ಸ್ವಾಮಿ ವಿವೇಕಾನಂದರು ಈ ಜಗತ್ತು ಕಂಡ ಧೀಮಂತ ವ್ಯಕ್ತಿತ್ವ,ಆಧ್ಯಾತ್ಮಗುರು,ರಾಮಕೃಷ್ಣ ಪರಮಹಂಸರ ಶಿಷ್ಯ,ವಿಶ್ವದೆಲ್ಲೆಡೆ ಸಂಚರಿಸಿ ಜನರನ್ನು ಜಾಗೃತಗೊಳಿಸಿದವರು ಎಂಬುದು ನಮಗೆಲ್ಲ ರಿಗೂ ತಿಳಿದ ವಿಷಯ.ಬಾಲ್ಯದಿಂದ ಲೂ ಶಾಲಾ ಪಠ್ಯಪುಸ್ತಕಗಳಲ್ಲಿ, ಬಾಲ-ಭಾರತಿ ಕಥೆ ಪುಸ್ತಕ ಗಳಲ್ಲಿ ‘ಬಾಲಕ ನರೇಂದ್ರ’ನ ಬಗ್ಗೆ ಓದುತ್ತ ಬೆಳೆಯುವ ನಾವು, ಸ್ವಾಮಿ ವಿವೇಕಾ ನಂದರ ಬಗ್ಗೆ ಹೆಚ್ಚು-ಹೆಚ್ಚು ಮಾಹಿತಿ ಪಡೆಯು ತ್ತ ಹೋದಂತೆ ಅವರ ಜೀವನದಿಂದ ಪ್ರಭಾವಿತ ರಾಗುತ್ತೇವೆ. ಸ್ವಾಮಿ ವಿವೇಕಾನಂದರೆಂದ ಕೂಡಲೇ ಕೇಸರಿ ನಿಲುವಂಗಿ ತೊಟ್ಟು, ಎದೆಗೆ ಕೈಕಟ್ಟಿ ನಿಂತ ಸಂತನ ಚಿತ್ರ ನಮ್ಮೆಲ್ಲರ  ಮನ ದಲ್ಲಿ ಮೂಡುತ್ತದಲ್ಲವೇ?

“ಆ ವಿಶಾಲ ಲಲಾಟ, ಆ ತೀಕ್ಷ್ಣ ಕಣ್ ನೋಟ,ಬಿಗಿದ ತುಟಿ, ಬಿಗಿದ ತಲೆಯ ರುಮಾಲು, ಬಿಗಿಹುಬ್ಬು; ಬಿಗಿದ ಕೈಕಟ್ಟು, ಕಾವಿಯ ಅಂಗಿ, ನಡು ಕಟ್ಟು, ಬಿಗುವಿನಲಿ ಹುಗಿದಿಟ್ಟ ಚೇತನದ ಕಡಲೊಡಲು” 

ಎನ್ನುವ  ಪ್ರೊ.ಎಂ.ವಿ.ಸೀತಾರಾಮಯ್ಯರವರ ಕವನದ ಸಾಲುಗಳು ವಿವೇಕಾನಂದರ ಬಾಹ್ಯ ರೂಪವನ್ನು ಬಣ್ಣಿಸುತ್ತವೆ. ವಿವೇಕಾನಂದರ ಬಗ್ಗೆ ಓದಿ, ತಿಳಿದುಕೊಳ್ಳುಲು ಪ್ರಯತ್ನಿಸುವವ ರಿಗೆ ಈ ಸಾಲುಗಳು ಅದೆಷ್ಟು ಅರ್ಥಪೂರ್ಣ ವಾಗಿವೆ ಎನಿಸುತ್ತವೆ.

“ಭರತಖಂಡದೊಳರಚುತಲೆಯುವ ಮನುಜಕುರಿಗಳಿಗೆ, ಸಿಂಹಹೃದಯವನಿತ್ತು   ಗರ್ಜಿಸುವಂತೆ ನೀ ಮಾಡಿ,  ಕುರಿಯದೊಡ್ಡಿಯ ಮುರಿದು ಸಿಂಹದ ಗುಹೆಯ ವಿರಚಿಸಿದೆ.  ಸಿಂಹ ಹೃದಯನೆ, ಶ್ರೀವಿವೇಕಾನಂದ ಯೋಗೀಂದ್ರ!”

