ಓ ಕನಸೇ,
ನನ್ನೆಲ್ಲಾ ಸಾಲಿನಲ್ಲಿ ಬಂದು
ಹೋಗುವ ಪದವೇ ನೀನು
ನನ್ನೆಲ್ಲಾ ಬರಹಗಳ ಬುನಾದಿಯಾಗಿರುವೆ

ಕಾಲ್ಪನಿಕ ಕಥೆಗೆ ಸ್ಫೂರ್ತಿಯಾಗಿ
ಕಲ್ಪನೆಗೆ ಕಾಲ್ಗೆಜ್ಜೆ ತೊಡಿಸಿರುವೆ
ನೆನಪೆಂಬ ನಗುವಿನ ಛಾಯೆಯಾಗಿ
ಕನವರಿಕೆಯಲ್ಲಿ ಬಂದಿಳಿದಿರುವೆ

ಒಂದೊಮ್ಮೆ ಖುಷಿಯ ಕೊಟ್ಟು
ಮತ್ತೊಮ್ಮೆ ದುಗುಡವ ತಂದಿಟ್ಟು
ಕೆಲವೊಮ್ಮೆ ಬಂದು ಹೋಗುವೆ
ಅರ್ಥವಾದರೂ ಅನರ್ಥದಂತೆ

ಅರಿವಾಗದಂತೆ ನೀ ಬರುವೆ
ತಿಳಿವ ಮುನ್ನ ಅಗೋಚರವಾಗಿ
ನೆನಪಿನಲ್ಲಿರುವೆ ನೀ ಕೇವಲ
ಅಸ್ಪಷ್ಟತೆಯ ನೆರಳಾಗಿ

🔆🔆🔆

✍️ ಕೀರ್ತನ ಆಳ್ವಾಸ್ ಕಾಲೇಜು,ಮೂಡಬಿದರೆ.