ಯಾವ ದಿನ ಯಾವ ಘಳಿಗೆ ನೀ ನನ್ನ ಮರೆಯುವೆಯೋ ಅಂದೇ ನನ್ನ ನಿನ್ನ ಜನನ ಮರಣ ಸಖಿ
ಎಲ್ಲ ವ್ಯಸನಗಳ ಬದಿಗೊತ್ತಿ ಮನಬಿಚ್ಚಿ ಹಾಡುವೆಯೋ ಅಂದೇ ನನ್ನ ನಿನ್ನ ಜನನ ಮರಣ ಸಖಿ

ಹುಟ್ಟುತ್ತಲೇ ಪ್ರೇಮಿಗಳಾಗಿ ಧರೆಗೆ ಬಂದವರು ನಾವು ಕಣ್ತೆರೆದ ಕ್ಷಣದಿಂದ ಮತ್ತೆ ಅಂಧರಾದೆವು
ಹೊಕ್ಕುಳ ಬಳ್ಳಿಗೆ ನೀರೆರೆದು ಉಸಿರ ಧಾರೆ ಎರೆಯುವೆಯೋ ಅಂದೇ ನನ್ನ ನಿನ್ನ ಜನನ ಮರಣ ಸಖಿ

ಕನಸಲೂ ಜೀವಜಲ ಸಿಗದೆ ಸಾಯುವ ಮಕ್ಕಳಿಗಾಗಿ ಯಾವ ಹಬ್ಬಗಳೂ ಚಲಾವಣೆಯಲಿಲ್ಲ
ಒಂಟಿ ಮರುಭೂಮಿಯಲಿ ಒಬ್ಬ ಮುಸಾಫಿರ್ ನಾಗಿ ಬರುವೆಯೋ ಅಂದೇ ನನ್ನ ನಿನ್ನ ಜನನ ಮರಣ ಸಖಿ

ಬೆಂಕಿಯಲಿ ಸುಟ್ಟು ಬೂದಿಯಾದರೂ ನಿಲ್ಲದು ಆಸೆಗಳ ಕರಿಮೋಡ ದಶ ದಿಕ್ಕಿಗೂ ಹಬ್ಬಿ ಹುಯ್ಯಲಿಡುವುದು
ಕರಕಲಾದ ಬಾಳ ರಸ್ತೆಯ ಗುಂಟ ಚೈತನ್ಯ ಗಾಳಿಯಾಗುವೆಯೋ ಅಂದೇ ನನ್ನ ನಿನ್ನ ಜನನ ಮರಣ ಸಖಿ

ನನ್ನಲ್ಲಿ ನೀನು ನಿನ್ನಲ್ಲಿ ನಾನು ಒಂದಾಗಿ ಬೆರೆವ ಆಸೆ ಚರ್ಮಗೀತೆಯ ಬಿಟ್ಟ ದಿನವೇ ಮೂಡಿತ್ತು ಜಾಲಿ
ಅಮಿತ ಬಲಿತ ಮೊರೆತ ಸಾಲುಗಳು ತೊರೆಯಾಗಿ ಬರುವೆಯೋ ಅಂದೇ ನನ್ನ ನಿನ್ನ ಜನನ ಮರಣ ಸಖಿ

✍️ವೇಣು ಜಾಲಿಬೆಂಚಿ
ರಾಯಚೂರು.