ನಾವೆಲ್ಲ  ಬಸವಜಯಂತಿ  ಬಂದಾಗ ಬಸವಣ್ಣನವರ ಬದುಕಿನ ವ್ಯಕ್ತಿತ್ವ ಕುರಿತು ಮಾತನಾಡುತ್ತೇವೆ.ಹಾಗಾದರೆ ಈ ಬಸವ ಜಯಂತಿ ಆಚರಣೆ ಮೊದಲು ಮಾಡಿದವರ ನೆನಪನ್ನುಈ ಸಂದರ್ಭದಲ್ಲಿ ನೆನೆಯುವುದು ಸೂಕ್ತವಲ್ಲವೇ?ಹರ್ಡೆಕರಮಂಜಪ್ಪನವರು ದಾವಣಗೇರೆಯಲ್ಲಿದ್ದಾಗ ಶ್ರೀಮನ್ನಿರಂಜನ ಪ್ರಣವಸ್ವರೂಪಿ ಶ್ರೀಮೃತ್ಯುಂಜಯ ಮಹಾ ಸ್ವಾಮಿಗಳ ಒಡನಾಟ ಅಲ್ಲಿನ ಮಠದಲ್ಲಿ ಭಜನಾಸಂಘ ಮಾಡಿ ಪ್ರತಿ ಸೋಮವಾರ ಭಜನೆ ಮಾಡುವುದನ್ನು 26-6-1911ರಲ್ಲಿ ಆರಂಭಿಸುತ್ತಾರೆ.  ಹಾಗೆಯೇ   ಶ್ರಾವಣ ಮಾಸೋಪನ್ಯಾಸಮಾಲಾ  ಕಾರ್ಯಕ್ರಮ ಕೂಡ ಮಾಡುತ್ತಾರೆ. ನಂತರ 1913ರಲ್ಲಿ ವೈಶಾಖ ಶುದ್ಧರೋಹಿಣಿ ನಕ್ಷತ್ರದಂದು ಸಂಕ್ಷಿಪ್ತವಾಗಿ ಬಸವಜಯಂತಿ ಜರುಗಿತು ಎಂಬುದನ್ನು ಅವರು ತಮ್ಮ ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿದ್ದಾರೆ. ಇಂತಹ ಪುಣ್ಯಪುರುಷ ಬಸವಣ್ಣನವರ ಕುರಿತು ಅನೇಕ ಕೃತಿಗಳನ್ನು ಹೊರತಂದರು. ಅವರ ಸ್ಮರಣೆಯ ಒಂದು ಪುಟ್ಟ ಬರಹ.

ಕಳೆದವರ್ಷಆಲಮಟ್ಟಿಯಲ್ಲಿ ರಾಜ್ಯಮಟ್ಟದ  ಶಿಕ್ಷಣ ಸಾಹಿತ್ಯ ಸಮ್ಮೇಳನ ಜರುಗಿತ್ತು. ಈ ಸಂದರ್ಭದಲ್ಲಿ  ಫ.ಗು.ಹಳಕಟ್ಟಿ    ಪ್ರೌಢ ಶಾಲೆಯಲ್ಲಿ ನಮಗೆ ವಸತಿಸೌಕರ್ಯ ಕಲ್ಪಿಸ ಲಾಗಿತ್ತು. ಬೆಳಗಿನ ವೇಳೆ ಅಲ್ಲಿ ಪ್ರಾರ್ಥನೆ ಕೇಳಿಬರತೊಡಗಿತು. ಇದು ಎಲ್ಲಿಯದು? ಎಂದು ಪ್ರಶ್ನಿಸಿದಾಗ ಹರ್ಡೆಕರ್ ಮಂಜಪ್ಪ ನವರ ಸ್ಮಾರಕ ಭವನದಲ್ಲಿಯದು ಎಂದು ಶಾಲೆಯವರು ತಿಳಿಸಿದರು.ಸ್ನಾನ ಮುಗಿಸಿ ಕೊಂಡು ಹರ್ಡೆಕರ್ ಮಂಜಪ್ಪನವರ ಸಮಾಧಿಮಂದಿರದತ್ತ ಧಾವಿಸಿದೆ. ಸುಮಾರು  50 ಎಕರೆ ಪ್ರದೇಶದಲ್ಲಿ ಒಂದೆಡೆ ಶಾಲೆಯ ಕಟ್ಟಡ, ಇನ್ನೊಂದೆಡೆ ಸ್ಮಾರಕ ಭವನ, ಇಡೀ ಬೆಟ್ಟದಲ್ಲಿ ಅರಣ್ಯ ಬೆಳೆಸುವ ಯೋಜನೆಯಿಂದ ನೆಡಲಾದ ಗಿಡಮರಗಳು, ವಿಶಾಲ ಪ್ರಾಂಗಣ, ಒಂದೆಡೆ ಆಲಮಟ್ಟಿ ಅಣೆಕಟ್ಟು ಹಿನ್ನೀರಿನಿಂದ ಆವೃತವಾದ ಜಲ ಪ್ರದೇಶ ಹೀಗೆ ರಮ್ಯವಾದ ಪ್ರಕೃತಿಯ ನಡುವೆ ಹರ್ಡೆಕರ್ ಮಂಜಪ್ಪ ಸ್ಮಾರಕ ಮಂದಿರ, ಅದರೊಳಗೆ ಇರುವ ಮಂಜಪ್ಪನವರ ನಿಂತಿರುವ ಅದ್ಬುತ ಶಿಲ್ಪ. ಇದೊಂದು ವಿಶಿಷ್ಟ ರೀತಿಯ ಸ್ಮಾರಕಭವನ. ಮೊದಲನೇ ಹಂತ 40/40ಅಡಿ ವಿಸ್ತೀರ್ಣ ದಲ್ಲಿದ್ದರೆ, ಎರಡನೇಯ ಹಂತವು 25/2 ಅಡಿಯ  ಚೌಕಾಕಾರದಿಂದ ಕೂಡಿದೆ. ಅದರವ್ಯಾಸವು 25 ಅಡಿಯಿದೆ. ಮೂರನೆಯ ಹಂತವು ಗೋಲಾಕಾರದಿಂದ ಕೂಡಿದೆ. ನಾಲ್ಕನೇ ಹಂತದಲ್ಲಿ 25ಅಡಿ ವ್ಯಾಸದಲ್ಲಿ ಗೋಪುರ ನಿರ್ಮಿಸಲಾಗಿದೆ.   ಆಲಮಟ್ಟಿಯ   ಹಿನ್ನೀರಿನಲ್ಲಿ ಮುಳುಗಿದ್ದ ಮಂಜಪ್ಪನವರ ಸಮಾಧಿಯನ್ನು M.H.M ಕಾಲೇಜಿನ   ಹಿಂಭಾಗದಲ್ಲಿ    ಗದಗಿನ  ತೋಂಟದಾರ್ಯಮಠದ  ಜಮೀನಿನಲ್ಲಿ ಸ್ಥಳಾಂತರಗೊಳಿಸಲಾಗಿತ್ತು.ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದ  ವಿಶೇಷ ಅಧಿಕಾರಿಯಾಗಿದ್ದ ನಿವೃತ್ತ I.A.S ಅಧಿಕಾರಿ ಡಾ.ಎಸ್.ಎಂ.ಜಾಮದಾರರವರ ಪರಿಕಲ್ಪನೆ ಯಂತೆ ವಿಶೇಷವಾದ ರೀತಿಯಲ್ಲಿ ಈ ಸ್ಮಾರಕವನ್ನು ನಿರ್ಮಿಸಲಾಗಿದೆ.