ಎನ್ನುವ  ರಾಷ್ಟ್ರಕವಿ ಕುವೆಂಪುರವರ ಕವನದ ಸಾಲುಗಳು ವಿವೇಕಾನಂದರ ವ್ಯಕ್ತಿತ್ವದ ಅರಿ ವನ್ನು ಮೂಡಿಸುತ್ತವೆ.  ವಿವೇಕಾನಂದರ  ಬಾಹ್ಯ ರೂಪ ಮತ್ತು ಆಂತರಿಕ ಶಕ್ತಿಯ ಬಗ್ಗೆ ತಿಳಿದು ಕೊಂಡಾಗ, ನಮ್ಮ ಮೇಲೆ ಪ್ರಭಾವ ಬೀರುವುದು ಇವುಗಳಷ್ಟೇ ಅಲ್ಲ ಅವರು ನೀಡಿದ ಸಾವಿರಾರು ಸಂದೇಶಗಳೆಂಬ ಅರಿವು ಮೂಡಲಾರಂಭಿಸು ತ್ತದೆ.

ಸ್ವಾಮಿ ವಿವೇಕಾನಂದರ ಸಂದೇಶಗಳು

ಸ್ವಾಮಿ ವಿವೇಕಾನಂದರ ಸಂದೇಶಗಳೆಂದಾಗ  ಮೊದಲಿಗೆ ನೆನಪಿಗೆ ಬರುವ  ಸಾಲುಗಳೆಂದರೆ, “ಏಳಿ,ಎದ್ದೇಳಿ.ಗುರಿ ಮುಟ್ಟುವವರೆಗೆ ನಿಲ್ಲದಿರಿ”. ನಾವೆಲ್ಲರು ಶಾಲಾದಿನಗಳಿಂದಲೇ ಅವರ ಅದೆಷ್ಟೋ ಸಂದೇಶಗಳನ್ನು ಕೇಳುತ್ತ ಬೆಳೆಯುತ್ತೇವೆ. ಉಪನಿಷತ್ತಿನಲ್ಲಿ ಉಲ್ಲೇಖಿಸಿ ರುವ ಅನೇಕ ತತ್ವಗಳನ್ನು ಆಧರಿಸಿ ಸ್ವಾಮಿ ವಿವೇಕಾನಂದರು ನೀಡಿದ ಸಂದೇಶಗಳು ವ್ಯಕ್ತಿಯ ವ್ಯಕ್ತಿತ್ವವನ್ನು ವಿಕಸಿತಗೊಳಿಸಿ, ವಿವೇಕವನ್ನು ಜಾಗೃತಗೊಳಿಸುವಲ್ಲಿ ಮಹತ್ತರ ಪಾತ್ರವಹಿಸುತ್ತವೆ. ಅಂತರ್ಜಾಲ, ಸಾಮಾಜಿಕ ಜಾಲತಾಣಗಳ ಇಂದಿನ ದಿನಗಳಲ್ಲಿ ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ಸುಲಭ ವಾಗಿ ಪಡೆಯಬಹುದು.ನಾನು ಕಾಲೇಜು ವಿದ್ಯಾರ್ಥಿ ಯಾಗಿದ್ದಾಗ ಪ್ರವಾಸಕ್ಕೆಂದು ಕನ್ಯಾ ಕುಮಾರಿಗೆ ಹೋಗಿ, ‘ವಿವೇಕಾನಂದ ರಾಕ್ ಮೆಮೊರಿ ಯಲ್’ ಗೆ ಭೇಟಿಕೊಟ್ಟಾಗ, ಅಲ್ಲಿ ಸ್ವಾಮಿ ವಿವೇಕಾನಂದರ ಜೀವನದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯುವ ಅವಕಾಶ ಒದಗಿ ತ್ತು. ಅಲ್ಲಿನ ಪುಸ್ತಕ ಮಳಿಗೆಯಲ್ಲಿ ಖರೀದಿ ಸಿದ ‘Flashes from Vivekananda’ ಎನ್ನುವುದು ‘ನಾಲ್ಕಾಣೆ ಮಾಲೆ’ಯ ಪುಸ್ತಕ.

