ನಿಜ ನಿನ್ನ ಕಣ್ಣ ದಾಟಲ್ಲಿ ಸಿಲುಕಿದ್ದೇನೆ
ಜಗದ ಜಂತಿಯೊಂದು ಬಿಡದೆ
ನೆತ್ತಿಯ ಕಾಯುವಾಗಲು‌
ರೂಹಿನ ಚೂರೊಂದು
ಅರಿವಿಗೆ ಬಾರದಂತೆ
ನಿನ್ನ ಹೆಸರನ್ನೆ ಧೇನಿಸುತ್ತದೆ

ಸುತ್ತ ಸುಳಿಯುತ್ತದೆ
ಮರುಕದ ಗಾಳಿಯೊಂದು
ಆತ್ಮ ಚೂರಾಗಿಸಿಕೊಂಡ ಕತೆಯ ಹೇಳುತ್ತ ಬಿದ್ದಬೆಳದಿಂಗಳಲ್ಲಿ ನಕ್ಷತ್ರಗಳು ಬಿಕ್ಕುತ್ತವೆ ಮೈಸುಟ್ಟುಕೊಂಡ ಕ್ಷಣಗಳಿಗೆ ಸಾಕ್ಷ್ಯ ನೀಡುತ್ತ

ನಿಜ ಮಾಧವ,
ನನಗೀಗಲೂ ತಿಳಿದಿಲ್ಲ
ನಿನ್ನ ಸೇರುವ ಬಗೆ ಹೇಗೆಂದು       
ಮಧುವನದಲ್ಲಿ   ಜೊತೆಯಾಗಿ
ಹೆಸರ ಗೀಚುವ ಪರಿ ಯಾವುದೆಂದು

ಉರಿದ ಕನಸಿನ ಚೂರು                                   ಬಿಗಿದ ಸರಪಳಿ ಸಾಲು
ಹೆಜ್ಜೆಗಳ ಹಿಡಿದಿಡಿದು ಕೊಲ್ಲುವಾಗ           
ಹೇಗೆ ಬರಲಿ ಹೇಳು ನಿನ್ನೆಡೆಗೆ

ಒಂದು ಆಸೆಯ ಕಿರಣ
ಸಣ್ಣ ಬೆಳಕಿನ ನೂಲು
ಯಾವುದನ್ನಾದರೂ ನನ್ನ‌ ಸಲುವಾಗಿ
ನೇಯ್ದುಕೊಡು       
ಮುಗಿಯದ ರಾತ್ರಿಗಳ
ಕೊನೆಗೊಳಿಸುತ್ತೇನೆ

✍️ದೀಪ್ತಿ ಭದ್ರಾವತಿ
ಕವಯಿತ್ರಿ,‌ಕತೆಗಾರ್ತಿ
ಸದಸ್ಯರು, ಕರ್ನಾಟಕ ಸಾಹಿತ್ಯ ಅಕಾಡೆಮಿ
ಬೆಂಗಳೂರು