ಸೋಮವಾರದ ‘ಮಂಡೆಬಿಸಿʼಯಲ್ಲಿ ಆ ವ್ಯಕ್ತಿ ಕೇಳಿದ್ದು ನಾಲ್ಕು ವರ್ಷದ ಹಿಂದೆ ನಮ್ಮ ತಾಯಿ ಕಣ್ಣು ತಪಾಸಣೆ ಮಾಡಿಸಿದ್ದರು ಇಲ್ಲೇ.. ದೀಪಾವಳಿಯ ಮಾರನೇ ದಿನ..ಆಚಸ್ಮಾ ನಂಬರ್ ಹುಡುಕಿ ಕೊಡ್ತೀರ ಡಾಕ್ಟ್ರೆ..ʼ

ರೋಗಿಗಳ ಒತ್ತಡ ಹೆಚ್ಚಿರುವ ಸಮಯದಲ್ಲಿ ಇಂತಹ ಬೇಡಿಕೆ ಕಿರಿಕಿರಿ ಉಂಟು ಮಾಡುವುದು ಖರೆಯೇ. ಆದರೂ ಸಹನೆಯಿಂದ ಉತ್ತರಿಸಿದೆ.. ಅಷ್ಟು ಹಳೆಯದು ಸಿಗುವುದು ಕಷ್ಟವೇ.. ಆರು ತಿಂಗಳಿಗೇ ಕಣ್ಣಿನ ನಂಬರ್ ಬದಲಿ ಆಗುವುದುಂಟು.. ಹೀಗಿದ್ದಾಗ ನಾಲ್ಕು ವರ್ಷ ಹಳೆಯದು ಎಂದರೆ ಉಪಯೋಗಕ್ಕೆ ಬರಲಿಕ್ಕಿಲ್ಲ. ಇನ್ನೊಮ್ಮೆ ತಪಾಸಣೆ ಮಾಡಿ ಚಸ್ಮಾ ತೆಗೆದುಕೊಳ್ಳುವುದೇ ಒಳ್ಳೆಯದು.ʼ
ಸರದಿಯಲ್ಲಿ ಕಾಯುತ್ತಿರುವ ರೋಗಿಗಳ ಸಂಖ್ಯೆ ಯನ್ನು ಗಮನದಲ್ಲಿ ತಂದು ಆಗ ಆ ವ್ಯಕ್ತಿ ಮರಳಿ ದರಾದರೂ ಮತ್ತೆ ಸಂಜೆ ದವಾಖಾನೆ ಮುಚ್ಚುವ ಹೊತ್ತಿಗೆ ಬಂದು ಆಗ್ರಹಪೂರ್ವಕವಾಗಿ ಕೋರಿ ಕೊಂಡರು : ‘ಹೇಗಾದರೂ ಮಾಡಿ ಆ ನಂಬರ್ ಹುಡುಕಿಕೊಡಿʼ

