ಇಂಗ್ಲಿಷರ ನಾಡಿನಲ್ಲಿ ನೆಲೆನಿಂತು ಕನ್ನಡದಲ್ಲಿ ಬರೆವ ಹಲವಾರು ಕನ್ನಡ ಪ್ರೀತಿಯ ಜನರಿದ್ದಾರೆ. ಇತ್ತೀಚೆಗಿನವರೆಗೆ ಬೆರಳೆಣಿಕೆಯ ಈ ಜನರು ಅಲ್ಲಲ್ಲಿ ಚದುರಿ ಹೋಗಿದ್ದರು.ಬೇರೆ, ಬೇರೆ ಊರು ಮತ್ತು ಪ್ರಾಂತ್ಯದಲ್ಲಿದ್ದವರನ್ನೆಲ್ಲ ಒಂದು ನಿಲ್ದಾಣಕ್ಕೆ ಕರೆತಂದು ಅಲ್ಲಿಂದ ಅವರ ಸಾಹಿತ್ಯ ರಚನೆಯ ಉಡಾವಣೆ ಆಗುವಂತೆ ಮಾಡಬೇಕೆಂಬ ಆಸೆ ಬೆರಳೆಣಿಕೆಯ ಜನರಿಗೆ ಬಂದದ್ದು ಹತ್ತು ವರ್ಷಗಳ ಹಿಂದೆ. ಇವರು ಇಂಗ್ಲೆಂಡಿನ ಯೂಟೋಕ್ಸಿಟರ್ ಎನ್ನುವ ಒಂದು ಸರ್ವೀಸ್ ಸ್ಟೇಷನ್ನಿನ ಕೆಫೆಟೇರಿ ಯದಲ್ಲಿ ಕುಳಿತು ‘ಕನ್ನಡ ಸಾಹಿತ್ಯ ಸಂಸ್ಕೃತಿ ಮತ್ತು ವಿಚಾರ ವೇದಿಕೆ ʼ(KSSVV) ಎನ್ನುವ ಒಂದು ಗುಂಪನ್ನು ಶುರುಮಾಡಿದರು.

ಅವರಲ್ಲಿ,ಅಂತರ್ಜಾಲ ಸಾಹಿತ್ಯ ಜಗುಲಿಯೊಂದ ನ್ನು ರೂಪಿಸಲು ಬೇಕಾದ ತಾಂತ್ರಿಕ ಅರಿವನ್ನು ಉಳ್ಳವರೊಬ್ಬರು ಇತರರಿಗೂ ತರಬೇತಿ ನೀಡಿ ಒಂದು ಸಾಹಿತ್ಯಕ ಜಾಲ ಜಗುಲಿಯೊಂದನ್ನು (ಬ್ಲಾಗ್) ನಿರ್ಮಿಸಿದರು. ನಂತರ ಸುಲಭವಾಗಲಿ ಎನ್ನುವ ಉದ್ದೇಶದಿಂದ‘ಅನಿವಾಸಿ.ಕಾಂʼ ಎಂದು ಬ್ಲಾಗಿನ ಹೆಸರನ್ನು ಬದಲಾಯಿಸಲಾಯಿತು.2014 ರ ನವೆಂಬರಿನಲ್ಲಿ ಕನ್ನಡ ಬಳಗದವರು ನಡೆಸಿದ ದೀಪಾವಳಿ ಕಾರ್ಯಕ್ರಮಕ್ಕೆ ಚೆಸ್ಟರ್ ಫೀಲ್ಡ್ ಗೆ ಬಂದಿದ್ದ ಡಾ.ಹೆಚ್.ಎಸ್. ವೆಂಕಟೇಶಮೂರ್ತಿ ಯವರ ಮೂಲಕ ಈ ಜಾಲ ಜಗುಲಿಯನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು.

ಬೆರಳೆಣಿಕೆಯ ಉತ್ಸಾಹಿಗಳು ಮಾತ್ರವೇ ಇದ್ದರೂ ಕಳೆದ ಹತ್ತು ವರ್ಷಗಳಿಂದ anivaasi.com ಸತತವಾಗಿ ವಾರಕ್ಕೊಂದರಂತೆ ಯು.ಕೆ. ನಿವಾಸಿ ಗಳ ಬರಹವೊಂದನ್ನು ಪ್ರಕಟಿಸುತ್ತ ಬಂದಿದೆ. ಕೆಲವೊಮ್ಮೆ ಭಾರತ ಮತ್ತು ಅಮೆರಿಕಾದವರ ಬರಹಗಳನ್ನೂ ಪ್ರಕಟಿಸಿದೆ . ಇಂಗ್ಲೆಂಡ್, ಸ್ಕಾಟ್ಲ್ಯಾಂಡ್, ಐರ್ಲೆಂಡಿನ ಕನ್ನಡ ಬರಹಗಾರರು ಈ ಗುಂಪಿನಲ್ಲಿದ್ದಾರೆ. ಇಂತಿಷ್ಟು ತಿಂಗಳು ಅಥವಾ ವಾರಗಳಿಗೊಮ್ಮೆ ಈ ಜಾಲಜಗುಲಿಯ ಸಂಪಾದಕೀಯ ಹೊಣೆ ಬದಲಾಗುತ್ತದೆ.