ಮಂಜಪ್ಪ ಅವರ ಸಮಾಧಿ ಸ್ಥಳವನ್ನು ನಕ್ಷತ್ರ ಆಕಾರದ ‌ ಗ್ರಾನೈಟ್ ಕಲ್ಲಿನಿಂದ ನಿರ್ಮಿಸಲಾಗಿದೆ. ಇದನ್ನೆಲ್ಲ ನೋಡಿದಾಗ ಒಂದುಕ್ಷಣ ಇತಿಹಾಸದತ್ತ ಹಿನ್ನೋಟವನ್ನು ನೀಡತೊಡಗಿದವು.

ಎಲ್ಲಿಯ ಬನವಾಸಿ ಎಲ್ಲಿಯ ಆಲಮಟ್ಟಿ ಎತ್ತಣದೆತ್ತ ಸಂಬಂಧವಯ್ಯ ಎಂಬಂತೆ ಹರ್ಡೆಕರ್ ಮಂಜಪ್ಪ ಆಲಮಟ್ಟಿಯವರೆಗೆ ಬಂದುನಿಂತಇತಿಹಾಸದ ಅವಲೋಕನದಲ್ಲಿ ತೊಡಗಿದೆ.

ಬನವಾಸಿಯಲ್ಲಿ ಪೆಬ್ರುವರಿ18ರ1886ನೇ  ಇಸ್ವಿಯಲ್ಲಿ ಜನ್ಮತಳೆದ ಹರ್ಡೆಕರಮಂಜಪ್ಪ ಕರ್ನಾಟಕದ ಗಾಂಧಿ ಎಂದೇ ಖ್ಯಾತರಾದ ಹಿನ್ನಲೆಯತ್ತ ಗಮನಿಸಿದಾಗ ಇವರ ತಂದೆ ಮಧುಕೇಶ್ವರಪ್ಪ ಬನವಾಸಿಯ  ಮಧುಕೇಶ್ವ ರನ ಭಕ್ತರು.ಚಿಕ್ಕಂದಿನಲ್ಲಿಯೇ ತಂದೆಯನ್ನು ಕಳೆದು ಕೊಂಡ ಇವರನ್ನು ಸಲುಹಿದ್ದುಅಣ್ಣ. ಮಂಜಪ್ಪನವರು ಕಲಿತದ್ದು ಕನ್ನಡ 7ನೇಯ ತರಗತಿಯವರೆಗೆ.1903 ರಲ್ಲಿ ಅಂದಿನ ಮುಲ್ಕಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಶಿರ್ಸಿಯಲ್ಲಿ ತಾವು ಕಲಿತ ಶಾಲೆಯಲ್ಲಿಯೇ ಸಹ ಶಿಕ್ಷಕರಾಗಿ ಸೇವೆ ಪ್ರಾರಂಭಿಸಿದರು.ಆಗ ಅವರು ಪಡೆಯುತ್ತಿದ್ದ ಸಂಬಳ ತಿಂಗಳಿಗೆ ಏಳುರೂಪಾಯಿಗಳು. ಅವರಲ್ಲಿ ಬರವಣಿಗೆ ಆಗ ಸುಪ್ತವಾಗಿ ಅರಳುತ್ತಿತ್ತು. ಮಕ್ಕಳಿಗೆ ಕೌಶಲ್ಯಗಳನ್ನು ಬರೆದರು.ನರ್ಸರಿ ಹಾಡುಗಳು ಕ್ರಿಯೆಗಳ ಕುರಿತಾದ ಹಾಡುಗಳನ್ನು ಬರೆದು ಮಕ್ಕಳಿಗೆ ಅವುಗಳನ್ನು ಕಲಿಸತೊಡಗಿದರು. 1905ನೇ‌ ಇಸ್ವಿಯಲ್ಲಿ ಪ್ರತ್ಯೇಕ ಶಾಲೆಯಲ್ಲಿ ಏಕೋಪಾಧ್ಯಾಯರಾಗಿ ಸೇವೆ ಸಲ್ಲಿಸಿದರು.


