ನಮ್ಮಾಸ್ಪತ್ರೆಯ ಅನತಿ ದೂರದಲ್ಲಿ ಜೋಡುಕೆರೆ ಯಿದೆ. ಕೆರೆದಂಡೆಯ ಬೃಹತ್ ಮರಗಳ ಮೇಲೆ ಹಾರ್ನ್‌ಬಿಲ್ ಅಥವಾ ಮಂಗಟ್ಟೆಗಳೆಂದು ಕರೆಯಲ್ಪಡುವ ಬಲು ವಿಶಿಷ್ಟ ಹಕ್ಕಿಗಳನ್ನು ಆಗಾಗ ಕಾಣಬಹುದು. ಈ ಹಕ್ಕಿಗಳು ಕಾಣಲು ವಿಶಿಷ್ಟ ಅಷ್ಟೇ ಅಲ್ಲ ಅವುಗಳ ಜೀವನ ಗಾಥೆಯೂ ಅಷ್ಟೇ ವಿಶಿಷ್ಟ ವಾದುದು. ಹಾರ್ನ್ ಬಿಲ್ ಗಳ ಬಗ್ಗೆ ಯೋಚಿಸುತ್ತ ಜೋಡುಕೆರೆಯ ಕಮಲದ ಹೂಗಳ ಚಿತ್ರವನ್ನು ಮೊಬೈಲಿನಲ್ಲಿ ಸೆರೆ ಹಿಡಿಯಬೇಕೆನ್ನು ವಷ್ಟರಲ್ಲಿ ‘ಮೇಡಂ ನಿಮ್ಮ ಹಳೆಯ ಪೇಷಂಟ್ – ಸುಮಾ ದಿನೇಶ್ ಮತ್ತೆ ಹಾಜರ್.. ಎಕ್ಸಾಮ್ ಟೆನ್ಶನ್ ʼ ಎಂದು ಕರೆ ಬಂತು..

ಸುಮಾರು ಅರ್ಧ ಶತಮಾನದ ಕಾಲ ಜೀವಿಸುವ ಈ ಹಾರ್ನ ಬಿಲ್ ಹಕ್ಕಿಗಳಲ್ಲಿ ಏಕ ಸಂಗಾತಿಯ ನಿಷ್ಠೆ ವಿಸ್ಮಯಕಾರಿಯಾದುದು.ಹೆಣ್ಣು ಹಕ್ಕಿ ದೊಡ್ಡ ಮರದ ಪೊಟರೆಯಲ್ಲಿ ಮೊಟ್ಟೆಯಿಟ್ಟು ಕಾವಿಗೆ ಕೂರುವಾಗ ಸುರಕ್ಷತೆಯ ದೃಷ್ಟಿಯಿಂದ ಒಂದು ಸಣ್ಣ ಕಿಂಡಿಯ ಹೊರತಾಗಿ ಪೊಟರೆಯ ಬಾಯಿಯನ್ನು ಮುಚ್ಚಿ ಬಿಡುತ್ತದೆ. ಆ ಕಿಂಡಿಯಲ್ಲಿ ಅನೇಕ ವಾರಗಳ ಕಾಲ ಗಂಡು ಹಕ್ಕಿ ನಿರಂತರವಾಗಿ ಆಹಾರ ಸರಬರಾಜು ಮಾಡಿ ಹೆಣ್ಣು ಹಕ್ಕಿಯನ್ನೂ ಸಂತಾನವನ್ನೂ ಪೋಷಿಸುತ್ತದೆ!

