ಅನುಪಮ ಸಾಧಕರು ಇತ್ತೀಚಿನ ವರ್ಷಗಳಲ್ಲಿ ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಪ್ರೊ.ಸುರೇಶ ಗುದಗನವರ ಅವರ ವಿಭಿನ್ನ ಬರಹಗಳನ್ನುನೀವು ನೋಡಿರಬಹುದು. ಅದರಲ್ಲೂ ವಿಶ್ವವಾಣಿ ದಿನ ಪತ್ರಿಕೆ, ಕುಂದಾನಗರಿ ಬೆಳಗಾವಿ, ಲೋಕದರ್ಶನ ಬೆಳಗಾವಿ ಮೊದಲಾದ ದಿನಪತ್ರಿಕೆಗಳಲ್ಲಿ ವಾರ ದಲ್ಲಿ ಒಂದಾದರೂ ಲೇಖನ ಇದ್ದೇ ಇರುತ್ತದೆ. ನನಗೆ ಗುರುಗಳ ಈಬರವಣಿಗೆ ಕಂಡು ಆಶ್ಚರ್ಯ. ಈ ಮೊದಲು ಈ ರೀತಿ ಬರೆಯುತ್ತಿರಲಿಲ್ಲ. ಅದು ಈಗ ಹೇಗೆ ಸಾಧ್ಯವಾಗುತ್ತಿದೆ.? ಎಂದಾಗ, “ಏನಿಲ್ಲ, ನನಗೂ ಬರವಣಿಗೆಯ ರುಚಿ ಹತ್ತಿದೆ” ಎಂದು ಮುಗುಳ್ನಕ್ಕರು. ನನ್ನ ಮತ್ತು ಗುರುಗಳ ಪರಿಚಯ. ಹತ್ತು ವರ್ಷಗಳಷ್ಟು ಹಿಂದಿನದು. ಅವರು ರಾಮದುರ್ಗ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಸಂದರ್ಭ. ಕ.ಸಾ.ಪ ವತಿಯಿಂದ ಚಂದರಗಿ ಕ್ರೀಡಾ ಶಾಲೆಯಲ್ಲಿ ಕವಿಗೋಷ್ಠಿ ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಪರಿಚಯವಾಯಿತು. ನಂತರ ನಾಗ ಕಲಾಲ ಅವರ ಶಾಲೆಯಲ್ಲಿ ಕಾವ್ಯಕಮ್ಮಟ ಸಂದರ್ಭದಲ್ಲಿ ನಮ್ಮ ಬಾಂಧವ್ಯ ಬರವಣಿಗೆಯ ಮೂಲಕ ಗಟ್ಟಿಗೊಂಡಿತು. ನಂತರ ನಾನು ಕನ್ನಡ ಪ್ರಭ ದಿನಪತ್ರಿಕೆಗೆ ಬರಹಗಳನ್ನು ಬರೆಯುವಾಗ ರಾಮದುರ್ಗ ತಾಲೂಕಿನ ಹಲವು ಸ್ಥಳಗಳನ್ನು ಸುತ್ತಾಡಬೇಕು ಎಂದಾಗ ನಾನು ತಿಳಿಸಿದ ದಿನ ತಮ್ಮ ವೃತ್ತಿಗೆ ಒಂದು ದಿನ ರಜೆ ಹಾಕಿ ನನ್ನನ್ನು ತಮ್ಮೊಂದಿಗೆ ಶಬರಿಕೊಳ್ಳ ಕಿಲ್ಲಾ ತೊರಗಲ್ ಸ್ಥಳಗಳಿಗೆ ಕರೆದುಕೊಂಡು ಹೋಗಿ ಅವುಗಳ ಬರಹಕ್ಕೆ ಹಲವು ಮಾಹಿತಿ ಒದಗಿಸಿದರು. ಯಾಕೆ ಈ ವಿವರಣೆ ಎಂದರೆ ಅವರ ಮೊಟ್ಟ ಮೊದಲ ಕೃತಿಯಾದ “ಅನುಪಮ ಸಾಧಕರು”.
