ಎದೆಗವಿಚಿದ ತಲೆ ಸವರಿದಾಗ
ಅದೊಂದು ಉನ್ಮಾದ
ಅತೀರೇಕದ ಉಲ್ಲಾಸ
ಅನುಭವಿಸಿದವರ ಅನುಭೂತಿ …

ದೇಹಗಳೊಂದಾದಾಗ
ಬರಿದಾಗದ ಸೆಲೆ
ಮನಸ್ಸುಗಳೊಂದಾಗದಾಗಿನ
ಬರೀ ಕಾಮದ ವಾಸನೆ…

ಲೋಕದ ಆತ್ಯಂತಿಕ
ಸುಖದ ಜಲಪಾತ
ವಿಕಲ್ಪ ಮೋಹದ
ನಿರಂತರ ಹುಟುಕಾಟ
ಹೆಜ್ಜೆ ಮೂಡದ ಹಾದಿಯಲಿ…

ನನಗೀಗಿಗ ಅರ್ಥವಾಗುತ್ತಿದ್ದಾಳೆ
ನಿರ್ವಿಕಲ್ಪ ಅಕ್ಕ
ಪ್ರೇಮದ ಹುಡುಕಾಟಕ್ಕೆ
ಕಾಣದ ಚನ್ನಮಲ್ಲನನ್ನು
ಅರಸುತ್ತ ಹೊರಟ ಪರಿ…

ಪ್ರೀತಿ ಎಂಬುದು
ದೈಹಿಕ ಆಸಕ್ತಿ ಮಾತ್ರವಲ್ಲ
ಬಯಲ ಬೆಳಗಿನ
ಅಮಿತಾನಂದ
ದಿವ್ಯಾನುಭವ
ಹಸಿದವನ ಅಮೃತ ..

ನೂರು ಭಾವಗಳ
ಸಾವಿರದ ಸುಖದ
ಒಲವೇ ವಿಸ್ಮಯ
ಅಪಸವ್ಯಗಳ ದಾಟಿ
ಸುರಿದ ಕಂಬನಿ ಹನಿ…

ಮೋಹದ ಪಾಶದ
ವಿಷವೃಕ್ಷಗಳ ನಡುವೆ
ಜೀವಂತವಾಗಿದೆ ಇನ್ನೂ
ನಿಶ್ಚಲ ಪ್ರೀತಿ
ನಿರ್ಮಲ ಹೃದಯಕ್ಕಾಗಿ…

        🔆🔆🔆

✍️ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ರಾಣಿಚೆನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