ಕವಿಗಳು ಮತ್ತು ರಾಜರು ಒಟ್ಟಾಗಿ ಸಾಗುವ ಮಾರ್ಗವೇ ಕವಿರಾಜಮಾರ್ಗ” ಎಂದು ನಾಡಿನ ಸಂವೇದನಾಶೀಲ ವಿಮರ್ಶಕರಾದ ಡಾ.ಎಂ.ಎಸ್. ಆಶಾದೇವಿ ಅವರು ಕನ್ನಡದ ಮೊದಲ ಲಾಕ್ಷಣಿಕ ಗ್ರಂಥ ‘ಕವಿರಾಜಮಾರ್ಗ’ದ ಕುರಿತು ಹೇಳುತ್ತಾರೆ. ಕವಿಗಳಿಗೂ ರಾಜನಷ್ಟೇ ಪ್ರಾಶಸ್ತ್ಯವಿದೆ     ಎನ್ನುವುದಾದರೆ ಜವಾಬ್ದಾರಿಯೂ ಕೂಡ ಅತಿ ಹೆಚ್ಚಿನ ಪ್ರಮಾಣದಲ್ಲಿಯೇ ಇರುತ್ತದೆ ಎಂಬುದು ಗಮನಿಸತಕ್ಕ ವಿಚಾರವಾಗಿದೆ. “ಖಡ್ಗಕ್ಕಿಂತ ಲೇಖನಿ ಹರಿತವಾದದ್ದು” ಎಂಬ ವಾಲ್ಟೇರ್ ನುಡಿ ನಮಗೆ ಬರಹದ ಅದಮ್ಯ ಶಕ್ತಿಯನ್ನು ಪರಿಚಯಿಸುತ್ತದೆ.

ಕವಿಯ ಎದೆಯೊಳಗಿಂದ ಕವಿತೆಯೊಂದು ಒಡ ಮೂಡಿದಾಗ ಮುಂದೆ ಏನಾಗಬಹುದೆಂಬ ಕಲ್ಪನೆ ಬಹುಶಃ ಕವಿಗಾಗಲಿ, ಕವಿತೆಗಾಗಲಿ ಇರುವುದಿಲ್ಲ. ಅದು ಹೊರಬಂದು ಜನಮಾನಸ ಸೇರಿದ ಮೇಲೆ, ಸಮಾಜದ ಮೇಲೆ ಅದು ಬೀರುವ ಪ್ರಭಾವ ಮಾತ್ರ ಅದಕ್ಕೆ ಉತ್ತರವಾದೀತು.

ಕವಿಯೊಳಗೆ ಕಾವ್ಯ ಹುಟ್ಟುವ ಪರಿ ಹೇಗೆ ?   ಆಕವಿತೆ ಸಮಾಜದ ಆಸ್ತಿಯಾದಾಗ, ಜನ- ಸಮುದಾಯದಲ್ಲಿ, ಅವರ ದೈನಿಕ ಬದುಕಿನಲ್ಲಿ, ತನ್ನ ಹೊರಗಿನ ಪರಿಸರದಲ್ಲಿ ಏನೆಲ್ಲಾ ಸಂಗತಿಗಳು ಘಟಿಸುತ್ತವೆ ಎಂಬುದನ್ನು ಪ್ರೊ.ಎಂ.ಆರ್. ಕಮಲ ಅವರು ತಮ್ಮ ಗದ್ಯಗಂಧಿ ಕವಿತೆಯಾದ ‘ಕೊನೆಗವರು ಕವಿಯನ್ನು ಸೆರಮನೆಗೆ ತಳ್ಳಿದರು’ ಎಂಬ ಕವಿತೆಯಲ್ಲಿ ಅತ್ಯಂತ ತೀಕ್ಷ್ಣವಾಗಿ ನಿರೂಪಿಸಿದ್ದಾರೆ.

ಕವಿತೆಯ ಶೀರ್ಷಿಕೆ : ಕೊನೆಗವರು ಕವಿಯನ್ನು ಸೆರೆಮನೆಗೆ ತಳ್ಳಿದರು
ಕವಿ: ಎಂ.ಆರ್. ಕಮಲ

ಕವಿ ಎದೆಯಲಿ ಬೆಂಕಿಯಂಥ ಬೇಗುದಿ, ನಿಟ್ಟುಸಿರು, ಹತಾಶೆ, ನಿರಾಶೆ. ನೋವಿಗೆ ಪ್ರೀತಿಯ ಬಣ್ಣ, ಋತುಮಾನದ ಕಣ್ಣ   ಪದಪದಗಳಲ್ಲಿ ತುಂಬಿ ಗಾಳಿಯಲ್ಲಿ ತೂರಿ ಬಿಡುಗಡೆಗೊಂಡು ಹಗುರಾಗುತ್ತಾ ಹೋದ!