‘ಹಳೆಯ ರಿಜಿಸ್ಟರ್ ಗಳು ರೆಕಾರ್ಡ್ ಸೆಕ್ಷನ್ನಿನಲ್ಲಿ ಇರುವುದರಿಂದ ಸ್ವಲ್ಪ ಸಮಯ ಬೇಕಾಗಬಹುದು. ನಿಮ್ಮ ತಾಯಿಯ ಹೆಸರು, ತಪಾಸಣೆ ಮಾಡಿದ ದಿನ, ನಿಮ್ಮ ಸಂಪರ್ಕ ಸಂಖ್ಯೆ ಇವನ್ನು ಒಂದು ಹಾಳೆಯಲ್ಲಿ ಬರೆದುಕೊಡಿ. ಸಿಕ್ಕಿದೊಡನೆ ತಿಳಿಸುತ್ತೇನೆ. ಅಷ್ಟೆಲ್ಲ ಮಾಡಿ ಹುಡುಕಿದರೂ ಅವರ ಕಣ್ಣಿಗೆ ಆ ಚಸ್ಮಾದಿಂದ ಕಾಣಿಸುತ್ತದೆ ಎಂಬುದು ನಿಕ್ಕಿಯಿಲ್ಲ ..ಸುಮ್ಮನೆ ದುಡ್ಡು ವ್ಯರ್ಥವಾದೀತು..ಆ ಬದಲು ಒಮ್ಮೆ ಸಮರ್ಪಕವಾಗಿ ತಪಾಸಣೆ ಮಾಡಿಸಿದರೆ ನಿಖರವಾದ ನಂಬರ್ ಬರೆದುಕೊಡಲು ಸಾಧ್ಯವಾಗುತ್ತದೆ. ನಾಳೆ ಬೆಳಿಗ್ಗೆ ಕರೆದುಕೊಂಡು ಬಂದುಬಿಡಿʼ ಎಂದು ಸಮಜಾಯಿಷಿ ಹೇಳಿದರೂ ಅವರು ಬಿಲ್ ಕುಲ್ ಒಪ್ಪಲು ತಯಾರಿರಲಿಲ್ಲ. ನೋಡಿದರೆ ಒಳ್ಳೆಯ ವಿದ್ಯಾವಂತರೂ, ಸಾಕಷ್ಟು ಉತ್ತಮವಾದ ಉದ್ಯೋಗ ಹೊಂದಿದವರೂ ಎನ್ನಿಸುತ್ತಾರೆ. ಆದರೆ ಅರ್ಥವೇ ಆಗುತ್ತಿಲ್ಲವಲ್ಲ ನಾನು ಹೇಳಿದ್ದು ಇವರಿಗೆ!..

‘ತಪಾಸಣೆಗೆ ಕರೆದುಕೊಂಡು ಬರಲು ನಮ್ಮ ತಾಯಿ ಬದುಕಿಲ್ಲ ಡಾಕ್ಟ್ರೆ!!ʼನಿಧಾನವಾಗಿ ಅವರು ಹೇಳಿದ ಮಾತು ಹೌಹಾರಿ ಬೀಳುವಂತೆ ಮಾಡಿತು ನನ್ನನ್ನು.
‘ಆಂ? ಬದುಕಿಲ್ಲದಿದ್ರೆ ಚಸ್ಮಾ ಮಾಡಿಸಿ ಏನು ಮಾಡ್ತೀರಿ??!! ತಮಾಷೆ ಮಾಡ್ತಿದ್ದೀರ ಹೇಗೆ..ʼ
ತನ್ನೆರಡೂ ಕೈಬೆರಳುಗಳಿಂದ ಹಣೆಯನ್ನು ಒತ್ತಿ ಕೊಳ್ಳುತ್ತ ಅವರು ನನ್ನೆಡೆಗೆ ತುಂಬಾ ಆರ್ತವಾದ ನೋಟ ಬೀರಿದರು.
‘ನಿಮಗೆ ಐದು ನಿಮಿಷ ಬಿಡುವಿದ್ರೆ ಇರುವ ವಿಷಯ ಹೇಳಿ ಬಿಡ್ತೇನೆ.. ಡಾಕ್ಟರಾಗಿ ನಿಮಗೆ ಇದರಲ್ಲಿ ನಂಬಿಕೆ ಇದೆಯೋ ನನಗೆ ಗೊತ್ತಿಲ್ಲ.. ಆದರೆ ನಮಗೆ ಈಗ ಬೇರೆ ಯಾವ ದಾರಿಯೂ ಕಾಣುತ್ತಿಲ್ಲ ಅದಕ್ಕೋಸ್ಕರ..ʼ

