ಅಮ್ಮ ಮೊರದಲ್ಲಿದ್ದ ಅಕ್ಕಿ ಆರಿಸುವಾಗ
ಒಂದೊಂದೇ ಕಾಳು ಹೆಕ್ಕಲು ಬರುತ್ತಿದ್ದೆ
ವಿಶಾಲ ಹಜಾರದ ದೊಡ್ಡ ಪಟಗಳ ಹಿಂದೆ
ಗೂಡು ಕಟ್ಟಿ ನಿನ್ನ ಸಂಸಾರ ಹೂಡುತ್ತಿದ್ದೆ.

ಬೆಳಗಾಗುತ್ತಿತ್ತು ನಿನ್ನ ಚಿಂವ್ ಚಿಂವ್ ಕೇಳಿ
ಪುಟ್ಟ ಕಣ್ಣು ಬಿಟ್ಟು ಮರಿ ನೋಡುತ್ತಿತ್ತು ಪಿಳಿಪಿಳಿ
ಮುದ್ದಾಡಲು ಮುಟ್ಟಲು ಹೋದರೆ ಅಮ್ಮನ ಬೈಗುಳ
ಮನುಷ್ಯ ಮುಟ್ಟಿದ ಗುಬ್ಬಿ ಗುಂಪು ಸೇರದು ಮಕ್ಕಳ.

ನೀನೆಷ್ಟು ಮಾಮೂಲಾಗಿ ಬಿಟ್ಟಿದ್ದೆ ನಮ್ಮ ಬಾಳಲ್ಲಿ ಗುಬ್ಬಿ
ಮರ ನಾಶವಾಗಿ ನೀನು ಮರೆಯಾಗಿ ಹೋದೆ ಗುಬ್ಬಿ
ನಿನ್ನ ಕಲರವ ಕಿವಿಗೆ ಬೀಳದಾಗಿ ಹೋಯಿತು
ಮೊಬೈಲ್ ತರಂಗಗಳಿಂದ ನಿನ್ನ ಕುಲ ಅವನತಿಯಾಯ್ತು.

ಕಣ್ಣಿಗೆ ಕಾಣುತ್ತಿದೆ ನಿನ್ನದೊಂದೇ ಉದಾಹರಣೆ
ಮಾನವನ ದುರಾಸೆಯಲ್ಲಿ ಪಶು ಪಕ್ಷಿಗಳಿಗೆಲ್ಲಿ ರಕ್ಷಣೆ
ಪಡುತ್ತಿರುವವು ನೋವು ಅನುಭವಿಸಿ ಬವಣೆ
ಇನ್ಯಾವಾಗ ನಾವು ಬುದ್ಧಿ ಕಲಿಯುವೆವೋ ನಾ ಕಾಣೆ.

ಇಂದು ವಿಶ್ವ ಗುಬ್ಬಚ್ಚಿಗಳ ದಿನಾಚರಣೆ ಪ್ರಯುಕ್ತ ಈ ಕವನ

✍️ಸುಜಾತಾ ರವೀಶ್,ಮೈಸೂರು