ಅಜ್ಞಾನ ಅಂಧಕಾರದ ಮುಸುಕು ಕಿತ್ತಿ ಎಸೆದಾತಂಗೆ ಶರಣು
ಎಲ್ಲೆಡೆ ಸಮಾನತೆಯ ಸುಜ್ಞಾನ ಸುಧೆ ಹರಿಸಿದಾತಂಗೆ ಶರಣು
ವೈದಿಕತೆಯ ಸಂಸ್ಕೃತಿಯಲಿ ಬೆಳೆದಿತ್ತು ಕಂದಾಚಾರದ ಕಳೆಯು
ಮೇಲು ಕೀಳುಗಳ ಕಸವ ಹರಗಿ ಭಕ್ತಿ ಬೆಳೆ ಬೆಳೆದಾತಂಗೆ ಶರಣು
ವೇದ ಭಾಷ್ಯದಲಿ ಮನುಜ ಬದುಕು ಕಗ್ಗಂಟಾಗಿ ನರಳುತಿತ್ತು ಅಂದು
ಅಚ್ಚ ಕನ್ನಡದಲಿ ಮಾನವೀಯ ಮೌಲ್ಯ ಬಿತ್ತಿದಾತಂಗೆ ಶರಣು
ಉಚ್ಚ ನೀಚ ವೆಂಬ ಮೇಲಾಟದಲಿ ಮರೆಯಾಗಿತ್ತು ಮಾನವೀಯತೆ
ದಯವೇ ಧರ್ಮ,ದಾಸೋಹವೇ ಸಹಬಾಳ್ವೆ ಎಂದಾತಂಗೆ ಶರಣು
ಕೋಮಲ ಸುಮಗಳ ಅಧರಗಳನು ಹೊಲೆದಿತ್ತು ಮೂಢ ಪುರುಷ ಸಮಾಜ
ಅನುಭವ ಮಂಟಪದಲಿ ವಾಕ್ ಸ್ವಾತಂತ್ರ ನೀಡಿದಾತಂಗೆ ಶರಣು
ಅಂಧ ಶ್ರದ್ಧೆ ಅಸ್ಪೃಶ್ಯತೆಯಲ್ಲಿ ಸಮುದಾಯವು ಬಳಲಿತ್ತು
ಸಕಲ ಜೀವಿಗಳಿಗೆ ಸದಾ ಲೇಸನ್ನೇ ಬಯಸಿದಾತಂಗೆ ಶರಣು
ರಾಜ ದಂಡಾಳಿಕೆಯಲಿ ಜಗದ ಜೀವಿಗಳು ದಾಸರಾಗಿದ್ದರು
ವಿಶ್ವಕೆ ಪ್ರಜಾಪ್ರಭುತ್ವದ “ಪ್ರಭೆ” ಯನು ಹರಡಿದಾತಂಗೆ ಶರಣು
ಶ್ರೀಮತಿ ಪ್ರಭಾವತಿ ಎಸ್ ದೇಸಾಯಿ
ವಿಜಯಪೂರ