‘ಇಲ್ಲಿಂದ ಹದಿನಾಲ್ಕು ಕಿಲೋಮೀಟರ್ ನಮ್ಮ ಮನೆಗೆ. ಹಳ್ಳಿಯಲ್ಲಿ ಅಡಿಕೆ ತೋಟ, ಸ್ವಲ್ಪ ಗದ್ದೆ ಇದೆ.. ನಮ್ಮ ತಂದೆ ನಾವು ಚಿಕ್ಕವರಿದ್ದಾಗಲೇ ಹಾವು ಕಡಿದು ತೀರಿಕೊಂಡುಬಿಟ್ಟರು. ನಾವೆರಡು ಮಕ್ಕಳನ್ನು ನಮ್ಮ ತಾಯಿ ತುಂಬ ಕಷ್ಟಪಟ್ಟು ಬೆಳೆಸಿದರು. ಅಣ್ಣ ಪೌರೋಹಿತ್ಯ ಮಾಡುತ್ತ ತೋಟದ ಉಸ್ತುವಾರಿ ನೋಡಿಕೊಂಡಿದ್ದಾನೆ.. ನಾನು ಕಲಿತು ಬ್ಯಾಂಕ್ ಪರೀಕ್ಷೆಯಲ್ಲಿ ಪಾಸಾಗಿ ಧಾರವಾಡದಲ್ಲಿ ನೌಕರಿ ಮಾಡಿಕೊಂಡಿದ್ದೇನೆ. ನನ್ನ ಹೆಂಡತಿಯೂ ಬ್ಯಾಂಕಲ್ಲಿ ನನ್ನ ಸಹೋದ್ಯೋಗಿ ಆಗಿರುವವಳೇ.

ನಮ್ಮ ತಾಯಿಯ ಆರೋಗ್ಯದ ಬಗ್ಗೆ ಉದ್ದೇಶ ಪೂರ್ವಕವಾಗಿಯೇನೂ ಉದಾಸೀನ ಮಾಡಿರಲಿಲ್ಲ.. ಆದರೆ ನಮ್ಮ ನೌಕರಿಯ ಒತ್ತಡದ ನಡುವೆ ಸಮಯ ಸಿಗುತ್ತಿರಲಿಲ್ಲ.ಅಣ್ಣನ ಕುಟುಂಬದ ಜೊತೆ ಹಳ್ಳಿ ಮನೆ ಯಲ್ಲಿ ಇರುವ ತಾಯಿಯನ್ನು ಅವನು ಆಸ್ಪತ್ರೆಗೆ ಕರೆತಂದು ತಪಾಸಣೆ ಮಾಡಿಸಬಹುದಿತ್ತು ಎಂದು ನನ್ನ ವಿಚಾರವಾಗಿತ್ತು. ಆದರೆ ಅವನ ಹೆಂಡತಿ ಪಿರಿಪಿರಿ ಮಾಡುವ ಹೆಂಗಸು. ನಾವಷ್ಟೇ ಯಾಕೆ ನೋಡಿಕೊಳ್ಳಬೇಕು.. ಇನ್ನೊಬ್ಬ ಮಗನಿಲ್ಲವಾ ಎಂದು ಅವಳ ವಾದ. ಆದರೆ ನಾವಲ್ಲಿ ಕರೆದುಕೊಂಡು ಹೋದರೆ ಇಡೀ ದಿನ ಮನೆಯಲ್ಲಿ ಒಬ್ಬಳೇ ಇರಬೇಕು.. ನಾವಿಬ್ಬರು ನೌಕರಿಗೆಂದು ಬೆಳಿಗ್ಗೆ ಎಂಟಕ್ಕೆ ಹೋದರೆ ರಾತ್ರಿ ಎಂಟಕ್ಕೆ ಬರುವವರು.. ಬ್ಯಾಂಕ್ ನಲ್ಲಿ ಬಡ್ತಿಗಾಗಿ ಪರೀಕ್ಷೆ ಬೇರೆ ಕಟ್ಟಿದ್ದೆವು.. ಹೀಗಾಗಿ ಅಣ್ಣನಿಗೆ ನೀನೇ ಆಸ್ಪತ್ರೆಗೆ ಹೋಗಿ ತೋರಿಸಿಕೊಂಡು ಬಾ .. ಎಷ್ಟು ದುಡ್ಡಾಯ್ತು ಹೇಳಿದ್ರೆ ನಾನು ಕೊಡ್ತೇನೆ ಎಂದಿದ್ದೆ..ಆದರೆ ಅವನು ಮುಂದು ವರೆಯಲೇ ಇಲ್ಲ.

