ಬಂದಿದೆ ಸಂಭ್ರಮದ ಹಬ್ಬ
ಮಾಗಿ ಚಳಿಯ ಮರೆಸೋ ಹಬ್ಬ
ಸುಗ್ಗಿ ಹಿಗ್ಗು ಮೆರೆಸೋ ಹಬ್ಬ
ಸಂತೋಷದ ಸಂಕ್ರಾಂತಿ ಹಬ್ಬ

ರೈತ ಸುರಿದ ಬೆವರ ಹನಿ ಮುತ್ತಾಗಿದೆ
ಪರಿಶ್ರಮದ ಫಲವಾಗಿ ಫಸಲು ಬಂದಿದೆ
ಭೂದೇವಿಯು ಮಕ್ಕಳನ್ನು ಹರಿಸಿದ ಸಮಯ
ಬಂದ ಧಾನ್ಯ ದೇವಿಯನ್ನು ಸ್ವಾಗತಿಸುವ ಸಮಯ

ಮುಂಜಾನೆ ಎಳ್ಳೆಣ್ಣೆ ಅಭ್ಯಂಜನ
ದೇಗುಲಕ್ಕೆ ತೆರಳಿ ಭಗವದ್ದರ್ಶನ
ಎಳ್ಳು ಸವಿಯ ಎಲ್ಲರಿಗೂ ಹಂಚಿ ಬರೋಣ
ಒಳ್ಳೆ ಮಾತನಾಡಿ ಹರುಷದಿ ಸಂಭ್ರಮಿಸೋಣ

ಪಶು ಬಂಧುಗಳಿಗೂ ಇಂದು ಮಜ್ಜನ
ರಂಗು ರಂಗು ರಿಬ್ಬನುಗಳಲಿ ಅಲಂಕರಣ
ಬೀದಿ ಬೀದಿಗಳಲಿ ಕೊಂಡಗಳ ನಿರ್ಮಾಣ
ಹಿಗ್ಗಿನಲಿ ರಾಸುಗಳ ಕಿಚ್ಚು ಹಾಯಿಸೋಣ

ಭೂಮಿ ಸೂರ್ಯ ಚಂದ್ರರ ಪರಿಭ್ರಮಣ
ಸಂಭವಿಸಲು ಕಾರಣ ಋತುಗಳ ಆವರ್ತನ
ಪ್ರಕೃತಿಯೀ ಚಿರಂತನ ನಿತ್ಯನೂತನ ಗುಣ
ಬನ್ನಿ ನಮ್ಮಲ್ಲಿಯೂ ಅಳವಡಿಸಿಕೊಳ್ಳೋಣ

✍️ಸುಜಾತಾ ರವೀಶ್ 
ಮೈಸೂರು