ಸುಮಾ ಹಾಗೂ ದಿನೇಶರನ್ನು ನೋಡಿದಾಗ ನನಗೆ ಹಾರ್ನ್ ಬಿಲ್ ಸಂಸಾರವೇ ನೆನಪಿಗೆ ಬರುತ್ತಿತ್ತು. ವೈದ್ಯರಾಗಿ ರೋಗಿಗಳೊಂದಿಗೆ ಭಾವನಾತ್ಮಕ ಬಂಧ ಬೆಳೆಸಿಕೊಳ್ಳುವುದು ಸಮರ್ಪಕವಲ್ಲವಾದರೂ ಕೆಲವೊಮ್ಮೆ ನಮಗರಿವಿಲ್ಲದೇ ಆಪ್ತತೆ ಬೆಳೆಯುವು ದುಂಟು. ತಮ್ಮ ಕಷ್ಟ ಸುಖಗಳನ್ನೆಲ್ಲ ವೈದ್ಯರೆದರು ಹರಡಿ ಹಗುರಾಗುವುದು ಒಂದು ಬಗೆಯಾದರೆ ಇನ್ನು ಕೆಲವೊಮ್ಮೆ ಅವರ ಕಾಯಿಲೆಗೆ ಪೂರಕವಾದ ಸಂಗತಿಗಳನ್ನು ಅರಿಯುವುದಕ್ಕಾಗಿ ಮೂಗು ತೂರಿಸಿ ಯಾದರೂ ಭೂತ – ವರ್ತಮಾನ ತಿಳಿದುಕೊಳ್ಳ- ಬೇಕಾಗುತ್ತದೆ.

ಆರ್ಥಿಕ ಸಮಸ್ಯೆಯಿಂದ ವಿದ್ಯಾಭ್ಯಾಸವನ್ನು ಮೊಟಕು ಗೊಳಿಸಿ ಸುಮಾ ಖಾಸಗಿ ಬ್ಯಾಂಕಿನಲ್ಲಿ ಉದ್ಯೋಗಕ್ಕೆ ಸೇರಿಕೊಂಡಿದ್ದಳು. ಸ್ಪರ್ಧಾತ್ಮಕ ಪರೀಕ್ಷೆ ಬರೆದು ಆಡಳಿತಾತ್ಮಕ ಸರ್ಕಾರೀ ಹುದ್ದೆ ಪಡೆಯುವ ಕನಸು ಸುಪ್ತವಾಗಿತ್ತು. ಆ ಪ್ರತಿಭೆ ಯೂ ಅವಳಿಗಿತ್ತು. ಆ ಬಗ್ಗೆ ಸಿದ್ಧತೆ ನಡೆಸಿಯೇ ಇದ್ದಳು. ಅವಳ ಸಹೋದ್ಯೋಗಿ ದಿನೇಶನೊಂದಿಗೆ ಪ್ರೇಮ ವಿವಾಹವನ್ನು ಮಾಡಿ ಕೊಂಡಾಗಲೂ ಪರೀಕ್ಷೆ ಬರೆಯುವ ಷರತ್ತು ಮರೆತಿರ ಲಿಲ್ಲ. ಸಂಸಾರ ತಾಪತ್ರಯಗಳು ನೂರೆಂಟಿದ್ದರೂ, ಈ ನಡುವೆ ಮಗಳು ಹುಟ್ಟಿದ್ದರೂ ಸಾಧನೆಯ ದಾರಿ ನಿಚ್ಚಳ ವಾಗಿತ್ತು. ಎಲ್ಲ ಜವಾಬ್ದಾರಿ ಗಳ ನಡುವೆ ಕೆ.ಎ.ಎಸ್. ಪರೀಕ್ಷೆ ಬರೆದ ಸುಮಾಳಿಗೆ ಕೆಲವೇ ಅಂಕಗಳಲ್ಲಿ ನಿರಾಶೆಯಾಯಿತು..

ಖಾಸಗೀ ಬ್ಯಾಂಕ್ ನೌಕರಿಗೆ ರಾಜೀನಾಮೆ ಕೊಟ್ಟು ಪೂರ್ಣ ಪ್ರಮಾಣದಲ್ಲಿ ಪರೀಕ್ಷಾ ತಯಾರಿ ಮಾಡುವ ನಿರ್ಧಾರ ಮಾಡಿದಳು ಸುಮಾ. ದಿನೇಶನ ಪ್ರೋತ್ಸಾಹ ಮೊದಲಿನಿಂದ ಇತ್ತು. ಹೆಂಡತಿಯ ಓದಿಗೆ ತೊಂದರೆ ಆಗಬಾರದೆಂದು ಬೆಳಿಗ್ಗೆ ಬೇಗ ಎದ್ದು ತಾನೇ ಮನೆ ಕೆಲಸ, ಅಡಿಗೆ ಮುಗಿಸಿ ಮಗಳನ್ನು ಶಾಲೆಗೆ ತಯಾರಿ ಮಾಡಿ ಕಳಿಸಿ ದಿನೇಶ ತನ್ನ ಕೆಲಸಕ್ಕೆ ಹೋಗುತ್ತಿದ್ದ. ಮತ್ತೆ ಸಂಜೆಯೂ ಮನೆಯ ಮಗಳ ಜವಾಬ್ದಾರಿ ಹೊತ್ತು ಸುಮಾಳಿಗೆ ಓದಲು ಸ್ವಲ್ಪವೂ ಅಡಚಣೆ ಯಾಗಬಾರದೆಂದು ಒದ್ದಾಡುತ್ತಿದ್ದ.