ಕೆಲವು ಹೂವಿನ ಮೇಲೆ ಕೂತು,ಮರದ ರೆಂಬೆಗಳಲ್ಲಿ ಅರಳಿದವು, ಮತ್ತೆ ಕೆಲವು ಚಿಟ್ಟೆಯ ಬೆನ್ನೇರಿ ಬಿರುಗಾಳಿಯಲ್ಲಿ ಒಲಿದವು.ಹಲವು ಮೋರಿಯಲ್ಲಿ ತೇಲಿ, ಕಸದ ತೊಟ್ಟಿಯಲ್ಲಿ ಅನಾಥವಾದವು. ಮತ್ತೆ ಕೆಲವು ಸಿಂಹಾಸನಗಳನ್ನೇ ಅಲುಗಾಡಿಸಿದವು.ರಾಜ್ಯಸಾಮ್ರಾಜ್ಯಗಳ ತೆನೆ ಮುಕ್ಕಿ ಹಕ್ಕಿಗಳಾಗಿ ಹಾರಿದವು. ಪದಗಳ ಬೆನ್ನು ಹತ್ತಿದವರು ಒಂದಷ್ಟನ್ನು ಹಿಡಿದು ತಮಗೆ ತೋಚಿದ ರೀತಿಯಲ್ಲಿ ವಾಕ್ಯ ರಚಿಸಿದರು. ಬಣ್ಣಕಟ್ಟಿದರು,
ಬೆಂಕಿ ಹಚ್ಚಿದರು.

ಋತುಮಾನಗಳೇ ಬದಲಾದವು, ಬೇಸಿಗೆಯಲ್ಲಿ ಎಂತ ಚಳಿ! ಚಳಿಗಾಲದಲ್ಲಿ ಮಳೆ, ಮಳೆಗಾಲದಲ್ಲಿ ನೀಲ ನಿರಭ್ರ ಆಕಾಶ! ಅಯ್ಯೋ ಕಟ್ಟಿ ಹಿಡಿಯಿರಿ ಪದಗಳನ್ನು, ನಿಲ್ಲಿಸಿ ದಾಂದಲೆಯನ್ನು ಕಿರುಚಿದರು.
ಬೆನ್ನುಹತ್ತಿದವರಿಗೆ ಯಾರ್ಯಾರದೋ ಎದೆಗೆಳಿದ ಪದಗಳು ಏನು ಮಾಡಿದರು ಸಿಕ್ಕಲಿಲ್ಲ.

ಕೊನೆಗವರು ಕವಿಯನ್ನ ಬಂಧಿಸಿ ಸೆರಮನೆಗೆ ತಳ್ಳಿದರು.

ಈ ಶೀರ್ಷಿಕೆಯು “ಕವಿಯೇನು ಕೈದಿಯೇ? ಅಪರಾಧಿಯೇ? ಮೋಸಗಾರನೇ? ಅವನನ್ನು ಏಕೆ ಸೆರೆಮನೆಗೆ ತಳ್ಳಿದರು ಎನ್ನುವ ಪ್ರಶ್ನೆಯನ್ನ ಹುಟ್ಟು ಹಾಕುತ್ತದೆ. ಈ ಕವಿತೆಯಲ್ಲಿ ಕವಿಯನ್ನ ಸೆಮನೆಗೆ ತಳ್ಳುವುದರ ಹಿಂದಿರುವ ಉದ್ದೇಶ ಸ್ಪಷ್ಟವಾಗಿ ವ್ಯಕ್ತವಾಗಿದೆ. ಕವಿಯ ಬರಹದ ಶಕ್ತಿಯನ್ನು ಹತ್ತಿಕ್ಕಿ ಅವನನ್ನು ನಿಷ್ಕ್ರಿಯಗೊಳಿಸು ವುದು, ಅವನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಧಮನ ಮಾಡುವುದೆ ಆಗಿದೆ.