ಇದೇ ಸಂದರ್ಭ ಸ್ವದೇಶಿಚಳುವಳಿ ನಡೆದಿತ್ತು. ಲೋಕಮಾನ್ಯ ಬಾಲಗಂಗಾಧರ ತಿಲಕರ ಮರಾಠಿ ಭಾಷೆಯ ಕೇಸರಿ ಪತ್ರಿಕೆಯ ಬರಹಗಳ ಪ್ರಭಾವ ಇವರ ಮೇಲಾಯಿತು. ಒಂದೇ ವರ್ಷದಲ್ಲಿ ಇವರು ಆ ಕಾಲದ ರಾಷ್ಟ್ರೀಯ ವಾತಾವರಣದಿಂದ ಪ್ರಭಾವಿತರಾಗಿ ತಮ್ಮಕೆಲಸಕ್ಕೆ ರಾಜೀನಾಮೆಕೊಟ್ಟರು.1906ರ ಸಪ್ಟಂಬರ್ ದಲ್ಲಿ “ಧನುರ್ಧಾರಿ” ಎನ್ನುವಪತ್ರಿಕೆಯನ್ನು ಪ್ರಕಟಿಸತೊಡಗಿದರು ಇದು ಲೋಕಮಾನ್ಯ ತಿಲಕರ ಕೇಸರಿ ಪತ್ರಿಕೆಯ ಮರಾಠಿ ಲೇಖನಗಳ ಕನ್ನಡ ಅನುವಾದವನ್ನು ಪ್ರಕಟಿಸುವ ಪತ್ರಿಕೆಯಾಗಿತ್ತು. ಈ ಪತ್ರಿಕೆಯ ಉಗ್ರಧೋರಣೆಯನ್ನು ಇಷ್ಟಪಡದ ಮುದ್ರಕರು ಬಾಡಿಗೆಹೆಚ್ಚಿಸಿದ ಕಾರಣ ಪತ್ರಿಕೆಯನ್ನು ನಿಲ್ಲಿಸ ಬೇಕಾಯಿತು. 1910ರಲ್ಲಿ ಮಂಜಪ್ಪನವರು ಬ್ರಹ್ಮಚರ್ಯ ವ್ರತದ ಪ್ರತಿಜ್ಞೆ ಮಾಡಿದರು.


ಇದರೊಂದಿಗೆ ಸಾಮೂಹಿಕ ಭಜನೆ ಮತ್ತು ವ್ಯಾಖ್ಯಾನ ಕಾರ್ಯಕ್ರಮಗಳಿಂದ ಪ್ರಭಾವಿತ ರಾದ ಮಂಜಪ್ಪನವರು ದಾವಣಗೆರೆಯಲ್ಲಿ ಮೃತ್ಯುಂಜಯಸ್ವಾಮಿಗಳ ಮನ ಒಲಿಸಿ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಬಿಡು ವಿನ ವೇಳೆಯಲ್ಲಿ ಧಾರ್ಮಿಕ ಪುಸ್ತಕಗಳ ಓದು, ಜ್ಞಾನಾರ್ಜನೆ,‌ ಸಮಾಜಸೇವೆ, ಧಾರ್ಮಿಕ  ಕಾರ್ಯಕ್ರಮಗಳಲ್ಲಿ  ತಮ್ಮನ್ನು ತೊಡಗಿಸಿಕೊಂಡ ಮಂಜಪ್ಪನವರು ನೈತಿಕ ಬ್ರಹ್ಮಚಾರಿ ಯಾಗಿಯೇ ಉಳಿದರು. 25-1-1923ರಲ್ಲಿ ಹರಿಹರ ಸ್ಟೇಷನ್ನಿನಿಂದ ಮೂರು ಮೈಲುಗಳ ದೂರದಲ್ಲಿ ತುಂಗಭದ್ರ ದಂಡೆಗೆ ಶ್ರೀಬಾಳಪ್ಪ ನವರ ಭೂಮಿಯಲ್ಲಿ ಸತ್ಯಾಗ್ರಹ ಆಶ್ರಮ ವನ್ನು ಸ್ಥಾಪಿಸುತ್ತಾರೆ. ಅಲ್ಲಿ ಗಾಂಧೀಜಿಯವರ ತತ್ವದಂತೆ ರಾಟಿ ಯಲ್ಲಿನೂಲನ್ನು ತೆಗೆಯುತ್ತಾರೆ, ಹತ್ತಿರದ ಹಳ್ಳಿಗಳಿಗೆ ಸಂಚರಿಸಿ ಸತ್ಯಾಗ್ರಹ ತತ್ವದ ಪದಗಳನ್ನು ಹೇಳುವ ಮೂಲಕ ಖಾದಿ ಪ್ರಸಾರದ ಕುರಿತು ತಿಳುವಳಿಕೆಯನ್ನು ಮೂಡಿಸುತ್ತಾರೆ.     ಈ ಸಂದರ್ಭದಲ್ಲಿ ಶ್ರೀಮೃತ್ಯುಂಜಯ  ಮಹಾಸ್ವಾಮಿಗಳು ಧಾರವಾಡ ಬೋರ್ಡಿಂಗಿನ ಒಟ್ಟು 43 ವಿದ್ಯಾರ್ಥಿಗಳನ್ನು ಕರೆದುಕೊಂಡು 24-4-1923ರಂದು ಆಶ್ರಮಕ್ಕೆ ಆಗಮಿಸಿ ಪುರಾಣ ಪ್ರವಚನಗಳನ್ನು ನಡೆಸುವರು. ಈ ಸಮಯದಲ್ಲಿ3-6-1923ರಂದು ಹಾನಗಲ್ಲಿನ  ಕುಮಾರಸ್ವಾಮಿಗಳೂ ಆಶ್ರಮಕ್ಕೆ ಆಗಮಿಸಿ ಇವರ ದಿನಚರಿ,ಸತ್ಯಾಗ್ರಹ ಪರಿಕಲ್ಪನೆ ಇತ್ಯಾದಿ ಕಂಡು ಆಶೀರ್ವದಿಸುವರು.


ಇಲ್ಲಿಂದ ಮುಂದೆ ಬೆಂಗಳೂರು, ಬೀಳಗಿ, ಬಾಗಲಕೋಟೆ ವಿಜಯಪುರ,ಗಲಗಲಿಗಳಿಗೆ ಹೋಗಿ ಸತ್ಯಾಗ್ರಹ ತತ್ವವನ್ನು ಪ್ರಚಾರದಲ್ಲಿ ತೊಡಗುತ್ತಾರೆ.ನಂತರ ಗಾಂಧೀಜಿಯನ್ನು ಭೇಟಿಯಾಗಿಸಾಬರಮತಿ ಆಶ್ರಮದಲ್ಲಿ ಕೆಲಕಾಲ ಉಳಿದು ಗಾಂಧೀಜಿಯವರೊಡನೆ ಅನೇಕ ಸಂಗತಿಗಳನ್ನು ಚರ್ಚಿಸುವ ಜೊತೆಗೆ ಅಧ್ಯಾತ್ಮದತ್ತ ತಮ್ಮ ಮನಸ್ಸನ್ನು ಹೆಚ್ಚು ಕೇಂದ್ರೀಕರಿಸಿದರು.1925ಮಾರ್ಚ27ರಂದು ಇವರ ತಾಯಿಯ ನಿಧನದ  ನಂತರ‌  ಮತ್ತೆ  ಆಶ್ರಮಕ್ಕೆ ಬರುತ್ತಾರೆ. ಅಲ್ಲಿ ಮಳೆಗಾಲದಲ್ಲಿ ನೀರು ಬಂದಿರುತ್ತದೆ.  ಈ ಸ್ಥಳವನ್ನು  ಬದಲಿಸುವುದು ಸೂಕ್ತ ಎಂದುಕೊಂಡು ಇಂಡಿ ತಾಲೂಕಿನ ಬಂಥನಾಳಕ್ಕೆ ಪ್ರವಚನಕ್ಕೆ ಹೋದಾಗ ಸ್ವಾಮೀಜಿಯವ ರಲ್ಲಿ  ಈ ವಿಷಯವನ್ನು ಪ್ರಸ್ತಾಪಿಸುತ್ತಾರೆ. ಆಗ ಅವರು ಇವರಿಗೆ ಆಲಮಟ್ಟಿಯಲ್ಲಿ ಆಶ್ರಮವನ್ನು ಏರ್ಪಾಡು ಮಾಡುತ್ತಾರೆ.ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯ7ತಾಲ್ಲೂಕು ಗಳ 55 ಹಳ್ಳಿಗಳಲ್ಲಿ ಐದು ತಿಂಗಳ ಕಾಲ ಬಂಥನಾಳ ಸ್ವಾಮಿಗಳ ಸಂಗಡ ಸಂಚರಿಸುತ್ತ ತಂಬಾಕು, ಚಹಾ ಬಿಡುವುದು, ಖಾದಿ ಧರಿಸುವಂತೆ ಮಾಡುವ ಹಲವು ವಿಧಾಯಕ ಕಾರ್ಯ ಕ್ರಮಗಳಲ್ಲಿ ತಮ್ಮನ್ನುತೊಡಗಿಸಿಕೊಳ್ಳುತ್ತಾರೆ.