ಪರೀಕ್ಷಾ ತಯಾರಿಯ ಪಠ್ಯ, ಮಾಹಿತಿ ಇತ್ಯಾದಿ ಈಗೆಲ್ಲ ಬಹುತೇಕ ಅಂತರ್ಜಾಲದಲ್ಲಿ ಲಭ್ಯವಿರು ವುದರಿಂದ ಮೊಬೈಲ್, ಗ್ಯಾಜೆಟ್ ಬಳಕೆ ಅತಿಯಾಗಿ ಸುಮಾ ಕಣ್ಣಿನ ತಪಾಸಣೆಗೆ ಬಂದಾಗ ಇವರ ಪರಿಚಯ ನನಗಾಗಿದ್ದು.ತಲೆ ನೋವು,ಕಣ್ಣುನೋವು, ಕುತ್ತಿಗೆ ನೋವು ಹಾಗೇ ಮುಂದುವರೆದು ಮಗಳ ಚಿಕ್ಕ ಪುಟ್ಟ ಆರೋಗ್ಯದ ಏರು ಪೇರುಗಳಿಗೆ ಚಿಕಿತ್ಸೆಗೆ ಬಂದು ಸಲಹೆ ಪಡೆದಂತೆ ಮೇಡಂ ನೀವು ನಮ್ಮ ಫ್ಯಾಮಿಲಿ ಡಾಕ್ಟರಾಗಿ ಬಿಟ್ಟಿದ್ದೀರೆಂಬ ಆಪ್ತ ಭಾವ..

ಮದುವೆಯಾಗಿ ಮಗುವಾದ ಬಳಿಕ ಬಹುತೇಕ ಹೆಣ್ಣು ಮಕ್ಕಳು ಅಡಿಗೆ, ಧಾರಾವಾಹಿ, ಫ್ಯಾಶನ್, ಸೋಶಿಯಲ್ ಮೀಡಿಯಾ ದಲ್ಲಿ- ಕಂಫರ್ಟ್ ಝೋನಿನಲ್ಲಿ ಹಾಯಾಗಿರುವ ಈ ಕಾಲದಲ್ಲಿ ಸಾಧನೆ ಯ ಹಿಂದೆ ಬಿದ್ದಿರುವ ಸುಮಾಳ ಮೇಲೆ ಅಭಿಮಾನ ಮೂಡಿತ್ತು.. ಅದಕ್ಕಿಂತ ಹೆಚ್ಚಾಗಿ ದಿನೇಶ ಮೇಲೆ.. ಸ್ವಸುಖದ ಪರಿವೆಯಿಲ್ಲದೇ ಹೆಂಡತಿಯ ಸಾಧನೆಗೆ ಟೊಂಕ ಕಟ್ಟಿ ನಿಂತಿರುವ ಅವನ ವಿಶಾಲ ಮನಸ್ಸು ಕೂಡಾ ಅಪರೂಪವೇ.