ಇತ್ತೀಚಿಗೆ ಲಾಕಡೌನ್ ಸಂದರ್ಭದಲ್ಲಿ ಗುರುಗಳಿಗೆ ಕರೆ ಮಾಡಿದಾಗ ತಮ್ಮ ಅಂಕಣ ಬರಹಗಳ ಜೊತೆಗೆ ಚೊಚ್ಚಲು ಕೃತಿ ಹೊರಬಂದಿದೆ. ಜುಲೈ ತಿಂಗಳಲ್ಲಿ ಬಿಡುಗಡೆ ಎಂದರು. ಜೊತೆಗೆ ಅದರ ಒಂದು ಪ್ರತಿ ನನಗೆ ಅಂಚೆ ಮೂಲಕ ಕಳಿಸಿದರು. ಕೃತಿ ತಲುಪುತ್ತಲೇ ಅದರ ಮುಖಪುಟ ವಿನ್ಯಾಸ ಬಹಳ ಗಮನ ಸೆಳೆಯಿತು. ಅಷ್ಟೇ ಅಲ್ಲ ಒಳ ಪುಟಗಳು ಕೂಡ ಗುರುಗಳ ಬರಹಕ್ಕೆ ಉತ್ತಮ ವಿನ್ಯಾಸ. ಒದಗಿಸಿವೆ. ಹೀಗಾಗಿ ಇದೊಂದು ಮಹತ್ವದ ಕೃತಿ ಎನಿಸಿತು. ಇಲ್ಲಿರುವ ಎಲ್ಲ ಬರಹಗಳೂ ಹೆಣ್ಣಿನ ಸಂಘರ್ಷದ ಬದುಕಿನಲ್ಲಿ ತಮ್ಮದೇ ಆದ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಇತರರಿಗೆ ಮಾದರಿಯಾಗಿರುವ ಮಹಿಳೆಯರ ಬದುಕನ್ನು ತೆರೆದಿಟ್ಟಿವೆ. ಒಟ್ಟು 60 ಸಾಧಕಿಯರ ಜೀವನ ಅವರ ಅಪೂರ್ವ ಸಾಧನೆಗಳ ವಿವರ ಗಳು ಈ ಕೃತಿಯಲ್ಲಿ ಅಡಕವಾಗಿವೆ.

ಪ್ರಸ್ತುತ ಮಹಾರಾಷ್ಟ್ರದ ಅನಾಥರ ಮಾತೆ ಸಿಂಧೂತಾಯಿ, ತರಕಾರಿ ಮಾರಿ ಬಡವರಿಗೆ ಆಸ್ಪತ್ರೆ ನಿರ್ಮಿಸಿ ಸಂಕಲ್ಪವನ್ನು ಈಡೇರಿಸಿಕೊಂಡ ಸುಭಾಷಿಣಿ ಮಿಸ್ತ್ರಿ, ಆಂಧ್ರಪ್ರದೇಶದ ವೇಲಂ ಕಾಡು ರುದ್ರ ಭೂಮಿಯನ್ನು ಸುಧಾರಿಸುವುದ ರೊಂದಿಗೆ ಅನಾಥರ ಶವಸಂಸ್ಕಾರವನ್ನು ನೆರ ವೇರಿಸುತ್ತ ಸ್ಮಶಾನ ಕಾಯುವ ಕಾಯಕದ ಪ್ರವೀಣಾ ಸೋಲೋಮನ್, ಬಡತನದ ಕುಲುಮೆಯಲ್ಲಿ ಬೇಯುತ್ತಾ ನಾಗರೀಕ ಸೇವಾ ಪರೀಕ್ಷೆಯಲ್ಲಿ ಯಶಸ್ಸು ಕಂಡು ಸಮಾಜದ ಅಜ್ಞಾನ, ಬಡತನ,ಮೌಢ್ಯವನ್ನು ತೊಡೆವ ಛಲ ಹೊತ್ತ ಉತ್ತರಪ್ರದೇಶದ ಇಲ್ಮಾ ಅಪೋಚ್, ಅಂಧ ಮಕ್ಕಳ ಬಾಳಿಗೆ ಕಣ್ಣ ಬೆಳಕಾದ ಅನಕ್ಷರಸ್ಥೆ ಕರ್ನಾಟಕದ ತುಳಸಮ್ಮ ಕೆಲೂರ, ಕೈಗಳಿಲ್ಲದ ಮಹಿಳಾ ವಿಮಾನ ಚಾಲಕಿ ಅಮೇರಿಕಾದ ಜೆಸ್ಸಿಕಾ ಕಾಕ್ಸ, ಉಗ್ರರ ಅಟ್ಟ ಹಾಸವನ್ನು ಮಟ್ಟಹಾಕಿ ಮಕ್ಕಳನ್ನು ಮಹಿಳೆಯ ರನ್ನು ರಕ್ಷಿಸುತ್ತಿರುವ ದಿಟ್ಟೆ ಸಿರಿಯಾದ ಶಾಂತಿ ಧೂತೆ ನಾದಿಯಾ ಮುರಾದ್,ಅಂಗವೈಕಲ್ಯವನ್ನ ಮೆಟ್ಟಿನಿಂತು ನಾಗರಿಕಾ ಸೇವಾ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ ರಾಜಸ್ಥಾನದ ಉಮ್ಮಾಳ ಖೇರ್,

ಭಾರತೀಯ ವಾಯುಪಡೆಯ ಪೈಲೆಟ್ ಆಗಿ ತನ್ನ ಕೌಶಲ್ಯ ಮೆರೆಯುತ್ತಿರುವ ಮಧ್ಯಪ್ರದೇಶದ ಚಹಾ ವ್ಯಾಪಾರಿಯ ಮಗಳು ಅಂಚಲ್ ಗಂಗ ವಾಲ್, ಐ.ಎ.ಎಸ್ ಪರೀಕ್ಷೆ ಉತ್ತೀರ್ಣಳಾದ ಕೇರಳದ ಬುಡಕಟ್ಟು ಸಮುದಾಯದ ಪ್ರತಿಭೆ ಶ್ರೀಧನ್ಯಾ.

