ಈ ಭುವನದೊಳಗೆ ಸಂಜೆಯನ್ನು ಆಲಾಪಿಸದಿ ರುವ ಕವಿಗಳೇ ಅಪರೂಪವೆನ್ನಬಹುದು. ಇದು ಕಗ್ಗತ್ತಲ ಇರುಳಿಗೆ ಮುನ್ನುಡಿಯಾಗಿ ದ್ದರೂ, ಪ್ರೇಮದ ಆಲಾಪಕ್ಕೆ ಬೆಳಕಿನಂತೆ ಕಂಗೊಳಿ ಸುವುದು, ಸೆಳೆಯುವ ಇದರ ಅಪೂರ್ವ ಲಕ್ಷಣ ಗಳಲ್ಲಿ ಒಂದು. ಇದೇ ಕಾರಣಕ್ಕಾಗಿಯೇ ಸಂಜೆ ಮುಸ್ಸಂಜೆಗಳು ಕವಿ-ಕಾವ್ಯಗಳನ್ನು ಇನ್ನಿಲ್ಲದಂತೆ ಆವರಿಸಿಕೊಂಡಿ ರಲು ಸಾಕು. ಇದಕ್ಕಿಂತ ಮುಖ್ಯ ವಾಗಿ ಪ್ರೇಮಾಂಕುರಕ್ಕೆ ಪ್ರತಿಮೆಯಾಗಿ ನಿಲ್ಲಬಲ್ಲ ಚಂದ್ರೋದಯವನ್ನು ತನ್ನೊಡಲಲ್ಲಿಟ್ಟುಕೊಂಡಿ ರುವುದು ಕವಿಗಳು ಬಾಗಿರುವ ಸಂಜೆಯ ಸಮ್ಮಾನಕ್ಕೆ ಮಗದೊಂದು ಕಾರಣ. ಸಂಜೆ ಯೊಳಗೆ ತಮಂಧವು ಅಡಗಿಕೊಂಡಿರುವಂತೆ, ಅಂಧಕಾರವನ್ನು ಹುಡುಕಿಕೊಂಡು ಬೆನ್ನತ್ತಿ ಬೇಟೆ ಯಾಡುವ ಬೆಳಕೂ ಇರುವುದು ಸಂಜೆಯ ಅಸ್ತಿತ್ವವಾದದ ಸಿದ್ದಾಂತ. ಹಾಗೆಂದು ಇದು ಫ್ರಾನ್ಸ್ ನ ಪ್ರಖ್ಯಾತ ತತ್ವಶಾಸ್ತ್ರಜ್ಞ ಜೀನ್ ಪಾಲ್ ಸಾರ್ತ್ರ ಹೇಳುವ ಹಾಗೆ ಕೇವಲ ಕತ್ತಲೆಯ ಉಳಿವಿಗಾಗಿ ಘಟಿಸುವ ಹೋರಾಟ ವಲ್ಲ; ಬದಲಾಗಿ ಹಾಲು ಬೆಳದಿಂಗಳು ತನ್ನ ಸ್ವಾತಂತ್ರ್ಯ ದ ಪರಮಾಧಿಕಾರಕ್ಕಾಗಿ ಹಾತೊರೆ ಯುವ ಅವಿರತ ಹೋರಾಟವೂ ಹೌದು. ಅಂಧಕಾರದ ಅಳಿವು ಚೆಂಬೆಳಕಿನ ಉಳಿವು ಇದು ಸಂಜೆ ಯೊಂದು ಅಳಿವಿಲ್ಲದ ಜಂಗಮನಾಗಿ ಹೊಮ್ಮಿ ನಿಂತಿರುವ ನಿಲುವು. ಹೀಗಾಗಿ ಸಂಜೆ ಸರ್ವ ಮಾನ್ಯ. ಕವಿಗಳ ಹೃದಯ ದಲ್ಲಿ ಇದರ ಸ್ಥಾನ ಗಣ್ಯಾತಿಗಣ್ಯ. ಭವ್ಯವಾಗಿರುವ ಭಂಡಭವದ ಸಂತೆಯ ನಿತ್ಯ ಭಾನಗಡಿಯ ಸವಿನೆನಪು ಗಳನ್ನು ವಿರಾಮ ಕುರ್ಚಿಯೊಳಗೆ ಒರಗಿ ನೆನಪಿಸಿಕೊಳ್ಳು ವುದಕ್ಕೆಂದೇ ಮನುಷ್ಯನ ಬಾಳಿನೊಳಗೆ ದಯ ಪಾಲಿಸಿರುವ ವಯೋಮಾನದ ಇಳಿಸಂಜೆಗೂ ರೂಪಕವಾಗಿ ನಿಂತ ಪ್ರಕೃತಿಯ ಸಂಜೆಯಿಲ್ಲದೇ ಹೋಗಿದ್ದರೆ ಬದುಕೆಷ್ಟು ಅಪೂರ್ಣ ಅಲ್ಲವೇ?.

ಹೀಗೊಮ್ಮೆ ನಾನೂ ಲೋಕಾಭಿರಾಮವಾಗಿ ಒಂದು ಸಂಜೆ, ಚಲಿಸುತ್ತಿರುವ ಬಸ್ಸಿನ ಸೀಟಿಗೆ ಒರಗಿ ಕುಳಿತಾಗ ಕರಣತುಂಬಿದ ಗೀತೆಯೊಂ ದು ಇನ್ನಿಲ್ಲದಂತೆ ಕಾಡಿ, ಒಲವಿನಾರಾಧನೆಗೆ ಮಂಗಳಾರತಿಯಾಗಬಲ್ಲ ಕಾವ್ಯ ಜ್ಯೋತಿಗೆ ಕಿಡಿಯೊಂದನ್ನು ಹೊತ್ತಿಸಿರುವುದು ಕೇವಲ ಕಾಕತಾಳೀಯವಾಗಿರಲಾರದು ಎಂಬುದೇ ನನ್ನ ಪ್ರಬಲ ನಂಬಿಕೆ. ಹಾಯಾದ ಇಂತಹ ಸಂಜೆಯ ಘಳಿಗೆಗೊಂದು, ಹೃದಯ ತುಂಬಿ ಕೊಂಡರೆ ಸಾಕು ನಮ್ಮನ್ನೇ ಕರಗಿ ಆವಿಯಾ ಗಿಸಬಲ್ಲ ಕಾವ್ಯ ವೊಂದು ದಕ್ಕುವುದಾದರೆ, ಯಾವ ಜೀವ ತಾನೇ ಭಾಗ್ಯವನ್ನು ಧಿಕ್ಕರಿಸುವ ಧೈರ್ಯ ತೋರಬಲ್ಲದುದು? ಹೀಗಾಗಿ ನತ ಮಸ್ತಕ ಶರಣಾಗಲು ಈ ಬರಹದ ಸಹವಾಸ; ಅಲ್ತು, ಭಾವೋದ್ಯೋಗದ ಹರಸಾಹಸ; ಅಲ್ತು ಧ್ಯಾನ ಮಂದಿರದಲ್ಲಿ ಜೀವದ ಪರವಾಸ; ಅದೂ ಅಲ್ತು ಭಾವದ ಚೂತವನಕ್ಕೊಂದು ಸಂಭ್ರಮದ ಚೈತ್ರಮಾಸ.

