ಯಲ್ಲಾಪುರದ ಹೆಮ್ಮೆಯ ಹಿರಿಯ ಸಾಹಿತಿಗಳು,ಒಳ್ಳೆ  ಕಥೆ, ಕವನ, ಕಾದಂಬರಿಕಾರರು, ನಾಟಕ, ಅಂಕಣ  ಬರಹಗಾರರು ಆದ, ಸದಾ  ಹಸನ್ಮುಖಿ ಗಳು  ಮಿತಭಾಷಿಗರು, ಸಹೃದಯಿ ಗಳು, ಒಳ್ಳೆ  ವಾಗ್ಮಿಗಳು ಆಗಿರುವ ‘ವನರಾಗ  ಶರ್ಮಾ’ ಗುರುಗಳು ಯಲ್ಲಾಪುರದ  ಹಚ್ಚ ಹಸಿರಿನ    ದಟ್ಟವಾದ ಕಾನನದ ನಡುವೆ ಇರೊ ‘ವಜ್ರಳ್ಳಿ’  ಗ್ರಾಮದವರು.

ಶ್ರೀಯುತರು ವಜ್ರಳ್ಳಿಯ ‘ವನರಾಶಿ’ಗಳ ಮಧ್ಯೆ ಇರುವ ‘ಸರ್ವೋದಯ’ಪ್ರೌಢಶಾಲೆಯ ಶಿಕ್ಷಕ ರಾಗಿ, ಮುಖ್ಯ ಶಿಕ್ಷಕರಾಗಿ, ತಾಲೂಕು, ಜಿಲ್ಲಾ, ರಾಜ್ಯ ಹಂತದವರೆಗಿನ ಹಲವಾರು ಪ್ರಶಸ್ತಿ, ಪುರಸ್ಕಾರಗಳನ್ನು ಮುಡಿಗೇರಿಸಿಕೊಂಡು  ಆದರ್ಶ ಶಿಕ್ಷಕರೆನಿಸಿ ಪ್ರಸಿದ್ದಿಯಾದವರು. ವನರಾಗ ಶರ್ಮಾ ಗುರುಗಳು ತಮ್ಮ ವೃತ್ತಿ ಜೀವನದ ಜೊತೆಗೆ, ಸಾಹಿತ್ಯಿಕ ರಾಶಿಯನ್ನು  ಹುಲುಸಾಗಿ ಬೆಳೆಸುತ್ತಾ,ಹಲವಾರು ಕೃತಿಗಳನ್ನ ಪ್ರಕಟಿಸುವ ಮೂಲಕ ನಾಡಿನ ಉತ್ತಮ ಬರಹ ಗಾರರಾಗಿದ್ದಾರೆ. ಇವರ  ಸಾಹಿತ್ಯಿಕ ಸೇವೆಯು ಇವರನ್ನು ಯಲ್ಲಾಪುರದ ೨ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಸ್ಥಾನ ಕ್ಕೇರುವಂತೆ  ಮಾಡಿ, ತಾಯಿ ಭುವನೇಶ್ವರಿಯ ರಥವನ್ನು ಎಳೆಯವಂತೆ ಮಾಡಿತು.

ಇವರು ಹಲವಾರು ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಹಲವಾರು ಕಾರ್ಯ ಕ್ರಮಗಳನ್ನು ನಡೆಸಿದ್ದಾರೆ. ಶ್ರೀಯುತರು ಈಗ  ತಮ್ಮ ಸೇವಾ ನಿವೃತ್ತಿಯ  ಇಳಿ ವಯಸ್ಸಿನಲ್ಲಿ ಯೂ “ಅರಳಿದ ಹೂವಿನಂತೆ” ಸದಾ  ನಗು ಮೊಗದಿಂದ  ಚೈತನ್ಯಶೀಲರಾಗಿ  ಸಾಹಿತ್ತಿಕ ಸೇವೆಯಲ್ಲಿ ತೊಡಗಿರುವುದನ್ನು ಕಂಡು ಹೆಮ್ಮೆ ಅನಿಸುತ್ತದೆ.   

