ಕೋಟೆ ಎಂದೊಡನೆ ನಮಗೆ ನೆನಪಾಗುವುದು ರಾಜಸ್ಥಾನ ರಾಜ್ಯ. ಇಲ್ಲಿ ಹಲವು ನಗರಗಳು ಕೋಟೆ ಗಳನ್ನು ಹೊಂದಿದ್ದು, ಅವುಗಳಲ್ಲಿ ತನ್ನದೇ ಆದ ಇತಿಹಾಸ ಕೊಂಡಿ, ಕಲಾತ್ಮಕ ನಂಟನ್ನ ಹೊಂದಿದೆ. ಅಂತಹ ಕೋಟೆಗಳು ರಾಜಧಾನಿ ಜೈಪುರಕ್ಕೆ ಸಹ ಹೊಂದಿಕೊಂಡಿದ್ದು ಅವುಗಳಲ್ಲಿ ಪ್ರಮುಖವಾದ ಕೋಟೆಯೆಂದರೆ ಜೈಪುರದ ಸನಿಹದ ಆಂಬರ್ ಅಥವಾ ಅಮೇರ್ ಕೋಟೆ. ತನ್ನ ಕಲಾತ್ಮಕ ಕೆತ್ತನೆ ಯಿಂದ ಪ್ರವಾಸಿಗರನ್ನ ಆಕರ್ಷಿಸುತ್ತಿದ್ದು, ರಾಜಸ್ಥಾನ ಪ್ರವಾಸ ಮಾಡುವಾಗ ನೋಡಲೇಬೇಕಾದ ಜಾಗ.

ರಾಜಧಾನಿ ಜೈಪುರದಿಂದ ಸುಮಾರು 11 ಕಿ.ಮೀ ದೂರದಲ್ಲಿರುವ ಅಮೇರ್ ಪಟ್ಟಣ ಸುಮಾರು 4 ಕಿ.ಮೀ ವಿಸ್ತಾರವಾಗಿದ್ದು, ಮಾವೋಟ್ ಸರೋವರದ ಸನಿಹದ ಬೆಟ್ಟದ ಮೇಲೆ ವಿಸ್ತಾರವಾಗಿ ಹರಡಿ ಕೊಂಡಿದೆ. ತನ್ನದೇ ಆದ ಕಲಾತ್ಮಕ ಶೈಲಿಯ ಮೋಘಲ್ ಶೈಲಿಯನ್ನು ಅನುಸರಿಸಿ ಕೆಂಪು ಮರಳು ಗಲ್ಲು ಮತ್ತು ಅಮೃತ ಶಿಲೆಯಿಂದ ನಿರ್ಮಾಣ- ಗೊಂಡಿದೆ.
ಇತಿಹಾಸ ಪುಟದಲ್ಲಿ ಅಂಬರ್ ಮಿನಾ ರಾಜ್ಯದ ಭಾಗ ವಾಗಿತ್ತು. ಸುನಾವತ್ ಆಳ್ವಿಕೆಯ ನಂತರ ಕೋಹ್ ಹಾಗು ಕಾಕಿಲ್ ದೇವ್ ಆಳ್ವಿಕೆಯಲ್ಲಿತ್ತು. ನಂತರ ಕಚ್ಚಾಹ್ ಆಳ್ವಿಕೆಯಲ್ಲಿತ್ತು. ರಾಜ ಮಾನ್ ಸಿಂಗ್ ಮತ್ತು ಜೈಸಿಂಗ್ ಕಾಲದಲ್ಲಿ ಇಲ್ಲಿ ವೈಭವದ ಕುರುಹು ಗಳು ಮೆರದೆವು. ಜೈಪುರಕ್ಕೆ ರಾಜಧಾನಿ ಬದಲಾಗುವ ವರೆಗ ಸುಮಾರು 7 ಶತಮಾನಗಳ ಇತಿಹಾಸದ ನಂಟು ಹಲವು ಘಟನೆಗೆ ಮೂಕ ಸಾಕ್ಥಿಯಾಗಿದೆ.