ಭಾರತೀಯ ಮಹಿಳಾ ಸೇನಾ ಮೇಜರ್ ಹುದ್ದೆಯನ್ನು ಅಲಂಕರಿಸಿರುವ ಅಭಿಯಂತರೆ ಸುಮನ್ ಗವಾನಿ, ಪರಿಸರ ತಜ್ಞೆ ಡಾ.ಕೃತಿ ಕಾರಂತ,

ಕೈಗಳಿಲ್ಲದ್ದರಿಂದ ಪಾದಗಳಿಂದ ಬರೆವ ವಿಶೇಷ ಪ್ರವೀಣೆ ದೇವಿಕಾ, ಬೆಂಕಿಯಲ್ಲಿ ಅರಳಿದ ಹೂ ಮಂಗಳಮುಖಿ ಮಂಜಮ್ಮ, ಮಲಪ್ರಭಾ ನದಿಯ ನೀರು ಸ್ವಚ್ಚತೆಗಾಗಿ ಹೋರಾಡುತ್ತಿರುವ ಡಾ.ಪೂರ್ಣೀಮಾ ಗೌರೋಜಿ, ಕನ್ನಡ ರಂಗ ಭೂಮಿಯ ಅಪೂರ್ವ ಕಲಾವಿದೆ ಮಾಲತಿಶ್ರೀ, ಅನುಪಮ ಸಾಹಿತಿಗಳಾದ ಡಾ.ಗುರುದೇವಿ ಹುಲೆಪ್ಪನವರಮಠ, ಬಹುಮುಖ ವ್ಯಕ್ತಿತ್ವದ ಪ್ರಾಧ್ಯಾಪಕಿಯಾದ ಡಾ.ಮೈತ್ರೇಯಣಿ ಗದಿಗೆಪ್ಪಗೌಡರ, ಅಪರೂಪದ ಸಂಶೋಧಕಿ ಲಕ್ಷ್ಮೀಪ್ರಸಾದ್, ಆಯುರ್ವೇದ ಆಹಾರ ಉತ್ಪನ್ನಗಳ ತಯಾರಕಿ ಮತ್ತು ಸಂರಕ್ಷಕಿ ರಾಮದುರ್ಗದ ಅಶ್ವಿನಿ ಸರದೇಶಪಾಂಡೆ, ಯುವ ಮಹಿಳಾಉದ್ಯಮಿ ಅಪೂರ್ವ ಬಜಾಜ್ ಸಾವಯವಕೃಷಿ ತಜ್ಞೆ ಲಕ್ಷ್ಮೀ ಲೋಕೂರ, ಕೊನೆಯ ಬರಹ ಪಾರ್ವತಿ ಪಿಟಗಿ ಹೀಗೆ ಒಟ್ಟು ಅರವತ್ತು ಸಾಧಕ ಮಹಿಳೆಯರ ಬದುಕು ಈ ಕೃತಿಯಲ್ಲಿ ಮೂಡಿ ಬಂದಿದೆ. ಅಪೂರ್ವ ಬಜಾಜ್
ದೇಶದೊಳಗಿನ ಸಾಧಕರಿಂದ ಹಿಡಿದು ಜಾಗತಿಕ ಮಟ್ಟದ ಮಹಿಳಾ ಸಾಧಕಿಯರ ಜೊತೆಗೆ ಕರ್ನಾಟಕದ ಹಾಗೂ ನಮ್ಮ ಬೆಳಗಾವಿ, ಧಾರವಾಡ ಹುಬ್ಬಳ್ಳಿ ಹೀಗೆ ಅಕ್ಕಪಕ್ಕದಲ್ಲಿರುವ ಮಹಿಳಾ ಸಾಧಕಿಯರನ್ನೊಳಗೊಂಡಂತೆ ವಿವಿಧ ಸಾಧಕಿಯರ ಪರಿಚಯ ಮೂಡಿಬಂದಿದೆ. ವಿಕಲಾಂಗೆ, ಮಂಗಳಮುಖಿ, ಬುಡಕಟ್ಟು ಹೋರಾಟಗಾರ್ತಿ, ಎಚ್.