(ಕನ್ನಡ ಕಟ್ಟಿದವರು ಕೃತೃ, ವಚನಗಳ ಶುದ್ಧೀಕರಣ ಧಾತೃ, ಧರೆಗೆ ದೊಡ್ಡವರು ಅಭಿದಾನಿತರು, ಬಸವ ಧ್ಯಾನಿ, ಡಾಕ್ಟರೆಟ್ ಚಿನ್ನದ ಪದಕ ಪುರಸ್ಕೃತರು, ಎಂ. ಲಿಬ್.ಎಸ್.ಸಿ ಗೌರವ ಪದವೀಧರರು, ಗ್ರಾಂಥಾಲಯ ತಜ್ಞರು,ಡೆಪ್ಯೂಟಿ ಗ್ರಂಥಪಾಲಕರು, ಮಾರ್ಗದರ್ಶಿ ಪ್ರಾಧ್ಯಾಪಕರು, ಡೀನ್, ಆಡಳಿತ ಗಾರರಾಗಿ, ಮುಖ್ಯಸ್ಥರಾಗಿ ದುಡಿದವರು. ಅಧ್ಯಾಪನದ ಜೊತೆಗೆ ಸಂಶೋಧನೆ – ಬರವಣಿಗೆ ಯಲ್ಲಿ ನಿರತರಾಗಿ ಗ್ರಂಥಾಲಯ ವಿಜ್ಞಾನ ಗ್ರಂಥ ಗಳೂ ಸೇರಿದಂತೆ ೧೦೪ ಕೃತಿಗಳು, ೧೫೦ ಬೃಹತ್ ಲೇಖನಗಳ ರಚನಕಾರರು. ೨೫ ರಾಷ್ಟ್ರೀಯ – ಪ್ರಾಂತೀಯ ಸಮ್ಮೇಳನಗಳಲ್ಲಿ ಭಾಗವಹಿಸಿದ ಹಿರಿಮೆಯ ಶರಣ ಸಾಹಿತಿಗಳು, ಸೇವಾರತ್ನ, ಚಲಿಸುವ ಕೋಶ, ಬಸವ ಪಂಡಿತ, ಸಾಹಿತ್ಯಶ್ರೀ ಡಾ.ಶಿವಪುತ್ರಪ್ಪ ರಾಯಪ್ಪ ಗುಂಜಾಳರವರ ಸರ್ವಾಧ್ಯಕ್ಷತೆಯಲ್ಲಿ ಧಾರವಾಡ ಜಿಲ್ಲಾ ೧೭ ನೇ ಕನ್ನಡ ಸಾಹಿತ್ಯ ಸಮ್ಮೇಳನ ಧಾರಾನಗರಿಯ ಶಕ್ತಿಕೇಂದ್ರ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾಪು ಸಭಾಭವನದಲ್ಲಿ ೩ & ೪ ಫೆಬ್ರವರಿ ೨೦೨೫ರ ಎರಡು ದಿನ ಆಯೋಜಿಸಲಾಗಿದೆ. ಸಕಾರಣ ಮಹನೀಯರ ಜೀವನ ಘಟನಾವಳಿ, ಸಾಹಿತ್ಯ ಶಿಕ್ಷಣ ಸಾಧನೆ ಮೇಲೆ ಬೆಳಕು ಚೆಲ್ಲುವ ಕಿರುಲೇಖನ)

(ಬಸವಪ್ರೇಮಿ ಡಾ.ಎಸ್.ಆರ್.ಗುಂಜಾಳರಿಗೆ ಧಾರವಾಡ ಜಿಲ್ಲಾ ೧೭ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವ)

ಶಿಕ್ಷಣ ಪ್ರೇಮಿ ಗುಂಜಾಳರವರ ಜನನ ಶಿಕ್ಷಣ ಕುರಿತು ಕ್ಲುಪ್ತ ಮಾಹಿತಿ

ಬಡತನದಲ್ಲಿ ಅರಳಿದ ದೈತ್ಯಪ್ರತಿಭೆ,ಬಸವಪ್ರೇಮಿ ಎಸ್. ಆರ್. ಗುಂಜಾಳ ಅವರು ಸಾಹಿತ್ಯ ವ ಸಾಂಸ್ಕೃತಿಕ ನಗರಿ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಗ್ರಾಮೀಣ ತಾಲ್ಲೂಕಿನ ರೂಪಕ ಸಾಮ್ರಾಜ್ಯದ ಚಕ್ರವರ್ತಿ ಕವಿ ಕುಮಾರವ್ಯಾಸನ ಜನ್ಮಕ್ಷೇತ್ರವಾದ ಕೋಳಿವಾಡದಲ್ಲಿ ೨೫ ಜೂನ್ ೧೯೩೨ರಲ್ಲಿ ಜನಿಸಿದರು. ತಂದೆ ರಾಯಪ್ಪ ಗುಂಜಾಳ, ತಾಯಿ ರುದ್ರಮ್ಮನವರ ಸಂಸ್ಕಾರದಲ್ಲಿ ನೆಚ್ಚಿನ ಪುತ್ರರಾಗಿ ಉನ್ನತ ಶಿಕ್ಷಣಪಡೆದು ಜ್ಞಾನವಂತರಾದರು. ಪ್ರಾಥಮಿಕ, ಪ್ರೌಢ, ಪದವಿಪೂರ್ವ ವ ಪದವಿ ಶಿಕ್ಷಣವನ್ನು ಪಡೆದರು. ಕುಟುಂಬದಲ್ಲಿ ಚಿನ್ನದಂತ ಮಗನಾಗಿದ್ದ ಇವರ ಉನ್ನತ ಶಿಕ್ಷಣ ಪೂರೈಕೆಗಾಗಿ ೧೨ ತೊಲಿ ಬಂಗಾರವನ್ನು ಮಾರಿ ಇವರ ಜೀವನಕ್ಕೆ ಆಸರೆಯಾದ ತಂದೆ ತಾಯಿಗಳ ತ್ಯಾಗ ವನ್ನು ಸದಾ ನೆನೆಯುತ್ತಾರೆ. ಎಂ. ಎ. ಪದವಿ ಯನ್ನು ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ದಲ್ಲಿ ೧೯೫೭ರಲ್ಲಿ, ಗ್ರಂಥಾಲಯ ವಿಜ್ಞಾನ ವಿಷಯದಲ್ಲಿ ಎಂ. ಲಿಬ್. ಎಸ್‌ ಸಿ. ದೆಹಲಿ ವಿಶ್ವ ವಿದ್ಯಾಲಯ (೧೯೬೪)ದಲ್ಲಿ. ಉತ್ತಂಗಿ ಚೆನ್ನಪ್ಪ ಜೀವನ ಮತ್ತು ಕೃತಿಗಳ ಕುರಿತು ಮಂಡಿಸಿದ ಪಿ. ಹೆಚ್. ಡಿ ಮಹಾ ಪ್ರಬಂಧಕ್ಕೆ ಚಿನ್ನದ ಪದಕ ಸಹಿತ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ೧೯೭೭ – ೭೮ರಲ್ಲಿ ಪಡೆದರು. ಪ್ರಸ್ತುತ ಡಾ. ಎಸ್. ಆರ್. ಗುಂಜಾಳರವರು ವಿದ್ಯಾನಗರಿ ದಾರವಾಡದ ಸಂತೂಬಾಯಿ ಅಪಾರ್ಟಮೆಂಟ, ೨ನೇ ಮಹಡಿ, ಕೋರ್ಟ್ ರಸ್ತೆ ಹತ್ತಿರ ಸಪರಿವಾರವಾಗಿ ವಾಸವಾಗಿದ್ದಾರೆ.