ಕೇವಲ ಇಪ್ಪತ್ತೈದು ಪೈಸೆ ಬೆಲೆಯ ಆ ಪುಟ್ಟ ಪುಸ್ತಕ, ಬೆಲೆ ಕಟ್ಟಲಿಕ್ಕಾಗದ ಜ್ಞಾನಭಂಡಾರ ವನ್ನು ಹೊಂದಿತ್ತು ಎನ್ನುವುದು ಅದರಲ್ಲಿನ ಸಂದೇಶಗಳನ್ನು ಓದಿ, ಅರ್ಥ ಮಾಡಿಕೊಳ್ಳವ ಪ್ರಯತ್ನ ಮಾಡಿದಾಗಲೇ ಅರಿವಿಗೆ ಬಂದಿತ್ತು. ಆಗ ಆ ಸಂದೇಶಗಳು ತಿಳಿಯಪಡಿಸುವ ಅರ್ಥವನ್ನು ಅರಿಯುವ ಜೀವನಾನುನುಭವ ಗಳು ನನಗಿರದಿದ್ದರೂ, ಅವುಗಳನ್ನು ಓದಿದಾಗ ಏನೋ ಹೊಸ ವಿಷಯವೊಂದನ್ನು ತಿಳಿದು ಕೊಂಡ ಸಂತೋಷ ಮನಸ್ಸಿಗಾಗಿತ್ತು. “There is nothing holier in the world than to keep good company” ಎನ್ನುವ ಸಂದೇಶ ದ ಸಾರವನ್ನು ನಮ್ಮ ಬದುಕಿಗೆ ಹೋಲಿಸಿ ನೋಡಿದಾಗ, ನಿಸ್ವಾರ್ಥ ಸ್ನೇಹ-ಒಡನಾಟ ನಿಶ್ಕಲ್ಮಶವಾಗಿದ್ದು ತನ್ನ ಪ್ರಾವಿತ್ರ್ಯತೆಯನ್ನು ಬಿಂಬಿಸುತ್ತದೆ ಎನ್ನುವು ದನ್ನು ತಿಳಿದುಕೊಳ್ಳ ಬಹುದು.

“ನಿನ್ನ ಮೇಲೆ ನಿನಗೆ ನಂಬಿಕೆಯಿ ರಲಿ”, “ನಿನ್ನನ್ನುನೀನು’ಬಲಹೀನ’ ಎಂದು ತಿಳಿಯುವುದೇ ಬಹುದೊಡ್ಡ ಪಾಪವೆನಿಸಿ ಕೊಳ್ಳು ತ್ತದೆ”,“ನಮ್ಮಲ್ಲಿ ಮೂಡುವ ನಕಾ ರಾತ್ಮಕ ಯೋಚನೆ ಗಳಿಗೆ ಭಯವೇ ಕಾರಣ”, “ನಿನ್ನಬದುಕಿನ ಪುಸ್ತಕ ವನ್ನು ತೆರೆಯುವವರೆಗೂ ಬೇರೆ ಪುಸ್ತಕ ಗಳಿಗೆ ಬೆಲೆಯಿರುವುದಿಲ್ಲ”, “ಪರಿಪೂರ್ಣತೆ ಎಂದಿಗೂ ಅಪೂರ್ಣವಾಗಿರುವುದಿಲ್ಲ”

ಎನ್ನುವ ಸಂದೇಶಗಳು ಅದೆಷ್ಟು ಸ್ಫೂರ್ತಿದಾ ಯಕ! “The Perfect never becomes imperfect” ಎಂದು ಅರಿತು ನಾವು ಕೈಗೆತ್ತಿ ಕೊಳ್ಳುವ ಯಾವುದೇ ಕಾರ್ಯದಲ್ಲಿ ಪರಿಪೂರ್ಣ ತೆಯಿರಬೇಕೆಂದಾಗ ಅದಕ್ಕೆ ನಾವು ನೀಡುವ ಸಮಯ, ಪಡುವ ಪರಿಶ್ರಮ, ತೋರಿಸುವ ಸಮರ್ಪಣಾಭಾವಗಳು ಆ ಕಾರ್ಯವನ್ನು ಅಪೂರ್ಣವಾಗಿಸುವುದಿಲ್ಲ ಎನ್ನುವುದು ನಮ್ಮೆ ಲ್ಲರ ಅನುಭವದ ಮಾತಾ ಗುತ್ತದೆ. ಇದನ್ನೇ ಸ್ವಾಮಿ ವಿವೇಕಾನಂದರು ಅದೆಷ್ಟು ಸರಳವಾಗಿ ತಿಳಿಹೇಳಿದ್ದಾರಲ್ಲ ಎನಿಸುತ್ತದೆ.

ಬದುಕಿನ  ಅನೇಕ ಮಜಲುಗಳನ್ನು ಏರುತ್ತ ನಾವು ಅದೆಷ್ಟೋ ಅನುಭವಗಳನ್ನು ಕಲೆಹಾಕಿ ಕೊಂಡಿರುತ್ತೇವಲ್ಲವೇ? ನಮ್ಮ ಅನುಭವಗ ಳಿಂದ ಆಗುವ ಕಲಿಕೆ ಅಪಾರ.