ಈ ಕವಿತೆಯು ಎಂ.ಆರ್.ಕಮಲ ಅವರ ಅಪಾರ ಲೋಕಾನುಭವ ಮತ್ತು ಸಾಹಿತ್ಯ ಅನುಭವವನ್ನು ಪರಿಚಯಿಸುವ ಜೊತೆಗೆ ಸಾಹಿತ್ಯದ ಬಗೆಗಿನ ವಿಕೃತ ಮನಸ್ಸುಗಳ ಪ್ರತಿಸ್ಪಂದನೆಯ ವಿರಾಟ ದರ್ಶನ ಮಾಡಿಸುತ್ತದೆ. ಪ್ರಥಮ ಭಾಗದಲ್ಲಿ ಕವಿತೆ ಹುಟ್ಟುವ ಸಮಯ, ಸನ್ನಿವೇಶ, ಸಕಾರಣಗಳು ಚಿತ್ರಿತವಾಗಿವೆ. ನಂತರ ಅವುಗಳು ಭಾವಯಾನ ದಲ್ಲಿ ಕಡೆಸಿಕೊಂಡು ಹೇಗೆಲ್ಲಾ ಕವಿತೆಗಳ ರೂಪ ತಾಳುತ್ತವೆ ಎಂದು ಪರಿಚಯಿಸುತ್ತದೆ. ಮುಂದು ವರೆದಂತೆ ಆ ಕವಿತೆಯ ಪರಿಣಾಮ ಅದರಿಂದ ಕವಿಯ ಮೇಲಾಗುವ ಆಕ್ರಮಣಗಳನ್ನು ಕವಿತೆ ಕಟ್ಟಿಕೊಡುತ್ತದೆ.

ತಮ್ಮ ಬರಹದ ಕಾರಣದಿಂದ ಜನರ ಮತ್ತು ಸಮಾಜದ ಕೆಂಗಣ್ಣಿಗೆ ಗುರಿಯಾಗಿ ಕೊಲೆಯಾದ ನೂರಾರು ಜನ ಬರಹಗಾರರನ್ನು ನಾವು ಗಮನಿಸ ಬಹುದು. ‘ವಿಶ್ವದಲ್ಲಿ ಬರಹ ಎನ್ನುವುದು ಎಲ್ಲಾ ಕಾಲಕ್ಕೂ ಅಪಾಯಕಾರಿ ಸಂಗತಿಯಾಗಿತ್ತು’ ಎನ್ನುವುದನ್ನು ನಾವು ಇತಿಹಾಸದುದ್ದಕ್ಕೂ ಗಮನಿಸಬಹುದು. ಅದು ಈ ಕಾಲಕ್ಕೂ ಅನ್ವಯ ವಾಗುತ್ತದೆ. ಡಾ.ರಾಜಶೇಖರ ಮಠಪತಿ ಅವರ ‘ಕಾವ್ಯಕ್ಕೆ ಉರುಳು‘ ಸಂಪುಟಗಳಲ್ಲಿ ಇದಕ್ಕೆ ಪೂರಕ ಮಾಹಿತಿಗಳು ನಮಗೆ ದೊರೆಯುತ್ತವೆ. ಇಲ್ಲಿ ಲೇಖಕರು ಸಾವಿರಾರು ವರ್ಷಗಳಷ್ಟು ದೀರ್ಘವಾದ, ನೂರು ದೇಶಗಳ ಬರಹದ ನೆತ್ತರ ಪುಟಗಳನ್ನು ತೆರೆದಿಡುತ್ತಾ ಪ್ರಪಂಚದ ಎಲ್ಲ ರಾಷ್ಟ್ರ ಗಳಲ್ಲೂ, ಸಮಾಜದಲ್ಲೂ, ಕಾಲದಲ್ಲೂ ಕವಿ ಅಪಾಯದ ಸುಳಿಗೆ ಸಿಲುಕಿ ನರಳಿದ್ದಾನೆ ಎಂಬುದರ ಮೇಲೆ ಬೆಳಕು ಚೆಲ್ಲಿದ್ದಾರೆ.

ಕಾವ್ಯದಿಂದ ತಮ್ಮ ಕೊರಳಿಗೆ ಉರುಳು ಹಾಕಿಸಿ ಕೊಂಡು ಅವರು ಈ ಬಾಹ್ಯ ಜಗತ್ತಿನಿಂದ ದೂರ ಸರಿದಿರಬಹುದು. ಆದರೆ ಅವರು ಜನತೆಯಲ್ಲಿ ಮೂಡಿಸಿದ ಅರಿವು, ಸಮಾಜದ ಕಣ್ಣು ತೆರೆಸಿದ ಪರಿಯಿಂದಾಗಿ ಇಂದಿಗೂ ಕಾಲಾತೀತವಾಗಿ ಉಳಿದಿದ್ದಾರೆ. ಆ ಶಕ್ತಿಯಿಂದ ಅವನು ಕಾವ್ಯದ ಮೂಲಕ ಬದುಕುತ್ತಿದ್ದಾನೆ ಎಂಬ ಅಂಶಗಳು ಬೆಳಕಿಗೆ ಬರುತ್ತವೆ. ಅಂತಹ ಸಂಗತಿಯೊಂದು ಕಮಲ ಅವರನ್ನು ಬಹುವಾಗಿ ಕಾಡಿದೆ. ಅದಕ್ಕೆ ಅವರಿಂದ ಇಂಥದ್ದೊಂದು ಕವಿತೆ ಒಡಮೂಡಿದೆ.