ಇಂತಿಪ್ಪ ನಮ್ಮ ದಶಾವತಾರಗಳಿಗೆ ಕಾರಣ ವಾಗುವ ಸಂಜೆಯು ಶ್ರಾವಣದ ಕವಿ ಬೇಂದ್ರೆ ಯವರನ್ನೂ ಕಾಡದೇ ಬಿಟ್ಟಿಲ್ಲ ಎನ್ನುವುದಕ್ಕೆ ಈ ಹಾಡನ್ನು ಕೇಳಿ-

ಮುಗಿಲ ಮಾರಿಗೆ ರಾಗರತಿಯ ನಂಜ ಏರಿತ್ತ
ಆಗ ಸಂಜೆ ಆಗಿತ್ತ;
ನೆಲದ ಅಂಚಿಗೆ ಮಂಜಿನ ಮುಸುಕು ಹ್ಯಾಂಗೋ ಬಿದ್ದಿತ್ತ
ಗಾಳಿಗೆ ಮೇಲಕ್ಕೆದ್ದಿತ್ತ.

ಅನುರಾಗರತಿಯ ಆಹ್ವಾನಕ್ಕೊಂದು ಅಮೃತ ಘಳಿಗೆಯನ್ನಾಗಿ ಸಂಜೆಯನ್ನು ಆರಾಧಿಸಿದ ಬೇಂದ್ರೆಯವರ ದರ್ಶನ ದೃಷ್ಟಿ ಮೋಹಕವಾ ದುದು. ಮನದ ನೆಲದ ಮೇಲೆ ಮಲಗಿ ನಿದ್ರಿಸು ತ್ತಿರುವ ಮಂಜಿನಂತಹ ಬಯಕೆಗಳೆಲ್ಲವೂ ಸಂಜೆ ಯ ಪ್ರೇರಣೆಗೆ ಮೇಲೆದ್ದು ಆವರಿಸಿ ಕೊಳ್ಳುವ ಅನುರಾಗ ಲೋಕದ ದರ್ಶನವನ್ನು ದೃಶ್ಯಕಾವ್ಯ ದಂತೆ ತೆರೆದಿಟ್ಟ ಬೇಂದ್ರೆಯವರ ನಾದಾಂತರಂಗ ಎಂಥವರನ್ನೂ ಕೂಡ ಮೂಕವಿಸ್ಮಿತರನ್ನಾಗಿ ಮಾಡಬಲ್ಲದು. ಈಗೇಕೆ ಈಸಂಜೆ ಪುರಾಣ ವೆಲ್ಲಾ? ಎನ್ನುವಿರಾದರೆ ಬನ್ನಿ ನನ್ನನ್ನು ಕಾಡಿದ, ಜಯಂತ್ ಕಾಯ್ಕಿಣಿ ಯವರು ರಚಿಸಿದ ‘ಗೆಳೆಯ‘ ಚಲನಚಿತ್ರದ ‘ಈ ಸಂಜೆಯಾಕಾಗಿದೆ..’ ಎಂಬ ಗೀತಾಂತರಂಗದತ್ತ ಪಯಣಿಸೋಣ.

ನೀವು ಆ ಗೀತೆಯನ್ನೊಮ್ಮೆ ಆಲಿಸಿದರೆ ಸಾಲದು; ಜಲ ಸಿಂಚನದ ಆಮೆಗತಿಯ ಚಲ್ಲಾಟ ದ ದೃಶ್ಯಕಾವ್ಯದಂತಿ ರುವ ಅದರ ಮೆಲುಗತಿಯ ಛಾಯಾ ಗ್ರಹಣ ವನ್ನೂ ಕಣ್ತುಂಬಿಕೊಳ್ಳಲೇ ಬೇಕು. ಕಾರಣ, ನನ್ನ ಯಾವ ಪ್ರಯತ್ನವಿಲ್ಲದೆ ಯೂ ಬರಹ ದಲ್ಲಿರುವ ಆಧ್ಯಾತ್ಮಿಕತೆಯೂ ತುಂಬಿದ ಹೊಳೆಯಾಗಿ ನಿಮ್ಮ ಹೃದಯವನ್ನೊ ಮ್ಮೆ ಹೊಕ್ಕು ತಣಿಸಲು ಅನುವಾಗಬಹುದೆಂಬ ದೂರಾಲೋಚನೆ ನನ್ನದು. ಕಾಯ್ಕಿಣಿಯವರ ಕಾವ್ಯದ ಆರಂಭಿಕ ಸಾಲುಗಳನ್ನೊಮ್ಮೆ ಆಹ್ಲಾದಿಸಿಬಿಡಿ-

ಈ ಸಂಜೆ ಯಾಕಾಗಿದೆ ನೀನಿಲ್ಲದೆ
ಈ ಸಂಜೆ ಯಾಕಾಗಿದೆ ?
ಈ ಸಂತೆ ಸಾಕಾಗಿದೆ ನೀನಿಲ್ಲದೆ
ಈ ಸಂತೆ ಸಾಕಾಗಿದೆ

ಸಂಜೆಯಾಗುವುದೆಂದರೆ ಹಗಲು, ತನ್ನ ದಿನದ ಕರ್ತವ್ಯದಲ್ಲಿ ಧರಿಸಿದ್ದ ಝಗಮಗಿಸುವ ವೇಷ ವನ್ನು ಕಳಚಿಟ್ಟು, ಹೊಳೆಯುವ ತಾರೆಗಳಿಂದ ಕೂಡಿದ ಹೊಸತಂಪು ಕತ್ತಲ ಕಾಡಿಗೆಯ ಚಿಕ್ಕೆ ಯಂಗಿಯನ್ನು ಧರಿಸಿದಂತೆನ್ನುವುದು ರಮ್ಯ ವಾದ. ಆದರೆ ಯಾಕಾಗಿದೆ ಎನ್ನುವ ಶಬ್ದವು ಮೇಲ್ನೋಟಕ್ಕೆ ಕವಿತೆಯಲ್ಲಿರುವ ಶೋಧನೆಯ ಪ್ರಶ್ನೆಯಂತೆ ಕಂಡರೂ, ಮುಂಬರುವ “ನೀನಿಲ್ಲದೆ” ಎಂಬ ಶಬ್ದವೊಂದೇ ಸಾಕು, ಇದೊಂದು ವಿರಹಕಾರಣದ ವೇದನೆಯೆನ್ನು ವುದು ಗುಟ್ಟಾಗಿ ಉಳಿಯದೇ ಇರುವುದಕ್ಕೆ. ನಂತರದ ಮೂರು ಹಾಗೂ ನಾಲ್ಕನೆಯ ಪಾದ ಗಳಲ್ಲಿ ಬರುವ ‘ಸಾಕಾಗಿದೆ’ ಎಂಬ ಪದವನ್ನು ಹಾಡಿದ ಮೇಲಂತೂ ವಿರಹಕ್ಕೊಂದು ವ್ಯಾಖ್ಯಾನವನ್ನೇ ಸಾಕ್ಷಾತ್ಕರಿಸಿಕೊಂಡಂತಹ ಅನುಭವವೇ ಮೇಳೈಸಿ ಧುತ್ತನೆ ಎರಗಿಬಿಡಬ ಹುದು. ಅಕ್ಕ ಮಹಾದೇವಿಯು ಹಾಡಿರುವ ‘ಸಂತೆಯೊಳ ಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದಡೆಂತ ಯ್ಯ’ ಎಂಬ ವಚನದ ಸಾಲುಗಳು ಕವಿ ಜಯಂತರ ಗೀತೆಯಲ್ಲಿರುವ ಸಂತೆ ಸಾಕಾ ಗಿದೆ ಎನ್ನುವ ವಿರಹವಾದಕ್ಕೆ ವಿರುದ್ಧವಾದ ಆಶಾವಾದದ ರಹದಾರಿಯನ್ನು ತೋರುವಂತಿವೆ. ‘ನೀನಿಲ್ಲದೇ’ ಎನ್ನುವ ಪದವೇ ಈ ಪಲ್ಲವಿಯಲ್ಲಿ ಅಷ್ಟೇ ಏಕೆ ಅಖಂಡ ಹಾಡಿಗೆ ಪ್ರಧಾನವಾದ ಕೇಂದ್ರ ಸಂಗತಿ. ಒಲುಮೆಯ ಜೀವವೊಂದು ಹತ್ತಿರವಿರದಿದ್ದರೆ, ಈ ಸಮೃದ್ಧ ಲೋಕವೆಲ್ಲವೂ ಹೇಗೆ ನಿರರ್ಥಕ ಸಂತೆಯಾಗಬಲ್ಲದು ಎಂಬು ದನ್ನು ಕೆಲವೇ ಪದಗಳಲ್ಲಿ ಕಟ್ಟಿಕೊಡುವ ಕವಿಯು ಪ್ರೇಮದ ಆತ್ಮಸಾಂಗತ್ಯವೆಷ್ಟು ಮುಖ್ಯವೋ, ರಾಗರತಿಯ ಭೌತಿಕ ಸಂಗಾತವೂ ಅಷ್ಟೇ ಅದಮ್ಯವಾದುದು ಎಂಬುದನ್ನು ನಿರೂಪಿಸು ತ್ತಾರೆ.