“ಒಳ್ಳೆಯದೆಂದು ಅನಿಸುವುದನ್ನು ಇನ್ನೊಬ್ಬ ರಿಂದ ಕಲಿ, ಕಲಿತ ನಂತರ ಆ ಇನ್ನೊಬ್ಬ ನಾಗದೇ, ಅದನ್ನು ನಿನ್ನ ರೀತಿಯಲ್ಲಿ ಅರ್ಥ ಮಾಡಿಕೊ”, “No two people see the same world

ಎನ್ನುವ ವಿವೇಕಾನಂದರ ಮಾತುಗಳನ್ನು ನಮ್ಮ ಬದುಕಿನ ಅನುಭವಗ ಳಿಂದಲೇ ಅರ್ಥಮಾಡಿ ಕೊಳ್ಳಬಹುದು. ಈ ಸಂದೇಶಗಳ ಅರಿವನ್ನು ಪಡೆದುಕೊಂಡಾಗ ಜೀವನದಲ್ಲಿ ಅನವಶ್ಯಕ ವಾದ-ವಿವಾದಗಳಿಗೆ ಅವಕಾಶ ಕೊಡದೆ, ತಾಳ್ಮೆ ಯನ್ನು ಅಭ್ಯಾಸ ಮಾಡಿದಲ್ಲಿ ಇಲ್ಲದ ವೈಮನಸ್ಯ ಗಳನ್ನು ತಡೆಯಬಹುದು ಎಂಬುದು ಮನವರಿಕೆ ಯಾಗುತ್ತದೆ. ಈ ರೀತಿ ಅಭ್ಯಾಸ ಮಾಡಿಕೊಂಡ ತಾಳ್ಮೆ ಬದುಕಿನಲ್ಲಿ ಬಹಳಷ್ಟು ಕಡೆ ನಮಗೆ ಉಪಯೋಗವಾಗು ತ್ತದೆ. ಆದರೆ ನಮ್ಮ ತಾಳ್ಮೆಯ ಸ್ವಭಾವವನ್ನು ದುರುಪಯೋಗ ಪಡಿಸಿಕೊಳ್ಳುವ, ಮುಗ್ಧತೆಯ ಸೋಗಿನಲ್ಲಿ ವಂಚನೆ ಮಾಡುವ ಮತ್ತು ಸತ್ಯವನ್ನು ಮರೆ ಮಾಚುವವರನ್ನು ಒಪ್ಪಿಕೊ ಳ್ಳುವುದು ಆತ್ಮ ವಂಚನೆ ಎನಿಸಿಕೊಳ್ಳುವು ದಿಲ್ಲವೇ? ಎನ್ನುವ ಪ್ರಶ್ನೆಗೆವಿವೇಕಾನಂದರ ಸಂದೇಶದಲ್ಲಿಯೇ ಉತ್ತರ ಕಂಡುಬರುತ್ತದೆ. ಸ್ವಾಮಿ ವಿವೇಕಾನಂದ ರು ಆತ್ಮವಂಚನೆಯನ್ನ  ಒಪ್ಪಿಕೊಳ್ಳುವುದಿಲ್ಲ.

“ಒಳ್ಳೆಯದು ಸತ್ಯಕ್ಕೆ ಹತ್ತಿರವಾ ಗಿರುತ್ತದೆ, ಆದರೆ ಸತ್ಯವಾಗಿರುವು ದಿಲ್ಲ”, “ಸತ್ಯವನ್ನು ಬಿಟ್ಟುಕೊಡದೆ ಅದಕ್ಕೆ ಅಂಟಿಕೊಂಡಿರು.ಸತ್ಯಕ್ಕೆ ಯಶಸ್ಸು ನಿಧಾನವಾಗಿಯಾದ ರೂ ನಿಶ್ಚಿತವಾಗಿ ದೊರೆಯುತ್ತದೆ. ಅಸತ್ಯದ ವಿಷಯದಲ್ಲಿ ಎಚ್ಚರದಿಂದಿರು.”

ಎನ್ನುವ ಅವರ ಮಾತುಗಳು ಸತ್ಯ-ಅಸತ್ಯದ ವಿಷಯವಾಗಿ ನಮ್ಮ ಮನದಲ್ಲಿ ಮೂಡುವ ಗೊಂದಲವನ್ನು ದೂರಗೊಳಿಸುತ್ತವೆ.

ಸ್ವಾಮಿ ವಿವೇಕಾನಂದರ ಸಂದೇಶಗಳು ವ್ಯಕ್ತಿ ಯ ಅಂತರಾತ್ಮವನ್ನು ತಟ್ಟುವ ಮಾತುಗಳಾ ಗಿರುವು ದರಿಂದ ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಲ್ಲಿ ಜೊತೆಯಾಗುತ್ತವೆ.