ಮೂಲತ: ರಾಜ ಮಾನಸಿಂಗ ಕೋಟೆಯನ್ನು ನಿರ್ಮಿಸಿದ್ದು, ರಾಜ ಜೈಸಿಂಗ್ ಇದನ್ನು ವಿಸ್ತರಣೆ ಮಾಡಿದ. ಕೋಟೆಯ ಆರಂಭ ಇಲ್ಲಿನ ಸೂರಜ್ ಪೋಲ್ ಮೂಲಕ ಮುಖ್ಯ ಅಂಗಳಕ್ಕೆ ಸಾಗುತ್ತದೆ. ಇಲ್ಲಿ ಯುದ್ದದ ವಿಜಯದ ನಂತರ ಸೈನ್ಯ ಮತ್ತು ಆನೆಯ ವಿಜಯದ ಮೆರವಣಿಗೆಯ ಜಾಗ. ಪೂರ್ವಕ್ಕೆ ಸೂರ್ಯನಿಗೆ ಎದುರಾಗಿ ಇರುವ ಕಾರಣ ಸೂರಜ್ ಪೋಲ್ ಎಂಬ ಹೆಸರು ಬಂದಿದೆ. ಪ್ರವೇಶದಲ್ಲಿ ಜಲೀಬ್ ಚೌಕ್ ಎಂಬ ಪ್ರಾಂಗಣವಿದ್ದು 17 ನೇ ಶತಮಾನದಲ್ಲಿ ಜೈಸಿಂಗ್ ನಿರ್ಮಿಸಿದ. ಇಲ್ಲಿಂದ ಮೆಟ್ಟಿಲನ್ನು ಏರಿ ಸಾಗಿದಲ್ಲಿ ಸಿಗುವುದು ಸಿಲಾದೇವಿ ದೇವಾಲಯ.

ರಾಜ ಮನೆತನದ ಪ್ರಮುಖ ದೇವಾಲಯವಾದ ಇಲ್ಲಿ ನವರಾತ್ರಿ ಸಮಯದಲ್ಲಿ ಪ್ರಾಣಿ ಬಲಿ 1980 ರ ವರೆಗೂ ಇದ್ದು, ನಂತರ ನಿಲ್ಲಿಸಲಾಗಿದೆ. ಸಿಲಾದೇವಿ ದೇವಾಲಯದ ದ್ವಾರ ಕಲಾತ್ಮಕವಾಗಿದೆ. ಬೆಳ್ಳಿಯ ಹೊದಿಕೆಯಲ್ಲಿ ಎಲೆ ಮಾದರಿಯಲ್ಲಿ ದೇವಿಯ ಹಲವು ಉಬ್ಬು ಶಿಲ್ಪಗಳ ಕೆತ್ತನೆ ಇದೆ. ಗರ್ಭಗುಡಿ ಯಲ್ಲಿ ಬೆಳ್ಳಿಯಿಂದ ಮಾಡಿದ ಸಿಂಹಸಹಿತ ದೇವಿಯ ಶಿಲ್ಪವಿದೆ. ಇಲ್ಲಿನ ದಂತಕಥೆಯ ಪ್ರಕಾರ ರಾಜ ಬಂಗಾಳದ ವಿಜಯದ ನೆನಪಾಗಿ ಕನಸಿನಲ್ಲಿ ಕಾಳಿದೇವಿಯ ಪ್ರೇರಣೆಯಿಂದ ಸ್ಥಾಪಿತವಾಗಿದೆ ಎನ್ನಲಾಗಿದೆ.

