ಮುತ್ತಿನ ಹನಿಗಳು ಸುತ್ತಲು ಮುತ್ತಲು
ಮನವು ಅರಳಿ ಹೊಸತನ ತಂದಿದೆ ನನ್ನಲ್ಲಿ ನಿನ್ನಲ್ಲಿ

ಮಳೆಯೆಂದರೆ ಅದೊಂದು ಅದ್ಭುತ! ತುಂತುರು ಹನಿಯ ಸಿಂಚನ ಇರಲಿ ಜಡಿ ಮಳೆಯ ಸೋನೆ ಇರಲಿ, ಆರ್ಭಟಿಸಿ ಭೋರೆಂದು ಸುರಿಯುವ ಬಿರುಮಳೆಯೇ ಆಗಲಿ, ಪ್ರಕೃತಿಯ ಸೋಜಿಗವಾದ ಮಳೆ ಎಂದೆಂದಿಗೂ ಆಪ್ಯಾಯಮಾನವೇ. ಚಿಕ್ಕಂದಿನಲ್ಲಿ ಹಾಡುತ್ತಿದ್ದ

ಮಳೆ ಬಂತು ಮಳೆ ಕೊಡೆ ಹಿಡಿದು ನಡೆ

ಪ್ರಾಸಬದ್ಧ ಪದ್ಯವಾಗಲಿ

ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ

ಎಂದು ಕಿರುಚಾಡಿ ಗೆಳೆಯರೊಂದಿಗೆ ಹುಯಿಲೆಬ್ಬಿಸಿದ್ದುದಾಗಲಿ ಮರೆಯಲುಂಟೆ ? ಬಾಲ್ಯದ ನೆನಪುಗಳೊಂದಿಗೆ ಮಳೆ ಎಂತಹ ತಳುಕು ಹಾಕಿಕೊಂಡಿದೆ ಎಂದರೆ ಪ್ರತಿ ಬಾಲ್ಯದ ಮೆಲುಕುಗಳಲ್ಲಿ ಮಳೆ ಇಣುಕಿ ನೋಡುತ್ತದೆ ಹಣಿಕಿ ಹಾಕೇ ಬಿಡುತ್ತದೆ.

ವರ್ಷದ ಮೊದಲ ಮಳೆ

ಯುಗಾದಿಯ ನಂತರ ಬಿರುಬೇಸಿಗೆ ಶುರುವಾದರೂ ಅದೇ ಸಮಯದಲ್ಲಿ ವರ್ಷದ ಮೊದಲ ಮಳೆಯ ಆಗಮನವೂ ಕೂಡ . ಅದೇನು ಒಂದೇ ಬಾರಿಗೆ ಧಿಡೀರ್ ಭೇಟಿ ಕೊಡುತ್ತಿತ್ತೇ? ಒಂದೆರಡು ದಿನ ಸಂಜೆಯಲ್ಲಿ ಕಾರ್ಮೋಡವಾಗಿ ಮಿಂಚು ಗುಡುಗು ಸಿಡಿಲುಗಳ ಆರ್ಭಟ ತೋರಿಸಿ ಆಸೆ ತೋರಿಸಿ ಮರೆಯಾಗಿ ಇನ್ನೆಲ್ಲೋ ಸುರಿಯುತ್ತಿತ್ತು. ಅಂತೂ ಇಂತೂ 1 ದಿನ ಸಂಜೆ ಧೋ ಎಂದು ಮಳೆ ಸುರಿದು ಮನವೂ ವಾತಾವರಣವೂ ತಂಪು.

