ಎರಡನೇ ಭಾಗದಲ್ಲಿ ಕವಿಗೆ ಪ್ರತಿಭೆಯ ದರ್ಶನ, ರಸ ಸೃಷ್ಟಿ ಮತ್ತು ಕಾವ್ಯದ ಅಸ್ತಿತ್ವದ ಅರಿವಿನ, ಇರುವಿನ ವಿವರಗಳಿವೆ.ಈ ಕವನದ ಮೊದಲನೇ ಭಾಗವನ್ನು ಋಗ್ವೇದದ ರೂಪದಲ್ಲಿ ನೋಡಬೇಕು. ಆ ಭಾಗದ ಕವನದ ವಾಚನವನ್ನು ಋಗ್ವೇದದ ಮಂತ್ರದಂತೆ ವಾಚಿಸಬಹುದು. ಎರಡನೇ ಭಾಗವನ್ನು ಯಜುರ್ವೇದ ಮಂತ್ರದ ರೂಪದ ಹಿನ್ನೆಲೆಯಲ್ಲಿ ನೋಡಬಹುದು. ಇಲ್ಲಿಯ ಕಾವ್ಯದ ಸಾಲುಗಳನ್ನು ಯಜುರ್ವೇದದ ಮಂತ್ರದ ಪಠಣೆಯ ಸ್ವರೂಪದಲ್ಲಿ ವಾಚಿಸಬಹುದು.

-೧-
‘ಗೋವಿನ ಕೊಡುಗೆಯು
ಹಡಗದ ಹುಡುಗಿ
ಬೆಡಗಿಲೆ ಬಂದಳು
ನಡು ನಡುಗಿ’
ಕಾವ್ಯ ಕನ್ಯೆ ತನ್ನನ್ನು ಅತೀಯಾಗಿ ಪ್ರೀತಿಸುವ ಕವಿ ಯನ್ನು ಕಾಣಲು ಬರುತ್ತಿದ್ದಾಳೆ.ಅವಳು ಗೋವಿನ ಕೊಡುಗೆ. ಕವಿಯ ಹೃದಯ ಸಮುದ್ರದಲ್ಲಿ ನೌಕಾ ರೂಢಳಾಗಿ ಬರುತ್ತಿದ್ದಾಳೆ. ನಡು, ನಡುಗಿಸುತ್ತಾ, ನರ್ತಿಸುತ್ತಾ ಬರುತ್ತಿದ್ದಾಳೆ. ಇನ್ನೊಂದು ಅಂಶ, ಕುಂಭಾರು ಬಂದರಿನಿಂದ ಬಂದವರು ಬೇಂದ್ರೆ. ಸಮುದ್ರ ದಂಡೆಯ ಹತ್ತಿರ ಇರುವ ಗುಡ್ಡದ ಮೇಲೆ ಇವರ ಕುಲದೇವತೆ ಕುಸುಮೇಶ್ವರಿಯ ಗುಡಿ ಇದೆ.

ಕುಸುಮೇಶ್ವರಿ ಎಂದರೆ ‘ಹೂ’ ಪಾರ್ವತಿ ಎಂದರ್ಥ. ಇವಳು ಬೇಂದ್ರೆಯವರಿಗೆ ಹಡಗದ ಹುಡುಗಿ ಆಗಿರ ಬಹುದು. ಕವಿಯನ್ನು ಹುಡುಕಿಕೊಂಡು ಬಂದು ಕಾವ್ಯ ದೇವತೆ, ‘ಕವಿತೆ’ ಎನ್ನುವ ವರಪ್ರಸಾದವನ್ನು ಕನ್ನಡದಲ್ಲಿ ನೀಡಿದ್ದು ಬೇಂದ್ರೆಯವರಿಗೆ ಮಾತ್ರ ಎನ್ನುವ ಅಭಿಪ್ರಾಯ ನನ್ನದು. ಹೀಗಾಗಿಯೇ ಬೇಂದ್ರೆ ‘ವರಕವಿ‘ ಜಾತ್ಯಾ ಪ್ರತಿಭಾವಂತ, ಅಧ್ಯಯನದ ಪ್ರಯತ್ನ ನಿರಂತರ. ಅದಕ್ಕೆ ದೈವ, ಅಂದರೆ ದೇವಿಯ, ಕಾವ್ಯ ದೇವತೆಯ ಸಾಥ.
