‘ಕಾಲ ಬದಲಾಯಿತು’ ಹಿರಿಯರು ಆಗಾಗ ಹೇಳುತ್ತಿದ್ದ ಮಾತು. ವಿಚಾರ ಮಾಡಿದ್ರೆ ಕಾಲ ಬದಲಾಗಿಲ್ಲ, ಪ್ರತಿದಿನವೂ ಗಡಿಯಾರದ ಮುಳ್ಳು ವೃತ್ತಾಕಾರವಾಗಿಯೇ ತಿರುಗುತ್ತದೆ. ಪ್ರತಿದಿನವೂ ಇಪ್ಪತ್ತನಾಲ್ಕು ಗಂಟೆಯೇ ಆಗಿದೆ. ಹಾಗಾಗಿ ಕಾಲ ಯಾವ ಸ್ವರೂಪದಲ್ಲಿ ಬದಲಾಗಿದೆ ನೀವೇ ಹೇಳಿ. ನಿಜವಾಗಿ ಬದಲಾಗಿದ್ದು ಕಾಲಮಾನವೇ ಹೊರತು ಕಾಲವಲ್ಲ. ಕಾಲಮಾನದೊಳಗೆ ಮನುಷ್ಯರು, ಅವರ ವ್ಯವಸ್ಥೆ, ಮನಸ್ಥಿತಿ, ಪರಿಸ್ಥಿತಿಗಳು   ಬದಲಾಗುತ್ತಿವೆ. ಈ ಬದಲಾವಣೆಗೆ ಮನುಷ್ಯರು ಕೊಟ್ಟ ಹೆಸರು ಕಾಲ ಬದಲಾಯಿತು.

ಮನುಷ್ಯ ಸಂಬಂಧಗಳು ನಿತ್ಯವೂ ತಳತಳಿಸುತ್ತಿರ ಬೇಕು ಮತ್ತು ಅವು ಬಹುಕಾಲವೂ ಶ್ರೇಷ್ಟವಾಗಿ ಉಳಿಯಬೇಕು.ಇಂತಹ ಉದ್ದೇಶ ಈಡೇರಿಕೆಗಾಗಿ ಭಾರತೀಯರು ಹಬ್ಬಗಳೆಂಬ ಪರಿಕಲ್ಪನೆಯನ್ನು ಸೃಷ್ಟಿಸಿದರು. ಹಬ್ಬಗಳ ಮೂಲಕ ಎಲ್ಲರನ್ನೂ ಒಗ್ಗೂಡಿಸುವುದು ಮತ್ತು ಸಂಬಂಧಗಳು ದೇವರ ಪರಿಕರದಂತೆ ನಳನಳಿಸುವಂತೆ ಮಾಡಿದ್ದವು. ಮುನಿಸು ಮನಸ್ಥಾಪದ ಮುಖವಾಡಗಳು ಕೆಲವೇ ಹೊತ್ತಿನಲ್ಲಿ ಮಂದನಗುವಿನಿಂದ ಮೊದಲು   ಗೊಂಡು ಹರಟೆಯಲ್ಲಿ ಜೊತೆಯಾಗಿ ಕೂಡಿ ಉಣ್ಣುವ ವೇಳೆಗೆ ಕೊನೆಯಾಗುತ್ತಿದ್ದವು. ಸಹ ಭೋಜನವು ಸಹಜೀವನ ಸಿದ್ಧಾಂತಕ್ಕೆ ಪಂಕ್ತಿಗಳು ಸಾಕ್ಷಿಯಾಗಿತ್ತು.