ಆಯ್.ವ್ಹಿ. ಸೋಂಕಿತೆ, ತರಕಾರಿಮಾರಿ ಬದುಕು ಕಟ್ಟಿಕೊಂಡ ಮಹಿಳೆ, ಸಾಬೂನು ತಯಾರಿಕೆಯಲ್ಲಿ ಬದುಕುಕಟ್ಟಿಕೊಂಡ ಮಹಿಳೆ, ಸರಕಾರಿ ಹುದ್ದೆಯಲ್ಲಿದ್ದು ಸಾಧಕರು, ರಂಗಭೂಮಿ ಸಂಗೀತ ಕಲೆ ಹೀಗೆ ವೈವಿಧ್ಯಮಯ ಕ್ಷೇತ್ರಗಳ ಮಹಿಳಾ ಸಾಧಕರ ಬದುಕು ಇಲ್ಲಿದೆ. ಇಲ್ಲಿನ ಎಲ್ಲ ಬರಹಗಳು ನಾಡಿನ ವಿವಿಧ ಪತ್ರಿಕೆ ಗಳಲ್ಲಿ ಪ್ರಕಟಗೊಂಡಿವೆ. ಈಪುಸ್ತಕದ ಇನ್ನೊಂದು ವಿಶೇಷವೆಂದರೆ ಪ್ರತಿ ಸಾಧಕ ಮಹಿಳೆಯರ ಲೇಖನದಲ್ಲಿ ಅವರ ಭಾವಚಿತ್ರ ವೈಶಿಷ್ಟ್ಯರೂಪ ದಲ್ಲಿ ಅಳವಡಿಸಿರುವುದು. ಮುದ್ರಣದ ತಂತ್ರ ಜ್ಞಾನಕ್ಕೆ ಹಿಡಿದ ಕೈಗನ್ನಡಿ. ಭಾವಸಿಂಚನ ಪ್ರಕಾ ಶನ, ಕುಣಿಗಲ್ ತುಮಕೂರ ಜಿಲ್ಲೆ ಇವರಿಗೆ ಹ್ಯಾಟ್ಸಪ್ ಹೇಳಲೇಬೇಕು, ಅಷ್ಟೊಂದು ಉತ್ತಮ ಗುಣಮಟ್ಟದ ಮುದ್ರಣವನ್ನು ಅವರು ಮಾಡಿದ್ದು ಪುಸ್ತಕ ಕೈಯಲ್ಲಿ ಹಿಡಿದ ತಕ್ಷಣ ಪ್ರತಿ ಬರಹವನ್ನು ಓದಲೇಬೇಕು ಎಂಬ ಆಕರ್ಷಕ ಮುದ್ರಣ ವಿನ್ಯಾಸ ಈ ಕೃತಿ ಒಳಗೊಂಡಿದೆ. ಈ ಕೃತಿಯ ಮುನ್ನುಡಿಯನ್ನು ಗುರುಮಾತೆಯಾದ ಡಾ.ಗುರುದೇವಿ ಹುಲೆಪ್ಪನವರಮಠ ತುಂಬ ಅರ್ಥಪೂರ್ಣವಾಗಿ ಬರೆದಿದ್ದು, ಅವರ ಪರಿಚ ಯಾತ್ಮಕ ಬರಹವನ್ನು ಕೂಡ ಈ ಕೃತಿಯು ಒಳಗೊಂಡಿರುವುದು ವಿಶೇಷ. ಕೊನೆಯ ರಕ್ಷಾ ಪುಟದಲ್ಲಿ ಬೆನ್ನುಡಿಯನ್ನು ಸತೀಶ ಕುಲಕರ್ಣಿಯ ವರು ಕೃತಿಯ ಹೂರಣವನ್ನು ಪುಟ್ಟದಾಗಿ ದಾಖಲಿಸಿದ್ದು ಮೆರಗನ್ನು ನೀಡಿದೆ. ಇಲ್ಲಿನ ಬಹುತೇಕ ಸಾಧಕ ಮಹಿಳೆಯರನ್ನುತಾವು ಕರೆ ಮಾಡಿ ಪ್ರಶಂಸೆ ವ್ಯಕ್ತಪಡಿಸಲು ಅನುಕೂಲವಾಗ ಲೆಂದು ಅವರ ಸಂಪರ್ಕ ಸಂಖ್ಯೆಯನ್ನು ಕೂಡ ಅವರ ಬರಹಗಳ ಕೊನೆಯಲ್ಲಿ ನೀಡಿರುವುದು ವಿಶೇಷ. ಹೀಗೆ ಹತ್ತು ಹಲವು ವಿಶೇಷಗಳನ್ನು ಹೊತ್ತ ಮಹಿಳಾ ಕೇಂದ್ರಿತ ಬರಹಗಳನ್ನು ನಮ್ಮ ಬದುಕಿನ ಮೇಲೆ ಪರಿಣಾಮ ಬೀರುವಂತಿವೆ.
ಸದ್ಯ ರಾಮದುರ್ಗದಲ್ಲಿರುವ ಪ್ರೊ.ಗುದಗನವರ ತಮ್ಮ ಸ್ವಗೃಹ ‘ಅನುಪಮಾ’ ದಲ್ಲಿ ವಾಸವಾಗಿ ರುವ ಇವರು ಇದೇ ಜುಲೈ 15, 2021 ರಂದು ತಮ್ಮ ಸೇವೆಯಿಂದ ನಿವೃತ್ತರಾಗಲಿದ್ದು, ವರಪತ್ನಿ ಡಾ.ರಾಜಶ್ರೀ ಗುದಗನವರ ಸೇವೆ ಇನ್ನೂ ಇರುವು ದರಿಂದ ರಾಮದುರ್ಗದಲ್ಲಿ ವಾಸ. ಲೋಕದರ್ಶನ ದಿನಪತ್ರಿಕೆಗೆ ಪ್ರತಿಬುಧವಾರ “ಕನ್ನಡ ದೀಪಗಳು” ಅಂಕಣಕಾರರಾಗಿ ಅಂಕಣ ಬರಹದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ, ‘ಅನುಪಮ ಸಾಧಕರು’ ಎಂಬ ಕೃತಿಯನ್ನು ಹೊರತಂದಿದ್ದು ಅದು ಕೂಡ ಜುಲೈ 15 ರಂದೇ ನಿವೃತ್ತಿಯ ದಿನ ಬಿಡುಗಡೆಗೊ ಳ್ಳುತ್ತಿರುವುದು ಸಂತಸದ ಸಂಗತಿ. ಗುರುಗಳು ಈ ಹಿಂದೆ ರಾಮದುರ್ಗ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ (ಮೋಹನ್ ಪಾಟೀಲ ಜಿಲ್ಲಾ ಅಧ್ಯಕ್ಷರಾಗಿದ್ದ ಅವಧಿ) ರಾಮದುರ್ಗದಲ್ಲಿ ಹತ್ತು ಹಲವು ರಚನಾತ್ಮಕ ಚಟುವಟಿಕೆಗಳನ್ನು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಂಘಟಿಸಿ ದ್ದರು.