“ನೀವು ನಿಮ್ಮೊಳಗಿನಿಂದಲೇ ಬೆಳೆಯ ಬೇಕು. ಯಾರೂ ನಿಮಗೆ ಕಲಿಸಲಾರರು, ನಿಮ್ಮಾತ್ಮವೇ ನಿಮ್ಮ ಗುರು”

ಎನ್ನುವ ಸ್ವಾಮಿ ವಿವೇಕಾನಂದರ ಮಾತುಗ ಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವೆನಿಸಿ ದರೂ, ವಿವೇಕಾನಂದರ ಹಲವಾರು ಸಂದೇಶ ಗಳಲ್ಲಿ ಯೇ ಅಂತರಾತ್ಮವನ್ನು ನಮ್ಮ ಗುರು ವಾಗಿಸಿಕೊಳ್ಳುವ ಪ್ರಯತ್ನದ ದಾರಿ ಕಂಡುಬ ರುತ್ತದೆ.

“ದಿನಕ್ಕೊಮ್ಮೆಯಾದರೂ ನಿನ್ನೊಂದಿಗೆ ನೀನು ಮಾತಾಡು.ಇಲ್ಲದಿದ್ದಲ್ಲಿ ಈ ಜಗತ್ತಿನಲ್ಲಿನ ಒಬ್ಬ ಉತ್ತಮ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶವನ್ನು ಕಳೆದು ಕೊಳ್ಳುವೆ.”

ಎನ್ನುವ ಸಂದೇಶ ಅದೆಷ್ಟು ಅರ್ಥಗರ್ಭಿತವಾಗಿ ದೆ. ನಾವು ಸತ್ಯ-ಅಸತ್ಯ, ನ್ಯಾಯ-ಅನ್ಯಾಯ, ಧರ್ಮ-ಅಧರ್ಮಗಳಂಥ ಅದೆಷ್ಟೋ ವಿಷಯ ಗಳಲ್ಲಿ ಬೇರೊಬ್ಬದಿಂದ ಸತ್ಯ ಮರೆಮಾಚಿ, ಇಲ್ಲದ ಸಮರ್ಥನೆಗಳನ್ನು ನೀಡಿ, ಅವರೊಂದಿಗೆ ವಾದ-ವಿವಾದಗಳಲ್ಲಿ ತೊಡಗಿ ಕೊಳ್ಳುವವರನ್ನು ಕಾಣುತ್ತೇವೆ. ಆದರೆ ಆತ್ಮ ವಂಚನೆ ಮಾಡಿಕೊ ಳ್ಳದೇ, ನಮ್ಮ ಆತ್ಮ ಸಾಕ್ಷಿಗೆ ಪ್ರಾಮಾಣಿಕರಾಗಿ ದ್ದಾಗ, ಜೀವನಾನುಭವ ಗಳು ಅಂತರಾಳದ ಆಳಕ್ಕಿಳಿದು ಆತ್ಮದ ಕತ್ತಲನ್ನು ಕಳೆದು, ವ್ಯಕ್ತಿಯ ವ್ಯಕ್ತಿತ್ವ ದಲ್ಲಿ ಬೆಳಕನ್ನು ತುಂಬುತ್ತವೆ ಮತ್ತು ಅಂತರಾತ್ಮ ವೇ ಸರಿಯಾದ ಮಾರ್ಗ ದರ್ಶನ ತೋರುವ ‘ಗುರು’ ಎಂಬುದು ಮನವರಿಕೆಯಾ ಗುತ್ತದೆ ಅಲ್ಲವೇ?

‘ವಿವೇಕ ವಾಣಿ’ಯ ಆಳವನ್ನು ಜೀವನದ ಹಲವು ಅನುಭವಗಳಿಂದ ಮತ್ತು ಕೆಲವು ಜೀವನಾನುಭವಗಳಿಂದ ಅರಿತು, ಒಳ್ಳೆಯ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸುವಾಗ,

“ಮನುಷ್ಯ ತನ್ನ ಯೋಚನೆಗ ಳಿಂದಾಗು ತ್ತಾನೆ,ಆ ಯೋಚನೆ ಗಳೇ ಅವನೊಂದಿಗೆ ಪಯಣಿ ಸುತ್ತವೆ

ಎನ್ನುವ ಸಂದೇಶ ಮನುಷ್ಯನ ಯೋಚನೆಗಳೇ ಅವನ ಬದುಕು ಮತ್ತು ಸಮಾಜದ ಒಳಿತಿನಲ್ಲಿ ಮುಖ್ಯ ವಾಗುತ್ತವೆ ಎಂಬ ಅರಿವನ್ನು ಮೂಡಿ ಸುತ್ತದೆ.