ಸಾಗುವ ಪಯಣದಲ್ಲಿ ಗಣೇಶ್ ಪೋಲ್ ಸಿಗಲಿದ್ದು ಇಲ್ಲಿಂದಲೇ ರಾಜನ ಖಾಸಗಿ ಅರಮನೆಗೆ ಪ್ರವೇಶ ವಿದೆ. ಸನಿಹದಲ್ಲಿ ಎರಡನೇ ಪ್ರಾಂಗಣವಿದೆ. ದಿವಾನ್ ಐ ಅಮ್ ಎಂದು ಕರೆಯುವ ವಿಶಾಲ ವಾದ ಸಭಾಂಗಣವನ್ನು ಹೊಂದಿದೆ. ಸುಮಾರು 27 ಸ್ಥಂಭಗಳು ಅನೆಯ ಆಕಾರದಲ್ಲಿ ಜೋಡಣೆ ಹೊಂದಿದ್ದು, ಸುತ್ತಲೂ ವೇದಿಕೆಗಳಿವೆ. ಇದು ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡುವ ಸ್ಥಳವಾಗಿತ್ತು.

ಮೂರನೆಯ ಅಂಗಣ ಮಹಾರಾಜ ಮತ್ತು ಕುಟುಂಬ ಹಾಗೂ ಪರಿಚಾರಕರ ವಾಸ ಸ್ಥಳ. ಸಂಪೂರ್ಣ ಮೊಸಾಯಿಕ ಮತ್ತು ಶಿಲ್ಪಕಲೆಗಳ ಲೋಕವೇ ಇಲ್ಲಿ ಇದೆ. ಮಧ್ಯದಲ್ಲಿ ಉದ್ಯಾನವನ ವಿದ್ದು , ಎರಡು ಕಲಾತ್ಮಕ ಕಟ್ಟಡಗಳನ್ನು ಹೊಂದಿದೆ. ಜೈಮಂದಿರ ಎಂದು ಕರೆಯುವ ಮೊದಲ ಕಟ್ಟಡ ದಲ್ಲಿ ಗಾಜಿನ ಕನ್ನಡಿಯ ಫಲಕಗಳು ತುಂಬಿ ಹೋಗಿ ದೆ. ಇಲ್ಲಿ ಬರೆದ ವರ್ಣ ಚಿತ್ರಗಳು ಕನ್ನಡಿಯಿಂದ ಆವರಿಸಿದ ಛಾವಣಿಗಳು ಮತ್ತು ಗೋಡೆಗಳ ಕಾರಣ ಶೀಷ್ ಮಹಲ್ ಎಂದು ಕರೆಯುತ್ತಾರೆ. ರಾಜ ಮಾನ್ ಸಿಂಗ್ ಇದನ್ನು ನಿರ್ಮಿಸಿದ್ದು,ಇಲ್ಲಿನ ಅಮೃತ ಶಿಲೆಯ ಫಲಕಗಳು ಹೊಸ ಲೋಕವನ್ನೇ ನೀಡುತ್ತದೆ. ಇಲ್ಲಿಂದ ಮಾವೋಟ್ ಸರೊವರ ಸುಂದರವಾಗಿ ಕಾಣುತ್ತದೆ. ಮತ್ತೊಂದು ಕಟ್ಟಡ ಜಸ್ ಮಂದಿರ ಇದು ಗಾಜಿನ ಹೂವಿನ ಅಲಂಕಾರವಿದೆ.