ಏಕಾಂತವೇ ಆಲಾಪವು
ಏಕಾಂಗಿಯ ಸಲ್ಲಾಪವು
ಈ ಮೌನ ಬಿಸಿಯಾಗಿದೆ

ಎಂಬ ಹಾಡಿನ ಸಾಲುಗಳಲ್ಲಿ ಪ್ರೇಮಿಗಳೆಲ್ಲರೂ ನಿರಾಕರಿಸುವ ಏಕಾಂತವನ್ನು ಕೂಡ ಹೇಗೆ ಒಲವಿನ ಆಲಾಪವನ್ನಾಗಿ ಹಾಡಿಬಿಡಬಹುದು ಎನ್ನುವುದರ ಜಿಜ್ಞಾಸೆಯಿದೆ. ಏಕಾಂಗಿಯಾಗಿ ಯೂ ಸಲ್ಲಾಪವನ್ನು ಹೇಗೆ ಆನಂದಿಸಬಹುದು ಎಂಬುದಕ್ಕೆ ಪೂರಕವಾದ, ಕಾಯ್ಕಿಣಿಯವ ರದೇ ಮತ್ತೊಂದು ಗೀತೆಯಲ್ಲಿನ ಈ ಸಾಲು ಗಳನ್ನು ಗಮನಿಸಿ-

ನನ್ನಲ್ಲೇ ನೀನಿರುವಾಗ ಇನ್ನೇಕೆ ಋಜುವಾತು
ನೆನಪಿನಲ್ಲಿ ನೀನೀಗ ಎಂದಿಗಿಂತ ಸನಿಹ

ಸಲ್ಲಾಪಕ್ಕೆ ಕನಿಷ್ಠ ಎರಡು ಜೀವಗಳಾದರೂ ಎದುರುಬದುರಾಗಿರಬೇಕೆನ್ನುವುದು ವಿಜ್ಞಾನ. ಆತ್ಮಸಂಗಾತಕ್ಕೆ ನೀ ಎನಗುಂಟು ಎಂಬುದು ಚೆನ್ನಮಲ್ಲಿಕಾರ್ಜುನನನ್ನು ಕುರಿತ ಅಕ್ಕಮಹಾ ದೇವಿಯ ಭಕ್ತಿಯ ಸುಜ್ಞಾನ. ಆದರೆ ಕವಿ ಜಯಂತರು ಇಲ್ಲಿ ಏಕಾಂಗಿಯೊಳಗಿನ ಒಲುಮೆ ಯಿಂದಾಗಿ ಈ ಸಲ್ಲಾಪ ಹೇಗೆ ಸಾಧ್ಯ ವಾಗಬಲ್ಲದು ಎಂಬುದನ್ನು ತರಂಗಿಸಿದ್ದಾರೆ. ಒಂಟಿಯಾಗಿ ರುವ ಅಂತರಂಗದೊಳಗೆ ನಡೆಯುವ ಈ ಸಂವಾದದ ಪರಿಣಾಮವೇ ಮೌನವು ಬಿಸಿಯಾ ಗುವುದು. ಮನಕೆ ಹಿತವಾಗ ಬಹುದಾದ ಯಾವುದೋ ಪ್ರಕ್ರಿಯೆಯೊಂದು ಘಟಿಸಿದಾಗ ಬೆಚ್ಚನೆಯ ಅನುಭವವಾಗುವುದು ಸಹಜವೇ ಆಗಿದೆ. ಆದರೆ ಈ ಕವಿತೆಯಲ್ಲಿರುವ ಬೆಚ್ವನೆಯ ಮೌನದ ಲಯ ತಾಳಗಳು ವಿಭಿನ್ನ. ಅದು ಒಲವಿನೊಂದಿಗಿನ ಅನುಸಂಧಾನವಾಗಿರು ವುದರಿಂದ ಮಾತಿಲ್ಲದ ಮೌನವು ಕೂಡ ಬಿಸಿಯಾಗುವುದು ಒಲವಿನ ತೀವ್ರತೆಯನ್ನು ಸಂಶ್ಲೇಷಿಸುತ್ತದೆ‌.