ದೀಪಾವಳಿಗೆ ಊರಿಗೆ ಬಂದಾಗ ತಾಯಿ ತುಂಬ ಅಲವತ್ತುಕೊಂಡಳು. ಅವಳಿಗೆ ಕಣ್ಣಿನ ದೃಷ್ಟಿ ತುಂಬಾ ಮಸುಕಾಗಿತ್ತು. ತಪಾಸಣೆ ಮಾಡಿ ಒಂದು ಚಸ್ಮಾ ಕೊಂಡಿದ್ದರೆ ಆಗುತ್ತಿತ್ತು ಎಂದು ಕೇಳಿಕೊಂಡಾಗ ನಾನೇ ನಿಮ್ಮಲ್ಲಿಗೆ ತಪಾಸಣೆಗೆ ಕರೆದುತಂದಿದ್ದೆ.. ʼ
ಇಷ್ಟೆಲ್ಲ ವಿವರಣೆಯನ್ನು ಕೇಳುತ್ತ ನಾಲ್ಕು ವರ್ಷದ ಹಿಂದಿನ ಆ ಸಂಗತಿ ನನಗೆ ನೆನಪಾಗತೊಡಗಿತು.. ಜೀವನದಲ್ಲಿ ತೀರ ಸೋತು ಹೋದ ಆ ವೃದ್ಧ ಮಹಿಳೆಗೆ ಎರಡೂ ಕಣ್ಣುಗಳಲ್ಲಿ ಮೋತಿಬಿಂದು ಆಗಿತ್ತು.. ಆದಾಗ್ಯೂ ಅವಳ ಜೊತೆಯಲ್ಲಿ ಬಂದಿದ್ದ ಮಗ ಶಸ್ತ್ರಚಿಕಿತ್ಸೆಗೆ ಒಪ್ಪಿರಲಿಲ್ಲ. ಉಚಿತವೆಂದರೂ ಸಹಾ… ಆಮೇಲೆ ಅವರನ್ನು ದೇಖರೈಖೆ ಮಾಡು ವುದು ಯಾರು.. ಅದೆಲ್ಲ ರಿಸ್ಕು ಬೇಡ.. ಸ್ವಲ್ಪವಾದ್ರೂ ಕಾಣುವ ಹಾಗೆ ಚಸ್ಮಾವೇ ಬರೆದು ಕೊಟ್ಟು ಬಿಡಿ ಎಂದು ಒತ್ತಾಯಿಸಿದ್ದವರು ಇವರೇ ಇರಬೇಕು..

ಪಾಪ ಆ ವೃದ್ಧೆಗೆ ತನ್ನ ಕೆಲಸವನ್ನು ತಾನೇ ಮಾಡಿ ಕೊಳ್ಳುವಷ್ಟಾದರೂ ಕಣ್ಣು ಕಾಣಲೆಂಬ ಆಸೆ..ʼ ಕಣ್ಣು ಕಾಣದೇ ಮೂಲೆಯಲ್ಲಿ ಕೂತರೆ ಯಾರು ಅನುದಿನ ಚಾಕರಿ ಮಾಡುತ್ತಾರೆʼ ಎಂದು ನಿಟ್ಟುಸಿರು ಬಿಟ್ಟಿದ್ದರು. ‘ನಿಮ್ಮ ಹಾಗಿದ್ದೇ ಚಸ್ಮಾ ಆಗಿದ್ದರೆ ಚೊಲೋ ಆಗ್ತಿತ್ತು..ʼ ಎಂದು ನನ್ನ ಮುಖ ಸವರಿ ಚಸ್ಮಾವನ್ನು ಮುಟ್ಟಿ ಮುಟ್ಟಿ ನೋಡಿ ಖುಷಿ ಪಟ್ಟಿದ್ದರು.

