ಮಕ್ಕಳೆಲ್ಲಾ   ಶಾಲೆಯ    ಬಯಲಿನಲ್ಲಿ ಪ್ರಾರ್ಥನೆ ಮಾಡುತ್ತಿದ್ದರು. ಆಗ ಬಯಲ ತುದಿಯ   ಮರದಿಂದ   ಚಿರತೆಯೊಂದು ದೊಪ್ಪನೆ ನೆಲಕ್ಕೆ ಬಿತ್ತು. ಮಕ್ಕಳು ನೆಲಕ್ಕೆ ಬಿದ್ದ ಚಿರತೆಯನ್ನು ನೋಡಿ, ಅದು ತಮ್ಮ ಮೇಲೆ ಎರಗಬಹುದೆಂದು ಭಯಬೀತರಾಗಿ ಓಡತೊಡಗಿದರು.

ಆದರೆ ಚಿರತೆ ಹಾಗೆ ಮಲಗಿತ್ತು. ಅದನ್ನು ಕಂಡ ಹೆಡ್ ಮಿಸ್ ರಕ್ಷಣಾ ಸಿಬ್ಬಂದಿಗೆ ಕರೆ ಮಾಡಲು ಆಪೀಸ್ ಕಡೆ ಓಡಿದರು. ಶಿಕ್ಷಕರೆ ಲ್ಲರೂ ತಮ್ಮ ತರಗತಿಯ ಮಕ್ಕಳಿಗೆ ಯಾರು ಆ ಕಡೆ ಹೋಗದಂತೆ ಎಚ್ಚರಿಕೆ ನೀಡಿ ತರಗತಿ ಗೆ ಕಳುಹಿಸಿದರು. ಮಣಿಕಂಠ ಮಾತ್ರ ಶಿಕ್ಷಕಿ ಯರ ಮಾತು ಕೇಳಿಲ್ಲವೆಂಬಂತೆ ಚಿರತೆಯ ಹತ್ತಿರ  ಹೋಗಿಯೇ  ಬಿಟ್ಟ.  “ಮಣಿಕಂಠ.. ಚಿರತೆಯ ಹತ್ತಿರ ಹೋಗಬೇಡ.. ಈ ಕಡೆ ಬಾ..”ಎಂದು ಎಲ್ಲರೂ ಕೂಗುತ್ತಲೇಇದ್ದರು. ಮಣಿಕಂಠ ಆ ಚಿರತೆಯನ್ನು ಹತ್ತಿರದಿಂದ ನೋಡಿ “ಈ ಚಿರತೆಗೆ ಬಹಳ ಗಾಯವಾಗಿದೆ. ಇದು  ಸಾಯುವ ಸ್ಥಿತಿಯಲ್ಲಿದೆ.ಬೇಗ ಚಿಕಿತ್ಸೆ ನೀಡಬೇಕು..” ಎಂದು  ಕೂಗಿಕೊಂಡ. ಆಗ ಒಬ್ಬೊಬ್ಬರಾಗಿ  ಚಿರತೆಯ  ಹತ್ತಿರ  ಬರಲು ಧೈರ್ಯ ಮಾಡಿದರು. ಚಿರತೆಯ ಹೊಟ್ಟೆಯ ಕೆಳಭಾಗದಲ್ಲಿ  ಆಳವಾದ    ಗಾಯವಾಗಿ ಕೀವು ಸುರಿಯುತ್ತಿತ್ತುಮಣಿಕಂಠ ತಡಮಾಡದೇ ಶಾಲಾ ಬಯಲಿನ ಆಚೆ ಬೆಳೆದಿದ್ದ ಗಿಡವೊಂದರ ಸೊಪ್ಪನ್ನು ಕೈಯಲ್ಲಿ ಅರೆದು ಚಿರತೆಯ ಗಾಯಕ್ಕೆ ಹಾಕಿದ. ನೋವಿನಿಂದ ಗುರ್ರ್ ಅನ್ನುತ್ತಿದ್ದ ಚಿರತೆ ಸ್ವಲ್ಪ ಸಮಾಧಾನ ಹೊಂದಿದಂತೆ ತೋರಿತು. ಆತ ಚಿರತೆಯ ಮೈದಡವುತ್ತಾ ಪಕ್ಕದಲ್ಲಿ ಕುಳಿತಿದ್ದರೆ ಉಳಿದ ಮಕ್ಕಳು, ಶಿಕ್ಷಕರೆಲ್ಲರೂ ಬೆರಗು ಕಣ್ಣಿನಿಂದ ಆ ದೃಶ್ಯ ನೋಡುತ್ತಿದ್ದರು.  