-೨-
‘ಸಲಿಗೆಯ ಸುಲಿಗೆಯ
ಬಯಕೆಯ ಒಲುಮೆ
ಬಯಲಿನ ನೇಯ್ಗೆಯ
ಸಿರಿಯುಡಗಿ‘.
ಕವಿ ಸಲಿಗೆಯನ್ನು ಸುಲಿಗೆ ಮಾಡಿ,ಬಯಕೆಯಲ್ಲಿ ಒಲುಮೆಯನ್ನು ವ್ಯಕ್ತಪಡಿಸಿ ಅವಳ ಜೊತೆ ಕಾವ್ಯದಾಟಕ್ಕೆ ಸಂಬಂಧ ಬೆಳೆಸುತ್ತಾನೆ. ಬಂದವಳು ಅಂಬರವನ್ನೇ ಸಿರಿಯುಡಗೆಯನ್ನಾಗಿ ಮಾಡಿ ಕೊಂಡು ಕವಿ ಎಂಬ ಪ್ರಿಯಕರನನ್ನು ಸಂಧಿಸುತ್ತಾಳೆ.

ಇಲ್ಲಿ ಅಪರಿಚಿತಳೂ, ಪರಿಚಿತಳಾಗಿ ಸ್ನೇಹದಲ್ಲಿ ಸಂಚರಿಸುವ ಚಿತ್ರವಿದೆ. ಬಯಲಿನ ನೇಯ್ಗೆ ಎಂದರೆ ದಿಕ್ಕುಗಳೇ ಅವಳಿಗೆ ಅಂಬರವಾದ ದಿಗಂಬರ ಉಡುಗೆ. ಇದೊಂದು ತತ್ವ. ಇದು ಬೃಹತ್ ಭಾವ ವನ್ನು ಅರ್ಥೈಸುತ್ತದೆ. ‘ಭಾವ’ ಎಂದರೆ ಬೇಂದ್ರೆ ಯವರಿಗೆ ಸತ್ಯದ ಪ್ರತಿಮೆ. ಕವಿ ಹಾಗೂ ಕಾವ್ಯ ಕನ್ನಿಕೆ ಯ ನಡುವೆ ಇರುವ ಪರಸ್ಪರತೆಯಲ್ಲಿ ಯಾವ ಮುಚ್ಚು ಮರೆ ಇಲ್ಲ. ಇಂತಹ ಕಾವ್ಯ ಕನ್ನಿಕೆಯಲ್ಲಿ ಕವಿಗಿರುವದು ಬಯಕೆಯ ಒಲುಮೆ. ಕವಿಗೆ ಕಾವ್ಯ ಕನ್ನೆಯನ್ನು ನೀಡಿದ್ದು ಮೊದಲ ನುಡಿಯಲ್ಲಿ ಬಂದ ತಾಯಿ.
-೩-
‘ನಾಡಿಯ ನಡಿಗೆಯ
ನಲುವಿನ ನಾಲಿಗೆ
ನೆನೆದಿರಿ ಸೋಲುವ
ಸೊಲ್ಲಿನಲಿ’.
ಕಾವ್ಯ ಕನ್ನಿಕೆಯ ನಡಿಗೆ ಕವಿಯ ನಾಡಿಯನ್ನು ಸ್ಪಂದಿಸುತ್ತದೆ.ಇಲ್ಲಿ ನಾಡಿ ಎಂದರೆ ಯೋಗದ ನಾಡಿ ಗಳು. ಲೌಕಿಕ ಪ್ರತಿಮೆ ಅಲೌಕಿಕತೆಗೆ ಕವಿಯನ್ನು ಕರೆದುಕೊಂಡು ಹೋಗುತ್ತದೆ. ಇಲ್ಲಿ ನಡೆಯುವ ವ್ಯಾಪಾರ ಯೋಗ ಶರೀರದ ನಾಡಿಯದು. ಮೂರು ಮುಖ್ಯ ನಾಡಿಗಳಾದ ಇಳಾ, ಪಿಂಗಳ ಮತ್ತು ಸುಷುಮ್ನಾ. ಈ ನಾಡಿ ಪ್ರಕ್ರಿಯೆಯಿಂದ ದೇಹದಲ್ಲಿ ಒಂದು ಅತೀಂದ್ರಿಯ ಶಕ್ತಿಯ ಪ್ರವಾಹವಾಗುತ್ತದೆ. ಆ ಶಕ್ತಿ ಕವಿಯ ನಲುವಿನ ನಾಲಿಗೆಗೆ ಒಂದು ಆಹ್ಲಾದ ಕರವಾದ ಆನಂದದ ಅನುಭವವನ್ನು ಕೊಡುತ್ತದೆ. ಕವಿ ಅದಕ್ಕೆ ಸೋಲುತ್ತಾನೆ ಅಂದರೆ ಮರಳಾಗು ತ್ತಾನೆ. ಮರಳಾಗುವದು ‘ವಾಕ್’ ಗೆ. ಮಾತಿಗೆ ಮರಳಾಗುವದು ಸರ್ವೇ ಸಾಮಾನ್ಯ.