ಅಂತರಂಗದೊಳಗಿನ ತುಮುಲಗಳ ಹೊಯ್ದಾ ಟವೇ ಅಗೋಚರ. ಆದರೆ ಹೊಮ್ಮಬಹುದಾದ ಪರಿಣಾಮ ಮಾತ್ರ ಧೃಗ್ಗೋಚರ. ಒಲವಿನ ವಿಲಾಸವನ್ನು ಹಾಡಲು ಪದಗಳನೆಷ್ಟು ಪೋಣಿಸಿ ದರೂ ಸಾಲದು. ಆದ್ದರಿಂದಲೇ ಜನ್ನ ಟೀಕಾಕಾ ರರ ಕೈಗೆ ನಿಲುಕದ ಈ ಒಲವನ್ನು ಮನಸಿಜನ ಮಾಯೆ ಎಂದು ಕರೆದಿರುವುದು. ಆದರೆ ಕವಿ ಯಿಲ್ಲಿ ಮೌನ ಬಿಸಿಯಾಗಿದೆ ಎಂಬ ಎರಡೇ ಪದಗಳ ನುಡಿಗಟ್ಟನ್ನು ಮಾರ್ಮಿಕ ವಾಗಿ ವಿರಚಿಸಿದ್ದಾರೆ. ಈ ಪದಗಳ ಹಿಂದಿರುವ ಧ್ವನಿಯೇ ಪ್ರೇಮವೆಂಬ ಆಗಸದ ಮೇರೆಯ ನ್ನು ತೆರೆದು ತೋರುವಂತಿದೆ‌. ಅನುರಾಗ ಕಾರಣದ ಆಂತರ್ಯದೊಳಗಿನ ಸಂಘರ್ಷಕ್ಕೆ ಇದಕ್ಕಿಂತ ಪರಿಣಾಮಕಾರಿ ಯಾದ ಪದಗಳ ಅಭಿವ್ಯಕ್ತಿ ಸಾಧ್ಯವಾಗಲಾರದೇನೋ. ಹಾಡಿನ ನಿಧಾನಗತಿ ಯ ಛಾಯಾಗ್ರಹಣವು ಕೂಡ ಒಲವಿನಾರಾಧಕ ರಲ್ಲಿ ಪ್ರೇಮದೊಳಗಿನ ಸಿಹಿಯಾದ ನೋವನ್ನು ಒಂದಿನಿತೂ ಜಾರಿ ಹೋಗದಂತೆ ತನಿ ತನಿಯಾಗಿ ಅನುಭವಿಸು ವಂತೆ ಮಾಡುತ್ತದೆ. ಇದೇ ಕವಿತೆಯ ಮುಂದಿನ ಸಾಲುಗಳು ಹೀಗಿವೆ-

ಈ ನೋವಿಗೆ ಕಿಡಿ ಸೋಕಿಸಿ ಮಜ ನೋಡಿವೆ ತಾರಾಗಣ
ತಂಗಾಳಿಯ ಪಿಸುಮಾತಿಗೆ ಯುಗವಾಗಿದೆ ನನ್ನಾ ಕ್ಷಣ

ಈ ವಿರಹ ಕಾರಣದ ನೋವು ಕೇವಲ ಕವಿತೆಯ ಅಂಗಾಂಗಳನ್ನು ಮಾತ್ರವಲ್ಲದೇ, ನಂಬಿದವ ರನ್ನೂ ಮೀರಿ ಬ್ರಹ್ಮಾಂಡದತ್ತತ್ತ ವ್ಯಾಪಿಸಿದ ಮೋಜಿಗೆ ತಾರಾಗಣವೇ ಕಿಡಿ ಯನ್ನು ತಾಕಿಸಿದ ಹಾಗೆ ಎಂಬ ಉತ್ಪ್ರೇಕ್ಷೆ ಯ ಕಲ್ಪನಾ ವಿಲಾಸವು ಕವಿಯ ನವನವೋನ್ಮೇಷ ಶಾಲಿ ಪ್ರತಿಭಾಶಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ. ಕನ್ನಡ ಸಾರಸ್ವತ ಲೋಕದಲ್ಲಿ ಅನನ್ಯ ಕವಿಯೆಂದೇ ಗುರುತಿಸಿಕೊಂಡಿರುವ ಕಾಯ್ಕಿಣಿ ಯವರ ಕಾವ್ಯದಲ್ಲಿ ಇಂತಹ ವಿಲಕ್ಷಣ ರಚನೆ ಗಳು ವಿಶಿಷ್ಟವಾದ ಛಾಪನ್ನು ಮೂಡಿಸಿ ಜನ ಮಾನಸ ವನ್ನು ಸೂರೆಗೊಂಡಿವೆ. ಚಲನಚಿತ್ರ ಗಳ ಗೀತ ರಚನೆಕಾರರು ಶಿಷ್ಟ ಲೋಕದಲ್ಲಿ ಹೆಸರು ಮಾಡಿರುವುದು ಅಸಾಹಿತ್ಯಪರೂಪ. ಕಾಯ್ಕಿಣಿಯವ ರಂತೆ ಸಾಹಿತಿಗಳಾಗಿ ಕೀರ್ತಿವೆತ್ತವರು ಕೂಡ ಚಲನ ಚಿತ್ರಗಳ ಗೀತೆಗಳಿಗೆ ಸಾಹಿತ್ಯ ರಚನೆ ಮಾಡಿರು ವವರು ಬೆರಳೆಣಿಕೆಯಷ್ಟು. ಚಿತ್ರ ಸಾಹಿತ್ಯ ಹಾಗೂ ಶಿಷ್ಟ ಸಾಹಿತ್ಯ ಕ್ಷೇತ್ರಗಳೆರಡರ ಜುಗಲ್ ಬಂದಿ ಸಾಧ್ಯವಾದರೆ ಚಲನಚಿತ್ರ ಗೀತ ಸಾಹಿತ್ಯವೂ ಹೇಗೆ ಪ್ರೇಕ್ಷಕರ ಹೃದಯ ಸಾಮ್ರಾಜ್ಯದೊಳಗೆ ಕ್ರಾಂತಿಯನ್ನುಂಟು ಮಾಡಬಲ್ಲದು ಎಂಬುದಕ್ಕೆ ಹಂಸಲೇಖ,ಚಿ.ಉದಯ ಶಂಕರ್,ಆರ್.ಎನ್. ಜಯಗೋಪಾಲ, ಹುಣಸೂರು ಕೃಷ್ಣಮೂರ್ತಿ, ನಾಗತಿಹಳ್ಳಿ ಚಂದ್ರಶೇಖರ್, ಬರಗೂರು ರಾಮಚಂದ್ರಪ್ಪ,‌ ದೊಡ್ಡರಂಗೇಗೌಡ, ಜಯಂತ ಕಾಯ್ಕಿಣಿಯವ ರಂತಹ ಕೆಲವೇ ಅಪೂರ್ವ ಚೇತನಗಳು ಶ್ರೇಷ್ಠ ನಿದರ್ಶನಗಳಾಗಿ ನಿಲ್ಲುತ್ತಾರೆ. ಮತ್ತೆ ಕಾಯ್ಕಿಣಿಯವರು ಹಾಡಿದ ವಿರಹವೇದನೆಯತ್ತ ಹರಿಯುವುದಾದರೆ, ಬೇಂದ್ರೆಯವರು ಮೇಲೆ ಉದ್ಧರಿಸಿದ ರಾಗರತಿ ಕವಿತೆಯಲ್ಲಿ:

ಬಿದಿಗಿ ಚಂದ್ರನ ಚೊಗಚೀ-ನಗಿ-ಹೂ ಮೆಲ್ಲಗ ಮೂಡಿತ್ತ
ಮ್ಯಾಲಕ ಬೆಳ್ಳಿನ ಕೂಡಿತ್ತ
ಇರುಳು ಹೆರಳಿನಾ ಅರಳಮಲ್ಲಿಗೀ ಜಾಳಿಗಿ ಹಾಂಗೆತ್ತ
ಸೂಸ್ಯಾವ ಚಿಕ್ಕಿ ಅತ್ತಿತ್ತ