ಹಳ್ಳಿಗಳಲ್ಲಿ ಇರುತ್ತಿದ್ದ ಸಿನಿಮಾ ಟೆಂಟುಗಳು, ಪರದೆಗಳು ಹತ್ತಾರು ಹಳ್ಳಿಗಳನ್ನು ಒಂದೆಡೆ ಸೇರಿಸುವ ಆಯಸ್ಕಾಂತಗಳಂತೆ ಕಾರ್ಯನಿರ್ವಹಿ ಸುತ್ತಿದ್ದವು.ಕುಟುಂಬದವರೆಲ್ಲ ಒಂದುದಿನ,ಎರಡು ಮೂರು ತಾಸು ಬದುಕಿನ ಜಂಜಾಟವನ್ನೆಲ್ಲ ಮರೆತು ಜೀವನದ ಮೌಲ್ಯದೊಳಗೆ ಮಗ್ನ ರಾಗಲು ಕಾರಣವಾಗುತ್ತಿದ್ದ ಕೇಂದ್ರಗಳಾಗಿದ್ದವು. ಸಿನಿಮಾ ಎಂದರೆ ಅದು ಕೇವಲ ಮನರಂಜನೆಯಾಗಿರ ಲಿಲ್ಲ ಜೀವನದ ಆದರ್ಶಗಳನ್ನು ತತ್ವಗಳನ್ನು ಪ್ರತಿಪಾದಿಸುವ ಮೂರ್ತ ಸ್ವರೂಪಗಳಾಗಿದ್ದವು. ಆದರೆ ಇಂದಿಗೆ ಸಿನಿಮಾ ಬರಿಯ ಆದರ್ಶಗಳ ಆರೋಪಕ್ಕೆ ಸೀಮಿತವಾಗಿದೆ. ವಿಕಾರತೆ, ವಿಚಿತ್ರ, ವಿನೋದ ಕ್ರೌರ್ಯದ ಶೃಂಗಾರವೇ ಸಿನಿಮಾಕ್ಕೆ ಬಂಡವಾಳವೆಂದು ಬಲ್ಲವರೆಲ್ಲ ಅರಿತಿದ್ದಾರೆ. ಮೌಲ್ಯಕ್ಕೆ ಜಾಗವೂ ಇಲ್ಲ, ಮನರಂಜನೆಯು ಇಲ್ಲ ಬರಿಯ ಕಾಲಹರಣದ ನಕಲಿ ಆಡಂಬರತೆಯೇ ಅದರೊಳಗಡಗಿದೆ.

ಇನ್ನು ದೇವಸ್ಥಾನವು ಶ್ರದ್ಧಾ ಭಕ್ತಿಯೊಂದಿಗೆ ಪ್ರಶಾಂತತೆ ನೀಡುವ ಐಕ್ಯತೆಯ ತಾಣಗಳಾಗಿತ್ತು. ಉತ್ಸವ, ಜಾತ್ರೆ, ಯಜ್ಞಯಾಗಾದಿಗಳು ಆಗ  ಜಾತಿ-ಮತ ಧರ್ಮದ ಎಲ್ಲೆಗಳನ್ನು ಮೀರಿ ಲೋಕ ಕಲ್ಯಾಣಾರ್ಥವಾಗಿ ಜರುಗುತ್ತಿತ್ತು.ಆಚಾರ ವಿಚಾರ ದಲ್ಲಿ ಮಡಿಮಂತಿಕೆ ಇದ್ದರೂ ಅದರ ವಿರಾಟ ದರ್ಶನವಾಗಲಿ,ವೈಭವೀಕರಣವಾಗಲಿ ಆಗದಂತೆ ಜಾಣ್ಮೆಯಿಂದ ತೋರಿಸಲಾಗುತ್ತಿತ್ತು. ಆದರೆ ಇಂದು ಇಲ್ಲಿಯೂ ಕೊಳಕು ತುಂಬಿ ನಾರುವ ಮೋರಿಯಂತ ವಾತಾವರಣ ಸೃಷ್ಠಿಯಾಗಿದೆ. ಜಾತಿಗೊಂದು ದೇವರು, ಕೇರಿಗೆಗೊಂದು ದೇವಸ್ಥಾನ, ಅವುಗಳಲ್ಲಿ ಬೆರಳೆಣಿಕೆಯಷ್ಟು ಭಕ್ತರು ಹಾಗೂ ಆತುರಾತುರದ ಭಕ್ತಿ ಪ್ರದರ್ಶನ. ಮೈಕುಗಳು, ಡಿಜೆಗಳ ಅಬ್ಬರ, ಜಗಮಗಿಸುವ ವಿದ್ಯುತ್ ದೀಪಾಲಂಕಾರಗಳು. ಅರ್ಥವಿರದ ಮಂತ್ರಗಳು, ಉದ್ದೇಶವಿರದ ಯಜ್ಞ ಯಾಗಗಳು, ಬರಿಯ ಸ್ವಾರ್ಥ ತುಂಬಿದ ಪ್ರತಿಷ್ಠೆಯ ಪ್ರದರ್ಶನ ಗಳು. ಎಲ್ಲಾ ನಟನೆ, ನಾಟಕ. ಯಾರಿಗಾಗಿ? ಏತಕ್ಕಾಗಿ? ಬರಿಯ ಪ್ರಶ್ನೆಗಳು.