ಇವರು ಈ ಸಂದರ್ಭ ಯಾವುದೇ ಹಳ್ಳಿಗೆ ಹೋದರೂ ಕೂಡ ಹಲವು ಮಹತ್ವದ ಸಂಗತಿ ಗಳನ್ನು ಕಲೆ ಹಾಕುತ್ತಿರುತ್ತಾರೆ. 1)ಹಳ್ಳಿಯ ಜನಸಂಖ್ಯೆ.2)ಶಾಲೆ  3)ತಂಬಾಕು ಮತ್ತು ಚಹಾದ ವ್ಯಸನಗಳು 4)ರಾಟಿ 5)ಯಾವ ಕೈಕಸಬುಗಳು ಆ ಹಳ್ಳಿಯಲ್ಲಿ ನಡೆಯುತ್ತವೆ 6)ಆ ಹಳ್ಳಿಯ ಸ್ವಚ್ಚತೆ. 7)ಆ ಊರಿನಲ್ಲಿಯ ಪ್ರಮುಖರು. 8)ಆ ಊರಿನಲ್ಲಿ ಕಾರ್ಯ ಮಾಡುವ ಉತ್ಸಾಹಿಗಳು ಈ ಎಲ್ಲ ಸಂಗತಿ ಗಳನ್ನು ತಿಳಿದುಕೊಂಡು ಜನರನ್ನು ಒಂದೆಡೆ ಕೂಡಿಸಿ ಆ ಹಳ್ಳಿಯಲ್ಲಿ ತಮ್ಮ ಉಪನ್ಯಾಸ ಮಾಡುವುದು ಇವರ ದಿನಚರಿಯಾಗಿತ್ತು. ಹೀಗಾಗಿ ವ್ಯಸನ ಬಿಡಿಸುವ ಜೊತೆಗೆ ಬಸವಣ್ಣ ನವರ ತತ್ವಗಳನ್ನು ಜನರಲ್ಲಿ ವಚನ ನಿರ್ವಚನ ಮಾಡುವ ಮೂಲಕ ಗಾಂಧೀಜಿಯತತ್ವಗಳನ್ನು ಇವುಗಳೊಂದಿಗೆ ಜನರಲ್ಲಿ ಮೂಡಿಸುವುದು ಹೀಗೆ ತಮ್ಮ ಬದುಕನ್ನು ಕಳೆಯತೊಡಗಿದರು. ಈ ಸಂದರ್ಭ ಗುಲ್ಬರ್ಗಾ ನಾಡಿಗೂ ಕೂಡ ಪ್ರವಾಸ ಬೆಳೆಸುತ್ತಾರೆ.ಮತ್ತೆ ಬಿಜಾಪುರ ಜಿಲ್ಲೆ ಯತ್ತ ಆಗಮಿಸಿ 1920-21ರಲ್ಲಿ ನರಗುಂದ, ಮಲಘಾನ, ತಾಳಿಕೋಟೆ, ಸಿಂದಗಿ, ಮುಶಿಬಿ ನಾಳ,ಮೊದಲಾದ ಸ್ಥಳಗಳಲ್ಲಿ ಬಸವಣ್ಣನವರ ವಚನ ಪ್ರವಚನ ನಡೆಸಿ ರಾಟಿ ಸಂಘಗಳನ್ನು ಸ್ಥಾಪಿಸುತ್ತಾರೆ.


ಇಲ್ಲಿಯ ಶಿಕ್ಷಣ ಪದ್ಧತಿ ಹೇಗಿತ್ತು ಎಂದರೆ ವಿದ್ಯಾರ್ಥಿಗಳು ಪ್ರಾತಃಕಾಲ ಮತ್ತು ಮಧ್ಯಾಹ್ನ 6ರಿಂದ 7ತಾಸು ಶಿಕ್ಷಣವನ್ನು ಹೊಂದುತ್ತಿದ್ದರು. ನೆಲದಮೇಲೆಯೇ ಕುಳಿತುಕೊಂಡು ಓದುವದು ಪಾಠಪ್ರಾರಂಭ ದಲ್ಲಿ “ಓಂ ಸಹನಾವವತು” ಎಂಬ ಉಪನಿಷತ್ ಮಂತ್ರವನ್ನುಹೇಳುವುದು ಕನ್ನಡ ಇಂಗ್ಲೀಷ ಎರಡೂ ಭಾಷೆ ಅವಶ್ಯಕ ವಾಗಿದ್ದವು. ಹಿಂದಿ ಮರಾಠಿ ಹೆಚ್ಚಿನ ತರಗತಿಗೆ ಬಂದ ಮೇಲೆ ಕಲಿಯುವ ವ್ಯವಸ್ಥೆ ಇದ್ದಿತು. ಗಣಿತ, ಭೂಗೋಲ, ಇತಿಹಾಸ ಈ ವಿಷಯ ಗಳು ಇಲ್ಲಿ ಕಲಿಸಲ್ಪಡುತ್ತಿದ್ದವು. ನೈತಿಕಶಿಕ್ಷಣಕ್ಕೆ ಹೆಚ್ಚು ಒತ್ತುಕೊಡಲಾಗು ತ್ತಿತ್ತು. ಇದು ವಸತಿ ಶಿಕ್ಷಣ ವ್ಯವಸ್ಥೆ ಆಗಿದ್ದರಿಂದ ವಿದ್ಯಾರ್ಥಿಗಳೇ ಊಟಕ್ಕೆ ನೀಡುವ,ಅತಿಥಿ ಸತ್ಕಾರ ಮಾಡುವ ತಮ್ಮತಮ್ಮ ಕೋಣೆಗಳನ್ನು ಸ್ವಚ್ಚವಾಗಿಟ್ಟು ಕೊಳ್ಳುವ ಕೆಲಸವನ್ನು ಸರತಿ ಪ್ರಕಾರ    ಮಾಡಬೇಕಾಗಿತ್ತು. ಇಲ್ಲಿನ ಶಿಕ್ಷಣ ಮುಗಿದ ಮೇಲೆ ಮನೆಯಲ್ಲಿ ಮಾಡಬೇಕಾದ ಅನೇಕ ಕೆಲಸಗಳ ಪ್ರತ್ಯಕ್ಷ ಶಿಕ್ಷಣವೂ ಇಲ್ಲಿ ಕೊಡಲ್ಪಡುತ್ತಿತ್ತು. ಇವರಿಗಾಗಿ ಒಂದು ವಾಚನಾಲಯವನ್ನು  ತೆರೆದು ದೇಶ ವಿದೇಶಗಳ ಈಗಿನ ಸ್ಥಿತಿಗತಿಗಳು ತಿಳಿಯುವಂತೆ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಇಲ್ಲಿನ ವಿದ್ಯಾರ್ಥಿಗಳೇ “ವಿದ್ಯಾಲಯಪತ್ರಿಕಾ”“ಬಾಲಸಂಗಯ್ಯ” ಎಂಬ ಕೈಬರವಣಿಗೆಯ ವಾರಪತ್ರಿಕೆಗಳನ್ನು ಬರೆಯುತ್ತಿದ್ದರು.