ಸಣ್ಣ ಪುಟ್ಟ ವಿಷಯಕ್ಕೆ ಕೌಟುಂಬಿಕ ಜಗಳ ಮಾಡಿಕೊಳ್ಳುವ ನಮ್ಮ ಸಿಬ್ಬಂದಿಗಳ ಮುಂದೆ ಎಷ್ಟೋ ಸಲ ಈ ದಂಪತಿಯ ಉದಾಹರಣೆ ಕೊಟ್ಟಿದ್ದಿದೆ. ಜೋಡು ಕೆರೆಯ ಹತ್ತಿರ ಹಾದು ಹೋಗುವಾಗ ಹಾರ್ನ್ ಬಿಲ್ ಕಂಡರೂ ನನಗೆ ಈ ದಂಪತಿಗಳು ನೆನಪಾಗಿ ಬಿಡುತ್ತಿದ್ದರು.. ಇಂದು ನಮ್ಮ ದೇಶದಲ್ಲಿ ವಿವಾಹ ಮತ್ತು ಕೌಟುಂಬಿಕ ವ್ಯವಸ್ಥೆ ತುಂಬಾ ಶಿಥಿಲಗೊಳ್ಳು ತ್ತಿದೆ.. ಯುವಕ-ಯುವತಿ ಯರು ಮದುವೆಯಾದರೆ ತಮ್ಮ ಸ್ವಾತಂತ್ರ್ಯ ಹಾಗೂ ಕನಸುಗಳು ಕೊನೆಗೊಂಡಂತೆ ಎಂಬ ಭಾವದಲ್ಲಿ ಮದುವೆಯಾ ಗುವುದನ್ನೇ ಮುಂದೂಡುತ್ತಿದ್ದಾರೆ. ಇವೆಲ್ಲದಕ್ಕೂ ಉತ್ತರವೆಂಬಂತೆ ಒಂದು ಆದರ್ಶ ದಾಂಪತ್ಯಕ್ಕೆ ಉದಾಹರಣೆಯಾಗಿದ್ದರು ಸುಮಾ ಹಾಗೂ ದಿನೇಶ- ಹಾಗೆಂದು ನಾ ಭ್ರಮಿಸಿದ್ದೆ.. ನನ್ನನ್ನು ತಲ್ಲಣಗೊಳಿಸುವ ಆ ಘಟನೆ ನಡೆಯುವವರೆಗೂ..

ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಿಂದ ತೀವ್ರ ಭೇದಿ ಹಾಗೂ ನಿರ್ಜಲೀಕರಣದಿಂದ ಸುಮಾ ದಾಖಲಾದ ಕುರಿತು ಕರೆ ಬಂತು.. ಪರೀಕ್ಷಿಸಿದಾಗ ಆಕೆ ತುಂಬಾ ಸುಸ್ತಾಗಿರುವುದು ಗೋಚರಿಸು ತ್ತಿತ್ತು.. ʼಇನ್ನು ಮೂರೇ ದಿನಕ್ಕೆ ಪರೀಕ್ಷೆ ಇದೆ .. ಈಗಲೇ ಹೀಗಾಯ್ತಲ್ಲ.. ಮೇಡಂ ಏನಾದ್ರೂ ಮಾಡಿʼ ಎಂದು ದಿನೇಶ ಕಂಗಾಲಾಗಿ ಹೇಳಿದರು. ಒಂದಿಡೀ ವರ್ಷದ ಪರಿಶ್ರಮ ಹೀಗೆ ವ್ಯರ್ಥವಾಗ ಬಾರದಲ್ಲ.. ಐ.ವಿ. ಫ್ಲೂಯಿಡ್, ಆಂಟಿಬಯಾಟಿಕ್ ಮತ್ತಿತರ ಎಲ್ಲ ಬಗೆಯ ಚಿಕಿತ್ಸೆ ನೀಡಿ ಹೇಗೋ ಪರೀಕ್ಷೆಗೆ ಹೋಗಲು ತಯಾರಿ ಮಾಡಿದೆವು.. ಆದರೆ ಅವಳ ಆರೋಗ್ಯ ಸಂಪೂರ್ಣವಾಗಿ ಸಹಕರಿಸದೇ ಯಶಸ್ಸು ದೂರವೇ ಉಳಿಯಿತು..