ಕವಿತೆ ಎಂಬ ಹೂವು ಸುಲಭವಾಗಿ ಅರಳುವು ದಿಲ್ಲ. ಸುತ್ತಲಿನ ಸಂವೇದನೆಗಳಿಗೆ ಕವಿಯ ಮನಸ್ಸು ಸ್ಪಂದಿಸಿದಾಗ, ಬಿತ್ತಿದ ಪದಗಳು ಭಾವ ಯಾನದಲ್ಲಿ ವಿಹರಿಸುತ್ತ ರೂಪಕಗಳೆಂಬ ನೀರು ಗೊಬ್ಬರವನ್ನು ಪಡೆದುಕೊಂಡು ಸುಂದರವಾಗಿ ಬಿರಿಯುತ್ತವೆ.

ಕವಿಯ ಹೃದಯ ಹದವಾಗಿ ಶೃತಿ ಮಾಡಿಟ್ಟ
ವೀಣೆಯಿದ್ದಂತೆ, ಲೋಕದ ಆಗು-ಹೋಗು ಗಳಿಗೆ ಅದು ಪ್ರತಿಕ್ರಿಯೆಯನ್ನು ತೋರುತ್ತದೆ. ಕವಿಯ ವ್ಯಕ್ತಿತ್ವ ಒಂದಲ್ಲ ಎರಡಲ್ಲ ಅನಂತ ವಾದದ್ದು” ಎಂಬ ಕವಿವಾಣಿಯು ಕವಿಯ ಸಾಮಾಜಿಕ ಜವಾಬ್ದಾರಿಗಳನ್ನ ಬಿಂಬಿಸುತ್ತದೆ.  ಕವಿಯು ವರ್ತಮಾನದ ತಲ್ಲಣಗಳಿಗೆ ಮುಖಾ ಮುಖಿಯಾ ದಾಗ, ಅಲ್ಲೊಂದು ಕವಿತೆ ಜನ್ಮ ತಾಳುತ್ತದೆ. ಆ ಕವಿತೆ ಅವನದೇ ಬದುಕಿಗೆ ಮಾತ್ರ ಸಂಬಂಧಿಸಿರುವುದಿಲ್ಲ. ಅದು ಸಾಮಾಜಿಕ ಪ್ರತಿಫಲನವಾಗಿ ಬಿಂಬಿತವಾಗು ತ್ತದೆ. ಆಗ ವೈಯಕ್ತಿಕ ಬದುಕಿನಿಂದ ಸಮಾಜದ ಅಂಗಳಕ್ಕೆ ಕವಿ ಹೆಜ್ಜೆ ಇಡುತ್ತಾನೆ.

“ಕವಿಯಲ್ಲಿ ಪಟ್ಟ ಪಾಡೆಲ್ಲವೂ
ಹುಟ್ಟು ಹಾಡಾಗುತ್ತ
ರಸವಾಗಿ ಹೊಸದಾಗಿ
ಹರಿಯುತ್ತಿವೆ”

ಎಂಬ ವರ ಕವಿ ಬೇಂದ್ರೆ ಅವರ ಮಾತು ಕವಿ  ಯೊಳಗೆ ಕವಿತೆ ಸುಖಾಸುಮ್ಮನೆ ಹುಟ್ಟುವುದಿಲ್ಲ ಎಂದು ಅರ್ಥೈಸುತ್ತದೆ. ತನ್ನಂತೆಯೇ ಸಮಾಜದಲ್ಲಿ ನೊಂದಿರುವ ಜನರ ಪರವಾಗಿ ಕವಿತೆ     ಕಣ್ಣೀರಿಡುತ್ತಿದೆ.