ವನರಾಗ ಶರ್ಮ ಗುರುಗಳು ರಚಿಸಿರುವ  ಕೃತಿ ಗಳೆಂದರೆ ‘ಚೈತ್ರ ಸಂಗಮ'(ಕಥಾಸಂಕಲನ), ‘ಕಣ್ಣ ಹನಿಗಳ ಕಾಣಿಕೆ'(ಕಥಾಸಂಕಲನ), ‘ಹಾಲು  ಮಾರುವ ಹುಡುಗಿʼ(ಕವನ ಸಂಕಲನ) ‘ಸಾಹಸ ಯಾತ್ರೆ'(ಮಕ್ಕಳ  ಕಥಾ ಸಂಕಲನ),ʼ ‘ಬಣ್ಣದ  ಕೊಳಲು’ (ಮಕ್ಕಳ ಕವನ ಸಂಕಲನ)  ‘ಭಜನ ಮಂಜರಿ’ ‘ಬಣ್ಣದ ಕಾರಂಜಿ’ಯಂತಹ  ಅನೇಕ  ವಿಶಷ್ಟ  ಕೃತಿಗಳನ್ನು  ಪ್ರಕಟಿಸುವ  ಮುಖಾಂತರ  ನಾಡಿನಾದ್ಯಂತ ತಮ್ಮ ಸಾಹಿತ್ಯದ ಕಂಪನ್ನು  ಪಸರಿಸಿ,  ಓದುಗರಿಗೆ ರಸದೌತಣ ಉಣಬಡಿಸಿ ಮಕ್ಕಳ ಮನಸನ್ನು, ಓದುಗರ  ಮನಸ್ಸನ್ನು ಗೆದ್ದಿದ್ದಾರೆ. ಶ್ರೀಯುತರು ಬರೆದಿರುವ “ಬಣ್ಣದ  ಕಾರಂಜಿ” ಮಕ್ಕಳ ಕವನಸಂಕಲನವು ಆಕರ್ಷಕ  ಮುಖಪುಟ ದಿಂದ  ಮಕ್ಕಳಿಂದ ಹಿಡಿದು      ಎಲ್ಲರನ್ನೂ ಆಕರ್ಷಿಸುವಂತಿದೆ. “ಬಣ್ಣದ ಕಾರಂಜಿ”  ಮಕ್ಕಳ ಮನಸ್ಸಿನ ಚಿತ್ತಾರವನ್ನು ಬಣ್ಣ- ಬಣ್ಣದ ಭಾವನೆಗಳನ್ನು,ಬಿಚ್ಚಿಡುವಂತಿದೆ.

ಶ್ರೀಯುತರು ಬರೆದಿರುವ “ಬಣ್ಣದ ಕಾರಂಜಿ” ಮಕ್ಕಳ ಕವನ ಸಂಕಲನವು ಆಕರ್ಷಕವಾದ ಮುಖಪುಟದಿಂದ ಮಕ್ಕಳಿಂದ ಹಿಡಿದು ಎಲ್ಲರ ನ್ನು ಆಕರ್ಷಿಸುವಂತಿದೆ. ಬಣ್ಣದ ಕಾರಂಜಿಯು ಮಕ್ಕಳ ಮನಸ್ಸಿನ ಚಿತ್ತಾರವನ್ನು,ಬಣ್ಣ-ಬಣ್ಣದ ಭಾವನೆ ಗಳನ್ನು ಬಿಚ್ಚಿಡುವಂತಿದೆ.

                                            ಹೆಸರೇ ಸೂಚಿಸುವಂತೆ ಬಣ್ಣದ  ಕಾರಂಜಿಯು ವಿವಿಧ ಬಣ್ಣದ ಹೂಗಳು ಅರಳಿ ದುಂಬಿಯನ್ನುಆಕರ್ಷಿಸು ವಂತೆ ಕಾರಂಜಿಯೊಂದು, ಮಣ್ಣಿಗೆ  ಜೀವ ‌‌ ತುಂಬುವಂತೆ, ಕಾಂತವೊಂದು ಕಬ್ಬಿಣ ವನ್ನು ಆಕರ್ಷಿಸುವಂತೆ, ಈ ಸಂಕಲನ ದಲ್ಲಿರುವ ಕವಿತೆಗಳು ಮಕ್ಕಳ ಮನಸ್ಸನ್ನು, ಹಿರಿಯರನ್ನು ತನ್ನತ್ತ ಆಕರ್ಷಿಸುತ್ತದೆ.

