ಅದೊಂದು  ಸುಂದರ  ಉದ್ಯಾನವನ. ಅಲ್ಲೊಂದು ಹಳದಿ ಚಿಟ್ಟೆಗಳ ಪರಿವಾರ ವಿತ್ತು. ನಿತ್ಯ ನೂರಾರು ಚಿಟ್ಟೆಗಳು ಸಂತಸ ದಿಂದ  ಉದ್ಯಾನದ  ತುಂಬಾ ಹಾರಾಡಿ ಕೊಂಡು ಇದ್ದವು. ಹೀಗಿರುವಾಗ ವಸಂತ ಋತುವಿನ ಸಂತಾನೋತ್ಪತ್ತಿ ಅವಧಿಯಲ್ಲಿ ಹೆಣ್ಣು ಚಿಟ್ಟೆಗಳು ಹಾಲ್ರಸದ ಗಿಡದ ಎಲೆಗಳ ಮೇಲೆ ಮೊಟ್ಟೆಗಳನ್ನು ಇಟ್ಟವು.


ಸಾಲು ಸಾಲಾಗಿ ಎಲೆಗಳಿಗೆ ಅಂಟಿಕೊಂಡಿದ್ದ ಮೊಟ್ಟೆಗಳು, ನಾಲ್ಕು ದಿನ ಧ್ಯಾನ ಮಾಡಿ ಐದನೇ ದಿನ ಕಂಬಳಿ ಹುಳವಾಗಿ ಹೊರ ಬಂದವು.


ಎಲ್ಲಾ ಹುಳಗಳು ಹಾಲ್ರಸದ ಸಸ್ಯಗಳನ್ನು ತಿಂದು ಶಕ್ತಿ ಪಡೆದವು. ನಂತರ ತಮ್ಮ ಸುತ್ತ ನೂಲಿನ ಎಳೆಗಳನ್ನು ಸುತ್ತಿ ಕೊಂಡು ‘ಪ್ಯುಪಾ’ ಎಂಬ ಕಠಿಣ ತಪಸ್ಸು ಮಾಡಿದವು. ತಪಸ್ಸಿನ ಪರಿಣಾಮ  ಎರಡು  ವಾರದ ನಂತರ ಎಲ್ಲಾ ಕಂಬಳಿಹುಳಗಳು ಚಿಟ್ಟೆಗಳಾಗಿ ಬದಲಾಗಿದ್ದವು…!!

ರೆಕ್ಕೆ ಬಲಿಯುತ್ತಿರುವ ತಮ್ಮ ಮರಿಗಳನ್ನು ಕಂಡು ಹಳದಿ ಚಿಟ್ಟೆಗಳಿಗೆ ಸಂಭ್ರಮವೋ ಸಂಭ್ರಮ. ಅವು ಎಲ್ಲಾ ಚಿಟ್ಟೆಮರಿಗಳನ್ನು ಮುದ್ದಿಸಲಾರಂಬಿಸಿದವು. ಆದರೆ ಒಂದು ಚಿಟ್ಟೆ   ಮರಿಯನ್ನು  ಕಂಡು   ಆಶ್ಚರ್ಯ ಪಟ್ಟವು. ಎಲ್ಲಾ ಮರಿಗಳು ಹಳದಿ ಬಣ್ಣ ಹೊಂದಿದ್ದರೆ ಈ ಮರಿ ಮಾತ್ರ ಬಿಳಿ ಬಣ್ಣ ಹೊಂದಿತ್ತು. ಇದು ನಮ್ಮ ಗುಂಪಿನ ಚಿಟ್ಟೆ ಮರಿಯಲ್ಲ ಎನ್ನುವ ಅನುಮಾನ ಅವಕ್ಕೆ ಮೂಡಿತು. ಬಣ್ಣದ ಕಾರಣದಿಂದಾಗಿ ಬಿಳಿ ಚಿಟ್ಟೆ  ಉಳಿದ  ಮರಿಗಳಿಂದ  ದೂರವೇ ಉಳಿಯಬೇಕಾಯಿತು.


ಉಳಿದ ಚಿಟ್ಟೆಗಳು ಅದನ್ನು ಆಟಕ್ಕೆ ಸೇರಿಸಿಕೊಳ್ಳುತ್ತಿರಲಿಲ್ಲ. ಇದರಿಂದ ನೊಂದ ಬಿಳಿ ಚಿಟ್ಟೆ ಆ ಗುಂಪಿ ನಿಂದ ದೂರ ಹಾರಿತು.

ಉದ್ಯಾನದ ಇನ್ನೊಂದು ಬದಿಯ ಗಿಡದ ಮೇಲೆ ದುಃಖದಿಂದ ಕುಳಿತಿತು. ಅದನ್ನು ಕಂಡ ಗಿಡದ ಹೂವು ..”ನೋಡು.. ಎಲ್ಲಾ ಚಿಟ್ಟೆಗಳು ಹೂವಿಂದ ಹೂವಿಗೆ ಹಾರುತ್ತಾ, ಮಧು ಹೀರುತ್ತಾ ಆನಂದಿಂದ ಆಡಿ ಕೊಂಡಿವೆ. ನೀನು ಮಾತ್ರ ಏಕೆ ಬೇಸರ ದಲ್ಲಿದ್ದೀಯಾ..? ” ಎಂದು ಕೇಳಿತು.