ಎಂದು ರತಿಯ ಹೆರಳನ್ನೇ ಇರುಳನ್ನಾಗಿ, ಆಕೆಯ ಬಯಕೆಯನ್ನೇ ಬಿದಿಗೆಚಂದಿರನ ನಗೆಯನ್ನಾಗಿ ವಿಸ್ತರಿಸಿದರೆ,ಈ ಸಂಜೆ ಯಾಕಾಗಿದೆ ಕವಿತೆಯಲ್ಲಿ ವಿರಹದ ನೋವನ್ನೇ ಬಾನೆತ್ತರದಲ್ಲಿ ನಿಂತು ಮಜ ನೋಡುತ್ತಿರುವ ತಾರೆಗಳತ್ತ ಹೆಣೆ ದಿರುವುದು ವಿಶಿಷ್ಟವಾಗಿ ಸೆಳೆಯುತ್ತದೆ. ಪ್ರೇಮ ಹಾಗೂ ಕಾಲ ಇವೆರಡರ ಮಧ್ಯದ ಸ್ನೇಹ ಸಂಕೀರ್ಣ ವಾದುದು. ಕಾಲನ ಕೀಟಲೆಗೆ ಬೇಸರಿ ಸಿಕೊಳ್ಳುವ ಪಿಸು ಮಾತಿನ ಪ್ರೇಮಿಗಳದು ಸದಾ ಕಾಲನೊಂದಿಗೆ ಅಭಿ ವ್ಯಕ್ತಿಸಲಾಗದ ಅಂತರಂಗದ ದೃಷ್ಟಿಯುದ್ಧ. ಕಾಲನ ಅನನ್ಯತೆಯೆಂದರೆ, ಕ್ಷಣವಾಗಿ ಬಯಸಿ ದಾಗ ಯುಗವಾಗಿ ಕಾಡುವುದು; ಯುಗವಾಗಿ ಬಯಸಿದಾಗ ಕ್ಷಣವಾಗಿ ಪೀಡಿಸಿ ತೆರಳಿಬಿಡು ವುದು. ಇದೇ ಸಂಗತಿಯೇ ಪ್ರೇಮಿಗಳು ಹಾಗೂ ಕಾಲನ ಮಧ್ಯೆ ಸಂಘರ್ಷ ವನ್ನು ತಂದಿತ್ತಿರುವುದು. ಅವಕಾಶ ಸಿಕ್ಕಾಗಲೆಲ್ಲ ಗೋಳು ಹೊಯ್ದುಕೊಳ್ಳುವ ಕಾಲನ ಅಂತರಂಗ ಅರಿತಷ್ಟೂ ನಿಗೂಢ; ವ್ಯಾಖ್ಯಾನಿಸಿ ದಷ್ಟೂ ದಿಙ್ಮೂಡ. ಇಂತಹ ವಿಕ್ಷಿಪ್ತ ಕಾಲನನ್ನೂ ಸೋಲಿಸ ಬಲ್ಲ ತಂಗಾಳಿಯ ಪಿಸು ಮಾತಿನ ಶಕ್ತಿಗೆ ನಾವು ಬೆರಗಾಗಲೇಬೇಕು. ಒಲವಿನ ಪೂಜಾರಿಗಳಿಗೆ ಕವಿಯು ಹೇಳುವ ಪಿಸು ಮಾತು ಕೂಡ ಕಾಲನನ್ನು ಗೆಲ್ಲಬಲ್ಲ ಹಾಗೂ ಸರಳವಾಗಿ ದಕ್ಕಿಸಿಕೊಳ್ಳಬಲ್ಲ ಅಸ್ತ್ರಗಳಲ್ಲಿ ಅತ್ಯಂತ ನಯ ವಾದುದು.

ನೆನಪೆಲ್ಲವೂ ಹೂವಾಗಿದೆ ಮೈ ಎಲ್ಲವೂ ಮುಳ್ಳಾಗಿದೆ
ಈ ಜೀವ ಕಸಿಯಾಗಿದೆ…. ಈ ಜೀವ ಕಸಿಯಾಗಿದೆ

ಮುಂದುವರೆದ ಈ ಆಲಾಪವನ್ನು ಆಲಿಸುವಾಗ ನೆನಪುಗಳು ಹೇಗೆ ಪ್ರೇಮಿಗಳ ಆಪತ್ಕಾಲದ ಬಾಂಧವರಾಗಿವೆ ಎನ್ನುವುದರ ಅರಿವಾಗದಿರದು. ವಿರಹದಿಂದ ಬೆಂದು ನೊಂದು ಕೊರಗಿ ಕರಗಿ ಹೋಗಬಲ್ಲ ಒಲವಿನ ಆತ್ಮಕ್ಕೆ ನೆನಪುಗಳೇ ಓಯಾಸಿಸ್. ನೆನೆಸಿಕೊಂಡ ಒಡಲಿಗೆ ಮಾತ್ರ ಗುಲಾಬಿಯ ಜೊತೆಗಿರುವ ಮುಳ್ಳಾಗುವ ಕಟು ಅನುಭವ. ಇದು ಒಲವು ತಂದ ಮನುಜನೊಳ ಗಿನ ವೈರುಧ್ಯ. ಇಂತಹ ವಿಸ್ಮಯಗಳನ್ನಿಟ್ಟು ಕೊಂಡ ಒಲವೇ ಆರಾಧ್ಯ. ಆದರೂ ಪ್ರೀತಿ ಆಗಂತುಕ ನೆಂಬುದು ಸರ್ವವೇದ್ಯ.ಈ ದ್ವಂದ್ವವೇ ಎದುರಾಗುವ ಬದುಕಿಗೊಂದು ಸ್ವಾರಸ್ಯದ ತವನಿಧಿ. ಇಂತಹ ಆಪ್ಯಾಯಮಾನ ವಾದ ಸಂಕಟಗಳೇ ಜೀವವನ್ನು ಮಾಗುವಂತೆ ಮಾಡ ಬಲ್ಲ ಚೈತನ್ಯ ಶಕ್ತಿಗಳು. ಇವು ಜೀವವನ್ನು ಹಾಗೂ ಜೀವನವನ್ನು ಕಸಿಯಾಗಿಡಲು ತಮ್ಮದೇ ವಿಭಿನ್ನ ನೀಲ ನಕಾಶೆಯನ್ನು ಹೊಂದಿರುವ ಪರೀಕ್ಷೆಯನ್ನೊಡ್ಡುತ್ತವೆ. ಜಯಿಸುವುದೊಂದೇ ನಮ್ಮ ಮುಂದಿರುವ ಸವಾಲಾಗಬೇಕೇ ವಿನಃ ದೂರವಾಯಿತಲ್ಲ ಒಲವು ಎಂದುಕೊಂಡು ಸೋತು ಶರಣಾಗು ವುದಲ್ಲ. ಕಸಿಯಾಗಿದೆ ಎನ್ನುವ ಈ ಕವಿತೆಯ ಪದವೇ ತನ್ನಲ್ಲಿ ಈಸಬೇಕು, ಇದ್ದು ಜಯಿಸ ಬೇಕು ಎನ್ನುವ ತತ್ವಜ್ಞಾನವನ್ನು ಅಡಗಿಸಿಟ್ಟು ಕೊಂಡಿರುವುದನ್ನು ಗ್ರಹಿಸಬೇಕು. ಇಂತಹ ದ್ವಂದ್ವಗಳಲ್ಲಿ ತೊಳಲಾ ಡುವ ಮನಸಿನ ನಿಗ್ರಹಕ್ಕಾಗಿ ಕನಕ ದಾಸರು ‘ತಲ್ಲಣಿಸದಿರು ಕಂಡ್ಯ ತಾಳು ಮನವೇ‘ ಎಂದು ಕೀರ್ತನೆ ಯನ್ನೇ ಹಾಡಿದ್ದಾರೆ. ಇಂತಹ ತಾತ್ವಿಕತೆಗಳು ಜೀವವನ್ಜು ಕಸಿಯಾಗಿಡುವ ಬಗೆಯನ್ನು ಪಾಠ ಮಾಡುತ್ತವೆ‌. ಬದುಕಿನಲ್ಲಿ ಹೀಗೆ ಬೆಂದು ಹೋಗಿದ್ದರಿಂದಲೇ ದತ್ತಾತ್ರೇಯ ರಿಗೆ ಕವಿಗಾರುಡಿಗ ಬೇಂದ್ರೆ ಯಾಗಲಿಕ್ಕೆ ಸಾಧ್ಯ ವಾಯಿತು. ಅಂತರಂಗದ ಬೇಯುವಿಕೆಯು ಮನುಷ್ಯನನ್ನು ಪರಿಪೂರ್ಣತೆಯಡೆಗೆ ಕೊಂಡೊ ಯ್ಯುವಂತೆ ಮಾಡಬಲ್ಲ ನಿಷ್ಕರ್ಷೆ. ಒಲವಿನ ಹಾದಿಯಲ್ಲಿನ ಕಲ್ಲು ಮುಳ್ಳುಗಳು ಕೂಡ ನಾವು ಸಾಗಬೇಕಾದ ಜೀವನಪಥದ ಮಾದರಿಯೊಂದ ನ್ನು ಕೊಡುಗೆಯಾಗಿ ನೀಡುತ್ತವೆ. ಮನುಷ್ಯ ಜೀವನದ ಇಂತಹ ವ್ಯಾಪಾರಗಳನ್ನು ನೆನೆದು ಜೇಡರದಾಸಿಮಯ್ಯ ನವರು ಸ್ಚತಃ ರಾಮನಾಥ ನಿಗೆ ‘ನೀನೊಮ್ಮೆ ಒಡಲುಗೊಂಡು ನೋಡಾ’ ಎಂದು ಸವಾಲು ಹಾಕಿರುವುದನ್ನು ಸ್ಮರಿಸಿಕೊಳ್ಳ ಬಹುದು. ಇದನ್ನೇ ಕವಿಯ ಈ ಸಾಲುಗಳು ಪಿಸುಗುಡುತ್ತಿ ರುವಂತೆ ಭಾಸವಾಗುತ್ತದೆ.