ಅಮೆರಿಕಾದಲ್ಲಿ ಸ್ವಾಮಿ ವಿವೇಕಾನಂದರು

“ನಿನ್ನ ವಾಣಿಯು ತಟ್ಟಿ, ಚಿಪ್ಪೊಡೆದು ಅದರಲ್ಲಿ ಹುದುಗಿದ್ದವರೆದ್ದೆದ್ದು ಹೊರ ಬಂದರು. ಕ್ರಿಮಿ ಎಂದು ಮಲಗಿದ್ದವರೆದ್ದು ಕುಲಶೈಲದೊಲು ಮುಗಿಲೆಡೆಗೆ ಮುಡಿ ಎತ್ತಿ ನಿಂತುಕೊಳಲು, ಏಳು ಕಡಲಿನ ತೆರೆಯು ತಾಳವನು ಹಾಕಿದವು, ದಿಕ್ಕು ದೆಸೆ ಹಾಡಿದವು ಜಯಗಾಥವ! ಪೂರ್ವ ಪಶ್ಚಿಮ ಎರಡು ಒಂದನ್ನೊಂದನ್ನಪ್ಪಿ ಕಂಡು ಕೊಂಡವು ದಿವ್ಯ ಹೃದಯಾರ್ಥವ!”

ಎನ್ನುವ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ನವರ ಕವನದ ಸಾಲುಗಳು ವಿವೇಕಾನಂದರು ಪಶ್ಚಿಮ ದೇಶಗಳಲ್ಲಿ ಬೀರಿದ ಪ್ರಭಾವವನ್ನು ಬಿಂಬಿಸುತ್ತವೆ. ಇದಕ್ಕೆ ಸಾಕ್ಷಿಯಾಗಿ ನಿಲ್ಲುವುದು ಸ್ವಾಮಿ ವಿವೇಕಾನಂದರ ಶಿಕಾಗೊ ಭಾಷಣ! 1893 ರ ಸೆಪ್ಟೆಂಬರ್ 11 ರಂದು ಶಿಕಾಗೊ ಆರ್ಟ್ ಇನ್ಸ್ಟಿಟ್ಯೂಟಿನಲ್ಲಿ The World’s Parliament of Religions  ಸಮ್ಮೇಳನ ವನ್ನು ಆಯೋಜಿಸಲಾಗಿತ್ತು ಮತ್ತು ಉದ್ಘಾಟನೆ ಯ ಸ್ವಾಗತ ಭಾಷಣದ ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸ್ವಾಮಿ ವಿವೇಕಾನಂದ ರ ಮೊದಲ ಮಾತೇ ಅದೆಷ್ಟು ಪರಿಣಾಮಕಾರಿ ಯಾಗಿತ್ತೆಂಬುದನ್ನು ನಾವು ಶಾಲಾದಿನಗಳಿಂದ ಲೇ ಕೇಳುತ್ತೇವೆ. “Sisters and Brothers of America…”ಎನ್ನುವ ನುಡಿಗೆ ಆ ಸಭೆಯ ಲ್ಲಿದ್ದವರೆಲ್ಲ ಎದ್ದುನಿಂತು ಎರಡು-ಮೂರು ನಿಮಿಷಗಳವರೆಗೆ ಚಪ್ಪಾಳೆ ತಟ್ಟಿ ಗೌರವ ಸೂಚಿ ಸಿದ್ದು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವ ವಿಷಯವಾ ಗಿದೆ. ಅಂದು ಅವರು ನೀಡಿದ ಸಂದೇಶ ದಲ್ಲಿ ಪೂರ್ವ ಮತ್ತು ಪಾಶ್ಚಿ ಮಾತ್ಯ ಆಧ್ಯಾತ್ಮಿಕ ತೆಯ ನಡುವಿನ ಪ್ರಮುಖ ಅಂತರವನ್ನು ಎತ್ತಿಹಿಡಿದಿದ್ದಲ್ಲದೇ, ಹಿಂಸೆ ಮತ್ತು ಮತಾಂಧ ತೆಗೆ ಅಂತ್ಯ ಹಾಡುವ ದೃಷ್ಟಿಯ ಬಗ್ಗೆ ಮಾತನಾ ಡಿದರು. ಕಾಕತಾಳೀಯವೆಂಬಂತೆ ಸೆಪ್ಟೆಂಬರ್ 11,2001 ರಂದು ನ್ಯೂಯಾರ್ಕಿನ World Trade Center ನ ಮೇಲೆ ನಡೆದ ದಾಳಿ, ಮಾನವೀಯ ಮೌಲ್ಯಗಳನ್ನು ಮತ್ತೊಮ್ಮೆ ಎಚ್ಚರಿಸುವಂತೆ ಮಾಡಿದ್ದಲ್ಲದೇ, ಸ್ವಾಮಿ ವಿವೇಕಾನಂದರ ಶಿಕಾಗೊ ಸಂದೇಶವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವಂತೆ ಮಾಡು ತ್ತದೆ. 

