ಮತ್ತೇ ಚಿಗುರುತ್ತವೆ ಈಗ ಗಿಡಮರಬಳ್ಳಿಗಳು
ಮತ್ತೇ ಹಾರುತ್ತವೆ ರೆಕ್ಕೆ ಹರಡಿ ಬಾನಾಡಿಗಳು

ಶಿಶಿರದ ಜಡಕೆ ಬೋಳಾಗಿದ್ದವು ಚರಾಚರಗಳು
ಮತ್ತೇ ಕೊನರುತ್ತವೆ ಹುದುಗಿದ ಬಯಕೆಗಳು

ಪಚ್ಚೆಯನು ಮೆತ್ತಿಕೊಂಡವು ಮುಗುಳುಗಳು
ತುಂಬುತ್ತವೆ ಹಾಳೆಯನು ಹಸಿರು ಬರಹಗಳು

ಕರೆ ಕೂಗುತ್ತವೆ ಪಂಚಮದಲಿ ಕೋಕಿಲಗಳು
ಕರೆಯುತ್ತವೆ ಉನ್ಮಾದದಿ ವಿರಹಿ ಭಾವಗಳು

ಹೇಮಂತನ ಕಟ್ಟಾಜ್ಞೆ ಬಳಲಿದ್ದವು ಜೀವಗಳು
ಸಾರುತ್ತವೆ ನೀತಿಯ ಒಂದೊಂದು ಋತುಗಳು

ಗುಬ್ಬಿ,ಗಿಳಿ ಕೆಂಭೂತ ಉಲಿದಿವೆ ನವಿಲುಗಳು
ನಲಿಯುತ್ತವೆ ಅಳಲು ಬದಿಗಿರಿಸಿದ ಮೊಗಗಳು

ಗಂಧ ಮರುತನಾಗಮನ ಕಂಪಿಸಿವೆ ಎಲೆಗಳು
ಪುಳಕಿಸುತ್ತವೆ ಒಲವ ನೆನಪಿಸಿದ ಈ ದಿನಗಳು

ಬೇವಿದೆ ಬೆಲ್ಲವಿದೆ ಎಲ್ಲವೂ ಸಾರಗಳು ಅನು
ಮರಳಿ ಕರೆಯುತ್ತವೆ ಕಾಯ್ದಿರಿಸಿದ ಸ್ವಪ್ನಗಳು

✍️ಅನಸೂಯ ಜಹಗೀರದಾರ
ಶಿಕ್ಷಕಿ,ಕೊಪ್ಪಳ