ಮಹಾ ಮೇಧಾವಿ ಅನುಭಾವಿ ಗ್ರಂಥಾಲಯ ವಿಜ್ಞಾನಿ ಗುಂಜಾಳರವರು ನಿರ್ವಹಿಸಿದ ಹುದ್ದೆಗಳು

ಧಾರವಾಡ (೧೯೬೧ – ೬೮), ಡೆಪ್ಯೂಟಿ ಗ್ರಂಥ ಪಾಲಕ- ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು – ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗ, ಗುಲ್ಬರ್ಗಾ ವಿಶ್ವವಿದ್ಯಾಲಯದ (೧೯೭೯- ೯೨), ಗ್ರಂಥಪಾಲಕ (ಪ್ರಭಾರೆ) ಗುಲಬರ್ಗಾ ವಿಶ್ವ ವಿದ್ಯಾಲಯ ಗ್ರಂಥಾಲಯ, ನಿರ್ದೇಶಕರು- ಲಿಂಗಾಯತ ಸಂಶೋಧನ ಕೇಂದ್ರ (೧೯೯೪ – ೨೦೦೪) ಗ್ರಂಥಾಲಯ ಶಿವಬಸವನಗರ, ಬೆಳಗಾವಿ. ಈ ದಿಸೆಯಲ್ಲಿ ಶ್ರೀಯುತರಿಗೆ ೩೦ ವರ್ಷಗಳ ಅಪಾರ ಬೋಧನಾನುಭವ ಇದೆ. ೩೫ ವರ್ಷಗಳ ಸಂಶೋಧನಾನುಭವ ಸೇರಿದಂತೆ ೩೨ ವರ್ಷಗಳ ದಕ್ಷಆಡಳಿತಾನುಭವ ಇರುವ ಅನುಭಾವಿ ಲೇಖಕ ರೆಂದೆ ಪ್ರಸಿದ್ಧರಾಗಿದ್ದಾರೆ. ದಿಲ್ಲಿ ವಿಶ್ವವಿದ್ಯಾಲಯ ದಲ್ಲಿ ಗ್ರಂಥಾಲಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು 1979ರಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯ ದಲ್ಲಿ ಗ್ರಂಥಾಲಯ ವಿಭಾಗದ ಮುಖ್ಯಸ್ಥರ ಜವಾಬ್ದಾರಿಯನ್ನು ಹೊತ್ತು ದಕ್ಷತೆ ಯಿಂದ ನಿಭಾಯಿಸಿದ ಕೀರ್ತಿಶೇಷರಿವರು.

ಗ್ರಂಥಾಲಯ ತಜ್ಞ ಗುಂಜಾಳರ ವಿದೇಶ ಪ್ರವಾಸ ಮತ್ತು ಸಂಪಾದಿತ ಪತ್ರಿಕೆಗಳು ಮಾಹಿತಿ

೧೯೮೩ರಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನ ಮತ್ತು ಕೆನಡಾ, ೧೯೮೭ರಲ್ಲಿ ಇಂಗ್ಲೆಂಡ್ ದೇಶಗಳಿಗೆ ವೃತ್ತಿ ಸಂಬಂಧಿಸಿದಂತೆ ಪ್ರವಾಸ ಕೈಗೊಂಡು ಅಗಮ್ಯ ಜ್ಞಾನ ಸಂಪಾದಿಸಿರುವ ಗ್ರಂಥಾಲಯ ವಿಜ್ಞಾನಿ ಗುಂಜಾಳರ ಮಾರ್ಗ ದರ್ಶನದಲ್ಲಿ ೧೭ ವಿದ್ಯಾರ್ಥಿಗಳು ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿ ಪಿ.ಹೆಚ್.ಡಿ ಪದವಿ ಪಡೆದಿದ್ದಾರೆ. ಇವರ ಸಂಪಾದಕತ್ವದಲ್ಲಿ ೧೯೮೫ ರಲ್ಲಿ ಡೆಕ್ಕನ ಇನ್‌ಫಾರೇಶನ್ ಸೈಂಟಿಸ್ಟ್ (ವಾರ್ಷಿಕ ಪತ್ರಿಕೆ) ಗುಲಬರ್ಗಾ, ೧೯೮೬ರಿಂದ ಇಲ್ಲಿಯವರೆಗೆ ‘ಸಮಾಜ ವಿಜ್ಞಾನ ಲೇಖನ ದರ್ಶಕ’ ಹಾಗೂ ೧೯೯೬ರಿಂದ ೧೯೯೭ರವರೆಗೆ ‘ಕರ್ನಾಟಕ ಗ್ರಂಥಾಲಯ ವೃತ್ತಿಪರ ನಿಯತಕಾಲಿಕೆ’ಗಳು ಪ್ರಕಟವಾಗಿವೆ.

ಲೇಖಕ ಸಂಪಾದಕ ಗುಂಜಾಳರವರ ವಿದ್ಯಾಮಂಡಳಿ ಮತ್ತು ವಿವಿಧ ಸಂಘ ಸಂಸ್ಥೆಗಳ ಆಜೀವ ಸದಸ್ಯತ್ವ

ಗುಲಬರ್ಗಾ ವಿಶ್ವವಿದ್ಯಾಲಯ ವಿದ್ಯಾಮಂಡಳಿ ಯ ಸದಸ್ಯರಾಗಿದ್ದ ಇವರು ಸುಮಾರು ೨೦ ವಿಶ್ವ ವಿದ್ಯಾಲಯಗಳ ಅಭ್ಯಾಸ ಮಂಡಳಿಯ ಸದಸ್ಯ ರಾಗಿದ್ದರು. ಗುಲಬರ್ಗಾ ವಿಶ್ವವಿದ್ಯಾಲಯ ಸಮಾಜ ವಿಜ್ಞಾನ ಫ್ಯಾಕಲ್ಟಿಯ ಡೀನರಾಗಿದ್ದರು. ಭಾರತೀಯ ಗ್ರಂಥಾಲಯ ಸಂಘ, ದಿಲ್ಲಿ (ಆಜೀವ), ಭಾರತೀಯ ವಿಶಿಷ್ಟ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಸಂಘ, ಕಲ್ಕತ್ತ (ಆಜೀವ),ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು (ಆಜೀವ), ಅಖಿಲ ಭಾರತ ವೀರಶೈವ ಮಹಾ ಸಭಾ, ಬೆಂಗಳೂರು (ಆಜೀವ), ಭಾರತೀಯ ರಾಷ್ಟ್ರೀಯ ಗ್ರಂಥಾಲಯ ಸಲಹಾ ಸಮಿತಿ (೧೯೯೭-೨೦೦೦ ರವರೆಗೆ ಸದಸ್ಯರು), ಹಿರಿಯ ನಾಗರಿಕ ವೇದಿಕೆ, ಬೆಳಗಾವಿ (ಆಜೀವ), ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಬೆಂಗಳೂರು (ಆಜೀವ), ಶರಣ ಸಂಸ್ಕೃತಿ ಅಧ್ಯಯನ ಕೇಂದ್ರ, ನಿಡಸೋಸಿ (ಸಂಚಾಲಕ), ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ (ಆಜೀವ), ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ, ಧಾರವಾಡ (ಆಜೀವ) (ದತ್ತಿ ಸಹ ಇದೆ), ಬಸವ ಸಮಿತಿ ಬೆಂಗಳೂರು (ಆಜೀವ)

