ಬೇಂದ್ರೆ ನೀ ಬದುಕಿನರ್ಥ ಹುಡುಕಲು
ತದಕಿದ ಕೆದಕಿದ ಮಣ್ಣ ಹುಡಿಗಳು
ಜಡಿ ಜಡಿದು ಸುರಿದ ಮಳೆಗೆ
ಪುಳಕಗೊಳಿಸುವವು ಕಂಪಾಗಿ

ಬೇಂದ್ರೆ ನಿನ್ನ ಕವಿಹೃದಯದೊಳಗಿಂದ
ಧುಮುಕಿದ ಕಾವ್ಯ ಧಾರೆಯಿಂದ
ಸಾಧನಕೇರಿ ತುಂಬಿ ತುಳುಕುತಿದೆ
ತೆರೆತೆರೆಯಾಗಿ ಮನದ ತಡಿ ತಟ್ಟುತಿದೆ

ಕವಿವರ ಹೆಪ್ಪುಗಟ್ಟಿವೆ  ನಿನ್ನ ನೋವುಗಳು
ಧಾರವಾಡದ ಹೂಗಳಲಿ ರಂಗುಗಳಾಗಿ
ನಲಿವು-ಒಲವುಗಳೇ  ಹಬ್ಬಿವೆ
ಕಾವ್ಯ ಕುಸುಮಗಳ ಸೌರಭವಾಗಿ

ಧಾರವಾಡದ ಮಳೆಯ ಆರ್ಭಟದಲಿ
ತುಂತುರಿನ ತಂಪಿನಲಿ ನಿನ್ನ ವ್ಯಥೆ ಕಥೆಗಳಿವೆ
ಸಿರಿ ಹಸಿರಿನ ಬಸಿರಿನಲಿ
ನೀ ಬಳಲಿದ ಬಾಳಿನುಸಿರಿನ ಬಿಸಿ ಇದೆ

ಹಸಿವೆ  ನೀರಡಿಕೆಗಳ ಉಂಡು ದು:ಖ ದುಮ್ಮಾನ
ಹಾಸಿ ಹೊದೆದು ನೀ ಬದುಕಿದಿ
ಕಾವ್ಯಲೋಕದಲ್ಲಿ ಬದುಕಿನರ್ಥ  ಹುಡುಕಿದಿ
ಶಬ್ದಗಾರುಡಿಗನಾದಿ  ಧ್ರುವತಾರೆಯಾದಿ
                      *******

 —-ಶ್ರೀ ರವಿಶಂಕರ ಗಡಿಯಪ್ಪನವರ (ಮುಂಗಾರಿನ ಮಳೆ ಕವನ ಸಂಕಲನದಿಂದ)