ಯುದ್ಧಕ್ಕೆ ಪ್ರತಿಯುದ್ಧ ಮಾಡಿದರೆ ಇಲ್ಲಿ ಒಂದೂ ಜೀವ ಉಳಿಯುವುದಿಲ್ಲ
ದ್ವೇಷದ ದಳ್ಳುರಿಗೆ ತುಪ್ಪ ಸುರಿದರೆ ಇಲ್ಲಿ ಒಂದೂ ಜೀವ ಉಳಿಯುವುದಿಲ್ಲ

ಮೋಸ, ವಂಚನೆ, ದ್ರೋಹದ ಕಲ್ಮಶವ ಬೆರೆಸದಿರಿ ಗಂಗೆ, ಕಾವೇರಿಯರಲಿ
ಜೀವಜಲವು ಹಾಲಾಹಲವಾದರೆ ಇಲ್ಲಿ ಒಂದೂ ಜೀವ ಉಳಿಯುವುದಿಲ್ಲ

ಉನ್ಮತ್ತತೆಯಲ್ಲಿ ಮೈಮರೆತು ಹಾಡುತ್ತಿಹನು ಬಹಳ ಹೊತ್ತಿನಿಂದ ಸೂಫಿ
ಕರುಣೆ ಶಾಂತಿ ಸಹನೆ ಕಳೆದುಕೊಂಡರೆ ಇಲ್ಲಿ ಒಂದೂ ಜೀವ ಉಳಿಯುವುದಿಲ್ಲ

ನೀನೇನು ಬಹಳ ಕಷ್ಟಪಡಬೇಕಿಲ್ಲ ದ್ಯಾವಾಪೃಥವಿಗೆ ಒಡೆಯನಾಗಲು
ಗಾಳಿಯಲಿ ಸೇಡಿನ ವಿಷ ಬೆರೆಸಿದರೆ ಇಲ್ಲಿ ಒಂದೂ ಜೀವ ಉಳಿಯುವುದಿಲ್ಲ

ಕತ್ತಲೆಯಲಿ ಯಾವುದೂ ಜೀವಂತವಾಗಿರುವುದಿಲ್ಲ ಬಹುಕಾಲದವರೆಗೆ
ಅರಿವಿನ ಬೆಳಕಿಂಡಿಗಳ ಮುಚ್ಚಿದರೆ ಇಲ್ಲಿ ಒಂದೂ ಜೀವ ಉಳಿಯುವುದಿಲ್ಲ

ಗಿಳಿಯೇ ಕಾಳು ಹಾಕಿದವನು ಬೇಟೆಗಾರನೂ ಆಗಿರಬಹುದು, ಜಾಗೃತೆ
ನಿನ್ನ ಹಸಿವು ಅವನ ಅನ್ನವಾದರೆ ಇಲ್ಲಿ ಒಂದೂ ಜೀವ ಉಳಿಯುವುದಿಲ್ಲ

ಜೀವನಜೋಕಾಲಿ ಜೀಕಲು ಒಂದಾದರೂ ವ್ಯಸನ ಇರಬೇಕೆಂಬುದು ಸರಿ
ಬದುಕಿಗಿಂತ ಭಾವನೆ ಹೆಚ್ಚಾದರೆ ಇಲ್ಲಿ ಒಂದೂ ಜೀವ ಉಳಿಯುವುದಿಲ್ಲ

ದಯೆ, ಕರುಣೆ, ಜ್ಞಾನ ಸಹನೆಯುಳ್ಳ ಪ್ರತಿನಿಧಿಯ ಆಯ್ಕೆ ಮಾಡಿ ಮಹಾಜನರೆ
ದುರ್ಜನರ ಕೈಗೆ ದೇಶ ನೀಡಿದರೆ ಇಲ್ಲಿ ಒಂದೂ ಜೀವ ಉಳಿಯುವುದಿಲ್ಲ

ಎಂದೆಂದಿಗೂ ಬಯಸಬೇಕು ಸಕಲ ಚರಾಚರ ಜೀವಾತ್ಮರಿಗೆ ಲೇಸನೇ
ಬುದ್ಧ, ಬಸವಣ್ಣನ ಬೋಧೆ ಮರೆತರೆ ಇಲ್ಲಿ ಒಂದೂ ಜೀವ ಉಳಿಯುವುದಿಲ್ಲ

ಮಂದಿರ ಕುಸಿದರೂ, ಮಸೀದಿ ಬಿದ್ದರೂ ಹೇಗೋ ಬದುಕಬಹುದು ‘ಅಲ್ಲಮ’
ಸಾಕಿಯ ಮನೆಬಾಗಿಲು ಮುಚ್ಚಿದರೆ ಇಲ್ಲಿ ಒಂದೂ ಜೀವ ಉಳಿಯುವುದಿಲ್ಲ

🔆🔆🔆

✍️ಗಿರೀಶ್ ಜಕಾಪೂರ,ಸೊಲ್ಲಾಪೂರ