ಮಾತೃಶ್ರೀ ರುದ್ರಮ್ಮನವರ ಹೆಸರಿನಲ್ಲಿ ಶಿಕ್ಷಣಾಭಿವೃದ್ಧಿ ಕಾರ್ಯ ಮತ್ತು ಒಲಿದು ಬಂದ ಗೌರವಗಳು

೧೯೯೫ರಲ್ಲಿ ಮಾತೋಶ್ರೀ ರುದ್ರಮ್ಮ ರಾಯಪ್ಪ ಗುಂಜಾಳ ಸ್ಮಾರಕ ವಿಶ್ವಸ್ಥ ಸಂಸ್ಥೆ ಕೋಳಿವಾಡ, ಇದರ ಅಂಗವಾಗಿ ಪೂರ್ವ ಪ್ರಾಥಮಿಕ ಶಾಲೆ ಮತ್ತು ಒಂದು ಹಿರಿಯ ಪ್ರಾಥಮಿಕ ಶಾಲೆಯನ್ನು ಸ್ವಂತ ಮನೆಯಲ್ಲಿ ಪ್ರಾರಂಭಿಸಿದ್ದಾರೆ. ಇದಕ್ಕೆ ಈಗಾಗಲೇ ೧೦ ಲಕ್ಷ ರೂ ದತ್ತಿ ಹಣ ನೀಡಿದ್ದಾರೆ. ೩೦೦ ವಿದ್ಯಾರ್ಥಿಗಳು ೧೦ ಜನ ಶಿಕ್ಷಕರಿದ್ದಾರೆ (೨೦೧೨). ಶಿಕ್ಷಣ ಪ್ರೇಮಿಯಾದ ಇವರು ಸುಮಾರು ೨೫ ರಾಷ್ಟ್ರೀಯ ಮತ್ತು ಪ್ರಾಂತೀಯ ಸಮ್ಮೇಳನಗಳಲ್ಲಿ ಮತ್ತು ಒಂದು ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿ ತಮ್ಮ ಪ್ರೌಢ ಪ್ರಬಂಧಗಳನ್ನು ಮಂಡಿಸಿ ಜನ ಮನ್ನಣೆ ಗಳಿಸಿದ್ದಾರೆ. ಮಹಾ ಅನುಭಾವಿ ಗುಂಜಾಳರಿಗೆ ೨೦೦೬ರಲ್ಲಿ ಮಹಾಲಿಂಗಪುರದಲ್ಲಿ ನಡೆದ ಪ್ರಥಮ ಡಾ.ಫ.ಗು.ಹಳಕಟ್ಟಿ ವಚನೋತ್ಸವ ಸಮ್ಮೇಳನದ ಸರ್ವಾಧ್ಯಕ್ಷ ಗೌರವ ನೀಡಲಾಗಿತ್ತು. ಶಿವಮೊಗ್ಗದಲ್ಲಿ ೨೦೧೩ರಲ್ಲಿ ಆಯೋಜನೆಯಾಗಿದ್ದ ವಚನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು. ೨೦೧೪ರಲ್ಲಿ ವಿಜಾಪುರದಲ್ಲಿ ಸಂಪನ್ನಗೊಂಡಿದ್ದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸರ್ವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಅನುಭಾವಿ ಶರಣ ಸಂಶೋಧಕ ಗುಂಜಾಳರವರ ಕೃತಿಗಳ ಕಿರು ನೋಟ

ತಮ್ಮ ಅಧ್ಯಯನ ಮತ್ತು ಅಧ್ಯಾಪನ ಅನುಭವ ದಿಂದ ೧೦೪ ಸಂಶೋಧನಾ ಗ್ರಂಥಗಳನ್ನು ಮತ್ತು ೧೫೦ ಪ್ರೌಢ ಲೇಖನಗಳನ್ನು ಪ್ರಕಟಿಸಿಸ್ದಾರೆ. ಅವುಗಳಲ್ಲಿ ಕೆಲವೊಂದು ಗ್ರಂಥಗಳನ್ನು ಹೆಸರಿಸುವುದಾದರೆ….

೧) ಡಾ. ಎಸ್. ಆರ್. ಗುಂಜಾರ ಗ್ರಂಥಾಲಯ ವಿಜ್ಞಾನ ಗ್ರಂಥಗಳು

ಐವರು ಗ್ರಂಥಾಲಯ ವಿಜ್ಞಾನಿಗಳು: ಗ್ರಂಥಾಲಯ ವಿಜ್ಞಾನ ಪ್ರಕಾಶನ, ಧಾರವಾಡ, (೧೯೬೪). ಗ್ರಂಥಾಲಯ ವಿಜ್ಞಾನ ದರ್ಶನ (ಇತರರೊಂದಿಗೆ ಸಂಪಾದಿತ) ಜ್ಞಾನೋದಯ ವಚನಾಲಯ, ಮೊರಬ, (೧೯೬೬). ಕರ್ನಾಟಕದಲ್ಲಿ ಗ್ರಂಥಾಲಯಗಳು: ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, (೧೯೬೯). ಗ್ರಂಥಾಲಯ ದಿಗ್ಗಜಗಳು: ಸಮಾಜ ಪುಸ್ತಕಾಲಯ, ಧಾರವಾಡ (೧೯೬೯). ಸೂಚೀಕರಣ: ಜ್ಞಾನ ಮತ್ತು ಕ್ರಿಯೆ: ಗ್ರಂಥಾಲಯ ವಿಜ್ಞಾನ ಪ್ರಕಾಶನ, ಧಾರವಾಡ, (೧೯೭೩). ಗ್ರಂಥಾಲಯ ವಿಜ್ಞಾನದ ಪಂಚ ಸೂತ್ರಗಳು: (ರಂಗನಾಥನ್‌ರ ಇಂಗ್ಲೀಷ ಗ್ರಂಥದ ಅನುವಾದ ಯೋಗೀಶ್ ಯಡ್ರಾವಿಯವರೊಂದಿಗೆ), ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, (೧೯೭೫).ಗ್ರಂಥಾಲಯದ ಅಂತರಂಗ: ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, (೧೯೭೬) ೪ನೇ ಮುದ್ರಣ (೧೯೯೫). ಗ್ರಂಥಾಲಯ : ಅಂದು – ಇಂದು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, (೧೯೭೭), ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಗಳು: ಗ್ರಂಥಾಲಯ ವಿಜ್ಞಾನ ಪ್ರಕಾಶನ, ಗುಲಬರ್ಗಾ, (೧೯೮೨). ಗ್ರಂಥಪಾಲಕರ ಸಮಸ್ಯೆ ಗಳು (ಸಂಪಾದಿತ), ಗ್ರಂಥಾಲಯ ವಿಜ್ಞಾನ ಪ್ರಕಾಶನ, ಗುಲಬರ್ಗಾ, (೧೯೮೫). ಇಂಗ್ಲೀಷ್ ಕನ್ನಡ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಪಾರಿಭಾಷಿಕ ಶಬ್ದಕೋಶ (ಡಾ. ಎಸ್. ಎಲ್. ಸಂಗಮ ಸಹ ಲೇಖಕರು), ಗ್ರಂಥಾಲಯ ವಿಜ್ಞಾನ ಪ್ರಕಾಶನ, ಗುಲಬರ್ಗಾ, (೧೯೮೬). ನನ್ನ ಸ್ವಂತ ಗ್ರಂಥಾಲಯ: ದಿವ್ಯಜ್ಞಾನ ಗ್ರಂಥಾಲಯ, ಪ್ರಕಾಶನ, ಲೋಣಿ, (೨೦೦೦). ಅದೃಶ್ಯ ಗ್ರಂಥಾಲಯ, ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು, (೨೦೦೪).