ಸುತ್ತಲೂ ಆವರಿಸಿತ್ತಿದ್ದ ಆ ಮೃದ್ಗಂಧದ ಕಂಪು. ಅಂದಹಾಗೆ ಈ ಬೇಸಿಗೆಯ ಮಳೆಗಳ ಮುಸ್ಸಂಜೆಯಲ್ಲಿ ಸಂಜೆ ಮಳೆ ಶುರುವಾಗುತ್ತಿದ್ದ ಹಾಗೆ ಬಿಸಿಬಿಸಿ ಕರಿದ ತಿಂಡಿ ಮಾಡುತ್ತಿದ್ದುದು ನಮ್ಮ ಮನೆಯ ವಿಶೇಷ . ಅದಕ್ಕೇ ಏನೋ ಈಗಲೂ ಮಳೆ ಬಂದಾಗ ಮನ ಬಜ್ಜಿ ಬೋಂಡಾಗಳ ಕಡೆಗೆ ಓಡಿ ಬಿಡುತ್ತದೆ.

ಹಾಗೆಯೇ ಅಮ್ಮ ಪ್ರತಿ ಸಾರಿಯೂ “ಸಂಜೆ ಬಂದ ಮಳೆ ಸಂಜೆ ಬಂದ ನೆಂಟ ರಾತ್ರಿ ಉಳಿಯುತ್ತಾರೆ “ ಎನ್ನುತ್ತಿದ್ದ ಗಾದೆಯೂ ನೆನಪಿಗೆ ಬರುತ್ತದೆ. ಬೇಸಿಗೆಯಾದ್ದರಿಂದ ಒಣಗಲಿಟ್ಟ ಹಪ್ಪಳ ಸಂಡಿಗೆ ಕಾಳು ಹುಣಸೆ ಹಣ್ಣುಗಳನ್ನು ಓಡಿಹೋಗಿ ತರುವ ಕೆಲಸವೂಬೀಳುತ್ತಿತ್ತು .

ಈ ಮೊದಲ ಮಳೆಯ ನೆನಪು ಬಾಲ್ಯದಲ್ಲಿ ಹರೆಯದಲ್ಲೂ ಮತ್ತೀಗ ಬಾಳ ಮುಸ್ಸಂಜೆ ಯಲ್ಲೂ ಒಂದೊಂದು ಅನುಭೂತಿ…… ಮೂರನೇ ತರಗತಿಯಲ್ಲಿದ್ದಾಗ ಕಡೆಯ ಪರೀಕ್ಷೆಯ ದಿನ 4 ಗಂಟೆಗೆ ಪರೀಕ್ಷೆ ಮುಗಿದರೂ ಶಾಲೆಯಲ್ಲಿ ಹೊಸದಾಗಿ ಕಟ್ಟಿದ ಜಾರುಬಂಡೆಯಲ್ಲಿ ಮನಸೇಚ್ಛೆ ನಾನು ಹಾಗೂ ನಮ್ಮ ಮನೆ ಬಳಿ ಇದ್ದ ಗಾಯತ್ರಿ ಆಡಿ ನಂತರ ಮನೆಕಡೆ ಹೊರಟೆವು. ದಾರಿಯಲ್ಲಿ ಎಡಪಕ್ಕ ಸ್ಮಶಾನ ಬಲಗಡೆ ತೆಂಗಿನತೋಟ. ಆಗ ಶುರುವಾದ ಜೋರು ಮಳೆಯಲ್ಲಿ ತೋಪಿನಲ್ಲಿ ಎಷ್ಟೋ ಹೊತ್ತು ನಿಂತಿದ್ದು ಎದುರುಗಡೆ ಸ್ಮಶಾನ ನೋಡಲು ಅಂಜಿ ತಿರುಗಿಕೊಂಡು ನಿಂತಿದ್ದು ಎಷ್ಟೋ ವರ್ಷಗಳಾದರೂ ಕಣ್ಣಿಗೆ ಕಟ್ಟಿ ದಂತಿದೆ. ಆ ನಂತರ ಮನೆಯಲ್ಲಿ ಬೈಸಿ ಕೊಂಡಿದ್ದರ ಬಗ್ಗೆ ಮತ್ತೆ ಕೇಳಬೇಡಿ!

