
ನ್ಯೂ ಜೆರ್ಸಿಯಲ್ಲಿ ನವೆಂಬರ್ ತಿಂಗಳಿನಿಂದ ಮಾರ್ಚಿನವರೆಗಿರುವ ಸುದೀರ್ಘ ಚಳಿಗಾಲ ಪ್ರತಿಯೊಂದು ತಿಂಗಳಲ್ಲೂ ಬೇರೆ-ಬೇರೆ ತೆರನಾದ ಅನುಭವಗಳನ್ನು ನೀಡುತ್ತದೆ. ಮುಂಬರುವ ಚಳಿಗಾಲಕ್ಕೆ ಸೆಪ್ಟೆಂಬರ್-ಅಕ್ಟೋಬರ್ ತಿಂಗಳುಗಳಿಂದಲೇ ತಮ್ಮನ್ನು ಸಜ್ಜುಗೊಳಿಸಿಕೊಳ್ಳುವ ಮರ-ಗಿಡಗಳಂತೆ, ಚಳಿಗಾಲದ ವಿವಿಧ ಹಂತಗಳನ್ನು ಎದುರಿಸಲು ನಮ್ಮ ತಯಾರಿಯೂ ಕಂಡುಬರುತ್ತದೆ. ಸುತ್ತಮುತ್ತಲಿನ ಗಿಡ-ಮರಗಳು ತಮ್ಮ ಎಲೆಗಳನ್ನು ಕಳೆದುಕೊಳ್ಳುತ್ತಾಹೋದಂತೆ, ವಾತಾವರಣದಲ್ಲಿನ ಚಳಿಯ ಅಂಶಕ್ಕೆ ತಕ್ಕಂತೆ ಬೆಚ್ಚಗಿನ ಉಣ್ಣೆಯ ಬಟ್ಟೆಗಳ ಪದರಗಳನ್ನು ಮೈಗೇರಿಸಿಕೊಳ್ಳುವುದು ನಮ್ಮ ದೈನಂದಿನ ಚಟುವಟಿಕೆಯಾಗಿಬಿಡುತ್ತದೆ. ಕೆಲವೊಮ್ಮೆ ಚಳಿಯನ್ನು ತಡೆಯದೆ ಸೂರ್ಯನೇ ಬೆಚ್ಚಗೆ ಹೊದ್ದು ಮಲಗಿದನೇನೋ ಎನ್ನುವಂಥ ವಾತಾವರಣ ಕಂಡುಬಂದರೆ, ಮತ್ತೆ ಕೆಲವೊಮ್ಮೆ ಪ್ರಕಾಶಿಸುವ ಸೂರ್ಯನಿದ್ದಾಗಲೂ, ಧಮನಿಗಳಲ್ಲಿ ಹರಿಯುವ ರಕ್ತವನ್ನು ಹೆಪ್ಪುಗಟ್ಟಿಸುವುದೇನೋ ಎನ್ನುವಂಥ ಚಳಿಗಾಳಿ ಬೀಸುತ್ತದೆ. ಚಳಿಗಾಲದ ಹಿಮಪಾತ, ಶುಭ್ರವಾದ ಹಿಮ ಕಣ್ಣಿಗೆ ಆಹ್ಲಾದ ನೀಡಿದರೆ, ಅಡಿಗಟ್ಟಲೆ ಹಿಮ ಸುರಿದು, ಕೆಲ ಸಮಯದ ನಂತರ ಬಿಳಿಯ ಬಣ್ಣದ ಕಲ್ಲುಗುಡ್ಡದಂತಾಗುವುದು, ಹಿಮದ ಚಂಡಮಾರುತ, ಹಿಮ ಮಳೆಗಳು, ಇಳಿಸಂಜೆಯಿಲ್ಲದೇ ತಡಮಧ್ಯಾಹ್ನವೆನ್ನುವಾಗಲೇ ಆವರಿಸುವ ಕತ್ತಲು ಹಲವು ಬಾರಿ ಮೈ-ಮನಗಳಿಗೆ ಹಿಂಸೆಯೆನಿಸುತ್ತವೆ. ಚಳಿಯ ವಾತಾವರಣದ ಏರಿಳಿತಗಳನ್ನು, ವೈಪರೀತ್ಯಗಳನ್ನು ಎದುರಿಸುತ್ತ ಹೋಗುವಾಗ ಅದೇನೋ ಜಡತನ, ನಿರಾಸೆ ಮೂಡಿದಂತಾಗಿ ನಮಗೆ ನಾವೇ “ಈ ಚಳಿಗಾಲ ಯಾವಾಗ ಮುಗಿಯುವುದೋ? ವಸಂತನ ಆಗಮನ ಯಾವಾಗ ಆಗುವುದೋ?” ಎಂದು ಪ್ರಶ್ನಿಸಿಕೊಳ್ಳುವಂತಾಗುತ್ತದೆ. ಪ್ರತಿವರ್ಷವೂ ಮನಸ್ಸಿನಲ್ಲಿ ಈ ಪ್ರಶ್ನೆ ಮೂಡಿದಾಗ, ಕವನವೊಂದರ ಸಾಲುಗಳು ನೆನಪಾಗುತ್ತವೆ.