‘ಬೆಂಕಿಯಂತ ಬೇಗುದಿ’ ಎನ್ನುವ ರೂಪಕವು ಆ ನೋವಿನಾಳದ ತೀವ್ರತೆಯನ್ನ ತೋರುತ್ತದೆ.
ನೊಂದವರು, ಶೋಷಿತರು, ಮಹಿಳೆಯರು, ಮಕ್ಕಳು, ದೀನ-ದಲಿತರು,ಅಸಹಾಯಕರ ಹತಾಶ ಭಾವಕ್ಕೆ ಕವಯತ್ರಿ ಸಂವೇದನಾಶೀಲವಾಗಿ ಸ್ಪಂದಿಸಿದಾಗ ಈ ಕಾವ್ಯ ರಚನೆಯಾಗಿದೆ. ಅವರೆಲ್ಲರ ಬದುಕು ಭರವಸೆಗಳಿಲ್ಲದೆ ನಲುಗುತ್ತಿ ರುವುದಕ್ಕೆ ಬಹಳಷ್ಟು ನಿರಾಸೆ ಆವರಿಸಿದೆ. ಈ ಭಾವಗಳೆಲ್ಲಾ ಕವಿ ಎದೆಯೊಳಗೆ ಬಸಿರಾಗಿವೆ. ಕವಿಯ ಎದೆಯ ಗರ್ಭದೊಳಗೆ ಎಷ್ಟು ದಿನ ತಾನೇ ಇರಲು ಸಾಧ್ಯ? ಅವೆಲ್ಲಕ್ಕೂ ಬಿಡುಗಡೆ ಬೇಕು ಎನ್ನುವ ಕವಯತ್ರಿ ಅವುಗಳಿಗೆ ಪ್ರೀತಿ ತುಂಬಿ ಬಣ್ಣ ತುಂಬಿ ಕಾಲಮಾನಕ್ಕನುಗುಣವಾಗಿ ಪದ ಪದಗಳು ಸೇರಿ ಕವಿತೆ ಎಂಬ ಕೂಸಿನ ಪ್ರಸವ ವಾಗುತ್ತದೆ. ಆ ಮೂಲಕ ಕವಿ ತನ್ನ ಮನದೊಳಗೆ ಮಡುಗಟ್ಟಿದ ದುಃಖವನ್ನು ಹೊರಹಾಕಿ ಹಗುರಾಗುತ್ತಾನೆ ಎನ್ನುತ್ತಾರೆ.

ಆ ಕವಿತೆ ಕವಿಯ ಬಿಕ್ಕು ಮಾತ್ರವಲ್ಲ, ಅವರಂತೆ ಕಷ್ಟದಲ್ಲಿರುವವರೆಲ್ಲರ ಹೃದಯದ ಮಿಡಿತವಾಗಿ ರುತ್ತದೆ. ಅವರು ಅನುಭವಿಸುವ ತಲ್ಲಣ,       ತಾಪತ್ರಯಗಳು, ಸಂಕಟ, ಅಭದ್ರತೆಗಳ ಅನುರೂಪಗಳಾಗಿರುತ್ತವೆ ಎಂಬ ಅರ್ಥವೆಲ್ಲ ವ್ಯಕ್ತವಾಗಿದೆ.

ಇಲ್ಲಿ ಕಾವ್ಯ ರಚನೆಯ ಪರಿಕರಗಳು ವಿಸ್ಮಯ ಮೂಡಿಸುತ್ತವೆ. ಸೊಗಸಾದ ಪದ ಭಾವಗಳಲ್ಲಿ  ಸತ್ಯಾಸತ್ಯತೆಯ ಅನ್ವೇಷಣೆಯನ್ನು ಮಾಡಿ ಪ್ರಜ್ಞಾ ಪೂರ್ವಕವಾಗಿ ಬಿತ್ತರಿಸಿದ್ದಾರೆ. ಕಾವ್ಯ ಹುಟ್ಟುವ ಗಳಿಗೆಗಳನ್ನು ಮನೋಹರವಾಗಿ ವರ್ಣಿಸಿದ್ದಾರೆ.

ಈ ಕವಿತೆ, ಕವಿ ಕವಿತೆ ಬರೆದು ಎದುರಿಸುವ ಸವಾಲುಗಳನ್ನು ಹೊತ್ತು ತಂದಿದೆ. ಸಮಾಜದಲ್ಲಿನ ಅನ್ಯಾಯಗಳನ್ನು, ಅಕ್ರಮಗಳನ್ನು ಕಂಡು ಕವಿ ಮನಸ್ಸು ಸಿಡಿದೆದ್ದಾಗ, ಅದನ್ನು ನಿಯಂತ್ರಿಸಲು ಏನೆಲ್ಲ ಕಸರತ್ತುಗಳನ್ನು ಮಾಡುತ್ತಾರೆ ಎಂಬುವ ದನ್ನು ಗೂಢಾರ್ಥದಲ್ಲಿ ಈ ಕವಿತೆ ಬಿತ್ತರಿಸುತ್ತದೆ. ಕವಿಯು ತನ್ನೊಳಗೆ ಹುದುಗಿಟ್ಟ ಭಾವಗಳಿಗೆ ಜೀವ ತುಂಬಿದಾಗ ಎದೆಯಿಂದ ಸಿಡಿದು, ಲೇಖನಿ ಯಿಂದ ಮೂಡಿದ ಅಕ್ಷರಗಳು ಕಾವ್ಯಗಳಾಗುವ ಸೋಜಿಗವನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಕೆಲವು ಪ್ರಕೃತಿಯ ಮೋಹಕತೆಗೆ ಮರುಳಾಗಿ ಕಾವ್ಯಗಳಾಗಿ ಸಂಭ್ರಮಿಸಿವೆ.