ಈ ಕವನ ಸಂಕಲನವು ಬಣ್ಣದ ಕಾರಂಜಿ,  ಹೂವಿನ ವಾಸನೆ ಕಾಸಿನ ಝಣ ಝಣ, ಉಷೆಯು  ಬಂದಳು, ಸಜ್ಜನ-ದುರ್ಜನ, ಹಳ್ಳಿಗೆ ಒಂದು ಹಳ್ಳ,ಮೇಲೇರುವಾಸೆ, ಪುಸ್ತಕ  ಬಾಳಿನ ಮಿತ್ರ, ಕಸಬರಿಗೆ,  ಮಕ್ಕಳ ನಗು, ರಾಮಣ್ಣನ  ಚೊಣ್ಣ, ನನ್ನ  ದಿನಚರಿ, ಹಕ್ಕಿಯ  ಕರೆ, ಜೀವ ಜಾಲ, ಬಂತೊ ಬಂತೊ  ಮೆಟ್ರೋ  ರೈಲು, ಬೆಳ್ಳಿಯ  ಮೋಡದ ಬೆನ್ನೇರಿ,…. ಹೀಗೆ  ಒಟ್ಟು ೫೧ ಕವನಗಳನ್ನು  ಒಳಗೊಂಡಿರುತ್ತದೆ.

ವನರಾಗ ಶರ್ಮಾ ಗುರುಗಳ, ಬಣ್ಣದ ಕಾರಂಜಿ ಯಲ್ಲಿರುವ ಕವಿತೆಗಳೆಲ್ಲವೂ ಅರ್ಥಪೂರ್ಣ ಕವಿತೆಗಳಾಗಿ ರೂಪ ತಾಳಿವೆ. ಇಲ್ಲಿರುವ  ಕವಿತೆ ಗಳು  ಮಕ್ಕಳ  ಅಭಿರುಚಿ, ಆಸಕ್ತಿಗೆ ತಕ್ಕಂತೆ, ಮಕ್ಕಳ ಆಳಕ್ಕಿಳಿದು  ಬರೆದ  ಸರಳ, ಸುಂದರ  ವಾದ, ಆಡು ಮಾತಿನಿಂದ ಕೂಡಿದ,ಲಯಬದ್ಧ, ಮಧುರ ಮತ್ತು ರೋಚಕತೆಯಿಂದ ಕೂಡಿದ್ದು, ಮಕ್ಕಳ ಮನಸ್ಸನ್ನು ಸೆರೆಹಿಡಿಯಬಲ್ಲವಾದ, ಮಕ್ಕಳ ಮನೋವಿಕಾಸಕ್ಕೆ, ಮಕ್ಕಳ ಪ್ರತಿಭಾ ನ್ವೇಷಣೆಗೆ, ತಾರ್ಕಿಕ ಚಿಂತನೆಗೆ, ಕಲ್ಪನಾ ಶಕ್ತಿಗೆ ಆಲೋಚನಾ ಶಕ್ತಿಗೆ, ವಿಮರ್ಶಾತ್ಮಕ ಶಕ್ತಿಗೆ, ವೈಜ್ಞಾನಿಕ  ಮನೋಭಾವನೆಗಳಿಗೆ  ಪುಷ್ಟಿ ಕೊಡುವಂತಹ  ಕೃತಿಯಾಗಿದ್ದು, ಮಕ್ಕಳಲ್ಲಿ ಸಂತೋಷ  ಮತ್ತು ಆತ್ಮವಿಶ್ವಾಸವನ್ನು ಬೆಳೆಸು ವಂತಹ ಸುಂದರವಾದ ಕೃತಿಯಾಗಿದೆ. ಪ್ರತಿ ಯೊಬ್ಬರೂ ತಮ್ಮ ಜೀವನವನ್ನು ಸುಂದರ ಹೂವಿನ ತೋಟವನ್ನಾಗಿ ಮಾಡಿ ಕೊಳ್ಳಬೇಕು. ಪ್ರತಿ ಕನಸುಗಳು ಹೂವಾಗಿ  ಅರಳುವಂತೆ, ನಮ್ಮ ಮನಸ್ಸಿನ ಭಾವನೆ ಗಳೆಲ್ಲವೂ‌ ಕಾರಂಜಿ ಯಾಗಿ ಚಿಮ್ಮುವಂತೆ ಮಾಡಿ, ನಮ್ಮ  ಜೀವನ ವನ್ನು  ಸಾರ್ಥಕ  ಮಾಡಿಕೊಳ್ಳಬೇಕೆಂಬುದನ್ನು ಈ ಕೆಳಗಿನ ಸಾಲುಗಳಲ್ಲಿ ‘ವನರಾಗ ಶರ್ಮಾ’ ರವರು ತಿಳಿಸಿದ್ದಾರೆ.