“ಬತ್ತಿದೆದೆಗೆ ಹೊಸ ಆಸೆಯ ಹೊತ್ತಿಸಿ, ಕೊಂಬೆ ಕೊಂಬೆಯಲಿ ನಂಬಿಕೆಯುಕ್ಕಿಸಿ
ಜಡತನದಲಿ ಚೈತನ್ಯವ ಚಿಗುರಿಸಿ ವಸಂತಮೂಡುವುದೆಂದಿಗೆ?
ದಿಕ್ಕು ತಪ್ಪಿಸುವ ಕತ್ತಲೆಗಳಲಿ ನಂದಿದಾಸೆಗಳ ಕೋಟಿ ಕಣ್ಗಳಲಿ,
ಬೆಳಗಿನ, ನಲವಿನ, ಗೆಲುವಿನ ಭಾವದ ವಸಂತ ಮೂಡುವುದೆಂದಿಗೆ?”
ಪ್ರಕೃತಿಯಲ್ಲಿನ ಎಲ್ಲ ಜೀವರಾಶಿಗಳೂ ಚಳಿಗಾಲದ ಅನುಭವವನ್ನು ತಮ್ಮದಾಗಿಸಿಕೊಂಡು, ಹೊಸ ಭರವಸೆಯೊಂದಿಗೆ ವಸಂತಾಗಮನವನ್ನು ಎದುರುನೋಡುವ ಭಾವವನ್ನು ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪರವರು ಈ ಕವನದ ಪ್ರತಿ ಸಾಲುಗಳಲ್ಲಿ ಬರೆದಿದ್ದಾರೆ. ಕವನದ ಸಾಲುಗಳು ಅದೆಷ್ಟು ಅರ್ಥಪೂರ್ಣವಾಗಿವೆ ಎಂದುಕೊಳ್ಳುತ್ತಾ ವಸಂತಾಗಮನದ ಬಗ್ಗೆ ಯೋಚಿಸುತ್ತಾ ಹೋದಂತೆ ಋತು ವಸಂತನನ್ನು ಎಲ್ಲರ ಬದುಕಿನಲ್ಲಿ ಹೊಸ ಭರವಸೆಯನ್ನು ಮೂಡಿಸುವ ಕಲಾವಿದ ಎನ್ನಬಹುದು ಎಂಬ ಯೋಚನೆಯೂ ಮೂಡುತ್ತದೆ. ’ವಸಂತ’ ಎನ್ನುವುದು ಕೇವಲ ಒಂದು ’ಋತು’ವಲ್ಲ, ಅದು ಸೃಜನಶೀಲತೆಯ ಸಂಕೇತವಾಗಿ ಪ್ರತಿವರ್ಷ ಪ್ರಕೃತಿಯನ್ನು ಹೊಸತಾಗಿಸುವುದರೊಂದಿಗೆ ನಮ್ಮ ಬದುಕಿಗೆ ಹೊಸ ಉತ್ಸಾಹವನ್ನು ನೀಡುತ್ತದೆ ಎಂಬ ಅರಿವಾಗುತ್ತದೆ. ಹೇಮಂತ ಋತುವಿನಲ್ಲಿ ಎಲೆಯುದುರಿಸಿಕೊಂಡು ಬೋಳಾಗಿ ನಿಂತ ಮರಗಿಡಗಳು, ಶಿಶಿರ ಋತುವಿನಲ್ಲಿ ಪ್ರಕೃತಿಯ ಕಠಿಣತೆಯನ್ನು ಎದುರಿಸಿ, ವಸಂತಾಗಮನದಿಂದ ಮತ್ತೆ ಚಿಗುರಿ ಹಸುರುಡುಗೆಯನ್ನುಟ್ಟು ಕಂಗೊಳಿಸುವ ವೈಖರಿ ಜೀವನದ ಪಾಠವಾಗಿಯೂ ಕಂಡುಬರುತ್ತದೆ. ನಾಲ್ಕು ಋತುಗಳ ರಾಜ್ಯವೆಂದೇ ಪ್ರಖ್ಯಾತವಾಗಿರುವ ನ್ಯೂ ಜೆರ್ಸಿಯಲ್ಲಿ ವಸಂತಾಗಮನ ನೀಡುವ ಸುಂದರ ಭಾವಗಳು ನೂರಾರು. ನಮ್ಮ ಸುತ್ತಮುತ್ತಲಿನ ಗಿಡಮರಗಳು ಅದೇ ಹಳೆಯ ಬೇರು, ರೆಂಬೆ ಕೊಂಬೆಗಳನ್ನಿಟ್ಟುಕೊಂಡು ಹೊಸ ಚಿಗುರುಗಳಿಂದ, ಹೊಸ ಚೇತನವನ್ನು ಕಂಡುಕೊಳ್ಳುವ ರೀತಿ ನಮ್ಮ ಬದುಕಿಗೂ ಹೊಸ ಸಂಕಲ್ಪವನ್ನು ನೀಡುತ್ತದೆ.

“ಹಳೆ ನೆನಪುಗಳುದರಲಿ ಬಿಡು ಬೀಸುವ ಚಳಿಗಾಳಿಗೆ,
ತರಗೆಲೆಗಳ ಚಿತೆಯುರಿಯಲಿ ಚೈತ್ರೋದಯ ಜ್ವಾಲೆಗೆ.
ಹೊಸ ಭರವಸೆ ಚಿಗುರುತಲಿದೆ ಎಲೆಯುದುರಿದ ಕೊಂಬೆಗೆ
ಅರಳಿ ನಗುವ ಹೂಗಳಲ್ಲಿ ಪುಟಿಯುತಲಿದೆ ನಂಬಿಕೆ.”
ಎನ್ನುವ ಕವಿನುಡಿಯಂತೆ ನಮ್ಮ ಹಳೆ ನೆನಪುಗಳೊಂದಿಗೆ ಹೊಸ ಭರವಸೆಯೊಂದು ಚಿಗುರೊಡೆಯುತ್ತದೆ. ಅದರೊಂದಿಗೆ ನವೋಲ್ಲಾಸ ತರುವ ಇಲ್ಲಿನ ವಸಂತಋತುವಿನ ದಿನಗಳು ಹಳೆನೆನಪುಗಳನ್ನು ನೆನಪಿಸಿ, ಬಾಲ್ಯದ ದಿನಗಳನ್ನು ಮೆಲುಕುಹಾಕಿಸುತ್ತವೆ. ಶಾಲೆಯ ಸಹಪಾಠಿಗಳೊಂದಿಗೆ, ಅಕ್ಕ-ತಂಗಿ, ಅಣ್ಣ-ತಮ್ಮರೊಂದಿಗೆ ಚೈತ್ರದ ತಿಳಿಗಾಳಿಯಲ್ಲಿ ಮಾವಿನ ಚಿಗುರಿನ ಸುವಾಸನೆಯನ್ನು ಸವಿಯುತ್ತ, ಶಾಲೆಯ ಆಟದ ಮೈದಾನದಲ್ಲಿ, ಮನೆಯ ಅಂಗಳದಲ್ಲಿ, ಹಿತ್ತಲಿನಲ್ಲಿ, ತೋಟಗಳಲ್ಲಿ ಹಾಡನ್ನು ಹಾಡಿಕೊಂಡು ಆಡಿದ ಬಾಲ್ಯದ ಆ ದಿನಗಳು ನೆನಪಿನಂಗಳದಲ್ಲಿ ಮತ್ತೆ ಚಿಗುರೊಡೆಯುತ್ತವೆ.

