಸ ಕನಸು ಕಾಮನೆಗಳ ಪ್ರಾಂಜಲ ಪ್ರಣತೆ
ನವ ಸ್ಫೂರ್ತಿ ಸದಾಶಯಗಳ ಭಾವದೊರತೆ
ವರ್ಷದಾರಂಭದ ದಿನ ಹಚ್ಚಿದ ಹೃದ್ಯಹಣತೆ.!

ಧರೆಯ ಬೆಳಗಲಿ ನವನೇಸರನ ಹೊಂಗಿರಣ
ಚೈತನ್ಯವಿಟ್ಟು ಹರಸುತ ಚರಾಚರಗಳ ಕಣಕಣ
ಕಾಲಕಾಲಕ್ಕೆ ವರ್ಷಧಾರೆ ಕರುಣಿಸಲಿ ವರುಣ
ತೊಡಿಸುತಲಿ ಇಳೆಗೆ ಸುಗ್ಗಿ ಸಮೃದ್ಧಿ ತೋರಣ.!

ಹಿಗ್ಗಿ ಹರಿಯುತ ಕೆರೆ ತೊರೆ ನಾಲೆ ಹೊನಲು
ತಣಿಸಿ ಸಂಪ್ರೀತವಾಗಿಸಲಿ ಪ್ರತಿ ಜೀವಿಯೊಡಲು
ನಳನಳಿಸುತ ಹೊಲ ಗದ್ದೆ ತೋಟದಿ ಫಸಲು
ಮೂಡಲಿ ಎಲ್ಲೆಡೆ ಸುಭಿಕ್ಷೆ ಸಮಷ್ಟಿಯ ಟಿಸಿಲು.!

ದೂರಾಗಿಸುತ ಸಾಂಕ್ರಾಮಿಕಗಳ ರುಜಿನ ಯಾದಿ
ಬೆಳಕಾಗಿಸಲಿ ಕೀರ್ತಿ ಸಾಧನೆ ಪ್ರಗತಿಯ ಹಾದಿ
ನುಡಿಸುತ ಮಧುಮಧುರ ಭಾವೈಕ್ಯತೆಯ ಸನಾದಿ
ನೆಲೆಯಾಗಿಸಲಿ ಸೌಹಾರ್ದ ಸಾಮರಸ್ಯದ ಶರಧಿ.!

ದಮನಿಸುತ ದ್ವೇಷಾಸೂಯೆ ಮತ್ಸರಗಳ ಸಂತತಿ
ಮೊಳಗಿಸಲಿ ಏಕತೆ ಐಕ್ಯತೆ ಸಮತೆಗಳ ಸಂಕ್ರಾಂತಿ
ಪ್ರಜ್ವಲಿಸುತ ನೀತಿ ಸಂಸ್ಕೃತಿ ಸಂಸ್ಕಾರಗಳ ನಿಯತಿ
ಪಸರಿಸಲಿ ಸಹನೆ ಸಹಿಷ್ಣು ಸನ್ಮತಿ ಸ್ನೇಹ ಸಂಪ್ರೀತಿ.!

ಮಮತೆ ವಾತ್ಸಲ್ಯದಿ ಮನೆ-ಮನೆಯಾಗಲಿ ನಂದನ
ಪ್ರೀತಿ ಬಾಂಧವ್ಯದಿ ಎದೆಯೆದೆಯಾಗಲಿ ಬೃಂದಾವನ
ಕರುಣೆ ಮಮಕಾರ ಸೆಲೆಯಾಗಲಿ ಸಕಲರ ಹೃನ್ಮನ
ಶಾಂತಿ ಹೂಬನವಾಗಲಿ ಜಗದೆಲ್ಲ ಜೀವ-ಜೀವನ.!

✍️ಎ.ಎನ್.ರಮೇಶ್.ಗುಬ್ಬಿ.