ಪುಟ್ಟ ಪುಟ್ಟ ಕವನಗಳನ್ನು ಕುತೂಹಲದಿಂದ ಓದುತ್ತಾ…..

ಶಂಕರದೇವರು ಅವರು ರಾಯಚೂರಿನ ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರು. ಇತ್ತೀಚಿಗೆ ‘ಚೆಲುವ ಚಿಣ್ಣರು’ ಮಕ್ಕಳ ತ್ರೈಮಾಸಿಕ ಪತ್ರಿಕೆಯ ಪ್ರಕಟಣೆ ಮಾಡುತ್ತಾ ಬಂದಿರುವುದು, ಮಕ್ಕಳ ಸಾಹಿತ್ಯ ಕೃತಿಗಳಿಗೆ ಪುರಸ್ಕಾರ ನೀಡಲು ತೀರ್ಮಾನಿಸಿರುವುದು ಹೀಗೆ ಅವರ ಸಾಹಿತ್ಯ ಚಟುವಟಿಕೆಗಳು ಹೊಸರೂಪ ಪಡೆದು ಮುಂದುವರೆಯುತ್ತಿವೆ. ಅದು ಖುಶಿಕೊಡುವ ವಿಚಾರವೂ ಹೌದು.

ಇದೀಗ ಪ್ರತಿ ವರ್ಷವೂ ತಮ್ಮ ಮಗನ ಹುಟ್ಟು ಹಬ್ಬದ ದಿನದಂದು ಓರ್ವ ಪ್ರತಿಭಾನ್ವಿತ ವಿದ್ಯಾರ್ಥಿಯ ಕೃತಿ ಪ್ರಕಟಿಸಿ ಅರ್ಥಪೂರ್ಣ ವಾಗಿ ಮಗನ ಹುಟ್ಟು ಹಬ್ಬವನ್ನು ಆಚರಿಸುವ ತೀರ್ಮಾನ ಮಾಡಿದ್ದು ನನಗೆ ತುಂಬಾ ಅಚ್ಚರಿ ಎನಿಸಿತು. ಇಂಥೆಲ್ಲಾ ಕಾರ್ಯಗಳಿಗೆ ಮನೆಯ ವರ ಸಹಕಾರ, ಸಮ್ಮತಿಯೂ ಬೇಕು. ಹೀಗಾಗಿ ಶಂಕರದೇವರು ಹಿರೇಮಠ ಅವರ ಧರ್ಮ ಪತ್ನಿ, ಶಿಕ್ಷಕಿಯೂ ಕವಯಿತ್ರಿಯೂ ಆಗಿರುವ ಶ್ರೀಮತಿ. ಅಶ್ವಿನಿ ಹಿರೇಮಠ ಇವರನ್ನು ಅಭಿನಂದಿಸುವೆ.

