ಅದು ಮಂಜು ಮುಸುಕಿನ ಮುಂಜಾವು
ಪಥ ಬದಲಿಸುವ ರವಿಯ ಮುಂದೆ
ಇಬ್ಬರು ಗೆಳೆಯರು
ಟೀ ಅಂಗಡಿಯ ಮುಂದೆ ಕುಳಿತು
ಒಂದೇ ಸಮನೇ
ಬಾಯಿಗೆ ಬಂದ ಹಾಡುಗಳನ್ನು
ಹೃದಯ ತುಂಬಿ ಹಾಡುತ್ತಿದ್ದರು

ಟೀ ಅಂಗಡಿಯ ಮಾಲೀಕ
ಟೀ ಕುದಿಸಿ ಕುದಿಸಿ ಸಾಕಾಗಿ
ಹಾಡಿಗೆ ಮನಸೋತು
ಮತ್ತೆರಡು ಕಪ್ಪು ಟೀ ತಂದಿಟ್ಟ
ಈ ಹಾಡುಗಳೇ ಹೀಗೆ
ಅಯಸ್ಕಾಂತ ರೂಪಿ

ಮುಂಜಾವಿನ ನಶೆಗೆ
ಜೀವ ವೀಣೆಯ ಸ್ವರಾಲಾಪದಂತೆ
ಹಾಡು ಮುಂದುವರೆಯುತಿತ್ತು
ಅಲ್ಲಿಗೆ ಬೇಡುವವಳು ಬಂದು ನೀಡಿ ಹೋದಳು
ಮನದ ಹಾಡು ಜನರ ಹಾಡಾಯಿತು
ಕೆಲವರು ನಕ್ಕರು ಮತ್ತೆ ಕೆಲವರು ಬಿಕ್ಕಿದರು

ಸೊಕ್ಕಿದ ಇಬ್ಬರೂ ಗಾಯಕರು
ಹಾಡೇ ಹಾಡೇ ಬಾ ಬಾ
ಅನ್ನುತ್ತಲೇ ಹಾಡಾದರು
ಅಲ್ಲೇ ಧೂಮಪಾನ ಮಾಡುತ್ತಿದ ಮತ್ತೊಬ್ಬ
ಸಿಗರೇಟಿನ ಬೆಂಕಿ ನಂದಿಸಿ
ಬೆಂದು ಹೋದಂತೆ ವಿಲ ವಿಲ ಒದ್ದಾಡಿ
ಹಾಡುಗಾರರನ್ನು ನೋಡೇ ನೋಡುತ್ತಿದ್ದ
ಅವನ ಕಣ್ಣುಗಳಲ್ಲಿ ಹೇಳಲಾರದಷ್ಟು ಸಂಕಟಗಳು
ತನ್ನಷ್ಟಕ್ಕೆ ತಾನು
ಮಾತಾಡಿಕೊಂಡು ಸಾಂತ್ವನಗೊಂಡವು

ಕುಂಕುಮ ಧರಿಸಿದ ರವಿ
ಆ ಸಂಕ್ರಮಣದ ದಿನ ಉರಿಯುತ್ತಿದ್ದ
ಗೆಳೆಯರಿಬ್ಬರೂ ರವಿಯನ್ನು ಕುರಿತು ಹಾಡಿದರು
ಭುವಿಯಲ್ಲಿ ಗದ್ದಲವಿತ್ತು
ಬಿಡದೇ ಮತ್ತೆ ಹಾಡಿದರು
ಕೇಳಿಸಿಕೊಳ್ಳುತ್ತಿದ್ದ ಎಲ್ಲ ಕಿವಿಗಳು
ತಮ್ಮ ತಮ್ಮ ಬಾಯಿಗಳಿಗೆ ಸುಮ್ಮನಿರಲು ಹೇಳಿದವು

ಇಬ್ಬರೂ ಗೆಳೆಯರು
ಹೃದಯ ತುಂಬುವವರೆಗೆ ಹಾಡಿದರು
ಲೀನವಾದರು
ಬೆರೆತು ಹೋದರು
ಅವರಿಬ್ಬರ ಸುತ್ತ ಬುಸುಗುಡುತಿದ್ದ
ಹಪಹಪಿಯ ಹೆಬ್ಬಾವು
ನಿಧಾನಕ್ಕೆ ಮುಂದಕ್ಕೆ ಚಲಿಸಿತು
ಹಾಡಿನ ಲಯ ಹಿಡಿಯಿತು
ನಾದದ ವೇದನೆಯಲಿ ಲೀನವಾಯಿತು

ಬೆಳಕು ಮತ್ತಷ್ಟು ಪ್ರಖರವಾಯಿತು
ಗೆಳೆಯರಿಬ್ಬರೂ ಕೆಲಸ ಮಾಡುವ ಜಾಗಕ್ಕೆ
ಎಚ್ಚರಗೊಂಡು ಧಾವಿಸಿದರು
ಹೃದಯದ ಹಾಡು ಕೇಳುವವರಿಲ್ಲದ ಜಾಗದಲ್ಲಿ
ಬಾಯಿ ಮಾತುಗಗಳನ್ನಾಡಿ
ಮುಂದಕ್ಕೆ ಹೋದರು

ಅದು ಕಾಲೇಜುಗಳಲ್ಲಿ ಮಕ್ಕಳಿಲ್ಲದ ಕಾಲ
ಸಾಂಕ್ರಾಮಿಕಕ್ಕೂ ಸಂಕ್ರಮಣಕ್ಕೂ
ಸಾವಿರ ಅರ್ಥಗಳು ಮೂಡುವ ಕಾಲ
ಲೋಕದಲ್ಲಿರುವ ಎಲ್ಲರೂ
ಅವರವರ ಹಾಡುಗಳನ್ನೇ
ಗಮನವಿಟ್ಟು ಮನವಿಟ್ಟು
ಕೇಳುವ ಕಾಲ

✍️ಬೇಲೂರು ರಘುನಂದನ್ 
ಕನ್ನಡ ಸಹಾಯಕ ಪ್ರಾಧ್ಯಾಪಕರು‌
ಸ.ಪ್ರ.ದ.ಕಾಲೇಜು,ವಿಜಯನಗರ ಬೆಂಗಳೂರು