ಕೊನೆಗವರು ಕವಿಯನ್ನು ಸೆರೆಮನೆಗೆ ತಳ್ಳಿದರು ವಿಚಾರವೊಂದನ್ನು ಚರ್ಚಿಸುತ್ತ ಅದರ ಆಸು- ಬೀಸುಗಳನ್ನು ಮಾರ್ಮಿಕವಾಗಿ ಹೇಳುತ್ತಾ ಕವಿತೆ ಸಾಗಿದೆ. ಕವಿಯ ಕೈಕಟ್ಟಿ ಹಾಕಿ ಬರೆಯದಂತೆ ನಿರ್ಬಂಧಿಸುವುದಕ್ಕೆ ಇಲ್ಲಿ ತೀವ್ರ ಆಕ್ರೋಶವಿದೆ. ಓದುಗರಿಗೆ ಬಹುಬೇಗ ಎದೆತಟ್ಟಿ ಎಚ್ಚರಿಸುವ ಆಪ್ತ ಪದ ಭಾವಗಳಿವೆ. ಒಳಿತು ಕೆಡಕುಗಳ ಪರಾಮರ್ಶೆ ಇದೆ. ಸ್ವಾರ್ಥದ ಮುಖವಾಡಗಳನ್ನು ಕಳಚಿ ಹಚ್ಚಿದ ಬಣ್ಣ ಅಸಲಿಯಲ್ಲ ಎಂಬ ತಿಳುವಳಿಕೆಯು ಇದೆ.

ಕವಿಯೊಬ್ಬ ಬರೆದ ಎಲ್ಲ ಕವಿತೆಗಳು ಉತ್ಕೃಷ್ಟ ವಾಗಿರಲು ಸಾಧ್ಯವೇ? ಕೆಲವು ಅತ್ಯುತ್ತಮವಾಗಿ ರುತ್ತವೆ.ಒಂದಷ್ಟು ಉತ್ತಮ, ಮತ್ತಷ್ಟು ಸಾಧಾರಣ ವಾಗಿ ಇರುತ್ತವೆ. ಕವಿ ಬರೆದ ಅತ್ಯುತ್ತಮ ಕವಿತೆ ಗಳು ಶಾಶ್ವತವಾಗಿ ಅಸ್ಮಿತೆ ಸ್ಥಾಪಿಸಿಕೊಂಡರೆ  ಸಾರಸತ್ವವಿಲ್ಲದ ಹಗುರಾದ ಕವಿತೆಗಳು ನಿಷ್ಪ್ರಯೋಜಕವಾಗಿ ಓದುಗರಿಂದ ದೂರ ಸರಿದು, ಅಂತರ ಕಾಯ್ದುಕೊಂಡು ಕಸದ ಬುಟ್ಟಿ ಸೇರುತ್ತವೆ ಎನ್ನುತ್ತಾರೆ.

ಕವಿ ಸಾರ್ವಕಾಲಿಕವಾಗಿ ಉಳಿಯಬೇಕಾದರೆ ಸರ್ವಕಾಲ ಮಾನ್ಯವಾದಂತಹ,ಸೀಮಾತೀತವಾದ ಸದಾ ಪ್ರಸ್ತುತವೆನಿಸುವ ಪರಿಕರಗಳನ್ನು ಕಾವ್ಯಕ್ಕೆ ದುಡಿಸಿಕೊಂಡು ಹೃದಯಸ್ಪರ್ಶಿ ಕವಿತೆಗಳನ್ನು ರಚಿಸಬೇಕು.