ಜೀವನ ವನದಲಿ ಅರಳಿದೆ ಸುಂದರ ಕನಸಿನ ಮೊಗ್ಗು ಹೂವಾಗಿ.
ಮನಸಿನ ವಿಧ-ವಿಧ ಅನುಭವ ಬಣ್ಣದ ಪುಟಿ ಕಾರಂಜಿಯ ಸೆಲೆಯಾಗಿ”

ಇನ್ನು“ಹೂವಿನ ವಾಸನೆ ಕಾಸಿನ ಝಣಝಣ” ಕವಿತೆಯಲ್ಲಿ ಹೂವಿನ ವಾಸನೆ ಸವಿದದ್ದಕ್ಕೆ ದುಡ್ಡನ್ನು ಕೇಳುವ ಟೋಪಿವಾಲಾಗೆ, ಬಾಳು ದುಡ್ಡಿನ ಸದ್ದನ್ನು ಕೇಳಿಸಿ, ಸವಿದ ಹೂವಿನ ವಾಸನೆಗೆ ದುಡ್ಡಿನ ಶಬ್ದದಿಂದ ಲೆಕ್ಕ ಚುಕ್ತಾ ಮಾಡುವ ಬಾಳುವಿನ ಚಾಣಾಕ್ಷತನ, ಸಮಯ ಪ್ರಜ್ಞೆ ಮತ್ತು ಹಾಸ್ಯ ಮಕ್ಕಳು ಆಲೋಚಿಸು ವಂತೆ ಮಾಡುತ್ತದೆ ಮತ್ತು ಮಕ್ಕಳಿಗೆ ಖುಷಿ ಯನ್ನು ಕೊಡುವಂತಿದೆ.

ಹಳ್ಳಿಯೊಳೊಂದು ಹಳ್ಳವು ಹರಿಯಲಿ ಅರಳಲಿ ಗ್ರಾಮೀಣರ ಬದುಕು. 
ನಾಡಿಗೆ ಅನ್ನವ ನೀಡುವ ರೈತನ ಬಾಳಲಿ ಮೂಡಲಿ ಹೊಂಬೆಳಕು”.

ಹಳ್ಳಿಗೆ ಒಂದು ಹಳ್ಳ” ಕವಿತೆಯ ಈ ಸಾಲು ಗಳು ವನರಾಗ ಶರ್ಮರವರು ಗ್ರಾಮೀಣ ಜನರ ಮೇಲೆ ಹೊಂದಿರುವ ಕಳಕಳಿ, ಅವರಿಗೆ ರೈತರ ಬಗೆಗೆ ಇರುವ ಕಾಳಜಿಯನ್ನು ಎತ್ತಿ ತೋರಿಸು ತ್ತದೆ. ಅಲ್ಲದೆ ನೀರಿನ ಮೂಲ ಗಳಲ್ಲಿ ಒಂದಾದ ಹಳ್ಳವು ಹಳ್ಳಿಯ ಜನರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಪ್ರಾಣಿ-ಪಕ್ಷಿಗಳಿಗೆ, ಎಷ್ಟೊಂದು ಉಪ ಕಾರಿಯಾಗಿದೆ ಎಂಬುದನ್ನು ಹಳ್ಳದ ಮೂಲಕ ಹಳ್ಳದ ಮಹತ್ವವನ್ನು ಸಾರುತ್ತಾ ಅವುಗಳ ರಕ್ಷಣೆ ಮತ್ತು ಅಭಿವೃದ್ಧಿ ಯ ಕಡೆ ಗಮನ ಹರಿಸುವಂತೆ ಸೂಕ್ಷ್ಮ ಸಂದೇಶವನ್ನು ಕೊಟ್ಟಿದ್ದಾರೆ.