ತಾನಂದುಕೊಂಡಿದ್ದು ಸಾಧಿಸಲು ಸಾಧ್ಯವಾಗದೇ ಹೋದಾಗ ಸುಮಾ ಖಿನ್ನತೆಗೊಳಗಾದಳು. ಮರಳಿ ಯತ್ನವ ಮಾಡು ಎಂಬ ಮಂತ್ರದೊಂದಿಗೆ ಕೆಲ ದಿನಗಳ ಬಳಿಕ ಮತ್ತೆ ಓದಲು ಪ್ರಾರಂಭಿಸಿದಳು. ಆದರೆ ಪ್ರತೀ ಸಲ ಪರೀಕ್ಷೆ ಹತ್ತಿರ ಬಂದೊಡನೆ ಇನ್ನೊಂದೆರಡು–ಮೂರು ದಿನ ಇರುವಾಗಲೇ ತೀವ್ರ ಭೇದಿ, ಹೊಟ್ಟೆ ನೋವು ಆರಂಭವಾಗುತ್ತಿತ್ತು.. ಫುಡ್ ಪಾಯ್ಸನಿಂಗ್ ಆಗದಂತೆ ನೋಡಿಕೊಳ್ಳಲು ಹೊರಗಿನ ಆಹಾರವನ್ನು ಸಂಪೂರ್ಣ ವಾಗಿ ತ್ಯಜಿಸಿ ಮನೆಯಲ್ಲಿಯೇ ಸಿದ್ಧಪಡಿಸಿದ ಆಹಾರ ಸೇವಿಸಿ ದರೂ ಪರಿಣಾಮ ಒಂದೇ. ಹುಬ್ಬಳ್ಳಿಯಲ್ಲಿ ದೊಡ್ಡ ಆಸ್ಪತ್ರೆಗಳಲ್ಲಿ ಸಂಬಂಧ ಪಟ್ಟ ತಜ್ಞರ ಸಲಹೆ ಯನ್ನೂ ಪಡೆದಾಯಿತು.. ಎಲ್ಲ ಪರೀಕ್ಷೆಗಳೂ ನಾರ್ಮಲ್ ಎಂದು ವರದಿ ಬಂದಿತ್ತು. ಪರೀಕ್ಷಾ ಭೀತಿಗೆ ಹೀಗೆ ಆಗುತ್ತಿದೆ ಎಂದು ಮಾನಸಿಕ ತಜ್ಞರ ಚಿಕಿತ್ಸೆಯೂ ನಡೆದಿತ್ತು. ಆದರೆ ಫಲಿತಾಂಶ ಮೊದಲಿನದೇ.
ಸುಮಾ ತನ್ನಲ್ಲಿ ತಾನು ಭರವಸೆ ಕಳೆದುಕೊಳ್ಳುತ್ತಿ ದ್ದಳು. ಪ್ರೇಮ ವಿವಾಹವಾದ್ದರಿಂದ ಹಿರಿಯರ ಬೆಂಬಲ ಹೆಚ್ಚಿರಲಿಲ್ಲ.ಅನಾರೋಗ್ಯವಾಗಿ ಆಸ್ಪತ್ರೆಗೆ ದಾಖಲಾದಾಗ ದಿನೇಶನೊಬ್ಬನೇ ಆಸ್ಪತ್ರೆಯಲ್ಲಿ ಉಳಿದು ಉಪಚರಿಸುವುದು ಕಂಡರೆ ಯಾರಿಗಾ ದರೂ ಮನಸ್ಸು ಮಿಡಿಯುತ್ತಿತ್ತು.

ಆಹಾರ ಹುಡುಕುತ್ತ ಹೋದ ಹಾರ್ನ್ ಬಿಲ್ ಗಂಡು ಹಕ್ಕಿ ಬೇಟೆಗಾರನಿಗೆ ಬಲಿಯಾದರೆ ಅಥವಾ ಬೇರೆ ಯಾವುದೇ ಅವಘಡಕ್ಕೆ ಒಳಗಾದರೆ ಪೊಟರೆಯೊಳ ಗಿನ ಹೆಣ್ಣು ಹಕ್ಕಿ ಮತ್ತು ಮರಿಗಳು ಅಲ್ಲೇ ಸಾಯ ಬೇಕಾಗುತ್ತದೆ. ಹಾರ್ನ್ ಬಿಲ್ ಗಂಡು ಹಕ್ಕಿಗಳ ಸಮರ್ಪಣಾ ಭಾವದ ದುಡಿಮೆಗೆ ಒಂದು ಸಲಾಂ ಹೇಳಲೇ ಬೇಕು.
