ಇಗೋ ಬಂದಿತಿದೋ ಸಡಗರದ ಸಂಕ್ರಾಂತಿ
ಅನ್ನದಾತನ ಮೊಗದಲಿ ಸಂಭ್ರಮದ ಕ್ರಾಂತಿ

ರೈತರ ಬೆವರಿನ ಪರಿಶ್ರಮದ ಸುಗ್ಗಿಯುˌˌˌ
ಭೂತಾಯಿ ಒಲಿದರೆ ಅನ್ನದಾತನ ಬಾಳೆಲ್ಲಾ ಹುಗ್ಗಿಯು

ಮಾಘಮಾಸದಿ ವಿವಿಧ ಹೆಸರಿನಿಂದ ಆಚರಣೆಯು
ಸಂಕ್ರಾಂತಿˌ ಪೊಂಗಲ್ˌ ಕೊಯ್ಲು ಉತ್ಸವ ಸುಗ್ಗಿಯು

ಕಾರಿರುಳ ಕಳೆವಂತೆ ಸೂರ್ಯದೇವನ ಆರಾಧನೆಯು
ಗೋಮಾತೆಯ ಸಿಂಗರಿಸಿ ಪೂಜಿಪ ಸಂಪ್ರದಾಯವು

ಹೆಂಗಳೆಯರು ಎಳ್ಳುಬೆಲ್ಲ ಹಂಚಿ ನಲಿವ ಹಬ್ಬವುˌ
ಎಳ್ಳುಬೆಲ್ಲ ತಿಂದು ಒಳ್ಳೆ ಮಾತನಾಡೆಂಬ ಸಂಕೇತವು

ಕಬ್ಬುˌ ಬಾಳೆˌ ಎಳ್ಳುˌ ಕೊಬ್ಬರಿˌ ಸಕ್ಕರೆ ಅಚ್ಚುಗಳು
ಮೈಮನಕೆ ಪುಷ್ಟಿ ನೀಡುವ ಹಬ್ಬದ ತಿನಿಸುಗಳು

ಮಾಘಿಯ ಚಳಿಯಲಿ ಮಿಂದೆದ್ದ ತನು ಮನಗಳಿಗೆ
ಹಿತ ಸ್ಪರ್ಶ ನೀಡಲು ಸೂರ್ಯದೇವನಾಗಮನ ಮಕರರಾಶಿಗೆ

ಒಂದೊಂದು ಹಬ್ಬದಲೂ ವಿವಿಧ ವೈಶಿಷ್ಟತೆಗಳು
ಸಂಸ್ಕೃತಿ ಸಂಪ್ರದಾಯ ಬೆಳಗುವ ಆಚರಣೆಗಳು

ಕಳೆಯಲಿ ಮನೆ-ಮನದ ಕಾರಿರುಳ ಈಸಂಕ್ರಾಂತಿ
ಹೊತ್ತು ತರಲಿ ಬಾಳಿಗೆ ಹೊಸ ಬೆಳಕ ಈ ಮಕರಜ್ಯೋತಿ

✍️ಮಧುಮಾಲತಿ ರುದ್ರೇಶ್ 
ಬೇಲೂರು