ಬಹಳ ಹಿಂದೆ ಈ ಬಳಗದ ಕೆಲವು ಸದಸ್ಯರು ಕೈಯಲ್ಲೇ ಬರೆದು ‘ಸಂದೇಶʼ ಎನ್ನುವ ಕನ್ನಡ ಪತ್ರಿಕೆಯನ್ನು ಕೆಲಕಾಲ ನಡೆಸಿದ ಘಟಾನುಘಟಿ ಗಳು.ಇವರೆಲ್ಲ ‘ನುಡಿʼ,’ಬರಹʼ ಇತ್ಯಾದಿ ತಂತ್ರಾಂಶ ಗಳನ್ನು ಅಳವಡಿಸಿಕೊಂಡು ಕಾಲಕ್ಕೆ ತಕ್ಕಂತೆ ಬದಲಾಗುತ್ತ,ಹಿರಿಯ-ಕಿರಿಯರೆಲ್ಲ ಕನ್ನಡಸಾಹಿತ್ಯ, ಕನ್ನಡ ಚಟುವಟಿಕೆಗಳಲ್ಲಿ ಭಾಗವಹಿಸುತ್ತ ಬಂದಿದ್ದಾರೆ.

ಕಳೆದ ಹತ್ತು ವರ್ಷಗಳಲ್ಲಿ ಪ್ರತಿ ಯುಗಾದಿ ಮತ್ತು ದೀಪಾವಳಿಗೆ ಇಲ್ಲಿನ ಕನ್ನಡ ಬಳಗದವರು ಕರೆಸುವ ಸಾಹಿತಿಗಳು, ಕವಿಗಳು, ಚಿಂತಕರು, ಸಿನಿಮಾ ನಿರ್ದೇಶಕರು, ಶಿಕ್ಷಣ ತಜ್ಞರು, ಸಿನಿಮಾ ನಟರು, ಗಾಯಕರು, ಪತ್ರಕರ್ತರು ಇವರುಗಳ ಜೊತೆ ಒಂದೆರಡು ಗಂಟೆಗಳ ಸಂವಾದ, ಚರ್ಚೆ, ಕಾವ್ಯ ವಾಚನ, ಚಿತ್ರ ವಿಮರ್ಶೆ,ಚುಟುಕು ಸಾಹಿತ್ಯ, ರಂಗಪ್ರಪಂಚ ಇತ್ಯಾದಿ ರಸವತ್ತಾದ ಕಾರ್ಯಕ್ರಮ ಗಳನ್ನು ನಡೆಸುತ್ತ ಯು.ಕೆ.ಯಲ್ಲಿ ನೆಲೆಸಿರುವ ಸಾಹಿತ್ಯಾಸಕ್ತರ ಅಭಿರುಚಿಗಳನ್ನು ಪೋಷಿಸುತ್ತ ಬಂದಿದ್ದಾರೆ.

ಪರಸ್ಪರರ ಮನೆಗಳಲ್ಲಿ ಭೇಟಿಮಾಡಿ, ಯೋಜನೆ ಗಳನ್ನು ರೂಪಿಸಿ ‘ಅನಿವಾಸಿಗಳ ಅಂಗಳದಿಂದʼ ಎಂಬ ಸಂಗ್ರಹಿತ ಬರಹಗಳ ಪುಸ್ತಕವನ್ನು ಹೊರ ತಂದಿದ್ದಾರೆ.ಸ್ವರಚಿತ ಭಾವ (ಪ್ರೇಮ)ಗೀತೆಗಳಿಗೆ ಸಂಗೀತ ಹೊಂದಿಸಿ ‘ಪ್ರೀತಿಯೆಂಬ ಚುಂಬಕʼ ಎಂಬ ಧ್ವನಿಮುದ್ರಣವನ್ನು ಹೊರತಂದಿದ್ದಾರೆ.