ನಮ್ಮ ಮದುವೆಗೆ ಮುಂಚೆ ಕುಕ್ಕನಹಳ್ಳಿ ಕೆರೆ ದಂಡೆಯ ಮೇಲಿರುವಾಗ ಇದೇ ಬೇಸಿಗೆಯ ಸಂಜೆ ಮಳೆ….. ಎದುರಿಗಿದ್ದ ಜಲರಾಶಿಯ ಮೇಲೆ ಮಳೆಯ ನರ್ತನ. ಲತಾ ಚಪ್ಪರದ ಸಂದಿಯಿಂದ ತೊಟ್ಟಿಕ್ಕುತ್ತಿದ್ದ ಜಲಧಾರೆ.. ಒತ್ತಿ ನಿಂತಿದ್ದ ಜೋಡಿ ಜೀವಗಳಲ್ಲಿ

ಒಲಿದ ಜೀವ ಜೊತೆಯಲಿರಲು ಬಾಳು ಸುಂದರ”

ಹಾಡನ್ನು ನೆನಪಿಸಿದ್ದು ಸುಳ್ಳಲ್ಲ. ಆ ರೋಮಾಂಚನದ ಸವಿಗಳಿಗೆ ಈಗಲೂ ಮುಗುಳು ನಗೆ ತರಿಸುತ್ತಿದೆ. ನಂತರದ ಧಾವಂತದ ದಿನಗಳಲ್ಲಿ ಕಚೇರಿಯಿಂದ ಹೊರಡುವಾಗ ಬಂದು ವಿಳಂಬ ಮಾಡಿಸು ತ್ತಿದ್ದ ಮಳೆಯ ಬಗ್ಗೆ ಬೇಸರವೇ. ಇತ್ತೀಚೆಗೆ ಸಂಜೆಯ ವಾಯುವಿಹಾರಕ್ಕೆ ಅಪರೂಪಕ್ಕೆ ಹೋದಾಗ ಮಳೆಗೆ ಸಿಲುಕಿ ಮತ್ತೊಮ್ಮೆ ಮೊದಲ ಮಳೆಯ ಭೇಟಿಯಾಗಿತ್ತು. ಭಯ ಧಾವಂತವಿರದೆ ಮಳೆಯ ಆರ್ಭಟ ನೋಡು ವಾಗ ಜೀವನದ ಸಣ್ಣ ಸಣ್ಣ ಸವಿಕ್ಷಣ ಗಳನ್ನು ಆಸ್ವಾದಿಸುವುದನ್ನೇ ಮರೆತಿದ್ದೇನಲ್ಲ ಎಂದೆನಿಸಿತು . ಸಣ್ಣಗೆ ಮಳೆ ಬರುತ್ತಿದ್ದರೂ ಚಿಕ್ಕ ಮಕ್ಕಳ ಹಾಗೆ ನೆಂದು ಬಂದೇ ಸಂಭ್ರಮಿಸಿದೆ .

“ಏನೋ ಹೊಸ ಉಲ್ಲಾಸ ಸಂತೋಷ ಈ ದಿನ”

ಎಂದು ಗುನುಗಿಕೊಳ್ಳುತ್ತಾ… ಸದ್ಯ ಬಾಲ್ಯದ ಹಾಗೆ ಕಾಗದದ ದೋಣಿ ಮಾಡಿ ತೇಲಿ ಬಿಡಲಿಲ್ಲ .