30-10-1926 ರಂದು ಆಲಮಟ್ಟಿಗೆ ಬಂದು ಬಂಥನಾಳ ಸ್ವಾಮಿಗಳ ಸಲಹೆಯ ಮೇರೆಗೆ ಅಲ್ಲಿರಲು ಯೋಚಿಸುತ್ತಾರೆ.ಅಲ್ಲಿ ವೀರಶೈವ ವಿದ್ಯಾಲಯ ಸ್ಥಾಪನೆಯ ನಿಲುವನ್ನು ಹಲವು ಹಿರಿಯ ಜೊತೆಯಲ್ಲಿ ಚರ್ಚಿಸಿ ಒಂದು ನಿರ್ಧಾರಕ್ಕೆ ಬರುತ್ತಾರೆ. ನಂತರ ಮತ್ತೆ ಗಾಂಧೀಜಿಯವರಲ್ಲಿಗೆ ತೆರಳಿ ಈ ಕುರಿತು ವೀರಶೈವ ವಿದ್ಯಾಲಯದಲ್ಲಿ ಹಮ್ಮಿಕೊಳ್ಳ ಬಹುದಾದ ಚಟುವಟಿಕೆಗಳು ಶಿಕ್ಷಣ ಪದ್ಧತಿ ಇತ್ಯಾದಿ ಚರ್ಚಿಸಿದಾಗ ಗಾಂಧೀಜಿಯವರು ರಾಷ್ಟ್ರೀಯ ಶಿಕ್ಷಣ ಪದ್ಧತಿಯಂತೆ ಶಿಕ್ಷಣ ನೀಡುವಂತೆ ಸಲಹೆ ನೀಡಿದಾಗ ಆ ಸಲಹೆ ಸ್ವೀಕರಿಸಿ ಮತ್ತೆ ಆಲಮಟ್ಟಿಗೆ ಬರುವರು. 13-5-1927ರಲ್ಲಿ ಈ ವಿದ್ಯಾಲಯ ಪ್ರಾರಂಭ ವಾಯಿತು. ಮೊದಲು 10ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಕಲಿಯಲು ಆಗಮಿಸಿದರು.


ಈ ವಿದ್ಯಾಲಯಕ್ಕೆ ಆಲಮಟ್ಟಿ ಪಾಟೀಲ ನೂರೊಂದಯ್ಯನವರು, ಗುಡಗುಂಟಿ ರಾಚಯ್ಯನವರು ಸ್ಥಳವನ್ನು ದಾನವಾಗಿ ಕೊಟ್ಟಿದ್ದರಲ್ಲದೇ ವಿದ್ಯಾರ್ಥಿಗಳ ದೇಹಾ ರೋಗ್ಯ ವಿಚಾರವಾಗಿ ಬಾಗಲಕೋಟೆಯ ಡಾಕ್ಟರ್ ಬಸಪ್ಪನವರು ಆಗಾಗ್ಗೆ  ವಿದ್ಯಾಲ ಯಕ್ಕೆ ಬಂದು ಯೋಗ್ಯ ಸೂಚನೆಗಳನ್ನು ನೀಡುತ್ತಿದ್ದರು.ವಿದ್ಯಾರ್ಥಿಗಳನ್ನು ಪ್ರತಿವರುಷ ಮಾಘಮಾಸದಲ್ಲಿ ಯಾವುದಾದರೊಂದು ಐತಿಹಾಸಿಕ ಪ್ರಸಿದ್ಧ ಸ್ಥಳಕ್ಕೆ ಕರೆದುಕೊಂಡು ಹೋಗಿ ಅಲ್ಲಿಯ ಸಂಗತಿಗಳನ್ನೆಲ್ಲ ಪ್ರತ್ಯಕ್ಷವಾಗಿ ತಿಳಿಸುವು ದನ್ನು ರೂಢಿಸಲಾಗಿತ್ತು. ಹೀಗೆ ಸಾಗಿದ ವಿದ್ಯಾಲಯದಲ್ಲಿ 9 ವರ್ಷಗಳಲ್ಲಿ 200 ವಿದ್ಯಾರ್ಥಿಗಳು ಶಿಕ್ಷಣಹೊಂದಿದ್ದರು ಎಂಬುದನ್ನು ಮಂಜಪ್ಪನವರು ತಮ್ಮ ಆತ್ಮಚರಿತ್ರೆಯಲ್ಲಿ ಉಲ್ಲೇಖಿ‌ಸಿದ್ದಾರೆ. 13-11-1929ರಲ್ಲಿ ಇಲ್ಲಿ ಮುದ್ರಣಾಲಯ ವನ್ನೂ ಕೂಡ ಸ್ಥಾಪಿಸಲಾಯಿತು. ಇಲ್ಲಿ ಮುದ್ರಣವಾದ ಮಹತ್ವದಪುಸ್ತಕಗಳೆಂದರೆ;

1) ಪುಲಕೇಶಿ     2)ವಿವೇಕಾನಂದರು 3)ಲಜಪತರಾಯ್4)ಏಕಲವ್ಯ 5)ಕಚದೇವ 6)ದೇವಯಾನಿ 7)ಸುಲಾದೇವಿ 8)ಬಸವಣ್ಣ 9)ಪ್ರಭುದೇವ 10)ಅಕ್ಕಮಹಾದೇವಿ 11)ಶರಣ ಬಸವೇಶ    12)ವಿದ್ಯಾಲಯ ಭಜನಾವಳಿ 13)ರಾಷ್ಟ್ರಗೀತೆ. 
           
