ಎಲ್ಲರಿಗೂ ನಮಸ್ಕಾರ,

ನನ್ನ ಅಕ್ಕ ಶ್ರೀಮತಿ ಸುಜಾತ ರವೀಶ್ ರವರ ಎರಡನೇ ಕವನ ಸಂಕಲನ “ಮನವೀಣೆಯ ಮೀಟು” ಕಳೆದ ಭಾನುವಾರ ದಿನಾಂಕ 24-04-2022 ರಂದು ಶ್ರವಣಬೆಳಗೊಳದಲ್ಲಿ ಜರುಗಿದ ಭಾವಸಂಗಮದ ಸಮ್ಮಿಲನ ಕಾರ್ಯಕ್ರಮದಲ್ಲಿ ಬಿಡುಗಡೆಯಾಯಿತು. ಈ ಪುಸ್ತಕದ ಬೆನ್ನುಡಿ ಬರೆಯುವ ಸದಾವಕಾಶ ದೊರೆತಿರುವುದಲ್ಲದೆ, ಈ ಪುಸ್ತಕ ಬಿಡುಗಡೆ ಕಾರ್ಯಕ್ರಮ ವೀಕ್ಷಿಸುವ ಸುಯೋಗವು ನನಗೆ ಲಭ್ಯವಾಯಿತು.

ಶ್ರೀಮತಿ ಸುಜಾತ ರವೀಶ್ ರವರ ಮೊದಲನೇ ಕವನ ಸಂಕಲನ “ಅಂತರಂಗದ ಆಲಾಪ”. ಎರಡನೇ ಕವನ ಸಂಕಲನ “ಮನವೀಣೆಯ ಮೀಟು”. ಎರಡೂ ಕವನ ಸಂಕಲನಗಳು ಸಂಗೀತದ ಪ್ರಭಾವಳಿಯೊಳಗೆ ಮೆರೆಯುತ್ತಿವೆ.

ಹೌದು, ಕವಿಯಿತ್ರಿಯ ಭಾವಾಂತರಂಗ ಅನುಭವವೆಂಬ ಹಿಮ್ಮೇಳದೊಂದಿಗೆ ರಾಗಸ್ವರ ಮೂಡಿಸುತ್ತಿದೆ ಎಂದರೆ ತಪ್ಪಾಗಲಾರದು.‌ ಜೀವನ ರಾಗಕ್ಕೆ ಆರೋಹಣ, ಅವರೋಹಣ ಎರಡೂ ಅಗತ್ಯವೆಂಬ ಭಾವವನ್ನು ಪ್ರತಿಯೊಂದು ಕವನದಲ್ಲಿಯೂ ಛಾಪಿಸಿದ್ದಾರೆ.

ಈ ಪುಸ್ತಕವನ್ನು, ಬಾಳಿನ ರೂವಾರಿಗಳಾದ ಅಮ್ಮ-ಅಣ್ಣ (ಅಪ್ಪ) ಇವರುಗಳಿಗೆ ಅರ್ಪಣೆ ಮಾಡಿರುವ ಇವರು,ಮೊದಲೆರೆಡು ಕವನಗಳನ್ನೂ ಇವರಿಬ್ಬರಿಗೆ ಮೀಸಲಿಟ್ಟಿದ್ದಾರೆ. “ಸಾವೆಂದರೆ ನನಗೆ ಕಿಂಚಿತ್ತೂ ಭಯವಿಲ್ಲ. ಏಕೆಂದರೆ ನಿಮ್ಮನಲ್ಲಿ ಕಾಣುವೆನಲ್ಲ” ಎಂದು ಸಾರಿರುವ ಈ ಕವನಗಳನ್ನು ಓದಿದರೆ ಎಲ್ಲರ ಕಣ್ಣು ತುಂಬಿ ಬರುವುದರಲ್ಲಿ ಸಂಶಯವಿಲ್ಲ.

“ಹೀಗೊಂದು ಮಳೆಯ ಸಮಯ” ಈ ಕವನದಲ್ಲಿ ನಮಗಿಷ್ಟವಾದದ್ದನ್ನು ನಿರ್ಬಿಢೆಯಿಂದ‌ ಮಾಡಲು ಸನ್ನಿವೇಶಗಳು ಹೇಗೆ ಅಡ್ಡವಾಗುತ್ತವೆ ಎಂದು ತಿಳಿಸುತ್ತಾ, ಜೀವನದ ವಿವಿಧ ಮಜಲುಗಳಲ್ಲಿ ಈ ಸನ್ನಿವೇಶಗಳು ಹೇಗೆ ವಿಭಿನ್ನವಾಗಿ ಗೋಚರಿಸುತ್ತದೆಯೆಂದು ತಿಳಿಸಿದ್ದಾರೆ.

ಜೀವನವೆಂದರೆ “ಭ್ರಮೆ” ಎಂದು ಸಾರ ಹೊರಟ ಕವಿಯಿತ್ತಿ, ತನ್ನ ಮುಂದಿನ ಕವನ “ತಂಗಾಳಿ” ಯಲ್ಲಿ ಸೊಂಪು ತಂಗಾಳಿಯ ಅಸ್ತಿತ್ವ ಹೇಗೆ ವಾತ್ಸಲ್ಯದ ಸಂವಹನ ನಡೆಸುತ್ತದೆ ಎಂದು ತಿಳಿ ಹೇಳಿದ್ದಾರೆ.