“ವಸಂತ ಬಂದ, ಋತುಗಳ ರಾಜ ತಾ ಬಂದ
ಚಿಗುರನು ತಂದ, ಪೆಣ್ಗಳ ಕುಣಿಸುತ ನಿಂದ,
ಚಳಿಯನು ಕೊಂದ, ಹಕ್ಕಿಗಳುಲಿಗಳ ಚಂದ,
ಕೂವು ಜಗ್ ಜಗ್ ಪುವ್ವೀ ಟೂವಿಟ್ಟುವೂ |
ಮಾವಿನ ಸೊಂಪು, ಮಲ್ಲಿಗೆ ಬಯಲೆಲ್ಲ ಕಂಪು
ಗಾಳಿಯ ತಂಪು, ಜನಗಳ ಜಾತ್ರೆಯ ಕಂಪು
ಕಿವಿಗಳಿಗಿಂಪು, ಹಕ್ಕಿಗಳುಲುಹಿನ ಪೆಂಪು
ಕೂವು ಜಗ್ ಜಗ್ ಪುವ್ವೀ ಟೂವಿಟ್ಟುವೂ |”
ಆಂಗ್ಲ ಕವಿ ಥಾಮಸ್ ನಾಶ್ ಬರೆದಿರುವ ’ಸ್ಪ್ರಿಂಗ್’ ಎಂಬ ಕವನವನ್ನು ಬಿ.ಎಂ.ಶ್ರೀಕಂಠಯ್ಯರವರು ಕನ್ನಡಕ್ಕೆ ಅನುವಾದಿಸಿದ ಈ ಸಾಲುಗಳು ಬಾಲ್ಯದ ನೆನಪಾಗಿ ಕಾಡುತ್ತವೆ.

ಹೊಸ ಹುರುಪಿನೊಂದಿಗೆ ಪ್ರಾರಂಭಗೊಳ್ಳುವ ಇಲ್ಲಿನ ’ಸ್ಪ್ರಿಂಗ್’ ಸೀಸನ್ನಿನ ದಿನಗಳು ಹಕ್ಕಿಗಳ ಕಲರವದೊಂದಿಗೆ ಪ್ರಾರಂಭವಾಗುತ್ತವೆ. ಚಳಿಗಾಲದಲ್ಲಿ ವಲಸೆ ಹೋಗಿ ಬಂದ ಹಕ್ಕಿಗಳು ತಮ್ಮ ವಲಸೆ ದಿನಗಳ ಅನುಭವಗಳನ್ನೆಲ್ಲ ತಮ್ಮ-ತಮ್ಮಲ್ಲೇ ಹಂಚಿಕೊಳ್ಳುತ್ತಿರಬಹುದೇ? ಅಥವಾ ನಮ್ಮೊಂದಿಗೆ ಹೇಳಿಕೊಳ್ಳುತ್ತಿರಬಹುದೇ? ಎನ್ನುವ ಯೋಚನೆಯೇ ಮನಸ್ಸಿಗೆ ಮುದ ನಿಡುತ್ತದೆ. ನೋಡು-ನೋಡುತ್ತಿದ್ದಂತೆಯೇ ಎಲೆಗಳು ಚಿಗುರಿ, ಮೊಗ್ಗು ಮೂಡಿ, ಹೂ ಅರಳಿ ಕಂಗೊಳಿಸುವ ಗಿಡಮರಗಳು ಕಣ್ಣಿಗೆ ಹಬ್ಬವಾಗುತ್ತವೆ. ’ಉದ್ಯಾನವನಗಳ ರಾಜ್ಯ’ (Garden State’) ಎಂದೇ ಕರೆಸಿಕೊಳ್ಳುವ ನ್ಯೂ ಜೆರ್ಸಿಯ ಉದ್ದಗಲಕ್ಕೂ ಈ ಸೊಬಗು ಕಂಡುಬರುತ್ತದೆ. ಚಳಿಗಾಲದ ದಿನಗಳಿಗೆಂದು ಆಹಾರ ಸಂಗ್ರಹಿಸಿಟ್ಟುಕೊಂಡು ಬಿಲ ಸೇರುವ ಅಳಿಲುಗಳು ಮತ್ತೆ ಎಳೆಬಿಸಿಲಿಗೆ ಮೈಯೊಡ್ಡುತ್ತ, ಆಹಾರ ಅರಸಿಕೊಂಡು ಅತ್ತಿತ್ತ ಸುತ್ತುವುದು ನಮ್ಮ ಮನಸ್ಸನ್ನು ಮತ್ತೆ ಮಗುವಾಗಿಸುತ್ತವೆ. ಬಣ್ಣ-ಬಣ್ಣದ ಪಕ್ಷಿಗಳು ಗಿಡಮರಗಳ ರೆಂಬೆ-ಕೊಂಬೆಗಳನ್ನು ಅಲಂಕರಿಸುತ್ತವೆ. ಈ ದಿನಗಳಲ್ಲೇ ಸಣ್ಣಗೆ ಸುರಿಯುವ ಮಳೆ, ಗಿಡಮರಗಳಲ್ಲಿ ಅರಳಿ ನಗುತಿರುವ ಹೂವುಗಳನ್ನು ನೆಲಕ್ಕುದುರಿಸಿ, ಖಳನಾಯಕನ ನಗೆಯನ್ನು ಬೀರುವಂತೆನಿಸುತ್ತದೆ. ನ್ಯೂ ಜೆರ್ಸಿಯಲ್ಲಿನ ಅನೇಕ ಸಸ್ಯೋದ್ಯಾನಗಳು, ಕಡಲ ಕಿನಾರೆಯಲ್ಲಿ ನಡೆಯುವ ಗಾಳಿಪಟ ಉತ್ಸವ, ಬೀದಿ ಉತ್ಸವಗಳು ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ತಮ್ಮತ್ತ ಆಕರ್ಷಿಸುತ್ತವೆ. ’ಈಸ್ಟರ್’ ಹಬ್ಬದಾಚರಣೆಯೂ ಜೊತೆಯಾಗಿ, ಅದರೊಂದಿಗೆ ನಡೆಯುವ್ ’ಈಸ್ಟರ್ ಎಗ್ ಹಂಟ್’ ಚಟುವಟಿಕೆ ಮಕ್ಕಳಲ್ಲಿ ಉತ್ಸಾಹವನ್ನು ಮೂಡಿಸುತ್ತದೆ. ಇದು ಹೆಚ್ಚಾಗಿ ಹೊರಾಂಗಣದಲ್ಲಿ ನಡೆಯುವ ಚಟುವಟಿಕೆಯಾಗಿದ್ದು, ಉದ್ಯಾನವನಗಳಲ್ಲಿ ಅಲ್ಲಲ್ಲಿ ಬಚ್ಚಿಟ್ಟ ಬಣ್ಣ-ಬಣ್ಣದ ಮೊಟ್ಟೆಗಳನ್ನು ಮಕ್ಕಳು ಹುಡುಕಿ, ತಮ್ಮ-ತಮ್ಮ ಬುಟ್ಟಿಗಳಲ್ಲಿ ತುಂಬಿಕೊಂಡು ಆನಂದಿಸುತ್ತಾರೆ. ಇದೇ ಸಮಯದಲ್ಲಿ ಇಲ್ಲಿನ ಶಾಲೆ-ಕಾಲೇಜುಗಳಿಗೆ ಒಂದು ವಾರ ದೊರಕುವ ಸ್ಪ್ರಿಂಗ್ ರಜಾದಿನಗಳು, ಕುಟುಂಬ ಸಮೇತರಾಗಿ ಪ್ರವಾಸಗಳನ್ನು ಕೈಗೊಳ್ಳವ ಅವಕಾಶವನ್ನು ಒದಗಿಸುತ್ತವೆ. ಇದರೊಂದಿಗೆ ಚೈತ್ರಮಾಸದ ಮೊದಲ ದಿನದಂದು ಆಚರಿಸಲ್ಪಡುವ ’ಯುಗಾದಿ’ ಹಬ್ಬವೂ ಜೊತೆಯಾಗಿ, ಹೊಸ ಆರಂಭದ ಸಂಕೇತವಾಗಿ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆಯುತ್ತದೆ.

