ಬಾಳ ಬಂಡಿಯ ಸುಗಮ ಸಾಗಿಸಲು
ದಿನವೂ ಕಾಯಕ ಉದರ ತುಂಬಿಸಲು
ಹೊಟ್ಟೆಗಾಗಿ ಎಲ್ಲವೂ ಗೇಣು ಬಟ್ಟೆಗಾಗಿ
ಶ್ರಮವೂ ಪರಿಶ್ರಮವೂ ಸಹ ಅದಕಾಗಿ

ಕೂತು ತಿಂದವನಿಗೆ ಸಾಲದು ಕುಡಿಕೆ ಹಣ
ಅದಕಾಗೇ ಸದಾ ದುಡಿಯಬೇಕು ಕಾಣ
ಕೈ ಕೆಸರಾದರೆ ಎಂದೂ ಬಾಯಿ ಮೊಸರು
ಜೀವನದಿ ಲಭ್ಯ ಹಣ ಸ್ಥಾನಮಾನ ಹೆಸರು

ಶ್ರಮದ ಪಾಠವ ನೀ ಪ್ರಕೃತಿಯಿಂದ ಕಲಿ
ಜೇನ್ನೊಣ ಇರುವೆಗಳಿಂದ ಅರಿವು ತಿಳಿ
ಕೂತರೆ ಕೊಳೆಯಬಹುದು ದುಡಿದರೆ ಅಲ್ಲ
ಕಷ್ಟ ಪಡದೆ ಕುಳಿತು ತಿನ್ನುವುದು ಸಲ್ಲ

ಶ್ರಮದ ಫಲವ ಎಂದಿಗೂ ಸಿಹಿ ಕಾಣು
ಬೆವರ ಸುರಿಸಿ ಉಂಡಾಗ ಬಾಳು ಸವಿ ಮಾಣು
ಬರೀ ಸ್ವಾರ್ಥ ನೋಡದೆ ಪರರಿಗೊಳಿತು ಮಾಡು
ಜೀವನದ ಸಾರ್ಥಕ್ಯ ಜನರ ನಗುವಲ್ಲಿ ನೋಡು

           🔆🔆🔆

✍️ ಸುಜಾತಾ ರವೀಶ್, ಮೈಸೂರು