“ನಾದಸ್ವರ” ದಲ್ಲಿ ಹೃದಯದ ಅನುರಾಗದ ಉಸಿರ ಹಿಡಿದಿಡುವ ಇವರು, “ಹೇಗೆ ಬದುಕಲಿ ನೀನಿಲ್ಲದೆ?” ಎಂದು ಕವಿದ ಕತ್ತಲ ಗಾಢತೆಯನ್ನು ಎತ್ತಿಹಿಡಿಯುತ್ತಾರೆ.

“ನಗಿಸುವುದೇ ಧರ್ಮ” ಎಂದು ತಿಳಿಸುತ್ತಾ, “ಕಣ್ಣೀರು” ಎಷ್ಟು ಮೌಲ್ಯಯುತ ಎಂಬ ಪಾಠ ಹೇಳುತ್ತಾರೆ.

ಜೀವನವನ್ನು “ಈ ವೇಗದ ಓಟದಲ್ಲಿ” ಓಡಿಸುತ್ತಾ”ಆರೋಗ್ಯವೇ ಭಾಗ್ಯ” ಎಂಬ ಹಿತನುಡಿಯೊಂದಿಗೆ “ಯಾರದ್ದೋ ತುಳಿತಕ್ಕೆ ಸಿಕ್ಕಾಗ” ಹೇಗೆ ಎದ್ದು ನಿಲ್ಲಬೇಕೆಂಬ ಕಿವಿಮಾತೂ ಹೇಳುತ್ತಾರೆ.

“ಕಡೆತನಕ ಮರೆಯಲ್ಲಾ ನಿನ್ನ” ಎಂಬ ಭರವಸೆಯನ್ನು “ಒಲವಿನ ಪ್ರೇಮಾಭಿಷೇಕ” ದೊಂದಿಗೆ ಮತ್ತು “ದಾಂಪತ್ಯ ಗೀತೆ” ಯೊಂದಿಗೆ “ಆತ್ಮ ಸಂಗಾತಿ” ಗೆ ತಿಳಿಸುವ ಪರಿ ಅಮೋಘ.

“ನೆಮ್ಮದಿ ನೀಡದ ತಾತ್ಕಾಲಿಕ ಸುಖಗಳು” ಹೇಗೆ “ಸಂಘರ್ಷ” ಮೂಡಿಸಿ, “ಅರಿವಿರದ ಹಾದಿ” ಯಲ್ಲಿ ಸಾಗಲು ಪ್ರೇರೇಪಿಸುತ್ತವೆ ಎಂದು ತಿಳಿಸುತ್ತಾ, “ಅದೇ ಹಳೆಯ ದಾರಿ” ಯಲ್ಲಿ “ಸ್ವಾರ್ಥ”, ” ವಿದಾಯ”, “ಅಗಲಿಕೆ” ಯೆಂಬ ನಿಲ್ದಾಣಗಳು “ಮುಂದೊಂದು ದಿನ” ಹೇಗೆ “ಒಡಲಾಳದ ನೋವು” ಉಂಟು ಮಾಡುತ್ತವೆ ಎಂಬ ಜೀವನ ಪಾಠವನ್ನು ಸಾರುತ್ತಾರೆ.

ಮುಪ್ಪು ಹತ್ತಿರವಾಗುವ ಸಂದರ್ಭದಲ್ಲಿ ಒಬ್ಬ ಮಹಿಳೆ ವಯೋ ಸಹಜ ದೈಹಿಕ ಬದಲಾವಣೆಗಳನ್ನು ಎದುರಿಸುವಾಗಿನ ಮನಸ್ಥಿತಿ ಬಗ್ಗೆ “ಆ ಐವತ್ತರಾಕೆ”ಯಲ್ಲಿ ಮನೋಜ್ಞವಾಗಿ ಚಿತ್ರಿಸಿದ್ದಾರೆ.

ಹೀಗೆ, ಒಟ್ಟು 60 ಕವನಗಳ ಈ ಸಂಕಲನವನ್ನು ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿದಾಗ, ಈ ಕವಿಯಿತ್ರಿ “ಸಂಸಾರದಲ್ಲಿ ಸರಿಗಮ” ಎಂದು ಹಾಡುತ್ತಾ, ಜೊತೆಜೊತೆಗೇ ತನ್ನ #ಮನವೀಣೆಯ_ಮೀಟನ್ನು ಮೀಟುತ್ತಾ “ನನ್ನ ನಾನಾಗಿರಲು ಬಿಡು” ಎಂದು ಪ್ರಾರ್ಥಿಸುತ್ತಿದ್ದಾರೇನೋ ಎಂದು ಭಾಸವಾಗುತ್ತದೆ.

ಹೀಗೆ, ಜೀವನರಾಗದ ಶೃತಿ ಮಿಡಿಯಲು ಯಾವ ತಾಳದ ಸಾಥ್ ನೀಡಬೇಕೆನ್ನುವ ನೀತಿ ಕಥೆ ಹೇಳುವ ಈ ಕವನ ಸಂಕಲನವನ್ನು ಎಲ್ಲರೂ ಓದಬೇಕೆಂದು ನನ್ನ ಕೋರಿಕೆ…….

ವಂದನೆಗಳೊಂದಿಗೆ,

ವೈಶಾಲಿ ನರಹರಿ ರಾವ್.