ಗ್ರಂಥಾಲಯ ವಿಜ್ಞಾನಿ ಗುಂಜಾಳರು ಮಾತೃಭಾಷೆ ಅಲ್ಲದೆ ಆಂಗ್ಲ ಭಾಷೆಯಲ್ಲಿಯೂ ಗ್ರಂಥ ಪ್ರಕಟಿಸಿದ್ದಾರೆ. ಅವುಗಳೆಂದರೆ….Who’s who: Library and Information Science, Karnatak University, Dharwad, 1973. Voice of Librarians, Gulbarga Division Librarians Association, Gulbarga, (1987)

೨) ಗ್ರಂಥಾಲಯ ವಿಜ್ಞಾನಿ, ಮಹಾಜ್ಞಾನಿ ಗುಂಜಾಳರವ ಆಕರ ಗ್ರಂಥಗಳು

ಕರ್ನಾಟಕ ಕಾಲೇಜು ಗ್ರಂಥ ಭಂಡಾರದಲ್ಲಿಯ ಲಿಂಗಾಯತ ಧರ್ಮ ಸಾಹಿತ್ಯಗಳನ್ನು ಕುರಿತ ಗ್ರಂಥಗಳ ಸೂಚಿ: ಕರ್ನಾಟಕ ಕಾಲೇಜು, ಧಾರವಾಡ, (೧೯೬೭). ಬಸವ ಸಾಹಿತ್ಯ ದರ್ಪಣ, ಭಾಗ – ೧: (ಕನ್ನಡ, ತೆಲುಗು, ತಮಿಳು, ಸಂಸ್ಕೃತ, ಮರಾಠಿ, ಹಿಂದೀ, ಇಂಗ್ಲೀಷ ಭಾಷೆಗಳಲ್ಲಿ ಬಸವಣ್ಣನವರನ್ನು ಕುರಿತು ರಚಿತವಾದ ಗ್ರಂಥಗಳ ವಿವರಣಾತ್ಮಕ ಸೂಚಿ) ಬಸವ ಸಮಿತಿ, ಬೆಂಗಳೂರು, (೧೯೬೭). ಸಾಹಿತ್ಯ ಶಾಲ್ಮಲಾ : ಧಾರವಾಡ ಜಿಲ್ಲಾ ಬರಹಗಾರರ ಕೈಪಿಡಿ. ಕಾಯಕ ಯೋಗಿ ಬಸವನಾಳ ಶಿವಲಿಂಗಪ್ಪನವರು, ಬಿ .ಡಿ. ಜತ್ತಿ ಬಾಳು – ಬದುಕು, ಎಚ್. ಎಫ್. ಕಟ್ಟೀಮನಿ ಯವರು, ಉತ್ತಂಗಿ ಚನ್ನಪ್ಪ, ಯಗಟಿ ವೀರಪ್ಪ ಅವರ ಪ್ರಮುಖ ಕೃತಿಗಳು. ಅನುಭಾವಿಯ ಆತ್ಮಕಥನ, ಬಸವ ಚಿಂತನ, ಮಹಾಕವಿದ್ವಯರು, ವಚನಕಾರರು ಮತ್ತು ವಚನಾಂಕಿತರು, ಸುಖೀಜೀವನದ ಸೂತ್ರಗಳು, ಹಲವು ಧಾರ್ಮಿಕ ಗ್ರಂಥಗಳನ್ನು ಸಂಪಾದಿಸಿರುವ ಇವರು ಅನುವಾದಿತ ಮರಾಠಿ, ಇಂಗ್ಲಿಷ್ ಕೃತಿ ಸೇರಿದಂತೆ ಇಟ್ಟಾರೆ ೧೦೪ ಕೃತಿಗಳನ್ನು ಪ್ರಕಟಿಸಿದ್ದಾರೆ.

ಶರಣ ಶ್ರೀ ಎಸ್. ಆರ್. ಗುಂಜಾಳರವರ ಕೆಲವು ವಿಶಿಷ್ಟ ಕೃತಿಗಳ ಕಿರು ಪರಿಚಯ

‘ಲಿಂಗಾಯತ ಸಂಶೋಧನ ಕೇಂದ್ರ ಗ್ರಂಥಾಲಯ’ ಕೃತಿಯು ಎಸ್. ಆರ್. ಗುಂಜಾಳ ಅವರ ಐತಿಹಾಸಿಕ ಅವಲೋಕನವಾಗಿದೆ. ಈ ಕೃತಿಗೆ ಬೆನ್ನುಡಿ ಬರೆದಿರುವ ಸಿದ್ಧರಾಮ ಸ್ವಾಮಿಗಳು, ಲಿಂಗಾಯತ ಧರ್ಮ, ಸಮಾಜ, ಸಾಹಿತ್ಯ, ಸಂಸ್ಕೃತಿ ಮತ್ತು ತತ್ತ್ವಜ್ಞಾನಗಳಿಗೆ ಸಂಬಂಧಿಸಿದ ಅಮೂಲ್ಯ ಮತ್ತು ಅಪರೂಪದ ಗ್ರಂಥಗಳನ್ನು, ಸಮೃದ್ಧ ವಚನ ಸಾಹಿತ್ಯವನ್ನು ಒಂದೆಡೆ ಸಂಗ್ರಹಿಸಿ, ಓದುಗರಿಗೆ ಒದಗಿಸಿಕೊಡುವ, ಸಂಶೋಧಕರಿಗೆ ಸಾಂದರ್ಭಿಕ ಸೇವೆಯನ್ನು ಸಲ್ಲಿಸುವ ಉದ್ದೇಶದಿಂದ ಸ್ಥಾಪಿತವಾದ ಸಂಸ್ಥೆಯೇ ಲಿಂಗಾಯತ ಸಂಶೋಧನ ಕೇಂದ್ರ ಗ್ರಂಥಾಲಯ. ಗ್ರಂಥಾಲಯ ವಿಜ್ಞಾನದ ಕ್ಷೇತ್ರದಲ್ಲಿ ಅಪೂರ್ವ ಸೇವೆ ಸಲ್ಲಿಸಿ ‘ಅಭಿನವ ಎಸ್‌. ಆರ್. ರಂಗನಾಥ್’ ಎಂಬ ಕೀರ್ತಿಗೆ ಭಾಜನರಾಗಿರುವ ಡಾ. ಎಸ್. ಆರ್. ಗುಂಜಾಳ ಅವರ ಕನಸಿನ ಕೂಸು ಈ ಗ್ರಂಥಾಲಯ. ಇಂದು ಸಾರ್ವಜನಿಕ ಸೇವೆಯಲ್ಲಿ ಇಪ್ಪತ್ತು ವಸಂತಗಳನ್ನು ಪೂರ್ಣ ಗೊಳಿಸಿ ಸಮೃದ್ಧವಾಗಿ ಬೆಳೆದು ನಿಂತಿದೆ. ಈ ಗ್ರಂಥಾಲಯದ ಇತಿಹಾಸ, ಸಾಂದರ್ಭಿಕ ಸೇವೆ, ಗ್ರಂಥಗಳ ವಿವರ ಮುಂತಾದ ಹತ್ತು ಹಲವು ವಿಷಯಗಳನ್ನೊಳಗೊಂಡ ಕೈಪಿಡಿಯನ್ನು ಸಾರ್ವ ಜನಿಕರಿಗೆ ಒದಗಿಸಬೇಕೆಂಬ ನಮ್ಮ ಆಶಯಕ್ಕೆ ಅನುಗುಣವಾಗಿ ಡಾ. ಗುಂಜಾಳ ಅವರೇ ಈ ಕೈಪಿಡಿಯನ್ನು ರಚಿಸಿ ಓದುಗರ ಕೈಗಿತ್ತಿದ್ದಾರೆ. ಲಿಂಗಾಯತ ಸಂಶೋಧನ ಕೇಂದ್ರ ಗ್ರಂಥಾಲಯ ದ ದ್ವಿದಶಮಾನೋತ್ಸವದ ಸಂದರ್ಭದಲ್ಲಿ ಈ ಕೃತಿಯನ್ನು ಪ್ರಕಟಿಸಲು ನಮಗೆ ತುಂಬ ಅಭಿಮಾನ ಮತ್ತು ಹೆಮ್ಮೆ ಎನಿಸುತ್ತದೆ’ ಎಂದಿದ್ದಾರೆ. ‘ವಚನಗಳ ಶುದ್ಧೀಕರಣ’ ಕೃತಿಯು ಎಸ್. ಆರ್. ಗುಂಜಾಳ ಅವರ ಲೇಖನ ಸಂಕಲನವಾಗಿದೆ. ಈ ಕೃತಿಯ ಬೆನ್ನುಡಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ವಚನಗಳು ಬಸವಾದಿ ಶಿವಶರಣರ ಒಂದು ಸಮೂಹ ಸೃಷ್ಟಿ. ಸಮಾಜೋಧಾರ್ಮಿಕ ಬದಲಾವಣೆಯ ಕ್ರಾಂತಿಗಾಗಿ ಹುಟ್ಟಿಕೊಂಡ ಈ ಸಾಹಿತ್ಯ ಪುರೋಹಿತಶಾಹಿ ವರ್ಗದ ಕೆಂಗಣ್ಣಿಗೆ ಗುರಿಯಾಗಿ ಅಪಾರ ಪ್ರಮಾಣದಲ್ಲಿ ಹಾಳಾಯಿತು. ಅಳಿದುಳಿದ ಹಸ್ತಪ್ರತಿಗಳು ಭಾವುಕ ಭಕ್ತರ ಜಗುಲೆ ಏರಿ ಪೂಜೆಯ ನೆಪದಲ್ಲಿ ಹಾಳಾದವು. ಇಷ್ಟೆಲ್ಲ ನಾಶವಾಗಿಯೂ ಉಳಿದ ವಚನ ಸಾಹಿತ್ಯವನ್ನು ಮೊದಲ ಬಾರಿಗೆ ಸಂಗ್ರಹಿಸಿ ಪ್ರಕಟಿಸಿದವರು ಡಾ. ಫ.ಗು. ಹಳಕಟ್ಟಿಯವರು. ನಂತರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಡಾ. ಆರ್.ಸಿ. ಹಿರೇಮಠ ಅವರು ಅದಕ್ಕೊಂದು ಅಕಾಡೆಮಿಕ ಶಿಸ್ತನ್ನು ತಂದುಕೊಟ್ಟರು. ಆದರೆ ಪ್ರಕಟಿತ ವಚನಗಳಲ್ಲಿಯೂ ಅನೇಕ ದೋಷಗಳು ಉಳಿದುಕೊಂಡಿರುವುದು ಮತ್ತು ಅವು ಅಪಾರ್ಥಕ್ಕೆಡೆ ಮಾಡಿಕೊಟ್ಟಿರುವುದು ಕಂಡು ಬರುತ್ತದೆ. ಇಂಥ ಕೆಲವು ವಿಚಾರಗಳನ್ನು ಡಾ.ಎಸ್.ಆರ್. ಗುಂಜಾಳ ಅವರು ಪ್ರಸ್ತುತ ಕೃತಿಯಲ್ಲಿ ತೋರಿಸಿಕೊಟ್ಟಿದ್ದಾರೆ. ಡಾ. ಗುಂಜಾಳ ಅವರ ಆಳವಾದ ಅಧ್ಯಯನದಿಂದ ರೂಪು ಗೊಂಡ ಈ ಕೃತಿ ವಚನಗಳ ಶುದ್ಧೀಕರಣಕ್ಕೆ ದಾರಿದೀಪವಾಗಿದೆ ಎಂದಿದೆ. ‘ದಕ್ಷಿಣ ಭಾರತದಲ್ಲಿಯ ಹಸ್ತಪ್ರತಿ ಗ್ರಂಥಾಲಯಗಳು’ ಕೃತಿಯು ಎಸ್. ಆರ್. ಗುಂಜಾಳ ಹಾಗೂ ಶ್ರೀಶೈಲ ಎಸ್. ಪಾಟೀಲ ಅವರ ಸಂಪಾದಿತ ಬರವಣಿಗೆ ಗಳ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ದೇವರು ಮನುಷ್ಯನಿಗೆ ಕೊಟ್ಟಿರುವ ಮೂರು ಮಹಾಶಕ್ತಿ ಗಳು.