ಮತ್ತೊಂದು ಪ್ರಾಂಗಣ ಸುಖ ಮಹಲ್ ಅಮೃತ ಶಿಲೆಯ ಲೋಕ. ಇದು ಬೇಸಿಗೆಯಲ್ಲಿ ತಂಪಾಗಿರು ವಂತೆ ನೀರು ಕಟ್ಟಡದ ಮೂಲಕ ಸಾಗಿ ಉದ್ಯಾನ ವನವನ್ನು ತಲುಪುವಂತೆ ಮಾಡಲಾಗಿದೆ. ಇಲ್ಲಿನ ಕೆತ್ತನೆಗಳಲ್ಲಿ ಮೀನಿನ ಬಾಲ,ಕಮಲ, ಹಾವು,ಆನೆಯ ಸೊಂಡಿಲು ಕಲಾತ್ಮಕವಾಗಿದೆ.ಇಲ್ಲಿರುವ ಉದ್ಯಾನ ವನವನ್ನು ರಾಜ ಜೈ ಸಿಂಗ್ ನಿರ್ಮಾಣ ಮಾಡಿದ್ದು, ಇದು ಮೊಘಲ್ ಉದ್ಯಾನವನ್ನು ನೆನಪಿಸುತ್ತದೆ. ಮಧ್ಯದಲ್ಲಿ ಕಾರಂಜಿಗಳು ಇದೆ. ಇಲ್ಲಿಂದ ಜಲೇಬ್ ಚೌಕ್, ಅರಮನೆ ಮತ್ತು ಜೆನನಾ ದಿಯೂರ್ಹ್ ಕಡೆ ಹೋಗಬಹುದು.

ನಾಲ್ಕನೇ ಅಂಗಳದಲ್ಲಿ ರಾಣಿಯರ ವಾಸಸ್ಥಾನವಿದೆ. ಸನಿಹದಲ್ಲಿ ಮಾನ್ ಸಿಂಗ್ ನಿರ್ಮಾಣದ ಅರಮನೆ ಇದೆ. ಸುಮಾರು 16 ನೇ ಶತಮಾನದಲ್ಲಿ ನಿರ್ಮಾಣ ವಾದ ಈ ಅರಮನೆ ಕಲಾತ್ಮಕ ಲೋಕವನ್ನೇ ಪ್ರವೇಶ ಮಾಡುತ್ತದೆ.ಈಕೋಟೆ ಸನಿಹದ ಜೈಗಡ್ ಕೋಟೆಯ ಭಾಗವಾಗಿ ಮುಂದುವರೆದಿದೆ. ಕೋಟೆಯು ಹಲವು ವೈಭವಗಳನ್ನು ಹೊತ್ತು ಮೂಕ ಸಾಕ್ಷಿಯಾಗಿದೆ.

ಇದನ್ನು 2013 ರಲ್ಲಿ ವಿಶ್ವ ಪರಂಪರಾ ಸ್ಥಳ ಎಂದು ಗುರುತಿಸಿಕೊಂಡಿದ್ದು, ಇಲ್ಲಿ ನಡೆದ ಚಿತ್ರೀಕರಣಗಳು ಇಲ್ಲಿನ ಪರಂಪರೆಗೆ ಹಾನಿ ಮಾಡಿತ್ತು. ನಂತರ ನ್ಯಾಯಾಲಯದ ಆದೇಶದನ್ವಯ ನಿಂತರೂ ಕೂಡ ಪರಂಪರೆಯ ಮೇಲಿನ ಮಾನವನ ನಿರಂತರ ಕ್ರೌರ್ಯ ಪರಂಪರೆಯ ಉಳಿವಿನ ನಮ್ಮ ಬದ್ದತೆಯ ವೈರುಧ್ಯಕ್ಕೆ ಸಾಕ್ಷಿಯಾಗಿ ನಿಂತಿದೆ.
ತಲುಪುವ ಬಗ್ಗೆ : ಜೈಪುರಕ್ಕೆ ಎಲ್ಲೆಡೆಯಿಂದ ಸಾರಿಗೆ ಸೌಲಭ್ಯವಿದ್ದು ಜೈಪುರದಿಂದ ಸುಮಾರು 11 ಕಿ.ಮೀ ದೂರದಲ್ಲಿ ಈ ಕೋಟೆ ಇದ್ದು ಸನಿಹದ ಆನೆ ಬಿಡಾರ ಮತ್ತು ನಹರ್ ಗಡ್ ಹಾಗೂ ಜೈ ಗಡ್ ಕೋಟೆಗಳನ್ನು ನೋಡಬಹುದು.
✍️ ಶ್ರೀನಿವಾಸ ಮೂರ್ತಿ ಎನ್.ಎಸ್.
ಬೆಂಗಳೂರು