ಒಂದೇ ಗಿಡದಲ್ಲಿರೊ ಹೂವು ಮತ್ತು ಮುಳ್ಳು ಸಮಪ್ರಮಾಣದಲ್ಲಿ ಗಾಳಿ, ನೀರು, ಬೆಳಕನ್ನು ಪಡೆದರು ಗುಣ ಸ್ವಭಾವದಲ್ಲಿ ಅವುಗಳು ಬೇರೆ ಬೇರೆ ಯಾಗಿರುತ್ತವೆ. ಕವಿ ಈ ಸಮಾಜದಲ್ಲಿ ರುವ ಜನರನ್ನು ಹೂವು ಮುಳ್ಳಿಗೆ ಹೋಲಿಸಿ ಸಜ್ಜನ- ದುರ್ಜನರು ಯಾರು ಎಂಬುದನ್ನು ಅವರ

ಹೂವಿನಂತೆ ಮಧುರ ನೀತಿ ಇದ್ದರವನು ಸಜ್ಜನ
ಮುಳ್ಳಿನಂತೆ ಇರಿವ ರೀತಿ ಆದರವನೆ ದುರ್ಜನ

 ಎಂದು”ಸಜ್ಜನ-ದುರ್ಜನ” ಕವನದ ಸಾಲುಗಳ ಮೂಲಕ ಸಮಾಜದ ಜನರಿಗೆ ಸೂಚ್ಯವಾಗಿ, ಮಾರ್ಮಿಕವಾಗಿ ತಿಳಿಸಿಕೊಟ್ಟಿದ್ದಾರೆ. 

“ಪುಸ್ತಕ ನನ್ನ ಬಾಳಿನ ಮಿತ್ರ. ಅದುವೆ ಅಕ್ಷಯ ಜ್ಞಾನದ ಪಾತ್ರ”.

ಎಂಬ ಸಾಲುಗಳ ಮೂಲಕ ಪುಸ್ತಕ ಪ್ರೇಮ, ಓದಿನ ಮಹತ್ವವನ್ನು ಸಾರುತ್ತಾ,ಯಾರು ಪುಸ್ತಕ ವನ್ನು ಹೆಚ್ಚೆಚ್ಚು ಓದುವ ಮೂಲಕ ಮಿತ್ರರನ್ನಾಗಿ ಮಾಡಿಕೊಳ್ಳು ತ್ತಾರೊ ಅವರಿಗೆ ಅದು ಅಕ್ಷಯ ಪಾತ್ರೆಯಾಗಿ, ಜ್ಞಾನ ಭಂಡಾರ ವಾಗಿ, ಅವರ  ಬಾಳನ್ನು ಬೆಳಕಾಗಿಸುತ್ತದೆ ಎಂದು ಎಲ್ಲಾ ವಿದ್ಯಾರ್ಥಿ ಗಳಿಗೆ, ಓದುಗರಿಗೆ ಪುಸ್ತಕದ ಮಹತ್ವ ಸಾರಿದ್ದಾರೆ.

 ಹಾಗೆಯೇ “ನಾನು ಕಸಬರಿಗೆ” ಎಂಬ ಕವಿತೆ ಯಲ್ಲಿ “ಮೇಲು ಕೀಳು ಎಂಬುದಿಲ್ಲ. ಭೇದದ ನಡತೆ ಒಳಿತಲ್ಲ” ಎಂಬ ಸಾಲುಗಳು ವಿವಿಧತೆ ಯಲ್ಲಿ ಏಕತೆಯಿಂದ ಕೂಡಿರುವ ಭವ್ಯ ಭಾರತ ದ ಐಕ್ಯತೆಯನ್ನು ಮತ್ತು ಒಗ್ಗಟ್ಟಿನ ಮಂತ್ರವನ್ನು ಸಾರುತ್ತದೆ.ಸಮಾಜದ ಏಳಿಗೆಗೆ ಜಾತಿ ಮತ, ಬಡವ-ಶ್ರೀಮಂತ ಎಂಬ ಭೇದವು ಯಾವತ್ತು ಒಳ್ಳೆಯದಲ್ಲ ಎಂಬುದನ್ನು ಸೂಚ್ಯವಾಗಿ ಹೇಳುತ್ತಾ, ಇಲ್ಲಿ ಎಲ್ಲರೂ ಸಮಾನರು ಎಂಬು ದನ್ನು ಎಚ್ಚರಿಸುತ್ತಾರೆ.

