ಹಸಿವಿಗಾಗಿ ಹಾಸಿಗೆ
ಹಾಸಿದವಳ ಮಾತು
ಮೌನವೆನಿಸಿದೆ
ಏಕೋ ಗೊತ್ತಿಲ್ಲ
ಸುಡುವ ಮನಸಿಗೆ
ನೆಮ್ಮದಿಯ ನೆಯಬಹುದಿತ್ತು.
ಹೃದಯ ಕರಗಿಸುವುದಕ್ಕೆ
ಕಾದಿರುವ ಕಬ್ಬಿಣವೇ ಲೇಸು
ಎಂದುಕೊಳ್ಳುವಂತಿಲ್ಲ
ಚುರಾಗಿ ಬಿದ್ದಿರುವಾಗ
ಕನಸಿನ ಕನ್ನಡಿಯು ಕೂಡ
ನನ್ನ ನೋಡಿ ಅಣಕಿಸುತ್ತಿದೆ
ಬಯಲಾಟದ ಬೀದಿಯಲ್ಲಿ
ಹಂಗು ತೊರೆದ ರಂಗ ಮಂಚ
ಅವನ ಹೆಜ್ಜೆ ಗುರುತುಗಳ ಹುಡುಕುತಿದೆ
ಒಂದೊಂದು ದಿನವೂ ಕರಾಳ
ರಾತ್ರಿಯೇ ಸರಿ ಗಂಟೆಗೊಂದು
ಮುಖವಾಡ ಹೊದ್ದ
ಮೃಗಗಳು ಬೇಟೆಯಾಡಲು
ಹಾವಳಿಣಿಸುತ್ತಿರುವಾಗ ಹತಾಶೆಗೆ
ತಳ್ಳಲ್ಪಟ್ಟಿದೆ ಪಾಳುಬಿದ್ದ ಮನ
ಈಗ ನೆನಪುಗಳಿಗೆ
ಕತ್ತಲೆ ಕವಿದಿದೆ
ಬೆಳಕು ಮಾತ್ರ
ಬೀದಿಯಲ್ಲಿ
ಚೆಲ್ಲಾಪಿಲ್ಲಿಯಾಗಿದೆ.

✍️ಕವಿತಾ ಸಾಲಿಮಠ
ಬಾಗಲಕೋಟೆ