ಗರಿಷ್ಟ ವಯೋಮಿತಿಯನ್ನು ಸಮೀಪಿಸುತ್ತಿರುವು ದರಿಂದ ಸುಮಾಗೆ ಈ ಸಲ ಪರೀಕ್ಷೆ ಬರೆಯಲು ಕೊನೆಯ ಅವಕಾಶವಿತ್ತು. ಎಷ್ಟೇ ಆಹಾರದ ಬಗ್ಗೆ ಕಾಳಜಿ ಮಾಡಿದರೂ, ಟೆನ್ಶನ್ ಮಾಡಿಕೊಳ್ಳದೇ ಇರಲು ಪ್ರಯತ್ನಿಸಿದರೂ ಮತ್ತೆ ಭೇದಿ ಆರಂಭವಾ ಗಿತ್ತು. ಅನೇಕ ಸಲ ದಾಖಲಾಗಿರುವುದರಿಂದ ಆಸ್ಪತ್ರೆಯಲ್ಲಿ ಎಲ್ಲರಿಗೂ ಈ ದಂಪತಿ ಪರಿಚಿತರೇ ಆಗಿದ್ದರು.. ನಿಮ್ಮ ಹಳೆಯ ಪೇಷಂಟ್ ಎಕ್ಸಾಮ್ ಟೆನ್ಶನ್ ಎಂದರೆ ತಕ್ಷಣಕ್ಕೆ ಗೊತ್ತಾಗಿಬಿಡುತ್ತಿತ್ತು.

ಮೊಬೈಲ್ ಕ್ಯಾಮೆರಾದಲ್ಲಿ ಪ್ರೋ ಮೋಡಿನಲ್ಲಿ ಬೇರೆ ಬೇರೆ ಸೆಟ್ಟಿಂಗುಗಳಲ್ಲಿ ಫೋಟೋ ತೆಗೆಯುವ ಹುಕಿಯಲ್ಲಿದ್ದವಳಿಗೆ ಸೂರ್ಯೋದ ಯದ ಚಿತ್ರ ಸೆರೆ ಹಿಡಿಯಬೇಕೆನಿಸಿತ್ತು. ಆಸ್ಪತ್ರೆಯ ಹಿಂಭಾಗದ ಶವಾಗಾರದ ಪಕ್ಕದಲ್ಲಿ ಕವಲೊಡೆದ ಮರವೊಂದಿದೆ. ಅದರ ನಡುವಿನಿಂದ ಸೂರ್ಯೋ ದಯ ಸೊಗಸಾಗಿ ಕಾಣುತ್ತದೆ. ಆ ಫೋಟೋ ತೆಗೀರಿ ಮೇಡಂ ಬೇರೆ ಎಲ್ಲಿಯೂ ಹೋಗಬೇಕಾ ಗಿಲ್ಲ- ಎಂದು ನಮ್ಮ ಸಿಬ್ಬಂದಿ ಸಲಹೆ ನೀಡಿದ್ದರು. ಹೀಗಾಗಿ ಇನ್ನೂ ನಸುಕಿನಲ್ಲಿಯೇ ಶವಾಗಾರದ ಪಕ್ಕದಲ್ಲಿ ಹೋಗಿ ನಿಂತಿದ್ದೆ..
ಶಟರ್ ಸ್ಪೀಡು, ಐಸೋ ಎಷ್ಟೆಷ್ಟಿರಬೇಕೆಂಬ ಲೆಕ್ಕಾ ಚಾರದಲ್ಲಿ ಇರುವಾಗ ಒಂದು ಪರಿಚಿತ ದನಿ ಸಣ್ಣ ದಾಗಿ ಮಾತನಾಡುತ್ತಿದ್ದುದು ಕೇಳಿಸಿತು. ಇನ್ನೂ ಬೆಳಕು ಹರಿದಿರಲಿಲ್ಲ.. ಮಂಜಿನ ಮುಸುಕಲ್ಲಿ ನಾನು ನಿಂತಿದ್ದು ಆ ವ್ಯಕ್ತಿಗೆ ಕಾಣುವಂತಿರಲಿಲ್ಲ.