“ನನಗೆ ನನ್ನ ಬಣ್ಣ ಇಷ್ಟ ಇಲ್ಲ. ನಾನು ಆ ಚಿಟ್ಟೆಗಳ ಹಾಗೆ ಮೈ ಬಣ್ಣ ಪಡೆದಿಲ್ಲ. ಅದಕ್ಕೆ ಅವರು ನನ್ನನ್ನು ಗುಂಪಿಗೆ ಸೇರಿಸುತ್ತಿಲ್ಲ. ನನಗೂ ಅವುಗಳ ಹಾಗೆ ಹಳದಿ ಬಣ್ಣ ಬೇಕಿತ್ತು.. ಎಂದಿತು. ಆಗ ಹೂವು ..”ಬಾ ನನ್ನ ದಳಗಳ ಮೇಲೆ ಹೊರಳಾಡು. ಆಗ ಕೆಲಸಮಯ ನೀನು ಹಳದಿಯಾಗುವೆ..” ಎಂದಿತು. ಬಿಳಿ ಮರಿ ಚಿಟ್ಟೆ ಖುಷಿಯಿಂದ ಹಳದಿ ಹೂವಿನ ದಳಗಳ ಮೇಲೆಹೊರಳಾಡಿ ಅದರ ಬಣ್ಣದ ರಸಕಣಗಳನ್ನು ತನ್ನ ರೆಕ್ಕೆಗಳಿಗೆ ಪಡೆದು, ಖುಷಿಯಿಂದ ಇಡೀ ಉದ್ಯಾನದ ತುಂಬಾ ಹಾರಾಡಿತು.


ಮಾರನೇಯ ದಿನ ಕೆಂಪು ದಾಸವಾಳದ ಬಳಿ ಹೋಗಿ ..”ದಾಸವಾಳವೇ ನಿನ್ನ ದಳಗಳ ಕೆಂಪು ಬಣ್ಣವನ್ನು ಕೊಂಚ ನನಗೆ ನೀಡುವೆಯಾ ..? ಎಂದು ಕೇಳಿತು. ದಾಸವಾಳವು ..” ನಾನು ಮುಂಜಾನೆ ಅರಳಿ ಸಂಜೆ ಬಾಡುವ ಹೂವು. ನನ್ನ ಬಣ್ಣ, ಗಂಧ, ಮಕರಂದ ಗಳು ನಿಮಗಾಗಿಯೇ ಅಲ್ಲವೇ.. ಬಾ.. ” ಎಂದಿತು.. ಚಿಟ್ಟೆ ಖುಷಿಯಿಂದ ದಾಸವಾಳದ ಮೇಲೆ ಹೊರಳಾಡಿ ಕೆಂಬಣ್ಣ ಪಡೆಯಿತು. ಮೂರನೇಯದಿನ ಕೇಸರಿ ಗೊಂಡೆಯ ಬಣ್ಣ ಕಡ ಪಡೆದು ಉಳಿದ ಚಿಟ್ಟೆಗಳ ಮದ್ಯೆ ಖುಷಿಯಿಂದ ಹಾರಾಡಿತು.


ಹೀಗೆ ತನಗೆ ಬೇಕಾದ ಬಣ್ಣದಲ್ಲಿ ಮೀಯು ತ್ತಿರುವ ಬಿಳಿ ಚಿಟ್ಟೆಯನ್ನು ಕಂಡು ಉಳಿದ ಚಿಟ್ಟೆಗಳಿಗೆ ಅಚ್ಚರಿಯಾಯಿತು. ಈ ಚಿಟ್ಟೆ ತಮ್ಮೆಲ್ಲರಿಗಿಂತ ವಿಶೇಷವಾಗಿದೆ.. ಎಂದುಕೊಂಡು ಚಿಟ್ಟೆಯನ್ನು ವಿಶೇಷ ಪ್ರೀತಿಯಿಂದ ಮಾತನಾಡಿಸಿ ತಮ್ಮ ಗುಂಪಿಗೆ ಸೇರಿಸಿಕೊಂಡವು. ಆಗ ಚಿಟ್ಟೆ… ‘ನಾನು ಬರೀದೆ ನನ್ನ ಬಿಳಿ ಮೈಬಣ್ಣದ ಬಗ್ಗೆ ಕೀಳರಿಮೆ ಹೊಂದಿದ್ದೆ. ಬಿಳಿ ಬಣ್ಣದ ಹೊಂದಿದ ಕಾರಣದಿಂದ ಇಷ್ಟೆಲ್ಲಾ ಬಣ್ಣ ಗಳನ್ನು ನನ್ನ ರೆಕ್ಕೆಗಳಿಗೆ ತೊಡಿಸಿ ಕೊಳ್ಳಲು ನನಗೆ ಸಾಧ್ಯವಾಗಿದೆ…’ ಎಂದು ತನ್ನ ಬಣ್ಣದ ಬಗ್ಗೆ ಹಿರಿಮೆ ಪಟ್ಟುಕೊಂಡಿತು. ಜೀವಿತ ಅವಧಿಯಲ್ಲಿ ಮತ್ತೆ ಬೇರೆಬೇರೆ ಬಣ್ಣದಲ್ಲಿ ಕಾಣುವ ಯತ್ನ ಮಾಡದೇ ಬಿಳಿ ಚಿಟ್ಟೆಯಾಗಿ ಖುಷಿಯಾಗಿ ಬಾಳಿತು. ತನ್ನೊಳಗಿನ ಬೇಸರ ಹೋಗಲಾಡಿಸಿದ ಪರೋಪಕಾರಿ ಹೂಗಳಿಗೆ ಚಿಟ್ಟೆ ಪ್ರೀತಿಯ ಧನ್ಯವಾದ ಹೇಳಿತು.

               🔆🔆🔆

   ✍️ ರೇಖಾ ಭಟ್, ಯಲ್ಲಾಪೂರ