“ಕೆಲವು ಕವಿತೆಗಳು ಸಿಂಹಾಸನಗಳನ್ನು ಅಲುಗಾಡಿಸಿದವು” ಎನ್ನುವ ಸಾಲು ಕವಿತೆಯ ಶಕ್ತಿ,ಕವಿಯ ಸಮಾಜಮುಖಿ ಪ್ರೀತಿ, ಅವರ ಅಕ್ಷರ ಗಳಲ್ಲಿ ಅಡಗಿರುವ ನಿಷ್ಠುರತೆಯ ಭಾವಗಳ ಅನಾವರಣ ಮಾಡುತ್ತವೆ. ಇಲ್ಲಿ ಸಿಂಹಾಸನ ಎಂಬುದು ವ್ಯವಸ್ಥೆ, ಅಧಿಕಾರ, ಯಜಮಾನಿಕೆ, ಆಡಳಿತ, ಪ್ರಭುತ್ವವನ್ನು ಪ್ರತಿನಿಧಿಸುತ್ತದೆ. ಹೌದು ಕವಿಯಾದವನು ಯಾವಾಗಲೂ ವ್ಯವಸ್ಥೆಯ ವಿರುದ್ಧ ದಿಕ್ಕಿನಲ್ಲಿ ಇರುತ್ತಾನೆ ಅಂದರೆ ಸದಾ ಮಾಡಿದ್ದೆಲ್ಲವನ್ನು ಟೀಕಿಸುತ್ತಾನೆ ಎಂದುರ್ಥವಲ್ಲ. ಒಳಿತು ಕಂಡಾಗ ಬೆನ್ನುತಟ್ಟಿ ಪ್ರೋತ್ಸಾಹಿಸುವುದು. ಅನ್ಯಾಯ ಅನಾಚರಣೆಗಳನ್ನು ಕಂಡಾಗ, ಸ್ವಜನ ಪಕ್ಷಪಾತ ತೋರಿದಾಗ,ತಮ್ಮ ಜವಾಬ್ದಾರಿಗಳನ್ನು ಮರೆತು ತೂಕಡಿಸುತ್ತಿದ್ದಾಗ ತನ್ನ ಬರಹದ ಮೂಲಕ ಎಚ್ಚರಿಕೆಯ ಗಂಟೆ ಬಾರಿಸಿ ಜನರ ಹಿತಾಸಕ್ತಿ ಮರೆತು, ಗಾಢ ನಿದ್ರೆಯಲ್ಲಿ ಮುಳುಗಿ ರುವ ಜನರನ್ನು ಎಬ್ಬಿಸಿ ಅವರವರ ಜವಾಬ್ದಾರಿ ಏನೆಂದು ಅರ್ಥ ಮಾಡಿಸುವ ಮೂಲಕ ಜನಪರ ವಾಗಿ ಕಾರ್ಯನಿರತರಾಗಲು ಪ್ರೇರೇಪಿಸುತ್ತವೆ. ಇಂತಹ ಸಾಮಾಜಿಕ ಬದ್ಧತೆ ಕವಿಯಾದವನಿಗೆ ಇದ್ದಾಗ ಮಾತ್ರ “ಕವಿ ಅಳಿದರು ಕವಿತೆ ಉಳಿದೀತು” ಎಂಬ ಕವಿವಾಣಿ ನಿಜವಾಗುತ್ತದೆ.

ಮುಂದುವರೆದಂತೆ ಈ ಕವಿತೆ ಲೇಖನಿಗಿರುವ ಮಹತ್ತನ್ನು ಸಾರುತ್ತದೆ.ಅಧಿಕಾರವನ್ನು ಹೊಂದಿರು ವವರನ್ನು ಕುರ್ಚಿಯಿಂದ ಕೆಳಗಿಳಿಸುವ ಶಕ್ತಿ ಇದೆ. ಇದಕ್ಕೆ ಕವಿ ಪ್ರಾಮಾಣಿಕವಾಗಿದ್ದು,ಸತ್ಯ,ನ್ಯಾಯದ ದಾರಿಯಲ್ಲಿ, ಬದ್ಧತೆ ಮತ್ತು ಪ್ರಾಮಾಣಿ ಕತೆಯ ಅಕ್ಷರಗಳಲ್ಲಿ ಕವಿತೆ ರಚಿಸಬೇಕು. ಪ್ರತಿಯೊಬ್ಬರೂ ಅನುಕೂಲ ಸಿಂಧುವಾಗಿ ತಮ್ಮ  ತಮ್ಮ  ಇಚ್ಚಾನು ಸಾರ ಕವಿತೆಗಳನ್ನು ಬಳಸಿಕೊಳ್ಳುವರು‌ ಎನ್ನುವುದು ಕವಿಯ ಮನದಿಂಗಿತ. ಕೆಲವರು‌ ಬರಹವನ್ನು ಸದುಪಯೋಗಪಡಿಸಿಕೊಳ್ಳುತ್ತಾರೆ. ಮತ್ತಷ್ಟು ಕಿಡಿಗೇಡಿಗಳು ಅವುಗಳನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಾರೆ ಎಂಬ ವಿಷಾದ ಭಾವ ತೋರುತ್ತಾರೆ.