ಆಲೋಚನೆ ಮಾಡುವುದು, ಮಾತನಾಡು ವುದು, ಸಂತೋಷ ಪಡುವುದು. ‘ಪ್ರಾಣಿಕೋಟಿ ಗಳಿಗಿಂತ ಮನುಷ್ಯನು ಶ್ರೇಷ್ಠನು’ ಎಂಬುದಕ್ಕೆ ಈ ಮೂರು ಮಹಾಶಕ್ತಿಗಳೇ ಕಾರಣವಾಗಿವೆ. ಸೃಷ್ಟಿ ಕರ್ತನು ಮಾನವಕುಲಕ್ಕೆ ಪರಸ್ಪರ ಮಾತನಾಡುವ ಭಾಷಾಸಂಪತ್ತನ್ನು ಅನುಗ್ರಹಿಸಿರುವುದರಿಂದ ಮೃಗಗಳಿಗಿಂತಲೂ ಮನುಷ್ಯನು ತನ್ನ ಅಭಿಪ್ರಾಯಗಳನ್ನು ಇತರರಿಗೆ ತಿಳಿಯಪಡಿಸಲು ಸಂಜ್ಞೆ ಮತ್ತು ಚಿತ್ರಗಳಿಂದ ಕೆಲಮಟ್ಟಿಗೆ ಸಾಧ್ಯವಾಗುತ್ತದೆ. ಒಬ್ಬನು ಇನ್ನೊಬ್ಬನಿಗೆ ತನ್ನ ಅಭಿಪ್ರಾಯಗಳನ್ನು ತಿಳಿಸುವ, ಮಾತನಾಡುವ ಸೌಕರ್ಯ ಇರುವುದರಿಂದಲೇ ಮಾನವ ಜಾತಿಯು ಕ್ರಮಕ್ರಮದಲ್ಲಿ ಪ್ರಗತಿಯನ್ನು ಹೊಂದುತ್ತ ಬಂದಿದೆ. ಈ ಸೌಕರ್ಯ ಇಲ್ಲದ್ದ ರಿಂದಲೇ ಮಾನವೇತರ ಪ್ರಾಣಿಗಳು ಪ್ರಗತಿಯನ್ನು ಹೊಂದದೆ ಸೃಷ್ಟಿಯ ಆದಿಯಲ್ಲಿ ಇದ್ದಂತೆಯೇ ಇಂದಿಗೂ ಇವೆ ಎಂಬುದನ್ನು ನಾವು ನೋಡುತ್ತಿ ದ್ದೇವೆ. ಮಾತನಾಡುವ ಶಕ್ತಿ ಮನುಷ್ಯನಿ ಗಲ್ಲದೆ ಇನ್ನಾವ ಪ್ರಾಣಿಗೂ ಇಲ್ಲವೆಂಬುದು ಸೃಷ್ಟಿಯ ಒಂದು ಚಮತ್ಕಾರವಾಗಿದೆ.’ಆಲೋಚನೆ ಮಾಡುವ ಶಕ್ತಿ ಮಾನವನಲ್ಲಿ ಬಂದಾಗ ತನ್ನ ಕಾಲದ ಸಾಮಾಜಿಕ ರೀತಿ-ನೀತಿ, ಸಂಸ್ಕೃತಿ ಮತ್ತು ಕಂಡುಂಡ ಅನುಭವವೇದ್ಯವಾದ ಪಾಠವನ್ನು ಬಾಯಿಬಿಟ್ಟು ಪರರಿಗೆ ತಿಳಿಸಲೆತ್ನಿಸಿ ದಾಗ ಭಾಷೆ ಆವಿರ್ಭವಿಸುತ್ತದೆ. ಇಂಥ ಅನುಭವ ಗಳು ಮತ್ತು ಸಮಕಾಲೀನ ವಿದ್ಯಮಾನಗಳನ್ನು ಹಿಂದಿನವರು ತಮ್ಮ ಮಕ್ಕಳು, ಮೊಮ್ಮಕ್ಕಳು ಹಾಗೇ ಅನಂತ ಕಾಲದವರೆಗೆ ತಿಳಿಸುವುದಕ್ಕಾಗಿ ಯತ್ನಿಸಿದಾಗ ಲಿಪಿ ಹುಟ್ಟಿಕೊಂಡಿತು. ಮೊದ ಮೊದಲು, ಸಂಕೇತ ಗಳು ಹಾಗೂ ಚಿತ್ರಗಳ ಮೂಲಕ ಕಲ್ಲು-ಬಂಡೆಗಳ ಮೇಲೆ ನಮೂದಿಸ ತೊಡಗಿದನು. ಕಾಲಾನಂತರ ಸುಧಾರಿತ ಲಿಪಿ ಪ್ರಾರಂಭವಾಯಿತು. ಪ್ರಾಚೀನ ಕಾಲದ ಮಾನವನ ಜ್ಞಾನದ ಅರಿವು ಹೆಚ್ಚಾದಂತೆ ಗಳಿಸಿದ ಜ್ಞಾನವನ್ನು ಯಾವುದಾದರೂ ರೀತಿ ಯಲ್ಲಿ ಮುಂದಿನ ಪೀಳಿಗೆಯವರಿಗೆ ಉಳಿಸಲು ಹೀಗೆ ಬರಹವೇ ಮುಖ್ಯ ಮಾಧ್ಯಮವಾಯಿತು’ ಎಂದಿದೆ. ‘ಕನ್ನಡ ಕಟ್ಟಿದವರು’ ಕೃತಿಯ ನಾಯಕ ಶಿವರುದ್ರಪ್ಪ ಸೋಮಪ್ಪ ಕುಲಕರಣಿರವರು ಶತಮಾನದ ಹಿಂದೆಯೇ ಕನ್ನಡ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉತ್ಕೃಷ್ಟ ಪಠ್ಯಪುಸ್ತಕ ಗಳನ್ನು ರಚಿಸುವ ಮೂಲಕ ಖ್ಯಾತಿಯಾದವರು. ಧಾರವಾಡ, ಹುಬ್ಬಳ್ಳಿ, ಬಂಕಾಪೂರ ಮುಂತಾದ ಸ್ಥಳಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಇವರು ,ನಿಸರ್ಗ ಚಿಕಿತ್ಸೆಯಲ್ಲಿ ಪಳಗಿದ ವೈದ್ಯ ರಾಗಿದ್ದಾರೆ. ಹತ್ತಕ್ಕೂ ಹೆಚ್ಚು ಮಹತ್ವದ ಗ್ರಂಥ ಗಳನ್ನು ರಚಿಸಿದ್ದ, ಶ್ರೇಷ್ಠ ಕತೆಗಾರರೂ ಆಗಿದ್ದಾರೆ. ಇವರ ಜೀವನ ಸಾಧನೆಯ ಪರಿಚಯವನ್ನು ಲೇಖಕರಾದ ಗುಂಜಾಳರು ಈ ಕೃತಿಯಲ್ಲಿ ಮಾಡಿದ್ದಾರೆ. ಪ್ರಾಧ್ಯಾಪಕ, ಸಂಶೋಧಕ ಲೇಖಕ ಹಾಗೂ ಆಡಳಿತಗಾರರಾಗಿ ಡಾ. ಎಸ್‌. ಆರ್. ಗುಂಜಾಳ ಅವರದು ಶಿಕ್ಷಣ ಕ್ಷೇತ್ರದಲ್ಲಿ ಬಹು ಮುಖಿ ಸಾಧನೆ. ಹೊಸತಲೆಮಾರಿಗೆ ಮಾದರಿ ಯಾದಂತಹ ವ್ಯಕ್ತಿತ್ವ. ಇವರ ಕೃತಿಗಳಲ್ಲಿ ಅನನ್ಯ ಸಂದೇಶಗಳಿವೆ. ನೂರಾರು ಕೃತಿಗಳನ್ನು ಬರೆದಿರುವ ಇವರ ಎಲ್ಲಾ ಕೃತಿಗಳ ಸಾರ ಸಂಗ್ರಹ ವನ್ನು ಒದಗಿಸಲು ಇಲ್ಲಿ ಸಾಧ್ಯಾವಾಗದ ಮಾತು. ಇವರ ಉಕ್ತ ಕೆಲ ಕೃತಿಗಳ ಅಂತರಾಳದ ಸತ್ವವನ್ನು ಬರೆಯಲು ಅನುವಾದ ಬುಕ್ ಬ್ರಮ್ಮದ ಅಂತರಜಾಲದ ನೆರವನ್ನು ಉಲ್ಲೇಖಿಸದೆ ಇರಲಾರೆ.

