ಹೊಸ‌ ಸಂಖ್ಯೆ-೮

ಮುಡಿ ಬಿಟ್ಟವಳು ಮರ್ಯಾದೆ ಬಿಟ್ಟವಳು
ನುಡಿ ಬಿಟ್ಟವಳು ನಾಚಿಕೆಗೆಟ್ಟವಳು
ಪತಿಯ ಬಿಟ್ಟವಳು ಲೋಕದೆದುರು ರಂಡೆ
ಪತಿಯ ನುಂಗಿಕೊಂಡವಳು ಮುಂಡೆ
ಭಾವನೆಯನು ತೋರೆ ಲಜ್ಜೆ ಬಿಟ್ಟವಳು
ಸಂಸಾರವನು ಬಿಟ್ಟವಳು ಮೂರು ಬಿಟ್ಟವಳು
ಎಲ್ಲ ಕಟ್ಟಿಕೊಂಡು ಬಿಡಬಿಟ್ಟಿ ಮಾತುಗಳಾಡುತಿರುವವನು
ಕಟ್ಟಿಕೊಂಡಿರುವವಳ ಕುಟುಂಬಕ್ಕೆ ಬಿಟ್ಟು ಸದಾ ಸುಖವಾಗಿರುವನು
ಬಿಟ್ಟವಳು ಬಿಟ್ಟವಳೆಂದು ಸೊಟ್ಟ ಮನದಲಿ
ಅಂದಾಡುವ ಮಂದಿ ನಿಜಕ್ಕೂ ನಾಲಿಗೆ ಸತ್ತವರು
ಅಲ್ಲವೇ ಶ್ವೇತಪ್ರಿಯ ಗುರುವೆ?

ಹೊಸ ಸಂಖ್ಯೆ-೯

ದೇವನೆಂಬೋ ಕುಂಬಾರ ಮಣ್ಣಮುದ್ದೆಯ ಮಿದ್ದಿ ನಾದಿ
ಮನಸ್ಸು ತೋರಿದಂತೆ ಆಕಾರಕೊಟ್ಟು ಹೆಣ್ಣು ಗಂಡೆಂದ
ಮುಡಿ ಮೊಲೆ ಯೋನಿಯ ತೀಡಿ ರೂಪಾದ ರೂಪುಕೊಟ್ಟ
ತೋಳು ತೊಡೆ ನಿಮಿರಿ ಗುಡುಗುವ ಅಂಗಾಂಗಕ್ಕೆ ಮೀಸೆಯಿಟ್ಟ
ಮಣ್ಣ ಮುದ್ದೆ ಒಂದೇ ಆದಮೇಲೆ
ಅಂಗ ದೃಷ್ಟಿಯಿಂದ ಲಿಂಗ ಭೇದವೆಂದರೆ ಹೇಗಯ್ಯಾ?
ಮಣ್ಣಿನ ಗುಣಭಾವ ಒಂದರೊಳಗೊಂದಿರುವಾಗ
ದೇವ ಮಾಡಿದ ದೇಹವ ನೋಡಿ ಹೆಣ್ಣು ಗಂಡೆಂದು ಹೆಸರಿಟ್ಟರೆ
ಹೆಣ್ಣು ಗಂಡಾದ ಮಣ್ಣ ಮುದ್ದೆಯೂ ಸುಳ್ಳು
ಅದ ಮಾಡಿದ ದೇವನೂ ಸುಳ್ಳು
ಎಲ್ಲವೂ ಸುಳ್ಳಾದ ಮೇಲೆ
ಮೆರೆವ ಲಿಂಗ ವೈಭೋಗವು ಬರಿಯ ಜಾಲಿಯ ಮುಳ್ಳು
ಅಲ್ಲವೇ ಶ್ವೇತಪ್ರಿಯ ಗುರುವೆ?

ಹೊಸ ಸಂಖ್ಯೆ-೧೦

ಕಲ್ಪವೃಕ್ಷಕ್ಕೆ ಕಲ್ಪವಲ್ಲಿ ಎಂದರು,
ಎಳೆನೀರ ಕೆಡವಿ ಗಟ ಗಟ ಕುಡಿದರು.
ಇಳೆಯನ್ನು ಜೀವನ್ಮುಖಿ ಅಂದರು,
ಅಗದಗೆದು ಗರ್ಭವನೇ ನುಂಗಿಬಿಟ್ಟರು.
ಹಸುವಿಗೆ ಕಾಮಧೇನು ಎಂದು ಕೈ ಮುಗಿದು, ಕರುಳು ಕೆಚ್ಚಲನ್ನು ಮಾಯ ಮಾಡಿಬಿಟ್ಟರು.
ಹೆಣ್ಣನ್ನು ಶಕ್ತಿ ಮೂಲ ಆದಿಶಕ್ತಿ ಎಂದು,
ಎಲ್ಲ ಶಕ್ತಿಗಳ ಕಸಿದು ಮೂಲೆಗೆ ಕೂರಿಸಿಬಿಟ್ಟರು ಶ್ವೇತಪ್ರಿಯ ಗುರುವೆ.

ಹೊಸ ಸಂಖ್ಯೆ-೧೧

ಸೋಲುವುದೆಂದರೆ ಸುಲಭದ ಮಾತಲ್ಲ ಸಂಸಾರದೊಳಗೆ
ಅವಗೆದ್ದನೆಂದು ಇವಳು, ಈಕೆ ಸೋತಳೆಂದು ಅವನೆಂದರೆ
ನಿತ್ಯಸಾಂಗತ್ಯಕ್ಕೆ ಬಾಳೇ ಬಲಿ
ಗೆಲ್ಲುವುದು, ಗೆದ್ದು ಬೀಗುವುದು
ಬೀಗಿ, ಪರಾಕು ಕೂಗಿ ಪತಾಕೆ ಹಾರಿಸಿದರೆ
ಬದುಕೆಲ್ಲಾ ಸುಳ್ಳು ಜೊಳ್ಳು
ಕಣ್ಣಿಗೆ ರೆಪ್ಪೆ, ರೆಪ್ಪೆಗೆ ಕಣ್ಣು ಸೋತಂತೆ ಸೋತುಬಿಟ್ಟರೆ
ಸೋಲಿಗೂ ಎಷ್ಟೊಂದು ಅರ್ಥ
ಅಲ್ಲವೇ ಶ್ವೇತಪ್ರಿಯ ಗುರುವೆ?

ಡಾ.ಬೇಲೂರು ರಘುನಂದನ್ 
ಕನ್ನಡ ಸಹಾಯಕ ಪ್ರಾಧ್ಯಾಪಕರು
ಸ.ಪ್ರ.ದ.ಕಾಲೇಜು,ವಿಜಯನಗರ ಬೆಂಗಳೂರು