ನಾನು ಹುಟ್ಟಿದ್ದೇ ಬೇಸಿಗೆಯ ಮೊದಲ ಮಳೆಯ ದಿನದಲ್ಲಂತೆ. ಅಜ್ಜ ಸೂಲಗಿತ್ತಿ ಯನ್ನು ಕರೆತರಲು ಛತ್ರಿ ಹಿಡಿದು ಹೋಗಿ ದ್ದರು ಅಂತ ಅಮ್ಮ ಹೇಳುತ್ತಿದ್ದರು. ಅದಕ್ಕೆ ಮಳೆಯೆಂದರೆ ನನಗೆ ತುಂಬಾನೇ ಪ್ರೀತಿ . ಮಲೆನಾಡಿನ ವರ್ಣನೆ ಓದಿದಾಗಲೆಲ್ಲ ನಾನು ಅಲ್ಲಿರಬಾರದಿತ್ತೇ ಅನ್ನಿಸುತ್ತಿತ್ತು. ಅದಕ್ಕೆ 2ವರ್ಷ ಸಕಲೇಶಪುರಕ್ಕೆ ವರ್ಗವಾಗಿ ಹೋಗುವ ಅವಕಾಶ ಒದಗಿ ಬಂದಿತ್ತು . ಮಳೆಯ ಸವಿಯ ಬೋನಸ್ ಜತೆ ಬಟ್ಟೆ ಒಣಗಿಸಲಾಗದ , ತರಕಾರಿ ಬೂಷ್ಟು ಹಿಡಿ ಯುವ ಕಷ್ಟ, ದಿನಗಟ್ಟಲೆ ವಿದ್ಯುತ್ ಇಲ್ಲದೆ ಕೆಳಗಿನಿಂದ ನೀರು ಹೊರುವ ಸಜಾ ಎಲ್ಲಾ ಇದ್ದರೂ ಜಿಟಿಜಿಟಿ ಮಳೆ ನೋಡುತ್ತಾ ಬಿಸಿಬಿಸಿ ಕಾಫಿ ಕುರುಕು ತಿನ್ನುತ್ತಿದ್ದ ಆ ಮಜಾನೇ ಬೇರೆ.

ಇಂದು ಮಳೆ ಬಗೆಗಿನ ಸವಿ ನೆನಪುಗಳನ್ನು ಮಾತ್ರ ಹಂಚಿಕೊಂಡಿರುವೆ.ಫಜೀತಿಗೆ ಸಿಲು ಕಿಸಿದ ಪ್ರಸಂಗಗಳನ್ನು ಮತ್ತೆಂದಾದರೂ ನೆನಪಿಸಿಕೊಳ್ಳುವೆ. ಆದರೆ ಮಳೆ ಬಂದು ಇಳೆ ತಂಪಾಗಿ ಬೆಳೆ ತರುವ ಸೊಗದ ಸಿರಿ ಹರಿಸುವ ಗಳಿಗೆಗಳು ನಿರಂತರವಾಗಿರಲಿ . ವರುಣನನ್ನು ಪೂಜಿಸಿ ಆರಾಧಿಸಿ ಕರೆ ಯೋಣ .”ಮಳೆ ಬಂದರೆ ಕೇಡೇ ಮಕ್ಕಳಾದರೆ ಕೇಡೇ” ಎನ್ನುವ ಸಂಸ್ಕೃತಿ ನಮ್ಮದು. “ರೇನ್ ರೇನ್ ಗೋ ಅವೇ” ಅನ್ನುವ ಪರಿಪಾಠ ಜಾಯಮಾನ ನಮ್ಮ ದಲ್ಲ. ಬೇಡವೂ ಬೇಡ ಏನಂತೀರಿ?

ಸುರಿವ ಮಳೆಯ ಹನಿಯ ತೆರೆಗಳ ಹಿಂದೆ ಅಗಲಿದ ಪ್ರೀತಿಪಾತ್ರರ ಮುಖಗಳು ಹಾಗೇ ತೇಲಿ ಬರುತ್ತದೆ. ನೋವು ನಲಿವುಗಳ ಆವರ್ತನ ಸಹಜವೆಂಬ ಪಾಠದೊಂದಿಗೆ ಕಳೆದ ಸವಿಗಳಿಗೆಗಳ ನೆನಪಷ್ಟೇ ನಿರಂತರ . ಇಂದಿನ ಈ ವರ್ತಮಾನವೂ ನಾಳೆಯ ಗತಕಾಲ ಎಂಬ ಜೀವನದ ಸತ್ಯವನ್ನು ಹೇಳುತ್ತಲೇ ಇರುತ್ತದೆ.

              🔆🔆🔆

✍️ಸುಜಾತಾ ರವೀಶ್, ಮೈಸೂರು