“ಸಹಿಷ್ಣುತೆ ಮತ್ತು ಸಾರ್ವತ್ರಿಕ ಸ್ವೀಕಾರ ಎರಡನ್ನೂ ಜಗತ್ತಿಗೆ ಕಲಿಸಿದ ಧರ್ಮಕ್ಕೆ ಸೇರಿದವನು ನಾನೆಂಬ ಹೆಮ್ಮೆ ನನಗಿದೆ. ನಾವು ಸಾರ್ವತ್ರಿಕ ಸಹಿಷ್ಣುತೆಯಲ್ಲಿ ಮಾತ್ರವಲ್ಲ, ಎಲ್ಲಾ ಧರ್ಮಗಳನ್ನು ನಿಜವೆಂದು ಒಪ್ಪಿಕೊಳ್ಳುತ್ತೇವೆ. ಕಿರುಕುಳಕ್ಕೆ ಒಳಗಾದವರಿಗೆ, ಎಲ್ಲಾ ಧರ್ಮಗಳ ನಿರಾಶ್ರಿತರಿಗೆ ಮತ್ತು ಭೂಮಿಯ ಎಲ್ಲಾ ರಾಷ್ಟ್ರಗಳಿಗೆ ಆಶ್ರಯ ನೀಡಿದ ರಾಷ್ಟ್ರಕ್ಕೆ ನಾನು ಸೇರಿದವನೆಂಬ ಹೆಮ್ಮೆ ನನಗಿದೆ”

ಎನ್ನುವ ವಿವೇಕಾನಂದರ ಮಾತು ಅವರು ವಿಶ್ವಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ ಗರಿಮೆಯನ್ನು ಹೇಳುತ್ತದೆ. ಅಮೆರಿಕಾದಲ್ಲಿ ಅವರು ಅನುಭವಿಸಿದ ಜನಾಂಗೀಯ ನಿಂದನೆ ಯನ್ನು, ಹಣಕಾಸಿನ ತೊಂದರೆಯನ್ನು ಕಡೆ ಗಣಿಸಿ, ದೇಶಭಕ್ತಿ ಮತ್ತು ಧರ್ಮದ ಮಹತ್ತ ತೆಯನ್ನು ಎತ್ತಿಹಿಡಿದದ್ದು ಎಲ್ಲರ ಮೆಚ್ಚುಗೆ ಯನ್ನು ಗಳಿಸಿತ್ತು. ವಿವೇಕಾನಂದರ ಭಾಷಣದ ಬಗ್ಗೆ ಅಮೆರಿಕಾದ ಪ್ರಮುಖ ಪತ್ರಿಕೆಗಳು ವರದಿ ಮಾಡಿದವು. ಅನೇಕ ಉದ್ಯಮಿಗಳು ಅವರನ್ನು ಭೇಟಿಮಾಡಿ ಭಾರತೀಯ ವೇದಾಂತ ಮತ್ತು ಯೋಗದ ತತ್ತ್ವಚಿಂತನೆ ಗಳನ್ನು ಪಾಶ್ಚಾತ್ಯ ಜಗತ್ತಿಗೆ ಪರಿಚಯಿಸುವಲ್ಲಿ ಚರ್ಚಿಸಿದರು. 1894 ರಲ್ಲಿ ನ್ಯೂಯಾರ್ಕ್ ಮತ್ತು ಸ್ಯಾನ್ ಫ್ರಾನಿಸ್ಕೋ ನಗರಗಳಲ್ಲಿ ಮೊದಲ ‘ವೇದಾಂತ ಸೊಸೈಟಿ’ ಶಾಖೆಗಳನ್ನು ಪ್ರಾರಂಭಿಸಲಾಯಿತು. ಈಗ ‘ವೇದಾಂತ ಸೊಸೈಟಿ’ ಅಮೆರಿಕಾದಾದ್ಯಂತ ಹಲವಾರು ಶಾಖೆಗಳನ್ನು ಹೊಂದಿದೆ. 