-೪-
ಮುಟ್ಟದ ಮಾಟದ
ಹುಟ್ಟದ ಹುಟ್ಟಿಗೆ
ಜೇನಿನ ಥಳಿ ಮಳಿ
ಸನಿಹ ಹನಿ’.
ಇದುವರೆಗೆ ಯಾರೂ ಮುಟ್ಟದಂತಹ ಜೇನು ಹುಟ್ಟನ್ನು, ಕವಿ ಕಾವ್ಯ ಕನ್ಯೆಯಲ್ಲಿ ಕಾಣುತ್ತಾನೆ. ಜೇನುಹುಟ್ಟಿನಲ್ಲಿ ರಾಣಿ ಜೇನುಹುಳು ಬಹಳ ಮುಖ್ಯ ವಾದಂತಹ ವಸ್ತು. ಈ ಕಾವ್ಯ ಕನ್ಯೆ ಕವಿಯ ಹತ್ತಿರ ಬಂದು ಮಾತಿನ ಜೇನಿನ ಮಳೆಯನ್ನು ಹನಿಸುತ್ತಾಳೆ.

ಅದು ಕವಿಯ ಮನವೆಂಬ ಕಾವ್ಯಾಂಗಳದಲ್ಲಿ ಥಳಿ ಹೊಡೆದ ಹಾಗಿರುತ್ತದೆ. ಅದು ಕವಿಗೆ ಕಾವ್ಯ ಕಟ್ಟುವಿ ಕೆಗೆ ಲಭ್ಯವಾಗುವ ದಿವ್ಯಾನುಭವ. ಅಂಗಳದ ಥಳಿ ಸೃಜನ ಶಕ್ತಿಯ ರೂಪ. ಅದರಿಂದ ಸೃಷ್ಟಿ, ಪುನಸೃಷ್ಟಿ. ಇಲ್ಲಿ ಕವಿ ತನ್ನ ನಾಲಿಗೆಗೆ ಎರಡು ಅನುಭವವನ್ನು ಪಡೆಯುತ್ತಾನೆ ಒಂದು ಜೇನಿನದು, ಇನ್ನೊಂದು ಮಾತಿನದು. ಅಂದರೆ ‘ವಾಕ್’. ಧೀರ್ಘವಾಗಿ ವಿಚಾರ ಮಾಡಿದರೆ ಎರಡು ಅನುಭವದ ಫಲ ಒಂದೇ.
-೫-
‘ಬೆಚ್ಚಿದ ವೆಚ್ಚವು
ಬಸರಿನ ಮೊಳಕೆ
ಬಚ್ಚಿದ್ದಾವದೊ
ನಾ ತಿಳಿಯೆ’.
ಈ ಎಲ್ಲ ವ್ಯಾಪಾರದಿಂದ ಕವಿ ಬೆಚ್ಚಿದ್ದಾನೆ.ಎಂದರೆ ಒಂದು ರೀತಿಯ ಆನಂದದ ಉದ್ವೇಗಕ್ಕೆ ಒಳಗಾಗಿ ದ್ದಾನೆ. ಆ ಸ್ಥಿತಿಯ ವೆಚ್ಚ ಏನೆಂದರೆ ಕಾವ್ಯದ ಬಸರಿನ ಮೊಳಕೆ. ಒಡಮೂಡಿದ ಕಾವ್ಯ ತನ್ನೊಡಲಿನಲ್ಲಿ ಏನೇನೋ ಹಚ್ಚಿಕೊಂಡಿದೆ ಎಂಬುದು ಕವಿಗೆ ನಿಗೂಢವಾಗಿದೆ. ಅದಕ್ಕೆ ಅತ್ಯಂತ ವಿನಯದಿಂದ ‘ನಾ’ ತಿಳಿಯೇ ಎಂದು ಹೇಳುತ್ತಾನೆ .’ನ‘ ಶಬ್ದವಾಚಕ ದಿಂದ ಕಾವ್ಯದ ಆರಂಭ.ನ+ಆ= ನಾ. ಕಾವ್ಯಕ್ಕೆ ಆಧಾರವಾದ ನಾದದೇವತೆಯನ್ನು ನೋಡಿ ವರ ಪಡೆಯಲು ನಾ ಎಂಬ ಅಹಂಕಾರ ಹೋಗಬೇಕು ಎಂಬ ನಿಲುವು ಬೇಂದ್ರೆಯವರದಾಗಿತ್ತು.