ಈ ವರ್ಷದ ಪುಸ್ತಕ ಪ್ರಕಟನೆಯ ಸೌಭ್ಯಾಗ್ಯ ಪಡೆದವಳು ರಾಯಚೂರ ಜಿಲ್ಲೆಯ ಸಿಂಧನೂರು ತಾಲೂಕಿನ ಕುಮಾರಿ. ರಮ್ಯಾ ಬಾಲಾಗವಿ. ಆದರ್ಶ ವಿದ್ಯಾಲಯದಲ್ಲಿ ಎಂಟನೆಯ ತರಗತಿ ಓದುತ್ತಿರುವ ಬಾಲಕಿ. ಈಗಾಗಲೇ ತನಗನಿಸಿದ ಕವನಗಳನ್ನು ರಚಿಸುತ್ತಿದ್ದಾಳೆ.ತಾಲೂಕು, ಜಿಲ್ಲಾ, ರಾಜ್ಯಮಟ್ಟ ದ ಅನೇಕ ಕವಿಗೊಷ್ಠಿಗಳಲ್ಲಿ ಕಾವ್ಯ ವಾಚನ ಮಾಡುತ್ತಾ ಪ್ರೇರಣೆ ಪಡೆಯುತ್ತಿದ್ದಾಳೆ. ಅನೇಕ ಸರಣಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಿರಿಯರ ಮಾರ್ಗದರ್ಶನ ಪಡೆದಿದ್ದಾಳೆ. ಅಷ್ಟೆ ಅಲ್ಲಾ, ಅವಳು ರಾಯಚೂರಿನ ಜಿಲ್ಲಾಮಟ್ಟದ ಪ್ರಥಮ ಮಕ್ಕಳ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿರುವದು ಅವಳ ಪ್ರತಿಭೆಗೆ ಸಾಕ್ಷಿ. ಇವೆಲ್ಲ ಅವಳ ಕುರಿತಾಗಿ ನಾನು ಕೇಳಿ ತಿಳಿದುಕೊಂಡ ವಿಷಯಗಳು. ಅವಳ ಸಾಹಿತ್ಯ ಬರವಣಿಗೆ ಹೀಗೆಯೇ ಸಾಗಲಿ ಎಂದು ಶುಭ ಕೋರುತ್ತೇನೆ.
ಬಡತನದಲ್ಲಿ ಬೆಳೆದ ರಮ್ಯಾ ಇದೀಗ ತನ್ನೆಲ್ಲಾ ಬಿಡಿ ಬಿಡಿಯಾದ ಇಪ್ಪತಾರು ಕವನಗಳನ್ನು ಒಗ್ಗೂಡಿಸಿ ‘ವಸಂತ ವೈಭವ’ ಹೆಸರನಡಿ ಪ್ರಥಮ ಕವನಸಂಕಲನ ಪ್ರಕಟಣೆಯಾಗುತ್ತಿ ರುವುದು ಅವಳಿಗೆ ಸಂತಸ ತಂದಿದೆ.ಈ ಕೃತಿ “ಶ್ರೀಮತಿ.ಗಿರಿಜಾದೇವಿ ಕರಿಬಸಯ್ಯ ಸ್ವಾಮಿ ಹಿರೇಮಠ ದತ್ತಿಪ್ರಶಸ್ತಿ”ಗೆ ಆಯ್ಕೆ ಯಾಗಿ ಪುಸ್ತಕರೂಪ ಪಡೆಯುತ್ತಿದೆ.ಇದು ಅಭಿಮಾನ ದ ಸಂಗತಿ. ವಿದ್ಯಾರ್ಥಿ ಜೀವನ ದಲ್ಲೇ ಇಂಥಹ ದೊಂದು ಸಂತಸದ ಗಳಿಗೆ ರಮ್ಯಳಿಗೆ ದೊರಕಿದ್ದು ಅವಳ ಭಾಗ್ಯ. ಈ ಕೃತಿಯಿಂದಾಗಿ ರಮ್ಯಾ ಬಾಲಾಗವಿ ಬಾಲಸಾಹಿತಿಗಳ ಪಟ್ಟಿಗೆ ಸೇರಿದಂತಾಯಿತು.

ದೊಡ್ಡವರು ಮಕ್ಕಳಿಗಾಗಿ ಬರೆದ ಕವಿತೆಗಳು ತಮ್ಮ ಬಾಲ್ಯವನ್ನು ನೆನಪಿಸಿಕೊಂಡು ಮಕ್ಕಳ ಮನಸ್ಸಿನೊಂದಿಗೆ ಒಂದಿಷ್ಟು ಅನುಭವದ ಮೂಸೆಯಲ್ಲಿ ರಚಿತವಾಗಿರುತ್ತವೆ. ಆದರೆ ಮಕ್ಕಳು ಬರೆದಾಗ ಸಹಜವಾಗಿ ತನಗನಿಸಿ ದ್ದನ್ನು ಕುತೂಹಲದಿಂದ ಬರೆದ ಕವನಗಳು ಕೇಳಲು ಚೆನ್ನವಾಗಿರುತ್ತವೆ. ಮಗುವಿನ ಮೊದಲ ತೊದಲು ಮಾತುಗಳಂತೆ.