ಸ್ವಾಮಿ ವಿವೇಕಾನಂದರ ಐತಿಹಾಸಿಕ ಭಾಷಣ ವನ್ನು ಸ್ಮರಿಸಲು ಸೆಪ್ಟೆಂಬರ್ 11, 1995 ರಂದು, ಶಿಕಾಗೊ ಆರ್ಟ್ ಇನ್ಸ್ಟಿಟ್ಯೂಟಿನ ಮುಂದೆ ಹಾದುಹೋಗುವ ರಸ್ತೆ ‘ಮಿಶಿಗನ್ ಅವೆನ್ಯೂ’ ವನ್ನು ‘ಸ್ವಾಮಿ ವಿವೇಕಾನಂದ ವೇ’ ಎಂದು ಹೆಸರಿಸಿ ಗೌರವ ಸೂಚಿಸಿರುವುದ ನ್ನು ಕಾಣ ಬಹುದು. ಅಲ್ಲದೇ ಆರ್ಟ್ ಇನ್ಸ್ಟಿ ಟ್ಯೂಟಿನ ಕಟ್ಟಡದಲ್ಲಿ  ಈ ಭಾಷಣವನ್ನು ನೆನಪಿಸುವ ಕಂಚಿನ ಫಲಕವನ್ನು ಸ್ಥಾಪಿಸಿ ದ್ದನ್ನೂ ಕಾಣಬಹುದು. ಜನವರಿ 28, 2012 ರಂದು, ಆರ್ಟ್ ಇನ್ಸ್ಟಿಟ್ಯೂಟ್ ಆಫ್ ಶಿಕಾಗೊ  ಮತ್ತು ಭಾರತ ಸರಕಾರದ ಸಹಯೋಗದೊಂ ದಿಗೆ  ವಿವೇಕಾ ನಂದರ ಭಾಷಣವನ್ನು ಸ್ಮರಿಸುವ ಫಲಕವನ್ನು,  1893 ರ ಸಮ್ಮೇಳನದಲ್ಲಿ ಭಾಷಣ ನೀಡಿದ್ದ ಸ್ಥಳವಾದ ‘ಫುಲ್ಲರಟನ್  ಹಾಲ್’ ನ ಮುಂದೆ ಮರುಸ್ಥಾಪನೆ ಮಾಡಲಾ ಯಿತು. ಸ್ವಾಮಿ ವಿವೇಕಾನಂದರ ಶಿಕಾಗೊ ಭಾಷಣದ ವಾರ್ಷಿಕೋತ್ಸವ ಮತ್ತು 108 ವರ್ಷಗಳ ನಂತರ ಅದೇ ಸೆಪ್ಟೆಂಬರ್ 11 ರಂದು ನ್ಯೂಯಾರ್ಕಿನಲ್ಲಿ ನಡೆದ ಭಯೋತ್ಪಾದಕ ದಾಳಿಯ ನೆನಪಿನಲ್ಲಿ ಭಾರತದ ಕಲಾವಿದ ಜಿತೀಶ್ ಕಲ್ಲತ್ ಅವರು ‘Public Notice 3’ ಯನ್ನು ರಚಿಸಿದರು. ಇದರಲ್ಲಿ ಶಿಕಾಗೋದ ಆರ್ಟ್ ಇನ್ಸ್ಟಿಟ್ಯೂಟಿ ನ ಐತಿಹಾಸಿಕ ‘ವುಮನ್ಸ್ ಬೋರ್ಡ್ ಗ್ರ್ಯಾಂಡ್ ಸ್ಟೇರ್‌ಕೇಸ್’ ನ 118 ಮೆಟ್ಟಿಲುಗಳಲ್ಲಿ ಸ್ವಾಮಿ ವಿವೇಕಾನಂದರ ಶಿಕಾಗೊ ಭಾಷಣದ ಬರಹ ವನ್ನು LED ದೀಪಗ ಳಲ್ಲಿ  ಪ್ರದರ್ಶಿಸಲಾಗು ತ್ತದೆ.

ಭಾರತದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನ ವನ್ನು (ಜನವರಿ12)‘ರಾಷ್ಟ್ರೀಯ ಯುವ ದಿನ’ ವೆಂದು ಆಚರಿಸುವ ಸಂದರ್ಭದಲ್ಲಿ ವಿಶ್ವಕ್ಕೆ ಮಾದರಿಯಾಗಿ ನಿಲ್ಲುವ ಆಧ್ಯಾತ್ಮ ಗುರುವನ್ನು ಸ್ಮರಿಸಲು ಎಂ.ವಿ.ಸೀತಾರಾಮ ಯ್ಯರವರ ಕವನದ ಈ ಸಾಲುಗಳು ಅತ್ಯಂತ ಅರ್ಥಪೂರ್ಣ ವೆನಿಸುತ್ತವೆ.

“ಮೈ ತಳೆದು ಗರ್ಜಿಸುತ ಬಾ ಧೀರ ವೇದಾಂತ ಕೇಸರಿ! ಸಮರಯೋಗವ ಕಲಿಸೆ ಸಮನಾರು ನಿನಗೆ? ನೀನೇ ಸರಿ!”

✍️ಸರಿತಾ ನವಲಿ
ನ್ಯೂಜರ್ಸಿ,ಅಮೇರಿಕಾ