ಮೇಧಾವಿ ಗುಂಜಾಳವರ ಪರಿಶ್ರಮಕ್ಕೆ ಒಲಿದುಬಂದಿರುವ ಪಾರಿತೋಷಕಗಳು, ಪ್ರಶಸ್ತಿ ಪುರಸ್ಕಾರಗಳ ಪಟ್ಟಿ

ಪಿ.ಎಚ್.ಡಿ.ಮಹಾ ಪ್ರಬಂಧಕ್ಕಾಗಿ ೧೯೭೮ರಲ್ಲಿ ಚಿನ್ನದ ಪದಕ, ೧೯೭೪ರಲ್ಲಿ (ವಚನ ಪಿತಾಮಹ ಫ. ಗು. ಹಳಕಟ್ಟಿ ಕೃತಿಗೆ) ಮತ್ತು ೧೯೭೬ರಲ್ಲಿ (ಬಸವಣ್ಣನವರ ಪದ ಪ್ರಯೋಗ ಕೃತಿಗೆ) ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ೧೯೭೩ರಲ್ಲಿ ದೇವರಾಜ ಬಹಾದ್ದೂರ ಸಾಹಿತ್ಯ ಬಹುಮಾನ, ೧೯೫೫ರಲ್ಲಿ ತಪಶೆಟ್ಟಿ ಬಹುಮಾನ, ೧೯೯೭ರಲ್ಲಿ ಚಿತ್ರದುರ್ಗದ ಬ್ರಹ್ಮನ್ಮಠದಿಂದ ‘ಚಲಿಸುವ ಕೋಶ’ ಎಂಬ ಪ್ರಶಸ್ತಿ, ಶ್ರೀ ಶೈಲದಲ್ಲಿ ೧೯೯೯ರಲ್ಲಿ ನಡೆದ ೨೦ನೇ ಕಲ್ಯಾಣ ನಾಡಿನ ಶರಣ ಸಮ್ಮೇಳನದಲ್ಲಿ ಶರಣ ಸಾಹಿತ್ಯಕ್ಕಾಗಿ ಸಲ್ಲಿಸಿದ ಸೇವೆಗಾಗಿ ಸನ್ಮಾನ ಪತ್ರ, ನಾಗಪುರ ಮಹಾರಾಷ್ಟ್ರ ಅಖಿಲ ಭಾರತ ಮರಾಠಿ ಸಾಹಿತ್ಯ ಮಹಾಮಂಡಳ ದಿಂದ ೧೯೯೯ರಲ್ಲಿ ‘ಬಸವ ಪಂಡಿತ’ ಪ್ರಶಸ್ತಿ,ಅಗಡಿ ಆನಂದವನದ ಚಿದಂಬರ ಸ್ವಾಮಿಗಳು ಸಾಹಿತ್ಯ ಮತ್ತು ಶಿಕ್ಷಣಕ್ಕಾಗಿ ಸಲ್ಲಿಸಿದ ಸೇವೆಗಾಗಿ ೧೯೯೮ರಲ್ಲಿ ಸನ್ಮಾನ ಪತ್ರ, ೨೦೦೦ ನೇ ಇಸ್ವಿಯಲ್ಲಿ ‘ವಿಶ್ವ ವಿದ್ಯಾಲಯಗಳಲ್ಲಿ ವೀರ ಶೈವ ಸಂಶೋಧನೆ’ ಗ್ರಂಥಕ್ಕೆ ಹಳಕಟ್ಟಿ ಸಂಶೋಧನೆ ಕೇಂದ್ರದ ಹುಲಗ ಬಾಳಿ ಪೌರಲೌಕಿಕ ಪ್ರಶಸ್ತಿ, ಆಂಧ್ರಪ್ರದೇಶ ಶ್ರೀ ಶೈಲಂಕ್ಷೇತ್ರ ಶರಣ ಸಾಹಿತ್ಯ ಪ್ರಶಸ್ತಿ, ೨೦೦೧ರಲ್ಲಿ ಬೆಂಗಳೂರು ಬಸವ ವೇದಿಕೆಯ ರಾಜ್ಯಮಟ್ಟದ ‘ಸಾಹಿತ್ಯಶ್ರೀ’ ಪ್ರಶಸ್ತಿ ಲಭಿಸಿವೆ. ೨೦೦೪ರಲ್ಲಿ ‘ಮೂಜಗಂ ಸಾಹಿತ್ಯ ಗೌರವ ಪ್ರಶಸ್ತಿ’ ಮೂರು ಸಾವಿರ ಮಠ, ಹುಬ್ಬಳ್ಳಿ, ರುದ್ರಾಕ್ಷಿ ಮಠದಿಂದ ೮- ೧೨- ೨೦೦೪ ರಲ್ಲಿ ‘ಸೇವಾರತ್ನ’ ಪ್ರಶಸ್ತಿ ಪ್ರದಾನ. ೨೦೦೫ರಲ್ಲಿ ಬೆಳಗಾವಿಯಲ್ಲಿ ನಡೆದ ರಾಜ್ಯಮಟ್ಟ ದ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಶಿಕ್ಷಣಸಿರಿ ಪ್ರಶಸ್ತಿ, ೨೦೧೧ರಲ್ಲಿ ಕಲ್ಯಾಣ ಶರಣ ಪರಿಷತ್ತು ಶರಣಶ್ರೀ ಪ್ರಶಸ್ತಿ ಮತ್ತು ಅ,ಭಾ.ಶರಣ ಸಾಹಿತ್ಯ ಪರಿಷತ್ತು ರಮಣಶ್ರೀ ಪ್ರಶಸ್ತಿಯನ್ನು ಬೆಂಗಳೂರಿ ನಲ್ಲಿ ನೀಡಿ ಗೌರವಿಸಿವೆ. ೨೦೧೪ರಲ್ಲಿ ಬಸವ ಧರ್ಮಪೀಠ ಕೂಡಲಸಂಗಮ ರವರು ಶರಣರತ್ನ ಪ್ರಶಸ್ತಿಯನ್ನು ಮತ್ತು ಜ.ಶಿವರಾತ್ರೀಶ್ವರ ಸ್ವಾಮಿಗಳು ಮೈಸೂರಿನ ‘ವೀರಶೈವ ಸಾಹಿತ್ಯ ಸಂಶೋಧಕ’ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಿವೆ. ಕರ್ನಾಟಕ ಸರಕಾರದಿಂದ ‘ಗ್ರಂಥಾಲಯ ಸೇವಾ ಪುರಸ್ಕಾರ’ ಪ್ರಶಸ್ತಿ ಮತ್ತು ಹಿರೇಮಠ ಸಂಸ್ಥಾನ ಬಾಲ್ಕಿಯಿಂದ ಅನುಭವ ಮಂಟಪ ಪ್ರಶಸ್ತಿ, ೨೦೧೭ರಲ್ಲಿ ಧಾರವಾಡದಿಂದ ಪ್ರೊ. ಎಸ್. ಎಸ್. ಬೂಸನೂರಮಠ ಸಾಹಿತ್ಯ ಪ್ರಶಸ್ತಿ ಮತ್ತು ಚಿತ್ರದುರ್ಗದ ಮುರುಘಾಮಠ ದಿಂದ ಜಗದ್ಗುರು ಶೂನ್ಯಪೀಠಾಧ್ಯಕ್ಷ ಅಲ್ಲಮ ಪ್ರಶಸ್ತಿ ಲಭಿಸಿವೆ. ೨೦೧೯ರಲ್ಲಿ ಬೆಂಗಳೂರಿನಲ್ಲಿ ಕರ್ನಾಟಕ ಘನ ಸರ್ಕಾರವು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಅವರ ಸಾಹಿತ್ಯ ಸೇವೆಗೆ ಅನೇಕಾನೇಕ ಶರಣ ಸಾಹಿತ್ಯ ಪ್ರಶಸ್ತಿಗಳು ಸಂದಿವೆ.

ಶರಣ ಸಾಹಿತಿ, ಬಸವ ಪಂಡಿತ ಗುಂಜಾಳರ ಘನ ವ್ಯಕ್ತಿತ್ವ ಹಾಗೂ ಬಸವಣ್ಣನವ ಕುರಿತ ಮಹಾ ದರ್ಶನ

ವೃತ್ತಿ ಮತ್ತು ಪ್ರವೃತ್ತಿ ಎರಡರಲ್ಲೂ ಸೈ ಎನಿಸಿ ಕೊಂಡಿರುವ ೯೨ ವರ್ಷದ ಗುಂಜಾಳರದು ಶರಣ ಧ್ಯೇಯದ ಸುಸಂಸ್ಕೃತ ಜೀವನ ಲೋಕದ ಜನರಿಗೆ ಮಾದರಿಯಾಗಿದೆ. ಮೆಚ್ಚಿದ ಕನ್ನೆಯನ್ನು ಮದುವೆಯಾಗಿ ಸಮಾನ ಮನಸ್ಕಾರಾಗಿ ಬದುಕು ಕಟ್ಟಿಕೊಂಡಿರುವ ಇವರು ವೈಚಾರಿಕ ನಾಡಿನ ಯುವಜನತೆಗೆ ಆದರ್ಶಮಯ.ಇಂದಿನ ಜನತೆಯ ವೈವಾಹಿಕ ಬದುಕು ವಿಚ್ಚೇದನಕ್ಕೆ ಹಾತೊರೆಯು ವುದು ಅಸಭ್ಯತೆ, ಅನಾಕರಿಕತೆಯ ಸಂಕೇತ. ಇದು ತರವಲ್ಲ ಬಸವಾದಿ ಶರಣರ ವಚನ ತತ್ವದಂತೆ ಸತಿ ಪತಿಗಳೊಂದಾಗಿ ಬದುಕು ಕಟ್ಟಿಕೊಳ್ಳಲು ಸಲಹೆ ನೀಡುತ್ತಾರೆ. ಕ್ರಿಶ್ಚಿಯನ್ ಧರ್ಮ ಮತ್ತು ಇಸ್ಲಾಂ ಧರ್ಮದ ಅನುಯಾಯಿ ಗಳ ಸೇವಾನಿಷ್ಟೆಯಿಂದ ಇಂದು ಜಗದಗಲ ಅಸಂಖ್ಯಾತ ಭಕ್ತರಿದ್ದಾರೆ. ಆ ದಿಸೆಯಲ್ಲಿ ಬಸವಾದಿ ಶರಣರ ವೈಚಾರಿಕ ಸಮಾನತೆಯ ವಚನ ತತ್ವಗಳು ವಿಶ್ವಾದಾಂತ್ಯ ಫಸರಿಸಿ ಜನರ ಬಾಳನ್ನು ಘಮಿಸಬೇಕೆಂದು ಸದಾ ಶ್ರಮಿಸುತ್ತಿ ರುವ ಮಹನೀಯರು ಶರಣ ಮತ್ತು ವಚನ ಸಂಸ್ಕೃತಿಯ ಬಗ್ಗೆ ಅಂತರಂಗ ಶುದ್ಧೀಕರಣ ಸಹಿತ ಶ್ರಮಿಸುತ್ತಿರುವರು. ಬಸವಣ್ಣ ನವರ ಸಮಾನತೆ ಜಾತ್ಯಾತೀತ ಸಂದೇಶವನ್ನು ಜಗತ್ತಿಗೆ ಸಾರಬೇಕು. ಆ ನಿಟ್ಟಿನಲ್ಲಿ ವಚನ ಸಾಹಿತ್ಯ ಲೊಕದ ಅನೇಕ ಭಾಷೆಗಳಲ್ಲಿ ಭಾಷಾಂತರವಾಗಿ ವಿಭಿನ್ನ ಸಾಂಸ್ಕೃತಿಕ ಜನರಿಗೆ ತಲುಪಿ ವೈಚಾರಿಕತೆ ಮೂಡಿಸಿದೆ. ಇನ್ನೂ ಅಗಾಧ ವಾದ ಕಾರ್ಯವು ನಿಷ್ಠಾವಂತ ಶರಣಮನದ ಜನರಿಂದ ಸಾಧ್ಯ ವಾಗಬೇಕು ಎಂವುದು ಇವರ ಅಚಲ ನಿಲುವು.