ನೀನಿಲ್ಲದೇ ಆ ಚಂದಿರ ಈ ಕಣ್ಣಲಿ ಕಸವಾಗಿದೆ
ಅದನೂದುವ ಉಸಿರಿಲ್ಲದೇ ಬೆಳದಿಂಗಳು ಅಸುನೀಗಿದೆ

ಚಂದಿರನನ್ನೇ ಕಣ್ಣಕಸವನ್ನಾಗಿ ಮಾಡುವ ಲೀಲಾ ವಿಲಾಸ ಈ ಒಲವಿನದ್ದು. ಅನುರಾಗ ವೆಂದರೆ ಬೆಳಕು; ಬೆಳಕೆಂದರೆ ಅನುರಾಗವೆನ್ನು ವುದೇ ಈ ಕಾವ್ಯದ ಅಂತಿಮ ಸತ್ಯ. ಒಲವಿಲ್ಲದೇ ಚಂದಿರ ನಿಲ್ಲ; ಚಂದಿರನಿಲ್ಲದೇ ಬೆಳದಿಂಗಳಿಲ್ಲ; ಬೆಳದಿಂಗ ಳಿಲ್ಲದೇ ಚಕೋರಿ ಯ ಪ್ರಾಣವಿಲ್ಲ; ಪ್ರಾಣವಿಲ್ಲದೆ ಪ್ರಾಣಿಗಳಿಲ್ಲ. ಇದು ನಾವೆಲ್ಲರೂ ಬಂಧಿಯಾಗಿ ರುವ ಪ್ರೇಮ ಲೋಕದ ಸರಪಳಿ. ಈ ಪದ್ಯದಲ್ಲಿ ಕವಿಯ ಪ್ರತಿಭಾವಿಲಾಸ ಪರವಶವಾಗಿ ಕುಣಿದಿದೆ. ಇದೊಂದು ಶೃಂಗಾರ ಕಾವ್ಯ. ಈ ಶೃಂಗಾರಕ್ಕೆ ಕಾರಣವಾಗುವ ಸಂಗತಿಗಳನ್ನು ವಿಭಾವ ಗಳೆಂದು ಕರೆಯುತ್ತಾರೆ. ವಿಭಾವದಲ್ಲಿ ಎರಡು ವಿಧ. “ಆಲಂಬನ ವಿಭಾವ” ಹಾಗೂ “ಉದ್ದೀಪನ ವಿಭಾವ.” ಈ ಕಾವ್ಯದ ನಾಯಕ ನ ಪ್ರೀತಿಗೆ ನಾಯಕಿಯೇ ನೇರ ಕಾರಣವಾಗಿರು ವುದರಿಂದ ಆಕೆ ಆಲಂಬನ ವಿಭಾವ. ಈ ಕಾವ್ಯ ದಲ್ಲಿ ಒಲವಿನ ಜ್ಯೋತಿಯನ್ನು ಹೊತ್ತಿಸಲು ಉದ್ದೀಪನ ನೀಡುವ ಚಂದಿರ, ಬೆಳದಿಂಗಳು, ಆಕಾಶ, ಸಂಜೆ, ತಾರಾಗಣ, ಸಂತೆ ಇವೆಲ್ಲವೂ ಉದ್ದೀಪನ ವಿಭಾವಗಳು. ಜಯಂತ್ ಕಾಯ್ಕಿಣಿ ಯವರ ವಿಶಿಷ್ಟತೆ ಯೆಂದರೆ ಸಹೃದಯರ ಎದೆಯೊಳಗೆ ಅನುರಾಗದ ತಂಪುಗೊಳವನ್ನೇ ಸೃಜಸಿ ರಸಾನುಭವ ವನ್ನು ಆಹ್ಲಾದಿಸುವ ಈ ಉದ್ಧೀಪನ ವಿಭಾವಗಳನ್ನು ಅತ್ಯಂತ ಸಮರ್ಥ ವಾಗಿ ಅಷ್ಟೇ ಔಚಿತ್ಯ ಪೂರ್ಣವಾಗಿ ಬಳಸಿಕೊ ಳ್ಳುತ್ತಾರೆ. ಇದೆಲ್ಲವೂ ಅಸಂಭವ ಉತ್ಪ್ರೇಕ್ಷೆ ಎಂದು ಹೀಗಳೆಯುವ ವಿಮರ್ಶಕರೂ ಹೃದಯ ದ ತಮ್ಮದೊಂದು ಕವಾಟದೊಳಗೆ ಈ ಹಾಡಿನ ಅನುಭಾವ ವೊಂದನ್ನು ಆಸ್ವಾದಿಸುತ್ತಲೇ ಇರುತ್ತಾರೆ ಎನ್ನುವುದು ಹೇಳಲಾಗದ ಕಟುಸತ್ಯ. ಒಲವಿನ ಇಂತಹ ವ್ಯಾಖ್ಯಾನಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ.