ಹಬ್ಬಗಳಲ್ಲಿ ಸಡಗರವಿಲ್ಲ, ಉಣ್ಣುವ ಊಟದ ಸಿದ್ಧತೆಯಲ್ಲಿ ಪರಿಶ್ರಮವಿಲ್ಲ. ಖರೀದಿ ಎಂದರೆ ಕೊಳ್ಳುಬಾಕ ಸಂಸ್ಕೃತಿಗೆ ಮಾರಿಕೊಳ್ಳುವುದಾಗಿದೆ. ಮಾವಿನ ಎಲೆಯಿಂದ ಹಿಡಿದು ಊಟದ ಬಾಳೆ ಎಲೆಯವರೆಗೆ ಎಲ್ಲವೂ ನಕಲಿಯಾಗಿವೆ. ಯಾವುದಕ್ಕೂ  ಬಣ್ಣವಿಲ್ಲ, ಪರಿಮಳವಿಲ್ಲ, ಬಾಂಧವ್ಯ ಬೆಸೆಯುವ ಗಟ್ಟಿತನ ಇವುಗಳಲ್ಲಿಲ್ಲ. ಇಂತಹ ವಾತಾವರಣದಲ್ಲಿ ಸಂಬಂಧದ ಬೆಸುಗೆ ಬೆಸೆಯುವುದಾದರೂ ಹೇಗೆ? ವಿಚಾರ ಮಾಡ ಬೇಕು ಏನಂತೀರಾ! ಯಾವ ಹಳ್ಳಿಯಲ್ಲೂ ಇಂದು ಸಿನಿಮಾ ಪರದೆಗಳಿಲ್ಲ, ಟೆಂಟುಗಳಿಲ್ಲ, ಅವುಗಳ ಜಾಗವನ್ನು ಟಿವಿ,ಮೊಬೈಲ್ ಗಳು ಆವರಿಸಿದ್ದು  ಊರೂರುಗಳು ಒಂದೆಡೆ ಬಂದು ಸೇರುವುದಾ ದರೂ ಹೇಗೆ, ಚಿಂತನೆ ಮಾಡಬೇಕಲ್ಲವೇ.

ಜಗತ್ತೆಲ್ಲ ಈಗ  ವ್ಯಾಪಾರೀಕರಣವೆಂಬ ಧನದಾಹಿ ಗಳ ಸಾಮ್ರಾಜ್ಯವಾಗಿದೆ. ಶ್ರೀಮಂತಿಕೆಯ ಪ್ರದರ್ಶನಗಳು ಮಲ್ಟಿ ಮೀಡಿಯಾ,ಮೋರ್ ಗಳು, ಮಾಲ್ಗಳು, ಸಿರಿವಂತರ ವರ್ಗಕ್ಕೆ ಸೀಮಿತವಾಗಿವೆ. ಶ್ರಮಿಕರು ಮನೆಯ ನಾಲ್ಕು ಗೋಡೆಗಳ ನಡುವೆ ಟಿವಿ ಎಂಬ ಭ್ರಮೆಯ ಲೋಕದೊಳಗೆ ಬಂಧಿಗ ಳಾಗಿದ್ದಾರೆ. ಭಾವನೆಗಳಿಲ್ಲದೆ ಕಣ್ಣು ಮಿಟುಕಿಸುವ ನಿರ್ಜೀವ ಗೊಂಬೆಗಳಂತೆ. ದೇವಾಲಯಗಳು ಜಾತಿಸೂತಕದ ವೇಷ ತೊಟ್ಟು ಹಾದಿ ಬೀದಿಯಲ್ಲಿ ನರ್ತಿಸುತ್ತಿವೆ.ದೇವರು ಸಹ ರಾಜಕೀಯದ ಆಟಕ್ಕೆ ದಾಳವಾಗಿ ಕೌರವರು ಪಾಂಡವರನ್ನು ಆಡಿಸಿದಂತೆ ಆಡುತ್ತಿದೆ. ಧರ್ಮವು ದಯೆಯ ಮೂಲವನ್ನೇ ಮರೆತು ದುರ್ಗುಣವನ್ನೇ ತನ್ನ ಮೈಯ ಆಭರಣ ವಾಗಿಸಿಕೊಂಡಿದೆ. ಕಾಲ ಗತಿಸಿದಂತೆ ಊಸರವಳ್ಳಿ ಯಂತೆ ಮನುಷ್ಯರ ಮನಸು, ಮನಸ್ಥಿತಿ, ಪರಿಸ್ಥಿತಿ, ವಸ್ತು ಸ್ಥಿತಿ ಬದಲಾಗುತ್ತಾ ಸಾಗಿದೆ. ಪ್ರತಿಯೊಂದ ರಲ್ಲೂ  ಭಂಡತನವೇ ಬಂಡವಾಳವಾಗಿ ಬದುಕು ಗಳನ್ನು ಹೊತ್ತುಯ್ಯುತ್ತಿದೆ.