ಕನ್ನಡದ ಹಲವು ಮೊದಲುಗಳ ಆದ್ಯ ಕೃರ್ತೃವಾದ ಶರಣರತ್ನ ಗುಂಜಾಳರ ಸಾಹಿತ್ಯ ವಿಷೇಶತೆಗಳು

ಕನ್ನಡ ಪುಸ್ತಕ ಪ್ರಪಂಚದಲ್ಲಿ ಹೊಸ ವಿಕ್ರಮ ಸಾಧಿಸಿದ ಪ್ರಥಮ ಗಣ್ಯರಲ್ಲಿ ಕುಂಜಾಳರು ಅಗ್ರಮಾನ್ಯರೇ. “ಬಸವಣ್ಣನವರ ವಚನ ಪದ ಪ್ರಯೋಗ ಕೋಶ” ರಚಿಸಿ ಕನ್ನಡದಲ್ಲಿ ಪ್ರಥಮ ವಾಗಿ ಪದ ಪ್ರಯೋಗ ಕೋಶ ಬರೆದ ಕೀರ್ತಿಶೇಷ ರಿವರು. “ಬಸವ ಸಾಹಿತ್ಯ ವಾಹಿನಿ” ಕೃತಿಯ ಮೂಲಕ ಒಂದು ಮಾದರಿ ಆಕಾರ ಗ್ರಂಥ ಸೂಚಿ ಯನ್ನು ಕನ್ನಡಿಗರಿಗೆ ಮೊದಲು ಮಾಡಿದ ಗಣ್ಯರಿವರು. “ಇಂಗ್ಲಿಷ್ ಕನ್ನಡ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ”ಪಾರಿಭಾಷಿಕ ಶಬ್ದಕೋಶ ವನ್ನು ಕನ್ನಡಿಗರಿಗೆ ಮೊದಲು ಕೊಟ್ಟವರು ಇವರೆ. ಗ್ರಂಥಾಲಯ ವಿಜ್ಞಾನಕ್ಕೆ ಸಂಬಂಧಿಸಿದ ಒಂದು ಶಾಸ್ತ್ರ ಮಾರ್ಗವನ್ನು ಮೊದಲು ತೋರಿಸಿಕೊಟ್ಟ ವರು. ಒಂದುವಾರ, ಪಾಕ್ಷಿಕ, ಇಪ್ಪತ್ತು ದಿನಗಳಲ್ಲಿ ಒಂದು ಪುಸ್ತಕವನ್ನು ಬರೆದು ಮುಗಿಸುತ್ತಿದ್ದ ಶ್ರೇಷ್ಠ ಜ್ಞಾನವಂತರಾದ ಇವರು ವಿದ್ಯಾರ್ಥಿಗಳಿಗೆ ಮಾದರಿಯ ಪ್ರಾಧ್ಯಾಪಕರು ಆಗಿದ್ದವರು. ಬಹುಶೃತ ಕೃತಿಕಾರು, ಸಂಘ ಸಂಸ್ಥೆಗಳ ಪೋಷಕರು, ಶಿಕ್ಷಣ ಪ್ರೇಮಿಗಳಾಗಿರುವ ಇವರಿಗೆ ಇನ್ನೂ ಹಲವು ಉನ್ನತ ಗೌರವಗಳಾದ ಪದ್ಮಶ್ರೀ, ನಾಡೋಜ ಹಾಗೂ ಗೌರವ ಡಾಕ್ಟರೇಟ್ ಮಹಾ ಪದವಿಗಳು ಇವರನ್ನು ಅರಸಿಬರಲಿ. ಫೆಬ್ರವರಿ ತಿಂಗಳಲ್ಲಿ 3 ಹಾಗೂ 4 ನೆಯ ತಾರಿಖನಂದು ಕರ್ನಾಟಕ ವಿದ್ಯಾ ವರ್ಧಕ ಸಂಘದಲ್ಲಿ ನಡೆಯಲಿ ರುವ ಧಾರವಾಡ ಜಿಲ್ಲೆಯ ೧೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಘನವಂತ ಜ್ಞಾನವೃದ್ಧರಾದ ಸಾಹಿತಿ ಶರಣಶ್ರೀ ಗುಂಜಾಳರನ್ನು ನಿಯೋಜಿಸಿದ್ದು ಸರ್ವವಿಧದಿಂದಲೂ ಯುಕ್ತವಾ ಗಿದೆ. ಮಾನ್ಯ ಜಿಲ್ಲಾ ಸಚಿವರು, ಶಾಸಕರು, ಜನ ಪ್ರತಿನಿಧಿಗಳು, ಕೇಂದ್ರ ಸಾಹಿತ್ಯ ಅಧ್ಯಕ್ಷರಾದ ನಾಡೋಜ ಮಹೇಶ ಜೋಶಿ, ಧಾರವಾಡ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಗೌರವ ಕಾರ್ಯದರ್ಶಿಗಳಾದ ಪ್ರೋ. ಕೆ. ಎಸ್. ಕೌಜಲಗಿ, ಜಿನದತ್ತ ಹಡಗಲಿ, ಡಾ. ಎಸ್.ಎಸ್.ದೊಡ್ಡಮನಿ ಹಾಗೂ ಸರ್ವ ಪದಾಧಿಕಾರಿಗಳು, ಕವಿ ಕಲಾವಿದ ಸಾಹಿತಿಗಳು ಹಾಗೂ ಸಾಹಿತ್ಯ ಅಭಿಮಾನಿಗಳು ಕಲಾವಿದರು ಎಲ್ಲರೂ ಅವರ ಮನೆಗೆ ಹೋಗಿ ಆಮಂತ್ರಣ ನೀಡಿ ಸ್ವಾಗತಿಸಿರುವುದು ಮಾತೃ ಭಾಷೆ ಕನ್ನಡ ನಾಡುನುಡಿ ಸಾಹಿತ್ಯ ಆತ್ಮಾಭಿ ಮಾನದ ದ್ಯೋತಕವಾಗಿದೆ. ಕನ್ನಡ ನುಡಿ ತೇರ ನೆಳೆಯಲು ಸನ್ನಧರಾಗಿ ಚಂಪಾ ನುಡಿ “ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ, ವರಕವಿ ಬೇಂದ್ರೆ ನುಡಿದೀಪ್ತಿ “ಕನ್ನಡವು ಕನ್ನಡವನ್ನು ಕನ್ನಡಿಸು ವಂತಾಗಲಿ, ಮೆರೆಸುವಂತಾಗಲಿ”, ಚನ್ನವೀರ ನುಡಿ ಹೆಸರಾಯುತು ಕರ್ನಾಟಕ ಉಸಿರಾಗಲಿ ಕನ್ನಡ ಕಾವ್ಯ ನಮ್ಮೆಲ್ಲರ ಮಂತ್ರವಾಗಲಿ.

ಕನ್ನಡವನ್ನು ಬಳಸೋಣ, ಕನ್ನಡವನ್ನು ಮೆರೆಸೋಣ

✍️ಸುಭಾಷ್ ಹೇಮಣ್ಣಾ ಚವ್ಹಾಣ
ಶಿಕ್ಷಕರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಂಜುನಾಥ ನಗರ
ಹುಬ್ಬಳ್ಳಿ ಶಹರ