ಪದೇ ಪದೇ ನಾನಾ ಏಕೆಂದೆನ್ನುವೆ
ನಾನಲ್ಲವೆ ನೀನು
ಪದೇ ಪದೇ ನೀ ನೀ ಅನ್ನಲೇಕೆ
ನಾನೂ ನೀನೇ ಅಲ್ಲವೆ..!!

ಕೂದಲೆಳೆಯ ಗೆರೆ ಮೈದುಂಬಿಕೊಳ್ಳಲು
ಅದೆಷ್ಟು ಹೋತ್ತು..?
ಸೆಕೆಂಡಿನ ನೂರರ ಭಾಗವೂ ಆದೀತು..
ಪದೇ ಪದೇ ಆ ಕನ್ನಡಕ ಧರಿಸಲೇಕೆ
ಒಂದು ಚಿಕ್ಕ ಕೆಂಪಿರುವೆಯೂ ಹೋಗಲು
ಅಸಾಧ್ಯವೆನಿಸುವ ಆ ಬಿರುಕನು
ರಾವುಗನ್ನಡಿ ಹಿಡಿದು ನೋಡಲೇಕೆ
ಅದೇನು ಕಂದಕವೇ..
ಹಾಗೆ ಭ್ರಮಿಸಿ ಪೇಚಾಡಲೇಕೆ

ತೊಗೋ..ಇದು ನಿನಗೆ ಗೊತ್ತೇ ಇಲ್ಲ
ಬಹಳ ಜನಕೆ ಆ ಗೆರೆ ಕಾಣಿಸಿಯೇ ಇಲ್ಲ
ಅವರೆಲ್ಲ…,
ನಾನು – ನೀನು ಏನೇನೆಂದು..
ಏನೇನೋ ತಿಳಿದಿದ್ದಾರೆ..
ಮೈಮನ ಪುಳಕಗೊಳಿಸಿದ್ದಾರೆ
ತಾವೂ ರಸಗವಳ ಜಗಿದು ರಸ ಹೀರಿ
ಪುಳಕಿತರಾಗಿದ್ದಾರೆ
ಆ ಪ್ರೇಮವ ತರ್ಕಿಸಿ ನಿರ್ಧರಿಸಿ
ಪುನೀತರಾಗಿದ್ದಾರೆ…!!

ಇನ್ನೇತರ ಭಯ..!!!
ನನ್ನ ದನಿ ನೀನು…
ನಿನ್ನ ದನಿ ನಾನು..
ದನಿಯ ಹೊರಗೆ ಹುಡುಕಲೇಕೆ
ದನಿ ಧ್ವನಿಸುತ್ತಿದೆ ಒಳಗೊಳಗೆ

ಸುಪ್ತ
ಗಾಮಿನಿ ಹರಿಯುತಿದೆ
ಹಸಿರು ಅಂಕುರಿಸಿದೆ

ಆದರೂ…,

ನಾನು ನೀನು ಆನು ತಾನಾಗಲು
ಆ ನಾಕು ತಂತಿ
ಅನವರತ ನುಡಿಯಲು
ಆ ನೂಲಿನೆಳೆಯ ಗೆರೆಯ
ಬಂಧ ಭೂ ಭಾರದಿಂದ
ದೂರವಿರಬೇಕು..
ಮತ್ತೆ ಆ
ಕನ್ನಡಕದ ಕಣ್ಣೂ ಶೋಧನೆಗೆ
ತಡಕಾಡುತ್ತಿರಬೇಕು..!!

ಶ್ರೀಮತಿ ಅನಸೂಯ ಜಹಗೀರದಾರ
ಕೊಪ್ಪಳ