ಕ್ರಿ.ಶ ೭ನೇ ಶತಮಾನದಲ್ಲಿ ಹರ್ಷವರ್ಧನನ ಆಸ್ಥಾನದಲ್ಲಿದ್ದ ಬಾಣ ಭಟ್ಟ ಎಂಬ ಸಂಸ್ಕೃತ ಪಂಡಿತನು ಗುಣಾಢ್ಯನ ಬೃಹತ್ಕಥೆಯನ್ನಾ ಧರಿಸಿ ಕಾದಂಬರಿ ಎಂಬ ಗದ್ಯ ಕೃತಿಯೊಂದನ್ನು ರಚಿಸಿದ. ಇದೊಂದು ಜನ್ಮಾಂತರಗಳ ಆದರ್ಶ ಪ್ರಣಯದ ಕಥೆ. ಬಾಣಭಟ್ಟನು ಈ ಕೃತಿಯಲ್ಲಿ ಚಂದ್ರಾಪೀಡ- ಕಾದಂಬರಿ ಹಾಗೂ ಪುಂಡರೀಕ- ಮಹಾಶ್ವೇತೆ ಎಂಬ ಪಾತ್ರಗಳನ್ನಾ ಧರಿಸಿ ಪ್ರೇಮದ ವಿಭಿನ್ನ ಆಯಾಮವೊಂದನ್ನು ಕಟ್ಟಿಕೊಡುತ್ತಾನೆ. ಹೀಗೆ ಸಾವಿರಾರು ವರ್ಷಗಳ ನಂತರವೂ ಕಾಲಕ್ಕೆ ಅನುಗುಣವಾಗಿ ಇಂತಹ ಕಾವ್ಯಗಳ ಮೂಲಕ ಮತ್ತೆ ಮತ್ತೆ ನಿಕಷಕ್ಕೊಳಗಾ ಗುವ ಪ್ರೇಮದ ಮಹಿಮೆಯನ್ನು ಬಣ್ಣಿಸುವುದು ಯುಗಧರ್ಮ. ಬನ್ನಿ ಈ ಹಾಡಿನ ಕೊನೆಯ ಗುಟುಕನ್ನೂ ಹೀರಿಬಿಡೋಣ.-

ಆಕಾಶದಿ ಕಲೆಯಾಗಿದೆ ಈ ಸಂಜೆಯ ಕೊಲೆಯಾಗಿದೆ
ಈ ಗಾಯ ಹಸಿಯಾಗಿದೆ…ಈ ಗಾಯ ಹಸಿಯಾಗಿದೆ

ಅಸುನೀಗಿದ ಬೆಳದಿಂಗಳೇ ಕಲೆಯಾಗಿ ಕಂಡು, ವಿರಹದ ಹಸಿಗಾಯದೊಂದಿಗೆ ಕೊಲೆಯಾ ದಂತೆ ಕಾಣಿಸಿ ಸಾಮಾಜಿಕರ ಹೃದಯವನ್ನು ಆರ್ದ್ರ ಗೊಳಿಸಬಲ್ಲ ಕಾಣ್ಕೆ ಕಾಯ್ಕಿಣಿಯವ ರಂತಹ ವಿರಳ ಕವಿಕೋವಿದರಿಗೆ ಮಾತ್ರ ದಕ್ಕುವಂತ ಹುದು. ಪ್ರಣಯದೊಳಗಿನ ಅಹಿತವಾದ ಹಿಂಸೆ ಯನ್ನು ಹಿತವಾಗುವಂತೆ ಸಂಸ್ಕರಿಸಿದ ನುಡಿ ಗಡಣದಲ್ಲಿ ಸೆರೆಹಿಡಿದು ಬಣ್ಣಿಸುವಲ್ಲಿ ಕಾಯ್ಕಣಿ ಯವರದು ಪಳಗಿದ ಕರಕುಶಲತೆ. ಅಹಿಂಸೆಯ ರೂಪಕಗಳಾಗಿ ರುವ ಆಕಾಶ ಹಾಗೂ ಸಂಜೆಯ ಸಹಜ ವ್ಯಾಪಾರಗಳಲ್ಲಿಯೂ ವಿರಹದಿಂದುಸಿದ ನೋವಿನ ವಿಕ್ಷಿಪ್ತ ಕ್ರಿಯೆಯನ್ನು ಕಾಣುವ ಕವಿಯ ಒಳಗಣ್ಣು ಕಲಾತ್ಮಕವಾದುದು. ವಿರಹ ವೇದನೆ ಯ ಭಾವಗಳನ್ನು ಪ್ರಕೃತಿಯ ಸಹಜ ಘಟನೆ ಗಳಲ್ಲಿ ಆರೋಪಿಸುವ ಕವಿಯ ಸೌಂದರ್ಯ ಮೀಮಾಂಸೆ ಹೃದಯದ ಗಾಯ ಗಳಿಗೆ ಚಾಮರ ಬೀಸಿದಂತಿದೆ.

ಮನುಷ್ಯ ಸ್ವಭಾವಗಳನ್ನು ಪ್ರಕೃತಿ ಯ ಘಟನೆಗಳೊಂದಿಗೆ ಸಮೀಕರಿಸಿ ಹಾಡುವ ಪರಂಪರೆಯನ್ನು ನಾವು ಪಂಪನಿಂದಲೇ ಗುರುತಿಸಬಹುದು. ಈ ಪರಂಪರೆಯನ್ನು ಯುಗ ಧರ್ಮಕ್ಕನುಗುಣವಾಗಿ ಕರಗಿಸಿ ಚಿತ್ರ ಸಾಹಿತ್ಯ ದಲ್ಲಿ ನವ ಮನ್ವಂತರಕ್ಕೆ ಕಾರಣವಾದ ಜಯಂತ ಕಾಯ್ಕಿಣಿಯವರು ಈ ಕವಿತೆಯಲ್ಲಿ ಪ್ರಕೃತಿಯೊಂ ದಿಗಿನ ಮನುಷ್ಯನ ಅನುಸಂಧಾನದ ನೆಲೆಯನ್ನು ಮಾರ್ಮಿಕವಾಗಿ ವಿಶ್ಲೇಷಿಸಿದ್ದಾರೆ. ಹಿಂದಿಯಲ್ಲಿ ಅತಿ ಹೆಚ್ಚು ಚಲನ ಚಿತ್ರಗೀತೆಗಳನ್ನು ರಚಿಸಿ ಗಿನ್ನೆಸ್ ದಾಖಲೆ ಬರೆದಿರುವ ಸಮೀರ್ ಅಂಜಾನ್ ರವರು ರಚಿಸಿ ಎಸ್.ಪಿ.ಬಾಲಸುಬ್ರ ಹ್ಮಣ್ಯಂ ಹಾಗೂ ಲತಾ ಮಂಗೇಶ್ಕರ್ ರವರು ಹಾಡಿರುವ ಮಧುರವಾದ ಗೀತೆಯನ್ನೊಮ್ಮೆ ಕೇಳಿ-