“ಸಿದ್ದಣ್ಣಾ .. ಈ ಸಲ ಕಳುಹಿಸಿದ ಪುಡಿ ಯಾಕೋ ಅಷ್ಟು ಸ್ಟ್ರಾಂಗಾಗಿ ಇಲ್ಲಪ್ಪೋ.. ಹಿಂದಿನ ಸಲ ಕಳುಹಿಸಿದಂತದ್ದೇ ಮತ್ತೆ ಪಾರ್ಸೆಲ್ ಹಾಕು ಬಸ್ಸಿಗೆ .. ದುಡ್ಡು ಫೋನ್ಪೇ ಮಾಡಿದ್ದೆ ನೋಡು.. “ ಫೋನಲ್ಲಿ ಮಾತನಾಡುತ್ತಿದ್ದುದು ದಿನೇಶ ಅಲ್ಲವೇ..!!

ವಾರ್ಡಿನಲ್ಲಿ ಸುಮಾ ದಾಖಲಾಗಿದ್ದಳು. ಈ ಕಡೆಯ ಬಾಗಿಲಿನಿಂದ ಹೊರ ಬಂದು ದಿನೇಶ ಗುಟ್ಟಾಗಿ ಯಾರೊಂದಿಗೋ ಮಾತನಾಡುತ್ತಿದ್ದ.. “ಡಾಕ್ಟರ್ ಟ್ರೀಟ್ ಮೆಂಟಿನಿಂದ ಯಾಕೋ ಚೇತರಿಸಿಕೊಂಡು ಬಿಟ್ಟವ್ಳೆ ಸಿದ್ದಣ್ಣಾ..ಹೊಟ್ಟೆ ಕರುಳುವರೆಗೂ ಕಿತ್ಕೊಂಡು ಬರೂ ಹಾಂಗೆ ಭೇದಿಯಾಗುವ ಸ್ಟ್ರಾಂಗ್ ಆಗಿರೋ ಪುಡಿ ಕಳಿಸು ಮಾರಾಯಾ..ನಾಕು ದಿನ ಮೇಲಕ್ಕೇಳ ಬಾರದು .. ಇದು ಒಂದು ಸಲ ಗ್ರಹಚಾರ ಕಳೀಲಿ.. ಮತ್ತೆ ಎಕ್ಸಾಮ್ ಬರೆಯೋ ಹಾಗಿಲ್ಲ..

“ಮಂಜಿನ ಪರದೆಯ ಆಚೆ ನಿಂತವಳಿಗೆ ಏಕಾಏಕಿ ಕಾಲುಗಳಲ್ಲಿ ಶಕ್ತಿಯೇ ಉಡುಗಿದಂತಾಯಿತು. ಹೆಂಡತಿಯನ್ನು ಪ್ರೋತ್ಸಾಹಿಸಿ ಕೆ.ಎ.ಎಸ್. ಅಧಿಕಾರಿ ಯಾಗಿಸಹೊರಟ ಉದಾರ ಮುಖವಾಡದ ಈತ ಭೇದಿಯಾಗುವ ಪುಡಿಯನ್ನು ಆಹಾರದಲ್ಲಿ ಕಲೆಸಿ ತಿನ್ನಿಸಿ ಅವಳಿಗೆ ಪರೀಕ್ಷೆ ಬರೆಯಲು ಆಗದಂತೆ ಮಾಡುತ್ತಿದ್ದನಾ??!!ಫೋನಿ ನಲ್ಲಿ ಮಾತು ಮುಗಿಸಿ ವಾರ್ಡಿನತ್ತ ಹೊರಟವ ಊಸರವಳ್ಳಿಯಾಗಿದ್ದ. ಹಾರ್ನ್ ಬಿಲ್ ನೊಂದಿಗೆ ಹೋಲಿಸಿ ನಾನು ಮೂರ್ಖಳಾಗಿದ್ದೆನಲ್ಲ..
ಡಾ.ಸೌಮ್ಯ ಕೆ.ವಿ.
ಯಲ್ಲಾಪುರ

ತುಂಬ ಚೆನ್ನಾಗಿದೆ, ಎಲ್ಲರೂ ಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂ
LikeLike