-೬-
ಭೂತದ ಭಾವ
ಉಧ್ಭವ ಜಾವ
ಮೊಲೆ ಉಡಿಸುವವಳು
ಪ್ರತಿಭೆಯ ನವ’.
ಈ ಭಾಗದ ಕೊನೆ ನುಡಿಯಲ್ಲಿ ಕವಿ ಹೇಳುವದು ‘ಭೂತದ ಭಾವ’. ಇಲ್ಲಿ ಭೂತ ಎಂದರೆ ಅಸ್ತಿತ್ವ. ಯಾವುದು ಇದೆಯೋ ಅದೆಲ್ಲ ಭೂತ. ಆ ಭೂತದ ಭಾವ ಉದ್ಭವವಾಗದೆ ಅನುಭವವಿಲ್ಲ. ಈ ಭೂತ ಮತ್ತು ಭಾವ ಎರಡೂ ಶಬ್ದವನ್ನು ಬೇಂದ್ರೆಯವರು ಪಡೆದದ್ದು ವಿಷ್ಣು ಸಹಸ್ರನಾಮದಿಂದ. ‘ಭೂತಕೃತ್ ಭೂತಭೃತ್ ಭಾವೋ,ಭೂತಾತ್ಮಾ ಭೂತ ಭಾವನಾ‘ ಈ ಸಾಲಿನಲ್ಲಿ ಬರುವ ಆರು ಭೂತ ಶಬ್ದಗಳನ್ನು ಭಿನ್ನ, ಭಿನ್ನ ಸ್ಥರಗಳಲ್ಲಿ ಬೇಂದ್ರೆಯವರು ತಮ್ಮ ಕಾವ್ಯ ದಲ್ಲಿ ತಂದಿದ್ದಾರೆ. ‘ಭೂತ’ಎಂದರೆ ಸತ್ಯ. ಯತಾರ್ಥ ವಾದ ನಿಜ ಎಂದು ಒಂದರ್ಥ. ‘ಭಾವ’ ಎನ್ನುವ ಶಬ್ದಕ್ಕೆ ನೂರಾರು ಅರ್ಥಗಳು. ಸಮಗ್ರ ಬೇಂದ್ರೆ ಕಾವ್ಯ ದಲ್ಲಿ ಈ ಶಬ್ದದ ಎಲ್ಲ ಸ್ವರೂಪಾರ್ಥ ಗಳು ಬಂದಿವೆ. ಇಲ್ಲಿ ಭಾವ ಎಂದರೆ ಆನಂದ.

ದೋಷ ಮತ್ತು ಸೋಮ ಇಂದು ಸೂರ್ಯಚಂದ್ರಾದಿ ಗಳನ್ನು ಬೆಳಕಿಸಿ ಜಗತ್ತನ್ನು ಸಲಹುವನು. ಅದರಂತೆ ಬೇಂದ್ರೆ ಕಾವ್ಯ ದೋಷ ಮತ್ತು ಸೋಂಕು ಇರದ ಸೂರ್ಯ ಚಂದ್ರರಂತೆ ಬೆಳಕು ನೀಡುವ ಅನುಭವಾನಂದ ಕಾವ್ಯ. ಈ ಕಾವ್ಯವನ್ನು ನನಗೆ ನೀಡುವವಳು ಕಾವ್ಯ ದೇವತೆ. ಅದನ್ನು ನನಗೆ ಉದ್ಭವ ಜಾವದ ಮೊಲೆ ಉಡಿಸುವವಳು. ಅದು ನವ ಪ್ರತಿಭೆ. ‘ಪ್ರತಿಭಾಯಾ ನವ ನವೋಶ್ಮೇನ ಶಾಲಿನಿ’.
✍️ಡಾ. ಕೃಷ್ಣ ಕಟ್ಟಿ,ಧಾರವಾಡ
ವಿಶ್ರಾಂತ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು
ಕನ್ನಡ ವಿಶ್ವವಿದ್ಯಾಲಯ, ಹಂಪಿ