 ಇವೆಲ್ಲ ವಿದ್ಯಾರ್ಥಿಗಳಿಗೆ ಉಪಯೋಗಿಸಲು ಮುದ್ರಿಸಿದವುಗಳಾಗಿದ್ದವು.”ಉದ್ಯೋಗ” ಎಂಬ ಮಾಸಪತ್ರಿಕೆಯನ್ನು ಎರಡು      ವರ್ಷಗಳಕಾಲ ಇಲ್ಲಿ ನಡೆಸಲಾಯಿತು. “ಶರಣ ಸಂದೇಶ” ಎಂಬ ವಾರಪತ್ರಿಕೆ ಯನ್ನು ಕೂಡ ಇಲ್ಲಿಂದ ಹೊರಡಿಸುತ್ತಿದ್ದರು.


ಬಸವ ಜಯಂತಿಯು ಕರ್ನಾಟಕದಲ್ಲಿ ಒಂದು ಹೊಸ ಜಾಗೃತಿಯನ್ನು ಉಂಟು ಮಾಡತೊಡಗಿದ್ದನ್ನುಮನಗಂಡು ಜಯಂತಿ ಯ ಕಾಲಕಾಲಕ್ಕೆ ಚಿಕ್ಕಚಿಕ್ಕ ಪುಸ್ತಕಗಳನ್ನು  ಪ್ರಕಟಿಸುವ ಜೊತೆಗೆ ಉಚಿತವಾಗಿ ಹಂಚು ವುದನ್ನು     ರೂಢಿಸಿದರು.    1933ರಲ್ಲಿ ಆರಂಭವಾದ ಈ ಪ್ರಯತ್ನದ ಫಲವಾಗಿ ಬಸವ ಸಂದೇಶ ಎಂಬ ಬಸವಣ್ಣ ನವರ ವಚನಗಳಲ್ಲಿ ಆಯ್ದುಕೊಂಡ 101 ವಚನಗಳ ಚಿಕ್ಕ ಪುಸ್ತಕವನ್ನು ಐವತ್ತು ಸಾವಿರಪ್ರತಿಗಳಲ್ಲಿ ಮುದ್ರಿಸಿ ಬಸವ ಜಯಂತಿ ಸಂದರ್ಭದಲ್ಲಿ ಹಂಚಿದ್ದನ್ನು ಸ್ಮರಣೀಯ ಎಂಬ ನೆನಪನ್ನು ತಮ್ಮ ಆತ್ಮಚರಿತ್ರೆಯಲ್ಲಿ ಬರೆದಿರುವರು.

ಮುಂದೆ ಶ್ರಾವಣ ಮಾಸದಲ್ಲಿಯೂ ಕೂಡ ಇಂತಹ ಚಿಕ್ಕ ಚಿಕ್ಕ ಪುಸ್ತಕಗಳನ್ನು ಪ್ರಕಟಿಸುವ ಪರಂಪರೆಗೆ ನಾಂದಿಹಾಡಿದರು. 1934 ರಲ್ಲಿ ಬಸವ ಜಯಂತಿಯ ಕಾಲಕ್ಕೆ ಭಕ್ತಿಯ ಬೆಳಕು ಎಂಬ ಬಸವಣ್ಣನವರ ಕೆಲವು ವಚನಗಳಿಗೆ ಅರ್ಥವನ್ನು ಬರೆದ ಚಿಕ್ಕ ಪುಸ್ತಕವನ್ನು 20 ಸಾವಿರ ಪ್ರತಿಗಳಲ್ಲಿ ಪ್ರಕಟಿಸಿ ಹಂಚಲಾಯಿತು. ಇದರೊಂದಿಗೆ ಚನ್ನಬಸವಣ್ಣನವರಉಪದೇಶ ಸಿದ್ಧರಾಮ ಶಿವಯೋಗಿಗಳ ಉಪದೇಶ ಎಂಬ ಚಿಕ್ಕ ಪುಸ್ತಕಗಳು ಬೇರೆ ಬೇರೆ ಕಾಲಘಟ್ಟದಲ್ಲಿ ಪ್ರಕಟವಾದವು.ವಿದ್ಯಾಲಯದಲ್ಲಿ ಮುದ್ರಣ ಯಂತ್ರವನ್ನು ಸ್ಥಾಪಿಸದೇ ಇದ್ದಿದ್ದರೆ ಇಷ್ಟೆಲ್ಲ ಪ್ರಚಾರ  ಕಾರ್ಯವಾಗುವುದು   ಶಕ್ಯವೇ ಇರಲಿಲ್ಲ ಎಂಬುದನ್ನು ಹರ್ಡೆಕರ ಮಂಜಪ್ಪ ತಮ್ಮ ಆತ್ಮಚರಿತ್ರೆಯಲ್ಲಿ ಸ್ಮರಿಸಿದ್ದಾರೆ.