ನಮಗೆಲ್ಲ ತಿಳಿದಿರುವಂತೆ ಯುಗಾದಿಯ ದಿನದಂದು ಸೇವಿಸುವ ಬೇವು-ಬೆಲ್ಲ, ಬದುಕಿನ ಏರಿಳಿತಗಳನ್ನೂ, ಕಷ್ಟ-ಸುಖಗಳನ್ನೂ ಸಮನಾಗಿ ಸ್ವೀಕರಿಸಬೇಕೆಂಬುದನ್ನು ಸೂಚಿಸುತ್ತವಲ್ಲವೇ? ಜೀವನದ ನೋವು-ನಲಿವುಗಳನ್ನು ಸಮನಾಗಿ ತೂಗಿ ನೋಡಿ, ಎರಡಕ್ಕೂ ಸಮನಾದ ಬೆಲೆಕೊಡಬೇಕೆಂಬ ಪಾಠವನ್ನು ಮತ್ತೆ-ಮತ್ತೆ ನೆನಪಿಸುವ ದಿನವಾಗುತ್ತದೆ. ಬದುಕಿನಲ್ಲಿ ಬರುವ ಕಷ್ಟ, ಸೋಲು, ಹಿನ್ನಡೆಗಳ ಕಹಿಯನ್ನುಂಡು ಜೀವನಾನುಭವವನ್ನು ಪಡೆಯುವ ಮನುಷ್ಯ ಗಟ್ಟಿಗನಾಗುತ್ತಾನೆ. ಚೈತ್ರದ ಚಿಗುರಿನಲ್ಲಿ ಮಾವಿನ ಚಿಗುರಿನೊಂದಿಗೆ ಬೇವಿನ ಚಿಗುರೂ ಇದೆ. ಕಹಿಯನ್ನುಂಡು ಕಲಿಯುವ ಪಾಠ, ಬದುಕು ನೀಡುವ ಒಳ್ಳೆಯ ಅನುಭವಗಳ ಸಿಹಿಯನ್ನೂ ಸವಿಯುವಂತಾಗಲಿ ಎಂದು ಹಾರೈಸುವ ಕವಿನುಡಿ, ನೀತಿಮಾತಾಗಿ ಯುಗಾದಿ ಹಬ್ಬದ ಹರಕೆಯೆನಿಸುತ್ತದೆ.
“ಪ್ರತಿಯುಗಾದಿಗೂ ಕಲಿಯುಗ ಸವೆಯುತ ಕೃತಯುಗ ಹತ್ತಿರವಾಗುತಿದೆ.
ಪ್ರತಿ ಯುಗಾದಿಗೂ ಮಾವು ಚಿಗುರುವುದು ಬೇವು ಸಹ ಚಿಗುರುತ್ತದೆ.
ಪ್ರತಿ ಯುಗಾದಿಗೂ ಬೇವಿನ ಕಹಿಯೆ ಪ್ರಾಶನ ಮಂತ್ರದ ಪ್ರಶಸ್ತಿ ವಾಚನ
ಕಹಿಗಳನುಣ್ಣುತ ಬಲಿಷ್ಠರಾಗಿರಿ ಸವಿಗಳ ಸವಿಯುತ ಮಧುರರಾಗಿರಿ
ಎಂದಲ್ಲವೇ ಈ ಹಬ್ಬದ ನಲ್ನುಡಿ.”
