ಮೂಲದಲ್ಲೆಲ್ಲೋ ಕೈಜಾರಿ
ಹೋದ ಅರಿವು
ಹರವಿ ವಿಸ್ತಾರಗೊಳಿಸಿದರೂ
ಕೈಗೆಟುಕದ ಮರೆವು

ತಂಬೂರಿ ತಂತಿ ಮಿಡಿದ ಕಂಪನ
ಮದ್ದಳಿಯ ಅನುರಣನ
ಕಾಣದೇ ಉಳಿದ ವಾತಾವರಣ
ಶಬ್ದ ವಿಸ್ತಾರಕೆ ವಾಯುವಾಲಿಂಗನ

ಸ್ತೋತ್ರದ ಶೃತಿಗೊಂದಿದೆ ಕಂಪನ
ಗಂತವ್ಯಕೆ ನೂರು ಸ್ವರದಿಂಪನ
ಪಥ ಹುಡುಕುವ ಲಯ
ಸಿಗದೇ ನಗಾರಿ ಭೇರಿಯ ರಣನ

ಮಾಯಾಂಗನೆಗೆ ಮಾಟದವನ
ಮಾತು ಮಂಥನ
ಮರೆವ ಜಾಣ್ಮೆಗೆ ಮುದ್ರೆಯೊತ್ತುವ
ಮನದ ಮರೆಯ ಕಥನ

ಬೆಳಗಾಗುವ ಅರಿವು
ಕತ್ತಲೆಯ ಬೈರಾಗಿ
ಬೆತ್ತಲೆಯ ಜೋಗಿ
ಅಕ್ಕನ ಆತ್ಮ ಜ್ಯೋತಿ

ಹೊತ್ತಿನರಿವಿಲ್ಲದ ಆತ್ಮ ಮಥನ
ಹತ್ತುವದನೆ ಸಂಕಲ್ಪ ಏಣಿಯ ಸಾಧನ
ಇಳಿದು ತೆರಳುವದಕೂ
ಸುತ್ತಿಕೊಳ್ಳುವ ಹಂಗಿಲ್ಲದ ವದನ

ಆಯ್ತು ಮುಗಿಯಿತು
ನಡೆ ಎಂದಾಗಲೂ ಶೋಕವಿರದ ಹಾಡು
ಆಡಿದಷ್ಟು ಪಾತ್ರ ನಟಿಸಿದಷ್ಟು ನಟನೆ
ಅಸಲಿ ರೂಪದ ಅರಿವು ಮಾತ್ರ
ಇಹದ ಬಣ್ಣಗಳೊಳಗೆ

✍️ಅವಧೂತ
(ಸುಶಿಲೇಂದ್ರ ಕುಂದರಗಿ)
ಹುಬ್ಬಳ್ಳಿ