ಕಣದಲಿ ತುಂಬಿದೆ ಕಾಳು
ಗಿಲಲಣಿಗಳ ಹಿಂಡಿಗೆ ಕೂಳು
ನೀರಲಿ ಮಿನುಮಿನುಗುವ ಮೀನು
ತೀರದ ಕೊಕ್ಕರೆ ಕಮಾನ

“ಜೀವ ಜಾಲ” ಪದ್ಯದ ಈ ಸಾಲುಗಳ ಮೂಲಕ ಕವಿ ಪರಿಸರದಲ್ಲಿರುವ ಜೀವಿಗಳು ತಮ್ಮ ಬದುಕಿ ಗಾಗಿ,ತಮ್ಮ ಉಳಿಯುವಿಕೆಗಾಗಿ ಒಂದಕ್ಕೊಂದು ನಾಶಮಾಡಿ, ಹೋರಾಡಿ ಬದುಕುವ ರೀತಿಯ ನ್ನು, ಸಮಾಜದಲ್ಲಿರೊ ಬಲಿಷ್ಠರು ಬಡವರನ್ನು ಬಡಿದು ತಿನ್ನೊ ಪರಿಸರಕ್ಕೆ ಹೊಲುತ್ತದೆ. ಎಷ್ಟೇ ಬಲಿಷ್ಠರಿದ್ದರೂ ಕೊನೆಗೆ ಮಣ್ಣು ಸೇರಲೇಬೇಕು ಎಂಬ ಸಂದೇಶವನ್ನು ಕೊಟ್ಟಿದ್ದಾರೆ.

ಇನ್ನು“ಬುದ್ಧಿಗೇಡಿ ಕತ್ತೆ” ಕವಿತೆಯ ಮೂಲಕ ಕವಿ ಸಮಾಜದಲ್ಲಿರುವ, ಕೆಲವು ವ್ಯಕ್ತಿಗಳ ಮೂರ್ಖತನವನ್ನು, ಒಣ ಜಂಭವನ್ನು ಕೊಚ್ಚಿ ಕೊಳ್ಳುವ ಜಂಭಕೋರರ ಭಂಡತನವನ್ನು, ಕತ್ತೆಯ ಮೂಲಕ ಎತ್ತಿ ತೋರಿಸಿದ್ದಾರೆ.

ಹಾಗೆಯೇ “ಬೆಳ್ಳಿಯ ಮೋಡದ ಬೆನ್ನೇರಿ”. ಕವಿತೆಯಲಿ ಕವಿಯು ಮಕ್ಕಳನ್ನು ಮೋಡಗಳ ಜೊತೆ ಮಾತಾಡಿಸುತ್ತಾ,ಕಣ್ಣಿಗೆ ಕಾಣದ ಗ್ರಹಗಳ ಬಗೆಗಿನ ಕಲ್ಪನೆ ಮೂಡಿಸುತ್ತಾರೆ. ಬಾಲಕಿಯ ಕರೆಗೆ ಮೋಡಗಳು ಧರೆಗಿಳಿದು ಬಂದು, ‘ಮುತ್ತು’ ಅನ್ನೋ ಬಾಲಕಿಯನ್ನು ಬೆನ್ನಿಗೇರಿಸಿಕೊಂಡು’ ‘ಬಾನಂಗಳದಲ್ಲಿ ಹಾರಾಡಿಸುವ ಕಲ್ಪನೆ ಮಕ್ಕಳಲ್ಲಿ ಕಲ್ಪನಾಶಕ್ತಿ, ಆಲೋಚನಾ ಶಕ್ತಿಯನ್ನು ಮತ್ತು ವೈಜ್ಞಾನಿಕ ಮನೋಭಾವವನ್ನು ಹೆಚ್ಚುವಂತೆ ಮಾಡಿದ್ದಾರೆ.