ಅದರಲ್ಲಿ ಹಾಡಿದವರು ಕೂಡ ಪ್ರತಿಭಾವಂತ ಅನಿವಾಸಿ ಕನ್ನಡಿಗರೇ ಆಗಿದ್ದಾರೆ.ಸ್ವಂತ ರಚನೆಯ ‘ಫೋನಾಯಣʼ ಎಂಬ ನಗೆ ನಾಟಕವನ್ನು ವೇದಿಕೆಗೆ ತಂದು ಜನರನ್ನು ರಂಜಿಸಿದ್ದಾರೆ. ಅನಿವಾಸಿಯ ವಾಟ್ಸಾಪ್ ಗುಂಪಿನಲ್ಲಿಯೂ ಸಾಹಿತ್ಯ ಕಟ್ಟುವ ಆಟ ನಡೆಯುತ್ತಿರುತ್ತದೆ.ಇಲ್ಲಿನ ಸದಸ್ಯರು ಮುಖ್ಯವಾಹಿನಿ ಕನ್ನಡ ವೃತ್ತಪತ್ರಿಕೆ, ವಾರಪತ್ರಿಕೆ, ಮಾಸಿಕಗಳಿಗೆ ಲೇಖನ, ಕಥೆಗಳು, ಪ್ರಬಂಧಗಳು, ಕವನಗಳು, ವೈಚಾರಿಕ ವಿಮರ್ಶೆ ಗಳು, ಪ್ರವಾಸೀ ಲೇಖನಗಳು, ವೈದ್ಯಕೀಯ ಬರಹಗಳು ಇತ್ಯಾದಿಗಳನ್ನು ಬರೆಯುತ್ತ ಬಂದಿ ದ್ದಾರೆ. ಕರ್ನಾಟಕದ ಪ್ರಕಾಶಕರ ಜೊತೆಗೂಡಿ ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಮುಖ್ಯ ವಾಹಿನಿ ಕನ್ನಡ ಸಾಹಿತ್ಯ ಕ್ಷೇತ್ರದ ಹಲವಾರು ಬಹು ಮಾನಗಳನ್ನು ಮತ್ತು ಗೌರವಗಳನ್ನು ತಮ್ಮದಾಗಿಸಿ ಕೊಂಡಿದ್ದಾರೆ.

ಇದೇ ನವೆಂಬರಿಗೆ, ಈ ಜಾಲತಾಣದ ಗುಂಪಿಗೆ ದಶಮಾನೋತ್ಸವದ ಸಂಭ್ರಮ. ವೈದ್ಯ ಜೋಡಿ ಗಳಾದ ರಾಜಶ್ರೀ ಮತ್ತು ವೀರೇಶ್ ಅವರ ಮನೆ ಯಲ್ಲಿ ಈ ಸಂಭ್ರಮವನ್ನು ಆಚರಿಸಲಾಯಿತು. ಹತ್ತು ವರ್ಷದ ಹಾದಿಯ ಅವಲೋಕನ,ಪ್ರಬಂಧ, ಕಥೆ, ಕವನಗಳ ವಿಮರ್ಶೆ/ವಾಚನ, ಮುಂದಿನ ವರ್ಷಗಳಿಗೆ ಯೋಜನೆ/ಸಿದ್ಧತೆ ಇತ್ಯಾದಿ ಚಟುವಟಿಕೆಗಳ ಮೂಲಕ ಹೊಸ ಹುರುಪನ್ನು ತುಂಬಿಕೊಂಡು, ದಶಮಾನೋತ್ಸವದ ಸಂಭ್ರಮ ವನ್ನು ಆಚರಿಸಿ ಹೊಸ ವರ್ಷಕ್ಕೆ ಹೆಜ್ಜೆಯನ್ನಿಟ್ಟಿ ದ್ದಾರೆ.

ವಿದೇಶದ ಅಲ್ಪಸಂಖ್ಯಾತ ಕನ್ನಡಿಗರ ನಡುವಿನ ಬೆರಳೆಣಿಕೆಯ ಸಾಹಿತ್ಯ ಪ್ರೇಮಿಗಳ ಈ ನಿರಂತರ ಬದ್ಧತೆ ಸುಲಭವಾದ ಮಾತೇನಲ್ಲ.
ಎಲ್ಲಾದರೂ ಇರು ಎಂತಾದರೂ ಇರು
ಎಂದೆದಿಗೂ ನೀ ಕನ್ನಡವಾಗಿರು
ಕನ್ನಡವೇ ಸತ್ಯ ಕನ್ನಡವೇ ನಿತ್ಯ
ಎಂಬ ಕುವೆಂಪುರವರ ಕವನದ ಆಶಯದಂತೆ ಇಂಗ್ಲೀಷರ ನಾಡಿನ ಕನ್ನಡ ಬರಹಗಾರರ ಈ ಸಾಹಿತ್ಯೋತ್ಸಾಹ ನಿರಂತರ ಮುಂದುವರೆಯ ಲೆಂದು ಶುಭ ಹಾರೈಸೋಣ.

✍️ಡಾ.ಪ್ರೇಮಲತ ಬಿ.
ದಂತ ವೈದ್ಯರು
ಲಂಡನ್,ಇಂಗ್ಲೆಂಡ್

ಅನಿವಾಸಿ.ಕಾಂ ಜಾಲಜಗುಲಿಯು ಹತ್ತು ವರ್ಷ ಯಶಸ್ವಿಯಾಗಿ ನಡೆದುಕೊಂಡು ಬಂದಿರುವುದು ಸಂತೋಷದ ಸಂಗತಿ. ಈ ಸಾಧನೆಗೆ ಕಾರಣರಾದ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು.
LikeLiked by 1 person