ನೋಡಿದ ನೋಟವದು ನನಗಲ್ಲ ಎಂದು ಗೊತ್ತಾಗಲಿಲ್ಲ
ಕುಡಿನೋಟದ ಹಿಂದೆ ಕಪಟವಿದೆ ಎಂದು ಗೊತ್ತಾಗಲಿಲ್ಲ

ಪಿಸುಗುಡು ಮಾತಿನಲಿ ಅನುರಾಗವಿಲ್ಲ ಎಂದು ಗೊತ್ತಾಗಲಿಲ್ಲ
ಒಡಕು ಧ್ವನಿಯಲ್ಲಿಯೂ ಲಾಲಿತ್ಯವಿದೆ ಎಂದು ಗೊತ್ತಾಗಲಿಲ್ಲ

ಚಾಚಿದ ಕೈಗಳಿಗೆಲ್ಲವೂ ಸಿಗವುದಿಲ್ಲ ಎಂದು ಗೊತ್ತಾಗಲಿಲ್ಲ
ಕಂಡ ಕನಸುಗಳೆಲ್ಲ ನನಸಾಗುವದಿಲ್ಲ ಎಂದು ಗೊತ್ತಾಗಲಿಲ್ಲ

ಹರಿದ ಬೆವರ ಹನಿಯೆಲ್ಲ ಶ್ರಮದಿಂದಲ್ಲ ಎಂದು ಗೊತ್ತಾಗಲಿಲ್ಲ
ಒಂದೇ ವರ್ಣದ ರಕ್ತದಲ್ಲಿ ಭೇದಭಾವವಿದೆ ಎಂದು ಗೊತ್ತಾಗಲಿಲ್ಲ

ತಾಳ ಹಾಕುವ ಹೃದಯವೂ ಕಲ್ಲಾಗುವದು ಎಂದು ಗೊತ್ತಾಗಲಿಲ್ಲ
ಕೈಮುಗಿದ ಕರಗಳ ಹಿಂದೆ ಕತ್ತಿಯಿದೆ ಎಂದು ಗೊತ್ತಾಗಲಿಲ್ಲ

ಅನಿಸಿಕೆ ಹರಡಿದ ಅಕ್ಷರಗಳು ಭಾವಕೂಟ ಎಂದು ಗೊತ್ತಾಗಲಿಲ್ಲ
ಇಂಪಾಗಿ ಹಾಡಿದ ಕವಿತೆಯು ಚರಮಗೀತೆ ಎಂದು ಗೊತ್ತಾಗಲಿಲ್ಲ

ಬಣ್ಣ ಬಣ್ಣದ ಬದುಕಿನಾಟದಲಿ ನಿಜ ಬಣ್ಣವೇನು ಎಂದು ಗೊತ್ತಾಗಲಿಲ್ಲ
ಪ್ರೀತಿಪ್ರೇಮದಲಿ ತಾಯಿ ಮಮತೆಗೆ ಸಾಟಿಯಿಲ್ಲ ಎಂದು ಗೊತ್ತಾಗಲಿಲ್ಲ

  ಶ್ರೀಮತಿ.ರೇಣುಕಾ ಸಂತಬಾ
ಹುಬ್ಬಳ್ಳಿ