ಈ ನಡುವೆ ಗಾಂಧೀಜಿಯವರೊಡನೆ ಓಡಾಟ ಸತ್ಯಾಗ್ರಹಗಳಲ್ಲಿ ಪಾಲ್ಗೊಳ್ಳುವುದು ನಡೆದೇ ಇತ್ತು.ಕ್ರಮೇಣ ಇವರ ದೇಹಸ್ಥಿತಿ ರಕ್ತದ ಒತ್ತಡದಿಂದಜರ್ಜರಿತವಾಗತೊಡ ಗಿತು,ನಿಶ್ಯಕ್ತಿಯಿಂದಾಗಿ ದೇಶದ ಸ್ವಾತಂತ್ರ್ಯ ‌ ಹೋರಾಟದಲ್ಲಿ ತೊಡಗುವುದನ್ನು ನಿಲ್ಲಿಸಿ ಆಲಮಟ್ಟಿಯಲ್ಲಿಯೆ ಸುತ್ತಮುತ್ತಲಿನ ಜನರನ್ನು ಸೇರಿಸಿ ಸಂದೇಶ ನೀಡುವುದನ್ನು ಮುಂದುವರೆಸಿದರು.

1947 ಜನೇವರಿ 3 ರಂದು ಆಲಮಟ್ಟಿ, ಚಿಮ್ಮಲಗಿ, ಬಾಗಲಕೋಟೆ,  ಬೇನಾಳ, ಮುದ್ದೇಬಿಹಾಳ,ಬಂಥನಾಳ,ನಿಡಗುಂದಿ ನೆರೆಯ  ಜಿಲ್ಲೆಯ  ಜನರನ್ನುಸೇರಿಸಿ, “ವೀರರಾಗಿರಿ,ಧೀರರಾಗಿರಿ,ಪವಿತ್ರವಾಗಿರಿ, ಸ್ವತಂತ್ರ ರಾಷ್ಟ್ರದ ವೀರರಾಗಿರಿ ಇದು ನನ್ನ ಕಡೆಯ ಮನವಿ” ಎಂದು ನೆರೆದ ಜನತೆಗೆ ಸಂದೇಶ ನೀಡಿದರು. ಅದೇದಿನ ಇಹಲೋಕವನ್ನು ತ್ಯಜಿಸಿದರು. ಅವರ ಪಾರ್ಥೀವ ಶರೀರದ ಅಂತ್ಯಸಂಸ್ಕಾರ ಆಲಮಟ್ಟಿಯಲ್ಲಿ ಜರುಗಿತು. ಆಸ್ಥಳ ಹಿನ್ನೀರಿನಲ್ಲಿ ಮುಳುಗಡೆಯಾದಾಗ ಗದುಗಿನ ತೋಂಟದ ಶ್ರೀಗಳು ಹೊಸಸ್ಥಳಕ್ಕೆ ಅದನ್ನು ಸ್ಥಳಾಂತರಿಸುವ ಮೂಲಕ ಅದಕ್ಕೊಂದು ಕಾಯಕಲ್ಪ ನೀಡಿದ್ದು, ಇಂದಿಗೂ ಆಸ್ಥಳ ಹರ್ಡೆಕರರಸವಿನೆನಪನ್ನು ಇಂದಿನ ಪೀಳಿಗೆಗೆ ತರುತ್ತಿರುವುದು   ಮರೆಯಲಾಗದ ಅನುಭೂತಿ. ನನಗಂತೂ ಆ ಸ್ಥಳ ನೋಡಿ ಅಲ್ಲಿ ‌ ಪ್ರಾರ್ಥನೆಗೈದು   ಬಂದಾಗಿನಿಂದ  ಅವರ  ವ್ಯಕ್ತಿತ್ವದ ಮೂರು ಪುಸ್ತಕಗಳನ್ನು ತಂದು ಅವರ ಬದುಕಿನ ಚಿತ್ರಣವನ್ನುಓದಿದಾಗ ಈ ಬಸವಜಯಂತಿ  ಸಂದರ್ಭದಲ್ಲಿ   ಅವರ ನೆನಪನ್ನು  ಮಾಡಿ ಕೊಡುವ ಪುಟ್ಟ ಪ್ರಯತ್ನಮಾಡಿದೆ,  ಅದು ಈ ಬರಹದ ಮೂಲಕ. ಜಗತ್ತಿನ  ಅನೇಕ  ಮಹಾನ್ ವ್ಯಕ್ತಿಗಳು ತಮ್ಮ ಆದರ್ಶದ ಬದುಕಿನಿಂದ ಇಂದಿಗೂ ಅಜರಾಮರರಾಗಿ ದ್ದಾರೆ. ಅವರ ಸಾಲಿನಲ್ಲಿ ನಮ್ಮ  ಹರ್ಡೆಕರ ಮಂಜಪ್ಪನವರೂ ಕೂಡ.  ಈ ದಿಸೆಯಲ್ಲಿ   ಅವರು ಬಸವಜಯಂತಿಯ ಆಚರಣೆಗೆ ನೀಡಿದ ಕೊಡುಗೆಯ ಸ್ಮರಣೆ ಈ ಸಂದರ್ಭ ದಲ್ಲಿ ಅವಶ್ಯಕ.

                     🔆🔆🔆

✍️ವೈ.ಬಿ.ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು
   ಮುನವಳ್ಳಿ 591117
ತಾ:ಸವದತ್ತಿ ಜಿ:ಬೆಳಗಾವಿ ಜಿಲ್ಲೆ