ಕವಿ ಪು.ತಿ.ನ. ಅವರು ಬರೆದಿರುವ ಈ ಸಾಲುಗಳು ಯುಗಾದಿ ಆದಿಯೂ ಹೌದು, ಅಂತ್ಯವೂ ಹೌದು ಎನ್ನುವ ಅರಿವನ್ನು ಮೂಡಿಸುತ್ತವೆ. ಯುಗಾದಿ ಹಬ್ಬವನ್ನು ಎದುರುನೋಡುತ್ತ, ಮನೆಯನ್ನೆಲ್ಲ ಸ್ವಚ್ಛಗೊಳಿಸಿ ಓರಣವಾಗಿಸುವ ನಾವು ಹಬ್ಬದ ದಿನ ಹೊಸ ತೋರಣ, ರಂಗೋಲಿಗಳಿಂದ ಮನೆಯನ್ನು ಅಲಂಕರಿಸಿ, ಹೊಸಬಟ್ಟೆಯನ್ನು ತೊಟ್ಟು ಹಬ್ಬವನ್ನು ಆಚರಿಸುವ ಯೋಜನೆಗೆ ಸಹಾಯವಾಗುವಂತೆ ಇಲ್ಲಿನ ’ದೇಸೀ’ಅಂಗಡಿಗಳಲ್ಲಿ ಖರೀದಿಗೆ ದೊರಕುವ ಮಾವಿನ ಎಲೆಗಳು, ಬೇವಿನ ಎಲೆಗಳು, ಹೂವು, ಚಿಗುರು, ಇಲ್ಲಿ ಹುಟ್ಟಿ-ಬೆಳೆಯುತ್ತಿರುವ ನಮ್ಮ ಮಕ್ಕಳಿಗೆ ಸಂಪ್ರದಾಯವನ್ನು ಪರಿಚಯಿಸುವಲ್ಲಿ ಸಹಾಯವಾಗುತ್ತವೆ. ಇಲ್ಲಿನ ಭಾರತೀಯ ಮೂಲದ ದೇವಸ್ಥಾನಗಳಲ್ಲಿ ನಡೆಯುವ ವಿಶೇಷ ಪೂಜೆ, ಪಂಚಾಂಗ ಶ್ರವಣ ’ಯುಗಾದಿ’ ಹಬ್ಬದ ಆಚರಣೆಯನ್ನು ವಿಶೇಷವಾಗಿಸುತ್ತವೆ.

ಏಪ್ರಿಲ್ ತಿಂಗಳಿನಲ್ಲಿ ಇಲ್ಲಿನ ಅನೇಕ ಸಂಘ-ಸಂಸ್ಥೆಗಳು ’ವಸಂತೋತ್ಸವ’ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. ಭಾರತದಿಂದ ಅಮೆರಿಕಾ ಪ್ರವಾಸ ಕೈಗೊಳ್ಳುವ ಕಲಾವಿದರಿಗೆ, ಸ್ಥಳೀಯ ಕಲಾವಿದರಿಗೆ ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ನೀಡಲು ಅವಕಾಶ ನೀಡಲಾಗುತ್ತದೆ. ಬೇವು-ಬೆಲ್ಲ, ಹೋಳಿಗೆಯೂಟ, ಚಳಿಗಾಲದ ದಿನಗಳಲ್ಲಿ ಅಪರೂಪವಾಗಿಬಿಟ್ಟಿದ್ದ ಸ್ನೇಹಿತರ ಮರುಭೇಟಿ ಈ ವಸಂತೋತ್ಸವ ಆಚರಣೆಗಳನ್ನು ವಿಶೇಷವಾಗಿಸುವುದರೊಂದಿಗೆ, ನಾವೆಲ್ಲ ವಸಂತಾಗಮನದೊಂದಿಗೆ ’ವಸಂತೋತ್ಸವ’ವನ್ನೂ ನಿರೀಕ್ಷಿಸುವಂತೆ ಮಾಡುತ್ತವೆ.

“ಹೊಸ ವರ್ಷ ಬಂದಂತೆ ಯಾರು ಬಂದಾರು
ಏನೋ ನಿರೀಕ್ಷೆ ಸೃಷ್ಟಿಯಲೆಲ್ಲ
ಹೂಗಳ ಪರೀಕ್ಷೆ ದುಂಬಿಗಳಿಗೆಲ್ಲ
ಬಂದನೊ ವಸಂತ ಬಂದಿಗಳೆ ಎಲ್ಲ!