ಅಂತೂ ತುಸು ಮಟ್ಟಿಗೆ ಕಾಣುವಷ್ಟು ಪ್ರಯತ್ನ ಮಾಡಿ ಚಸ್ಮಾ ನಂಬರ್ ತಿಳಿಸಿದ ಮೇಲೆʼ ದ್ಯಾವ್ರು ಚೊಲೋತು ಮಾಡ್ಲಿʼ ಎಂದು ಕೈಯ್ಯೆತ್ತಿ ಹರಸುತ್ತ ಹೋದ ಆ ತಾಯಿಯ ಮುಖ ಮನದ ಮೂಲೆ ಯಲ್ಲೆಲ್ಲೋ ಅಚ್ಚೊತ್ತಿ ಉಳಿದಿದೆ..ಬಹುಶಃ ಕಷ್ಟಪಟ್ಟು ಬೆಳೆಸಿದ ಮಕ್ಕಳು ವೃದ್ಧಾಪ್ಯದಲ್ಲಿ ತಂಪು ಮೂಡಿಸಿ ದಂತಿಲ್ಲ.ಅಣ್ಣ ತಮ್ಮ ಪರಸ್ಪರ ನೀ ಮಾಡಲಿ ಎಂಬ ಭಾವದಿಂದ ತಾಯಿಯನ್ನು ಕಡೆಗಣಿಸಿರಬೇಕು..
ತಪಾಸಣೆ ಮಾಡಿ ಹೋದ ಮರುದಿನ ಆ ವೃದ್ಧೆಯ ಇದೇ ಮಗ ಮತ್ತೆ ಬಂದರು.. ಈಗ ಜೊತೆಯಲ್ಲಿ ತಾಯಿಯಿರಲಿಲ್ಲ. ‘ಈ ಚಸ್ಮಾ ಸರಿಬರಬಹುದಲ್ಲ ನಮ್ಮ ತಾಯಿಗೆʼ ಎಂದು ಕೇಳಿದರು.ಅವರುತಂದಿದ್ದು ಒಂದು ಹಳೆಯ ಯಾರೋ ಉಪಯೋಗಿಸಿಬಿಟ್ಟ ದಪ್ಪ ಗಾಜಿನ ಚಸ್ಮಾ.. ಹಳೆಯ ಕಾಲದಲ್ಲಿ ಕಣ್ಣಿಗೆ ಲೆನ್ಸ್ ಹಾಕದೇ ಪೊರೆಯನ್ನಷ್ಟೇ ತೆಗೆದು ಶಸ್ತ್ರ ಚಿಕಿತ್ಸೆ ಮಾಡಿದ ಬಳಿಕ ದಪ್ಪಗಾಜಿನ ಚಸ್ಮಾಗಳನ್ನು ನೀಡಲಾ ಗುತ್ತಿತ್ತು. ಅಂತಹ ಹಳೆಯ ಚಸ್ಮಾ ಇದು. ‘ನಿಮ್ಮ ತಾಯಿಯಯವರ ನಂಬರಿಗೂ ಇದಕ್ಕೂ ಬಹಳ ವ್ಯತ್ಯಾಸವಿದೆ,ಇದು ಬರುವುದಿಲ್ಲ’ಎಂದರೂ ಅವರಿಗೆ ತೃಪ್ತಿಯಾಗಲಿಲ್ಲ.’ವಯಸ್ಸಾದ ಮೇಲೆ ಏನುಹಾಕಿದ್ರೂ ಕಾಣುವುದು ಅಷ್ಟೇ ಅಲ್ವೇ ಡಾಕ್ಟ್ರೇ.. ಸ್ವಲ್ಪ ದಿವಸ ಇದೇ ಹಾಕಿನೋಡಲಿ.. ಆಮೇಲೆ ಆಪರೇಶನ್ ಮಾಡುವುದೋ ಚಸ್ಮಾವನ್ನೇ ಮಾಡುವುದೋ ನೋಡಿದ್ರೆ ಆಯ್ತಲ್ಲʼ ಎಂದರು!