ಅಷ್ಟರಲ್ಲಿ  ಬಂದ  ಹೆಡ್ ಮಿಸ್ ಚಿರತೆಯ ಪಕ್ಕಕುಳಿತ ಮಣಿಕಂಠನ್ನು ಕಂಡು, ಆತನನ್ನು ದೂರ ಎಳೆದುಕೊಂಡು ಬಂದರು.ಅಷ್ಟರಲ್ಲಿ  ಪ್ರಾಣಿ ರಕ್ಷಣಾಪಡೆಯ ವರು ಬಂದು  ಚಿರತೆಯನ್ನು ತಮ್ಮ ವಾಹನ ದಲ್ಲಿ  ಹಾಕಿಕೊಂಡು  ಹೋದರು.   ಚಿರತೆ  ಹೋದ  ಬಳಿಕ  ಮಣಿಕಂಠನತ್ತ ತಿರುಗಿದ ಹೆಡ್ ಮಿಸ್.. “ಮಣಿಕಂಠ   ನಿನಗೆ   ಚಿರತೆ ಯನ್ನು  ಕಂಡು    ಭಯವಾಗಲಿಲ್ಲವೇ? ” ಎಂದು ಕೇಳಿದರು.ಆಗ ಮಣಿಕಂಠ “ಇಲ್ಲಾ ಮಿಸ್..ನಮ್ಮ ಅಪ್ಪ ನಮ್ಮ ಊರಿಗೆ ಬಂದು ದಾಳಿ  ಮಾಡುವ  ಚಿರತೆ,   ಹುಲಿಕಿರುಬ ಮುಂತಾದವುಗಳನ್ನು   ಹಿಡಿದು  ಪಳಗಿಸಿ ಕಾಡಿಗೆ   ಬಿಡುತ್ತಾರೆ.  ಹಾಗಾಗಿ   ನಮಗೆ ಅವುಗಳನ್ನು ಕಂಡರೆ ಭಯವಾಗುವುದಿಲ್ಲ” ಎಂದು ಹೇಳಿದ. ಹೆಡ್ ಮಿಸ್  ಕುತೂಹಲ ದಿಂದ  ಆ ಕುರಿತಾಗಿ ಇನ್ನಷ್ಟು ಕೇಳತೊಡಗಿ ದರು. “ಮಿಸ್.. ಹಿಂದಿನ ವಾರ ಒಂದು ಚಿರತೆ ಯಾರದೋ ಗುಂಡೇಟಿಗೆ ಗಾಯಗೊಂಡು ರಸ್ತೆ ಪಕ್ಕ ಬಿದ್ದಿತ್ತು. ಅಪ್ಪ ಅದನ್ನು ಮನೆಗೆ ಕರೆತಂದು ಗುಂಡು ತೆಗೆದು, ಬೋನಿನಲ್ಲಿರಿಸಿ ಸೊಪ್ಪಿನ  ಔಷಧದ  ಪಟ್ಟಿ ಕಟ್ಟಿ   ಅದಕ್ಕೆ ಆಹಾರ  ನೀಡುತ್ತಿದ್ದರು.  ವಾರದ  ನಂತರ ಚಿರತೆ  ಗುಣಮುಖವಾದ  ಮೇಲೆ  ತಾನು ಅಪ್ಪ  ಹೋಗಿ  ಕಾಡಿಗೆ  ಬಿಟ್ಟು  ಬಂದೆವು.. ಎಂದು  ಖುಷಿಯಿಂದ  ಮಣಿಕಂಠ  ಮಿಸ್ ಹತ್ತಿರ  ಹೇಳುತ್ತಿದ್ದರೆ  ಉಳಿದ  ಮಕ್ಕಳು ಅವನನ್ನು  ಅಚ್ಚರಿಯಿಂದ  ನೋಡುತ್ತಾ, ಅವನ ಸ್ನೇಹ ಸಂಪಾದಿಸಿ ಇನ್ನಷ್ಟು ವಿಷಯ ತಿಳಿದುಕೊಳ್ಳುವ ಉತ್ಸುಕತೆಯಲ್ಲಿದ್ದರು. ಹಳ್ಳಿ ಹುಡುಗ ಮಣಿಕಂಠ ಎಲ್ಲರ ಕಣ್ಣಿಗೆ ಹೀರೋ ಆಗಿಬಿಟ್ಟಿದ್ದ. ..!

                     🔆🔆🔆

✍️ರೇಖಾ ಭಟ್,ಹೊನ್ನಗದ್ದೆ