ಹುಡುಕಿದೆ ಹಗಲೆಲ್ಲ ರಾತ್ರೆಯೆಲ್ಲಾ ಮಗುವಿನ ಕಣ್ಣಿನಲಿ ಮತ್ತಲೆಲ್ಲಾ ಮನೆಯಲಿ ಮಂಚದ ಮೇಲೊರಗಿ ನನ್ನುಸಿರಿನ ಸದ್ದಿನಲಿ ಯಾರು ಸತ್ತರೂ ಯಾರು ಅತ್ತರು ನಾನು ಅಳಲಿಲ್ಲ

ಎರಡು ಎರಡೂವರೆ ವರ್ಷ ಪ್ರತಿ ನಿಮಿಷವೂ ಮಹಾಜಾತ್ರೆ ಮಲ್ಲಿಗೆಯ ನಗೆ ನಲ್ಮೆಯ ನೆಳಲು ಹೋಗುತ್ತೆನೆ ಹಿಂದಕ್ಕೆ ಎಳೆದು ಬಾಚಿ ತಬ್ಬುತಿರುವೆ ಆ ಕೋಟು, ವಸ್ತ್ರವಿಲಾಸ ಸದ್ದಿರದ ಖಾಲಿಕೋಣೆಯಲಿ

ಹುಡುಕುತಿದೆ ಅಂತರಾಳಗಳಲಿ ನಿಂತ ನೀರುಗಳಲಿ ಬೆಳಗು ಸಂಜೆಯ ವರೆಗೂ ತವರು ಮನೆಗೆ ಹೊರಟ ಹೆಂಡತಿ ಬರುವಿಕೆಗಾಗಿ ಕಾದು ಕುಳಿತ ಗಂಡನಂತೆ ಹಲ್ಲಿ ಲೊಚಗುಟ್ಟುತ್ತಿದೆ ಗೋಡೆಯಲಿ

ತೆರೆದ ಬಾಗಿಲು ಪ್ರೀತಿಯಲಿ ಬಡಿಸಿದ ಊಟ ಇನ್ನರ್ಧ ಗಂಟೆ ಹರಟೆ ಈಗ ಕಥೆಯೇನು ? ಖಾಲಿ ತಟ್ಟೆಯಲ್ಲಿ ಕಾದು ಕುಳಿತಿದ್ದೇನೆ ಪ್ರತಿ ಭಾನುವಾರದ ಹಗಲಿನಲಿ

ನಿನ್ನ ಹೊಗಳಿಕೆ ನನಗೆ ಅರ್ಥವಾಗುವುದಿಲ್ಲ ಎಂದು ಹೇಳದಿರು ಗೆಳೆಯ ನನ್ನ ನೆನೆಪಿನ ಬಂಡೆಯ ಮೇಲೆ ನಿನ್ನ ಹೆಸರನು ಕೆತ್ತಿಸುವೆನು .

****** —–ಶ್ರೀ ಪ್ರಕಾಶ ಬಿ

ಕನ್ನಡ ಸಹಾಯಕ ಪ್ರಾಧ್ಯಾಪಕರು ಸಪ್ರದಕಾಲೇಜು ಶಿರಸಿ