ವಿದ್ಯಾವಂತರೆಂಬ ಹಣೆಪಟ್ಟಿಯಲ್ಲಿ ಕೆಲವರು ವರ್ತಿಸುವುದು ವಿದ್ಯೆಯ ಬಗ್ಗೆ, ಮಾನವೀಯತೆಯ ಬಗ್ಗೆ ಅಪನಂಬಿಕೆಯನ್ನು ಹುಟ್ಟುಹಾಕಿಬಿಟುತ್ತದೆ.. ‘ಇದು ಎಲ್ಲಿ ಸಿಕ್ತು ನಿಮಗೆʼ ಎಂದು ಕೇಳಿದೆ. ‘ನಮ್ಮ ನೆಂಟರ ಮನೆಗೆ ಊಟಕ್ಕೆ ಕರೆಯ ಇತ್ತು.. ಹೋಗಿ ಬಂದೆ.. ಅವರ ತಂದೆ ತೀರಿಕೊಂಡು ಸುಮಾರು ಕಾಲವಾಯ್ತು.. ಅವರ ಚಸ್ಮಾ ಹಾಗೇ ಇತ್ತಂತೆ.. ಉಪಯೋಗವಾಗ್ತದ ನೋಡುವʼ ನನ್ನ ಉತ್ತರಕ್ಕೂ ಕಾಯದೇ ಹೋಗಿದ್ದರು.. ಅವರ ಕೈಯ್ಯಲ್ಲಿ ಬೆಲೆ ಬಾಳುವ ಬ್ರಾಂಡೆಡ್ ಗಡಿಯಾರ, ಅತಿ ದುಬಾರಿ ಮೊಬೈಲು ಬೇರೆಯದ್ದೇ ಕಥೆ ಹೇಳುತ್ತಿತ್ತು..

ಹಾಗೆ ಅಂದು ಹೋದ ವ್ಯಕ್ತಿ ಈಗ ತಾಯಿಯ ಆ ಹಳೆಯ ಚಸ್ಮಾ ನಂಬರಿಗಾಗಿ ದುಂಬಾಲು ಬಿದ್ದಿರು ವುದು ಎಂತಹ ಆಶ್ಚರ್ಯ! ಅದೂ ತನ್ನ ತಾಯಿ ತೀರಿಕೊಂಡ ಬಳಿಕ!!
‘ಆಮೇಲೆ ಒಂದು ಮೂರು ನಾಕು ತಿಂಗಳಲ್ಲಿ ನಮ್ಮ ತಾಯಿ ಎಡವಿ ಬಿದ್ದು ಸೊಂಟದ ಎಲುಬು ಮುರಿದು ಕೊಂಡರು.. ಒಂದೊಂದೇ ಕಾಯಿಲೆ ಒಟ್ಟು ಸೇರಿ ತೀರಿಕೊಂಡರು.. ವಯಸ್ಸು ಆಗಿತ್ತು ನೋಡಿ..ʼ