ಹೊಸ ಬಯಕೆ, ಹೊಸ ಆಲೆ ರುಚಿರುಚಿಯ ಬೆಲ್ಲ.”
ಸೃಷ್ಟಿಯ ಸಮಸ್ತ ಜೀವರಾಶಿಗಳಲ್ಲಿ ಹೊಸತನ ಮೂಡುವುದರೊಂದಿಗೆ ಹೊಸ ಆಲೆಮನೆಯಲ್ಲಿ ರೂಪಗೊಳ್ಳುವ ಬೆಲ್ಲದ ಸವಿಯನ್ನು ಸವಿಯುವ ನಿರೀಕ್ಷೆಯಂತೆ ವಸಂತನ ಆಗಮನವಾಗುವುದು ಎನ್ನುವ ಡಾ|| ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರ ಕವನದ ಸಾಲುಗಳು ನಾವೆಲ್ಲ ಮತ್ತೆ, ಮತ್ತೆ ವಸಂತಾಗಮನವನ್ನು ಎದುರುನೋಡುವಂತೆ ಮಾಡುತ್ತವೆ.

✍️ಶ್ರೀಮತಿ. ಸರಿತಾ ನವಲಿ ನ್ಯೂಜರ್ಸಿ, ಅಮೇರಿಕಾ
ಯುಗಾದಿ ಕುರಿತು ಬರಹ ಭಾರತದ ಸಂಸ್ಕೃತಿ ಯಲ್ಲಿ ಯುಗಾದಿ ಹಬ್ಬದ ಮಹತ್ವ ವನ್ನು ಡಾ. ಪ್ರೇಮಲತಾ ಎಳೆಎಳೆಯಾಗಿ ರೂಪಿಸಿರುವರು.ಅದಕ್ಕೆ ಸಾಂದರ್ಭಿಕ ಚಿತ್ರವನ್ನು ಅಳವಡಿಸಿ ಶ್ರಾವಣ ಬ್ಲಾಗ್ ಬರಹಕ್ಕೆ ಮತ್ತಷ್ಟು ಮೆರಗು ನೀಡಿದೆ ಯೆಂದರೆ ಅತಿಶಯೋಕ್ತಿ ಯಲ್ಲ.ನಿಜಕ್ಕೂ ಶ್ರಾವಣ ಬ್ಲಾಗ್ ನಲ್ಲಿ ಹೊಸ ಬರಹಗಾರರು ಬರಹ ರೂಪಿಸುವ ಜೊತೆಗೆ ಅಂಕಣಗಳು ಹೊರಹೊಮ್ಮುವ ಮೂಲಕ ಶ್ರಾವಣ ಹೊಸ ರೂಪವನ್ನು ಪಡೆಯುತ್ತಿರುವುದು ಹೆಮ್ಮೆಯ ಸಂಗತಿ. ಎಲ್ಲರಿಗೂ ಯುಗಾದಿಯ ಶುಭಾಶಯಗಳು — ಶ್ರೀ. ವೈ.ಬಿ.ಕಡಕೋಳ ಶಿಕ್ಷಕರು,ಸಂಪನ್ಮೂಲ ವ್ಯಕ್ತಿಗಳು ಮುನವಳ್ಳಿ
LikeLike
ತುಂಬಾ ಸೊಗಸಾಗಿ ಬರೆದಿದ್ದೀರಿ. ನಾಲ್ಕು ಋತುಗಳ ರಾಜ್ಯ ನ್ಯುಜೆರ್ಸಿ ಯಲ್ಲಿನ ಋತುಗಳ ವಾತಾವರಣ ಮತ್ತು ಭಾರತದ ಯುಗಾದಿ ಎರಡನ್ನೂ ಗಮನದಲ್ಲಿರಿಸಿಕೊಂಡು ಒಳ್ಳೆಯ ಪ್ರವಾಸ ಕಥನದಂತೆ ಲೇಖನ ಸೆಳೆಯುತ್ತದೆ.
LikeLiked by 1 person
ತುಂಬಾ ಆಪ್ತತೆಯ ಅನುಭವ ನೀಡುವ ಸೊಗಸಾದ ಬರಹ .
ಸುಜಾತಾ
LikeLiked by 1 person