ಇನ್ನು ರಮ್ಯಾ ಬರೆದ ಕವನಗಳತ್ತ ದೃಷ್ಟಿ ಹರಿಸಿ ದಾಗ ಗುರುಗಳನ್ನು ನೆನೆಯುವ,ಸಾಧನೆಗೆ ಅವರ ಪ್ರೇರಣೆ ‌ಅವಶ್ಯ ‌ ಎಂಬ ಭಾವನೆ ಹೊಂದಿರುವ ‘ಗುರುವಂದನೆ’ಕವನದೊಂದಿಗೆ ಈ ಕವನ ಸಂಕಲನ ಪ್ರಾರಂಭವಾಗುತ್ತದೆ. ಗುರುಗಳ ಹಾಗೆ ತಾನು ವಿದ್ಯಾರ್ಥಿ ಗಳ ಬಾಳನ್ನು ಬೆಳಗಿಸುವ ಶಿಕ್ಷಕಿಯಾಗಲು ಬಯ ಸುವ ‘ನನ್ನ ನೆಚ್ಚಿನ ವೃತ್ತಿ’ ಎನ್ನುವುದು ಈ ಸಂಕಲನದ ಕೊನೆಯ ಕವನವಾಗಿದೆ. ಮಗುವಿನ ಮನಸ್ಸಿಗೆ ತಕ್ಕಂತೆ ಕುಟುಂಬದಲ್ಲಿನ ತಾಯಿ, ತಂಗಿ, ತಮ್ಮ, ತನ್ನ ಪ್ರೀತಿಯ ತಾಣಗಳಾದ ಶಾಲೆ, ತರಗತಿ, ಸ್ನೇಹಿತರು, ಗುರುಗಳು ಇವರೆಲ್ಲಾ ಅಭಿಮಾನ ದಿಂದ, ಪ್ರೀತಿಯಿಂದ ಅಕ್ಷರ ರೂಪ ಪಡೆದು ರಮ್ಯಾಳ ಕವನಗಳಾಗಿವೆ. ಇವೆಲ್ಲವನ್ನು ಮೀರಿ ತಾಯಿ ನಾಡು, ದೇಶಪ್ರೇಮ, ಸೈನಿಕರ ಸೇವೆ, ನಿಸರ್ಗದ ಒಲುಮೆ ಉತ್ತಮ ಕವನಗಳಾಗಿ ಮೂಡಿಬಂದಿವೆ.‘ಹೆಣ್ಣಿನ ಬಾಳು’,‘ತಾಯಿಯ ಮಹತ್ವ’,‘ಅರಿಯೋ‌ ಓಮನುಜನೇ, ‘ನಿನ್ನ ತವಕ’ ಇವೆಲ್ಲಾ ಸಮಾಜವನ್ನು ಅವಲೋ ಕಿಸಿ ಅನುಭವಸ್ಥಳಂತೆ ಬರೆದ ಕವನಗಳು ಅಚ್ಚರಿ ಹುಟ್ಟಿಸುತ್ತವೆ. ನಾವು ಎಳೆಯರಿರಬಹುದು ನಮ್ಮ ಕವನಕ್ಕೆ ಎಳಸುತನ ಇಲ್ಲ. ನಮ್ಮಲ್ಲಿ ಹಲವಾರು ಆಲೋಚನೆಗಳಿರುತ್ತವೆ, ಪ್ರಶ್ನೆಗಳಿ ರುತ್ತವೆ ಎನ್ನುವ ಸಂವೇದನೆಗಳನ್ನು ರಮ್ಯಾಳ ಕವನಗಳಲ್ಲಿ ಕಾಣಬಹುದು.

‘ಹಾರುವಾಸೆ’ ಕವನದಲ್ಲಿ:

‘‘ಒಂದಿಲ್ಲಾ ಒಂದಿನಾ ಹಾರ್ತೀನಿ ಬಾನಿನಲ್ಲಿ ಮುಂದೆ ಬರಬೇಕು ನಾ, ಈ ಸಮಾಜದಲ್ಲಿ’

ಹಕ್ಕಿಯಂತೆ ಹಾರುವಿಕೆ ಎಂಬುದು ತಲೆ ಎತ್ತಿ, ಎತ್ತರದಲ್ಲಿ ಬಾಳು ನಡೆಸುವುದು ಎಂಬುದನ್ನು ಸೂಚಿಸುತ್ತದೆ. ಹೆಣ್ಣಿಲ್ಲದೆ ಜಗತ್ತಿಲ್ಲಾ, ಗಂಡು ಹೆಣ್ಣೆಂಬ ಬೇಧ ಬೇಡ,ಸಮಾನತೆ ಇರಲಿ ಎನ್ನುವ ಕಳಕಳಿಯನ್ನು ‘ಒಂದು ಹೆಣ್ಣಿನ ಬಾಳು’ ಕವನದ ಮೂಲಕ ಸಮಾಜವನ್ನು ಎಚ್ಚರಿಸು ತ್ತಾಳೆ. ರಮ್ಯಾ ತನ್ನನ್ನು ಬೆಳೆಸಿದ ಸಾಹಿತ್ಯ ಪರಿಷತ್ತನ್ನು ಮರೆಯದೇ ಕವನರೂಪ ದಲ್ಲಿ ನೆನಪಿಸಿಕೊಂಡಿದ್ದಾಳೆ.ತನ್ನ ಒಬ್ಬಂಟಿತನ ಕ್ಕೆ ಕಾರಣವನ್ನು ‘ನಾ ಹೀಗಿರಲು ಕಾರಣ’ ಕವನದ ಮೂಲಕ ಹೀಗೆ ಹೇಳುತ್ತಾಳೆ:

ನಾ ಸುಮ್ಮನಿರಲು ಕಾರಣ ತಿಳಿದುಕೊಳ್ಳಬೇಕು ನನ್ನೊಳಗೆ ನಾ ಅರೆದು ಕುಡಿಯಬೇಕು ನನ್ನೊಳಗೆ ನಾ ಆಗ ಸುಲಭವಾಗುತ್ತದೆ ನಡೆಸಲು ಜೀವನ

ಸಂತಸದ ಜೀವನಕ್ಕೆ ನಮ್ಮನ್ನು ನಾವೇ ಅವ ಲೋಕಿಸಿ ಕೊಳ್ಳಬೇಕು ಎನ್ನುವ ಪ್ರಬುದ್ಧತೆ ಯನ್ನು ಈ ಕವನದಲ್ಲಿ ಕಾಣಬಹುದು.