ಒಟ್ಟಾರೆಯಾಗಿ”ವನರಾಗ ಶರ್ಮಾ” ಗುರುಗಳ “ಬಣ್ಣದ ಕಾರಂಜಿ” ಕವನ ಸಂಕಲನವನ್ನು ಅವ ಲೋಕನ ಮಾಡಿದಾಗ ಈ ಕೃತಿಯು ಮಕ್ಕಳಲ್ಲಿ ಪರಿಸರ ಪ್ರೀತಿ, ಮಾನವೀಯತೆ, ದೇಶಪ್ರೇಮ, ನೈತಿಕ ಮೌಲ್ಯ, ಐಕ್ಯತೆ, ಪ್ರಾಮಾಣಿಕತೆ, ಆಲೋ ಚನೆ, ಚಿಂತನೆ,ಕಲ್ಪನೆ,ಕನಸುಗಳನ್ನು, ರೋಚಕತೆ ಯನ್ನು, ಕುತೂಹಲವನ್ನು, ಹೆಚ್ಚಿಸುವಂತಿದೆ ಮತ್ತು ಹಬ್ಬಗಳ ಆಚರಣೆಯ ಮಹತ್ವವನ್ನ, ಪ್ರಾಣಿ-ಪಕ್ಷಿಗಳ ಮೇಲಿನ ಕರುಣೆ, ಗಿಡ ಮರಗಳ ಮೇಲೆ ಪ್ರೀತಿ,ಮಕ್ಕಳಲ್ಲಿ ತುಂಟಾಟ, ಗಾಂಧೀಜಿ, ಅಣ್ಣಾ ಹಜಾರೆಯವರ ಹೋರಾಟದ ಬಗೆ, ನಾಡು ನುಡಿಯ ಬಗ್ಗೆ ಭಕ್ತಿಯನ್ನು ಮೂಡಿಸು ವಂತೆ ಬಣ್ಣದ ಕಾರಂಜಿ ಕೃತಿಯು ಅರ್ಥಗರ್ಭಿತ ಸಾಲುಗಳಿಂದ ಕೂಡಿದ್ದು,”ಕನ್ನಡಮ್ಮನ” ಉಡಿ ತುಂಬಲು ಕನ್ನಡ ಮನಸ್ಸುಗಳ, ಮುದ್ದಾದ ಮಕ್ಕಳ ಮನಗೆಲ್ಲಲು ಉತ್ತಮವಾದ ಕೃತಿಯಾ ಗಿದೆ. 

ಇಂತಹ ಉತ್ತಮವಾದ ಕೃತಿಯನ್ನು ನಾಡಿಗೆ ನೀಡಿದ ಶ್ರೀವನರಾಗ ಶರ್ಮಾ ಗುರುಗಳಿಗೆ ತುಂಬು ಹೃದಯದ ಧನ್ಯವಾದಗಳು. ಶ್ರೀಯುತ ರಿಂದ ಇನ್ನೂ ಹೆಚ್ಚಿನ ಉತ್ತಮೋ ತ್ತಮ ಕೃತಿಗಳು ಹೊರಬಂದು ತಾಯಿಯ ಉಡಿಸೇರಲಿ, ಓದುಗರ ಮನ ಮನೆಯನ್ನು ಸೇರಲೆಂದು ಆಶಿಸುತ್ತಾ ಶ್ರೀಯುತರಿಗೆ ಇನ್ನೂ ಹೆಚ್ಚೆಚ್ಚು ಪ್ರಶಸ್ತಿ, ಪುರಸ್ಕಾರಗಳು ಲಭಿಸಲಿ, ದೇವರು ಆಯುರಾರೋಗ್ಯ ದಯಪಾಲಿಸ ಲೆಂದು  ಹಾರೈಸುತ್ತೇನೆ.

✍️ ಗಂಗಾಧರ ಪಮ್ಮಾರ ಶಿಕ್ಷಕರು, ಕಿರವತ್ತಿ ಜಿ:ಉ.ಕ