ಆಂಖೇ ತೇರಿ ಬಾಹೋ ಮೇ
ಹರ್ ಶ್ಯಾಮ್ ಲಗೆ ಸಿಂಧೂರಿ

ಕಾಯ್ಕಣಿಯವರ ಕಣ್ಣಿನಲ್ಲಿ ಪ್ರೀತಿಯ ಅತಿ ಮಧುರ ಕೊಲೆಯಾಗಿ ಕಾಣುವ ಸಂಜೆಯು, ಸಮೀರ್ ಅಂಜಾನರ ಕಂಗಳಲ್ಲಿ ರಂಗುಗಳ ರಂಗವಲ್ಲಿಯಾಗಿ ಕಂಗೊಳಿಸಿರುವುದು ದರ್ಶನದ ಅವಿಚ್ಚಿನ್ನ ಲೀಲೆಯನ್ನು ಸಾಬೀತು ಮಾಡುವಂತಿ ದೆ. ಇದೊಂದು ಕೇವಲ ವಿರಹ ಗೀತೆ ಎಂದು ಕೊಂಡರೆ ನಮಗೆ ದಕ್ಕಬಹು ದಾದ ಅನುಭಾವದ ರಸಗೊಳದಿಂದ ದೂರ ತೆರಳಿದಂತಾಗುವುದರಲ್ಲಿ ಸಂದೇಹವಿಲ್ಲ. ಇದು ವಿರಹಗೀತೆಗಿಂತ ಹೆಚ್ಚಾಗಿ ಸಹೃದಯರೆಲ್ಲರೂ ಆಹ್ಲಾದಿಸಬಹುದಾದ ಹೃದಯಗೀತೆ; ನೊಂದವರ ಬದುಕಿಗೊಂದು ಸಾಂತ್ವನದ ಗಾಥೆ;ಎದೆಯೊಳಗೆ ಮೊಗೆಮೊಗೆದು ತುಂಬಿಕೊಳ್ಳಬಹುದಾದ ಜೀವನಪ್ರೀತಿಯ ಪ್ರಗಾಥೆ. ಸಾಕ್ಷಿಗಾಗಿ ವಸಂತಗೀತ ಚಲನಚಿತ್ರ ದಲ್ಲಿ ಚಿ.ಉದಯಶಂಕರರು ರಚಿಸಿ, ಡಾ. ರಾಜ್ ಕುಮಾರ್ ಹಾಗೂ ಎಸ್ ಜಾನಕಿ ಹಾಡಿರುವ ಈ ಯುಗಳ ಗೀತೆಯನ್ನೊಮ್ಮೆ ಕೇಳಿ:

“ಹಾಯಾದ ಈ ಸಂಜೆ ಆನಂದ ತುಂಬಿರಲು
ಬಾಳೆ ಸಂಗೀತ ಸುಧೆಯಾಯಿತು 

ಹೌದು. ಬಾಳೊಂದು ಸಂಗೀತ ಸುಧೆಯಾಗ ಲೇನು ಬೇಕೆಂಬುದನ್ನು ಸುಲಲಿತ ಭಾಷೆಯಲ್ಲಿ ಹಾಡಿರುವ ಈ ಗೀತೆ ಬದುಕಿನ ತತ್ವಶಾಸ್ತ್ತವನ್ನು ಹೇಳುವುದಿಲ್ಲವೇ? ಗಂತವ್ಯ ಏನೇ ಆಗಿರಬ ಹುದು, ಎಲ್ಲಿಯೋ ಕಾಣದೂರಿ ನಲ್ಲಿರಬಹುದು, ಆದರೆ ಪ್ರಯಾಣ ಮಾತ್ರ ಹಾಯಾಗಿರಬೇಕು. ಹಾಗಿರಲು ನಾವು ಸದಾ ಒಲುಮೆಯ ಜೊತೆಗಿರ ಬೇಕು. ಇದು ನಾನು ಕಂಡುಕೊಂಡ ಪ್ರೀತಿಯ ರಸಾಯನಶಾಸ್ತ್ರ.

ನಮಗೆದುರಾಗುವ ಪ್ರತಿ ಸಂಜೆಯೂ ಹೊಸದಾ ಗಬೇಕಾದರೆ ಒಲವಿನಲ್ಲಿನಿತು ವಿಹರಿಸಬೇಕು. ಒಲವೆಂದರೆ ಕೇವಲ ಹದಿಹರೆಯದವರ ಸ್ವತ್ತಲ್ಲ. ದಿನಾಲೂ ನಮ್ಮೂರಿನ ಪಕ್ಕದ ಹಳ್ಳಿಯಿಂದ ಮಾಗಿದ ಅನುಭವಗಳಿಂದ ಬಾಗಿ ನಡುಗುತ್ತಾ ಐದು ಕಿಲೋಮೀಟರು ನಡೆದು, ಹೊಲದಲ್ಲಿ ಕೆಲಸ ಮಾಡಿ ಮತ್ತೆ ಮರಳಿ ನಡುಗುತ್ತಾ ಬರುವ ೮೦ ರ ಹರೆಯದ ಹಣ್ಣಾದ ಅಜ್ಜಿಯಲ್ಲಿರುವುದೂ ಈ ಮಾಂತ್ರಿಕ ಜೀವನದೆಡೆಗಿನ ಒಲವೇ. ಇದು ಇಷ್ಟೊತ್ತು ವ್ಯಾಖ್ಯಾನಿಸಿದ ಪ್ರೀತಿಯ ಕೈಗಳಿಗೆ ತಾಗದಿದ್ದರೂ, ಆಕೆಯದೂ ಕೂಡ ಬದುಕಿನೆಡೆ ಗಿನ ಸೋಲೋಪ್ಪಿಕೊಳ್ಳದ ಒಲವೆನ್ನುವುದು ಮಾತ್ರ ಅಂತಿಮ ಸತ್ಯ. ಮನೆಗೆ ಮರಳುವ ಪ್ರತಿದಿನದ ಸಂಜೆಗೆ ಕಣ್ಣಿಗೆ ಬಿದ್ದರೆ ಸಾಕು ಹಾರಿ ಬಂದು ಎದೆಯ ಮೇಲೊರಗುವ ನನ್ನ ಮಗು ವಿನ ಪುಟ್ಟ ಹೃದಯದಲ್ಲಿರುವುದೂ ಒಲವಿನ ಮಗದೊಂದು ರೂಪವಾಗಿರುವ ವಾತ್ಸಲ್ಯವೇ. ಸಾಂದರ್ಭಿಕವಾಗಿ ವಿಭಿನ್ನ ರೂಪಗಳನ್ನು ಹೊತ್ತು ಬರುವ ಈ ಒಲವನ್ನು ಬಳಿ ಕರೆದು ಆರಾಧಿಸು ವುದಷ್ಟೇ ನಮಗಿರುವ ದಾರಿ. ಧಿಕ್ಕರಿಸಿದರೆ ಸಂತೆಯೊಳಗೊಂದು ಮನೆಯ ಮಾಡಿದ ಈ ಬದುಕೇ ಬಲು ದುಬಾರಿ.

✍️ಶ್ರೀ ಚಂದ್ರಶೇಖರ ಹೆಗಡೆ
ಕನ್ನಡ ಸಹಾಯಕ ಪ್ರಾಧ್ಯಾಪಕರು
ಸ.ಪ್ರ.ದ.ಕಾಲೇಜು, ಬೀಳಗಿ