ಒಟ್ಟಾರೆ ವಸಂತ ವೈಭವದ ಕವನಗಳು ಓದುಗರ ಮನ ಗೆಲ್ಲುತ್ತವೆ. ಮಕ್ಕಳಲ್ಲಿ ಬರೆಯುವ ಪ್ರೇರಣೆ ಮೂಡಿಸುತ್ತವೆ. ರಮ್ಯಾ ತನ್ನ ವಯೋಮಾನಕ್ಕೆ, ಆಸಕ್ತಿಗೆ ತಕ್ಕಂತೆ ಕವನಗಳನ್ನು ರಚಿಸಿದ್ದಾಳೆ. ಇನ್ನು ಮುಂದೆ ಪ್ರಾಸಕ್ಕೆ ಕಟಿ ಬೀಳದೆ ಸಹಜ ವಾಗಿ ಅರಳುವ ಹೂವಿನಂತೆ ಕವನವನ್ನು ಸಹಜವಾಗಿ ರಚಿಸು ವಂತಾಗಲಿ. ಇತ್ತೀಚಿಗೆ ಹೊಸಬಗೆಯ ಕವನ, ಕಥೆ, ಕಾದಂಬರಿ ನಾಟಕ ಕೃತಿಗಳು ಪ್ರಕಟವಾ ಗುತ್ತವೆ. ಅವು ರಮ್ಯಾಳ ಓದಿಗೆ ದೊರಕುವಂ ತಾಗಲಿ,ಜ್ಞಾನ ವಿಸ್ತಾರ ಹೆಚ್ಚಾಗಲಿ ಅಂದಾಗ ಹೊಸ ಆಲೋಚನೆಗಳಿಂದ ವೈವಿಧ್ಯಮಯ ಕವನಗಳನ್ನು ರಚಿಸಬಹುದು. ಅವಳು ಕವನಕ್ಕೆ ಮಾತ್ರ ಸೀಮಿತವಾಗದೇ ಕಥೆಗಳನ್ನು ಕೂಡ ರಚಿಸುವತ್ತ ಗಮನಹರಿಸಲಿ, ಅಂದಾಗ ಬರಹದಲ್ಲಿ ವೈವಿಧ್ಯತೆ ಇರುತ್ತದೆ.

ಓದುವ ಜೊತೆಯಲ್ಲಿ ಬರಹವನ್ನು ಗಂಭೀರ ವಾಗಿ ಮುಂದುವರೆಸಿದಲ್ಲಿ ಖಂಡಿತವಾಗಿ ಅವಳಿಗೆ ಉತ್ತಮ ಭವಿಷ್ಯವಿದೆ. ಒಳ್ಳೆಯ ಬರಹಗಾರ್ತಿ ಯಾಗಿ ನಾಡಿಗೊಂದು ಗೌರವ ತರಬಲ್ಲಳು. ಇಂಥಹ ಅನೇಕ ಬಾಲಪ್ರತಿಭೆಗಳ ಪೋಷಣೆಗಾಗಿ ರಾಯಚೂರ ಮಕ್ಕಳಸಾಹಿತ್ಯ ಜಿಲ್ಲಾ ಘಟಕ ಶ್ರಮಿಸುತ್ತಿದೆ. ಅವರ ಶ್ರಮ ಸಾರ್ಥಕತೆ ಪಡೆದಿದೆ.ತನ್ನಲ್ಲಿರುವ ಪ್ರತಿಭೆಯನ್ನ ರಮ್ಯಾ ಪೋಷಿಸಿಕೊಂಡು ಹೋಗುತ್ತಿದ್ದಾಳೆ. ಈ ಗುಣ ವಿದ್ಯಾರ್ಥಿ ಬಳಗಕ್ಕೆ ಮಾದರಿಯಾ ಗಿದೆ. ಹೊಸ ಕೃತಿ ಬರುವಿಕೆಗೆ ಕಾರಣರಾಗಿರುವ ಶಂಕರದೇವರು ಹಿರೇಮಠ ಹಾಗೂ ಕವಯಿತ್ರಿ ರಮ್ಯಾ ಬಾಲಾಗವಿ ಇರ್ವರಿಗೂ ಶುಭ ಕೋರಿ ಅಭಿನಂದಿಸುವೆ.

✍️ಶ್ರೀವೈ.ಜಿ.ಭಗವತಿ
ಮಕ್ಕಳ ಸಾಹಿತಿಗಳು, ಕಲಘಟಗಿ ಜಿ:ಧಾರವಾಡ