ಅಷ್ಟೇ ಅಲ್ಲ ಅನುಪಮ ಕಲಾ ಸಂಸ್ಥೆಯನ್ನು ಕಟ್ಟಿ ಗ್ರಾಮೀಣ ಪ್ರದೇಶದ ಯುವ ಜನರಲ್ಲಿ ಭರತ ನಾಟ್ಯ, ಸಂಗೀತ ಕಲೆಯಲ್ಲಿ ಅಭಿರುಚಿಯನ್ನು ಮೂಡಿಸುವ ಜೊತೆಗೆ ತಮ್ಮ ಒಬ್ಬಳೇ ಮಗಳು ಅನುಪಮಾಳ ವಿವಾಹವನ್ನು ಕೂಡ ವೈಶಿಷ್ಟ್ಯ ಪೂರ್ಣವಾಗಿ ಗುದಗನವರ ದಂಪತಿಗಳು ಮಾಡಿ ದ್ದಾರೆ. ಈ ಸಂದರ್ಭದಲ್ಲಿ 29-01-2017 ರಂದು ಸಂಪಾದಿತ ಕೃತಿ ‘ಶರಣರ ದಾಂಪತ್ಯ ಧರ್ಮ’ ಧಾರವಾಡದಲ್ಲಿ ಜರುಗಿದ ಗುದಗನವರ ಹಾಗೂ ಮೂಲಿಮನಿಯವರ ಕುಟುಂಬದ ಕುಡಿಗಳಾದ ಅನುಪಮಾ ಮತ್ತು ಗಣೇಶರ ವಿವಾಹದ ಸಮಾ ರಂಭದ ಜೊತೆಗೆ ಪುಸ್ತಕ ಬಿಡುಗಡೆಯನ್ನೂ ಕೂಡ ನೆರವೇರಿಸಿದ್ದು ವೈಶಿಷ್ಟ್ಯವಾಗಿತ್ತು. ಇದರ ಸಂಪಾದಕರು ಡಾ.ಶಶಿಕಾಂತ ಪಟ್ಟಣ (ಪೂನಾ), ಡಾ.ವೈ.ಎಂ.ಯಾಕೊಳ್ಳಿ (ಸವದತ್ತಿ). ಇದರಲ್ಲಿನ 19 ಬರಹಗಳಲ್ಲಿ ಎರಡು ಲೇಖನಗಳು ಸಂಸಾರ ಜೀವನದ ಬಗೆಗೆ ಶರಣರು ಇಟ್ಟುಕೊಂಡಿದ್ದ ದೃಷ್ಟಿಕೋನಗಳನ್ನು ತಿಳಿಸಿದರೆ, ಉಳಿದ 17 ಬರಹಗಳು ಶರಣ ದಂಪತಿಗಳ ಸತ್ಯ-ಶುದ್ಧ- ಸಾಮರಸ್ಯ ಬದುಕಿನ ಚಿತ್ರಣವನ್ನು ಕಟ್ಟಿಕೊಟ್ಟಿ ದ್ದವು. ಹೀಗೆ ಸರಳ ಸಾದಾ ಉದಾತ್ತ ವಿಚಾರಗಳ ನ್ನು ಇಟ್ಟುಕೊಂಡು ಬದುಕನ್ನು ನಡೆಸುತ್ತಿರುವ ದಣಿವರಿಯದ ಬರಹಗಾರ, ಉಪನ್ಯಾಸಕ ಸುರೇಶ ಗುದಗನವರ ಗುರುಗಳಿಂದ ಇನ್ನೂ ಹೆಚ್ಚಿನ ಕೃತಿಗಳು ಮೂಡಿ ಬರಲಿ, ಅವರ ನಿವೃತ್ತಿಯ ಬದುಕೂ ಕೂಡ ಸುಖ, ಶಾಂತಿ, ನೆಮ್ಮದಿಯಿಂದ ಕೂಡಿರಲಿ ಎಂದು ಆಶಿಸುವೆ. ಗುದಗನವರ ಗುರುಗಳ ಸಂಪರ್ಕ ಸಂಖ್ಯೆ: 9449294694

ವೈ.ಬಿ.ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು, ಮಾರುತಿ ಬಡಾವಣೆ ಸಿಂದೋಗಿಕ್ರಾಸ್, ಮುನವಳ್ಳಿ. ತಾ:ಸವದತ್ತಿ ಜಿ:ಬೆಳಗಾವಿ
ವೈ ಬಿ ಕಡಕೋಳ ಸರ್ ತಮ್ಮ ಗುರುಗಳ ಪರಿಚಯ ಮಾಡುವುದರ ಜೊತೆಗೆ ಅವರ ಕೃತಿಯ ಕುರಿತು ಪರಿಚಯಿಸಿದ್ದು ಸಂತಸ ತಂದಿದೆ.ಒಟ್ಟು ೬೦ಸಾಧಕ ಮಹಿಳೆಯರ ಪರಿಚಯ ಲೇಖನ ಒಳಗೊಂಡ ಕೃತಿಯ ಕುತೂಹಲ ಮೂಡಿಸಿದ್ದಾರೆ. ನಿರೀಕ್ಷೆ ಹುಟ್ಟಿಸಿದ್ದಾರೆ.
LikeLike