ಅವರ ತಪ್ಪುಗಳನ್ನು ಎತ್ತಿ ಹಿಡಿದಿದ್ದಕ್ಕಾಗಿ ಈ ಕವಿತೆಯನ್ನ ಜನರಿಂದ ದೂರ ಮಾಡಲು ಬಲಿಷ್ಠರು ಪ್ರಯತ್ನಿಸಿದರು. ಆದರೆ ಜನರ ಎದೆಗೆ ಇಳಿದ ಕವಿತೆಯನ್ನು ಬಂಧಿಸಲು ಆಗುವುದಿಲ್ಲ. ಅವುಗಳನ್ನು ಹತ್ತಿಕ್ಕಲು ಅಸಾಧ್ಯ. ಇವರು ಕವಿ ಯಿಂದ ಕವಿತೆಯನ್ನು ಕಿತ್ತುಕೊಳ್ಳಬಹುದು.ಪುಸ್ತಕ ಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು, ಆದರೆ ಈಗಾಗಲೇ ಅದನ್ನು ಓದಿ ಜನರ ಎದೆಗೆ ಇಳಿದ ಕವಿತೆಯನ್ನು ನಿಯಂತ್ರಿಸಲು ಸಾಧ್ಯವೇ? ಅದಾಗಲೇ ಜನರ ಎದೆಗೆ ಇಳಿದು ಸತ್ಯ ಮತ್ತು ವಾಸ್ತವದ ದರ್ಶನ ಮಾಡಿಸಿರುತ್ತದೆ. ಅಲ್ಲಿಗಾಗಲೇ ಕವಿ ಗೆದ್ದಂತೆ. ಮುಂದೆ ಈ ಕವಿಯಿಂದ ಇಂತಹ ರಚನೆಗಳು ಬರಬಾರದು ಎಂದು ಕವಿಯನ್ನ ಬಂಧಿಸಿ ಸೆರೆಮನೆಗೆ ತಳ್ಳಿದ್ದಾರೆ‌ ಎನ್ನುತ್ತಾರೆ. ದುಷ್ಕರ್ಮಿಗಳು ಎಸಗುವ ದುಶ್ಕೃತ್ಯಗಳನ್ನು‌ ಈ ಕವಿತೆ ಬಿತ್ತರಿಸುತ್ತದೆ.

ಕವಿ ಮನಸ್ಸು ಮಾಡಿದರೆ  ಅಂಧ ಸಮಾಜದ ಕಣ್ತೆರೆಸಬಹುದು, ಆಡಳಿತ ಯಂತ್ರವನ್ನು ಮತ್ತಷ್ಟು ಚುರುಕುಗೊಳಿಬಹುದು,ಅಧಿಕಾರಿಗಳನ್ನ ಜನಪರ ಕಾರ್ಯಗಳಿಗೆ ಅಣಿಗೊಳಿಸಬಹುದು, ಸಮಾಜದಲ್ಲಿನ ಮೌಢ್ಯ,ಜಾತಿ,ಮತ, ಕುಲಗಳೆಂಬ ಸಂಕೋಲೆಗಳಿಂದ ಹೊರತಂದು ಸ್ವಸ್ಥ ಸಮಾಜ ಕಟ್ಟಬಹುದು, ಬದುಕಿನ ಆಸೆಯನ್ನೇ ಕಳೆದು- ಕೊಂಡಿರುವ ನಿರಾಶವಾದಿಗಳಲ್ಲಿ ಆಶಾಭಾವವನ್ನು ಬಿತ್ತಬಹುದು, ನೊಂದವರ ಕಣ್ಣೀರಿಗೆ ಸಾಂತ್ವನದ ಮಡಿಲಾಗಬಹುದು. ಭವಿಷ್ಯದ ದಾರಿ ಕಾಣದೇ ಒದ್ದಾಡುವ ಜನಗಳನ್ನು ಬೆಳಕ ನಿಚ್ಚಣಿಕೆ  ಏರಿಸ ಬಹುದು. ಭಾವಿ ಭವಿಷ್ಯತ್ತಿನ ಪ್ರಜೆಗಳಾದ ಮಕ್ಕಳನ್ನ ಸಮಾಜದ ಬಹುದೊಡ್ಡ ಆಸ್ತಿಗಳನ್ನಾಗಿ ಮಾಡಬಹುದೆಂಬ ಗೂಢಾರ್ಥ ಈ ಕವಿತೆಯಲ್ಲಿ ಅಡಕವಾಗಿದೆ.

✍️ಅನುಸೂಯ ಯತೀಶ್
ಬೆಂಗಳೂರು