‘ಈಗ ಆ ಚಸ್ಮಾ ನಂಬರ್ರು ತೊಗೊಂಡು ಏನು ಮಾಡ್ತೀರಿ ಹೇಳಿ.. ಪಾಪ ಅವರು ಬದುಕಿದ್ದಾಗ ಮಾಡಿಕೊಟ್ಟರೆ ಉಪಯೋಗವಾಗುತ್ತಿತ್ತು..ʼ ‘ಅದನ್ನು ಹೇಗೆ ಹೇಳುವುದೋ ಗೊತ್ತಾಗುತ್ತಿಲ್ಲ ಡಾಕ್ಟ್ರೆʼ ಅವರ ಮುಖಭಾವದಲ್ಲಿ ನೋವು ಎದ್ದು ಕಾಣುತ್ತಿತ್ತು. ನಿಜ, ಬದುಕು ಸಮಾ ಹೊತ್ತು ನೋಡಿ ಪಾಠ ಕಲಿಸಿ ಬಿಡುತ್ತದೆ.. ಉಡಾಫೆ, ನಿರ್ಲಕ್ಷ್ಯ, ಅಹಂಕಾರ ಉದುರಿ ಬಿದ್ದು ಆರ್ತತೆ, ವಿನಮ್ರತೆ ತಾನಾಗಿಯೇ ನಮ್ಮೊಳಗೆ ಹುಟ್ಟಿಕೊಳ್ಳುತ್ತದೆ. ‘ನೌಕರಿ ಬಡ್ತಿ, ದುಡಿತ, ಆಸ್ತಿ ಮಾಡುವುದರಲ್ಲಿಯೇ ಮುಳುಗಿದ್ದ ನಾವು ಮಕ್ಕಳ ಬಗ್ಗೆ ಗಂಭೀರವಾಗಿ ಯೋಚಿಸಿರಲೇ ಇಲ್ಲ. ಇನ್ನೇನು ನಲವತ್ತಾಗಲು ಬಂತು ಎಂದು ನೆಂಟರಿಷ್ಟರು ಮೂದಲಿಸಿ ಮಾತಾಡಿದ ಬಳಿಕ ಚಿಕಿತ್ಸೆ ಪಡೆದು ಬಯಸಿ ಬಯಸಿ ಅಂತೂ ನನ್ನ ಹೆಂಡತಿ ತಾಯಾದಳು.. ಸೊಗಸಾದ ಗಂಡುಮಗ ಹುಟ್ಟಿದ್ದಾನೆ.. ಆದರೆ..

ಅಷ್ಟಕ್ಕೇ ನಿಲ್ಲಿಸಿ ಅವರು ಕಣ್ಣೀರು ಸುರಿಸತೊಡಗಿ ದರು….ಸೊಗಸಾದ ಗಂಡು ಮಗ ಡಾಕ್ಟ್ರೆ.. ಆದರೆ ಎರಡೂ ಕಣ್ಣುಗುಡ್ಡೆಗಳೇ ಇಲ್ಲ!! ಎಂತಹ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲೆಲ್ಲ ತೋರಿಸಿದೆವು.. ಹುಟ್ಟಿಂದಲೇ ಹಾಗಿದೆ..ಏನೂ ಮಾಡಲಿಕ್ಕಾಗುವು ದಿಲ್ಲ ಎಂದಿದ್ದಾರೆ.. ಹೇಗೆ ಸಹಿಸುವುದು ಈ ದುಃಖ ವನ್ನು ಹೇಳಿ..

ಜಾತಕ ತೋರಿಸಿದರೆ ಇದಕ್ಕೆ ಕಾರಣ ಹಿರಿಯರ ಶಾಪ ಎಂದು ಹೇಳುತ್ತಿದ್ದಾರೆ.. ನಿಮಗೆ ಇದರಲ್ಲಿ ನಂಬಿಕೆ ಇದೆಯೇ ಇಲ್ಲವೋ.. ಆದರೆ ದೊಡ್ಡ ವಿದ್ವಾಂಸರು ಹೇಳಿದ್ದು – ತಾಯಿಗೆ ಸಲ್ಲಬೇಕಾದ ಅದೇ ನಂಬರಿನ ಚಸ್ಮಾವನ್ನು ಬಂಗಾರದ ಕಟ್ಟಿನಲ್ಲಿ ಮಾಡಿಸಿ ದಾನ ಮಾಡಿದರೆ ಪಾಪ ಪರಿಹಾರ ಎಂದು.. ದಯವಿಟ್ಟು ಹುಡುಕಿಕೊಡಿ ಡಾಕ್ಟ್ರೆ….ʼ
✍️ಡಾ.ಸೌಮ್ಯ ಕೆ. ವಿ.
ಯಲ್ಲಾಪುರ
