ಅವಳಿಗೆ ಸ್ವಾತಂತ್ರ್ಯ ಬೇಡ
ನಿದ್ದೆ ಬಂದ ಕೂಡಲೇ
ಮಲಗುವ ಅವಕಾಶ ಸಾಕು
ಊಟದ ಹೊತ್ತು ಮೀರಿ
ಬರುವ ಅವನಿಗೆ ಕಾಯದೇ
ಅವಳಿಗೆ ಸ್ವಾತಂತ್ರ್ಯ ಬೇಡ
ಅನುಕೂಲಕರ
ತಿಂಡಿ ಮಾಡುವ ನಿರಾಳ ಸಾಕು
ಅದು ಬೇಡ ಇದು ಬೇಕು
ಎನ್ನುವ ತಲೆನೋವುಗಳಿರದೇ
ಅವಳಿಗೆ ಸ್ವಾತಂತ್ರ್ಯ ಬೇಡ
ನೆನ್ನೆಯ ಸಾರನ್ನು
ಇಂದು ಬಡಿಸಲು ನಿರಾಳವಿದ್ದರೆ ಸಾಕು
‘ನೆನ್ನೆಯ ಸಾರಾ…’
ಎಂದು ರಾಗ ಎಳೆಯದೇ
ಅವಳಿಗೆ ಸ್ವಾತಂತ್ರ್ಯ ಬೇಡ
ಹೀಯಾಳಿಸದಿದ್ದರೆ ಅಷ್ಟೇ ಸಾಕು
ಸೀರೆಯನ್ನುಟ್ಟಾಗ
ಮಾಡರ್ನ್ ಅಲ್ಲವೆಂದು
ನಿಂದಿಸದೇ
ಅವಳಿಗೆ ಸ್ವಾತಂತ್ರ್ಯ ಬೇಡ
ಕಂಡ ಕೂಡಲೇ ಇಷ್ಟವಾದ
ತಿಳಿ ನೀಲಿ ಸೀರೆಯನ್ನು
ಕೊಡಿಸಿದರೆ ಸಾಕು
ನಿನಗೇಕೆ ದಂಡಕ್ಕೆಂದು
ಕೆಂಗಣ್ಣು ಮಾಡದೇ
ಅವಳಿಗೆ ಸ್ವಾತಂತ್ರ್ಯ ಬೇಡ
ಕೆಟ್ಟ ಮಾತಾಡದಿದ್ದರೆ ಸಾಕು
ನಾಲ್ಕು ಜನರೊಂದಿಗೆ
ಬೆರೆತು ಹಗುರಾಗಲು
‘ಕಿಟ್ಟಿ’ಗೆ ಹೋದಾಗ
ಅನುಮಾನಿಸದೇ
ಅವಳಿಗೆ ಸ್ವಾತಂತ್ರ್ಯ ಬೇಡ
‘ವಾವ್!’ಅಂದರೆ ಸಾಕು
ಕುಂಚಕ್ಕೆ ಬಣ್ಣ ಮೆತ್ತಿ
ಭಾವವನ್ನು ಹರಡಿದಾಗ
ಅರ್ಥವನ್ನು ಕಡೆಗಾಣಿಸದೇ
ಅವಳಿಗೆ ಸ್ವಾತಂತ್ರ್ಯ ಬೇಡ
ಕರೆಯದಿದ್ದರೆ ಸಾಕು
ದೇವಸ್ಥಾನದ ಕಟ್ಟೆಯ ಮೇಲೆ
ತುಸು ಹೆಚ್ಚು ಹೊತ್ತು ಕುಳಿತಾಗ
ವಾರೆನೋಟ ಬೀರಿ ಹೀಯಾಳಿಸದೇ
ಅವಳಿಗೆ ಸ್ವಾತಂತ್ರ್ಯ ಬೇಡ
ಹೂಮುತ್ತನಿಟ್ಟು
ಸುಮ್ಮನಿದ್ದರೆ ಸಾಕು
ಅವಳು ‘ಬೇಡ’ ಅಂದಾಗ
ಮುನಿದು ತಿರಸ್ಕರಿಸದೇ
ಅವಳಿಗೆ ಸ್ವಾತಂತ್ರ್ಯ ಬೇಡ
ಇಳಿ ಸಂಜೆಯಲ್ಲಿ
ಬೆರಳ ನಡುವಿನ ಖಾಲಿಯ ತುಂಬಿ
ಮೊಳ ಮಲ್ಲಿಗೆ ಕೊಡಿಸಿದರೆ ಸಾಕು
‘ನೀನೆಂದರೆ ಇಷ್ಟ’ವೆಂದು ಉಸುರಿ
ಬಿಗುಮಾನವಿಲ್ಲದೇ

✍️ಸೌಮ್ಯ ದಯಾನಂದ
ಡಾವಣಗೆರೆ

ಹೆಣ್ಣಿನ ಅಂತರಾತ್ಮದ ಭಾವನೆಗಳಿಗೆ ಮಾತು ಕೊಟ್ಟಂತಿದೆ..👌ತುಂಬಾ ಸೊಗಸಾಗಿ ಬರೆದಿದ್ದೀರಿ ಅಭಿನಂದನೆಗಳು, ಮೇಡಂ💐💐 ನಿಮ್ಮ ಬರಹದ ಬೇಟೆ ಹೀಗೆಯೇ ಮುಂದುವರಿಯಲಿ💐
ಇಂದ : ಲಂಕೇಶ ಟಿ
LikeLike
ತುಂಬಾ ಅರ್ಥಗರ್ಭಿತವಾದ, ಸಾಂದರ್ಭಿಕ ನಿಜ ಜೀವನದ ದೈನಂದಿನ ಸನ್ನಿವೇಶಗಳನ್ನು ಕವಿತೆಯ ಮೂಲಕ ತಿಳಿಯಲು ಅವಕಾಶವನ್ನು ನೀಡಿದ್ದಕ್ಕೆ ನಮ್ಮ ಕಡೆಯಿಂದ ಅಭಿನಂದನೆಗಳು ಅಕ್ಕ👌👌
LikeLike