ಇಲ್ಲಿರುವ ವಿಚಾರವಿಷ್ಟೇ ಕಾಲ ಬದಲಾಗಿದೆಯೋ ಇಲ್ಲ ಕಾಲಮಾನದಲ್ಲಿ ಮನುಷ್ಯರ  ಮನಸ್ಥಿತಿ, ಪರಿಸ್ಥಿತಿ, ವಸ್ತುಸ್ಥಿತಿಗಳು ಬದಲಾಗಿದೆಯೋ ಎಂಬುದು. ಒಂದು ವಿಚಾರ ಸ್ಪಷ್ಟವಾಗಿದೆ ಕಾಲ ಮಾತ್ರ ಬದಲಾಗಿಲ್ಲ. ಆದರೂ ಮಂಗ ಮೊಸರನ್ನ ತಿಂದು ಮೇಕೆ ಬಾಯಿಗೆ ಒರೆಸಿತೆನ್ನುವ ಹಾಗೆ ಕಾಲಕ್ಕೆ ಬದಲಾವಣೆಯ ಹೆಸರಲ್ಲಿ ಚಟ್ಟ ಕಟ್ಟಲಾ ಗಿದೆ.ಕಾಲಕೆಟ್ಟು ಹೋಯ್ತು ಅನ್ನುವುದರೊಳಗೆ ವಾಚ್ಯಾರ್ಥಕ್ಕಿಂತ ಅದರೊಳಗಿರುವ ಲಕ್ಷ್ಯಾರ್ಥ ಪ್ರಧಾನವಾಗಿದೆ. ಈ ಆರೋಪ ಪ್ರತ್ಯಾರೋಪ ದೇವರು, ಧರ್ಮವನ್ನೂ ಬಿಡಲಿಲ್ಲ ಹಾಗಾಗಿ ಬರೆಯುವ ಕವಿಯನ್ನು ಬಿಟ್ಟಿತೇ ನೀವೇ ಹೇಳಿ. ಹಣೆಬರೆಹ ಕೆಟ್ಟಿದ್ದರೆ ಬರೆದ ಈ ಸಾಲೇ ಸಾಕು ನಮ್ಮನ್ನೂ ಕಾಡಲು, ಹಾಗಾಗಿ ದೇವರೂ ಕೂಡ ಬದಲಾಗಿದ್ದಾನೆ.ಧರ್ಮಗಳ ಪಥವೂ ಬದಲಾಗಿದೆ. ಭಕ್ತರ ಭಕ್ತಿಯೂ ಬದಲಾಗಿದೆ. ವರ್ತಕರ- ಅರ್ಚಕರ ಆಚಾರ ವಿಚಾರಗಳೂ ಬದಲಾಗಿವೆ. ಗ್ರಹಚಾರ ಕೆಟ್ಟಿದ್ದು ಮಾತ್ರ ಕಾಲದ್ದು ಎನ್ನಬೇಕು. ಅದಕ್ಕಾಗಿ ಕಾಲ ಬದಲಾಗಿದೆ ಅನ್ನುವ ಹಣೆಪಟ್ಟಿ ಬಲವಾಗಿ ಹೋಯ್ತು. ಹೀಗೆ ಗೀಚಿದ ತಪ್ಪಿನಿಂದ ನಿಮಗೇನಾದರು ಹೊಳೆದರೆ ಅದು ಅರಿವು, ಆ ಅರಿವೇ ಜ್ಞಾನವಾಗಲಿ. ಅರಿತ ಮನಸ್ಸಿನಿಂದ ಅದರ ಮಂಥನವಾಗಲಿ. ಮಂಥನವು ಮಹಾ ಯುದ್ಧದಂತೆ ಎಲ್ಲರೆದೆಯಲಿ ರಕುತದಲಿ ಬೆರೆತು ಹೋಗಲಿ. ಕಾಲ ಬದಲಾಯಿತೆಂಬ ವಿಚಾರಧಾರೆಗೆ ಜಯವಾಗಲಿ.

✍️ಡಾ.ನವೀನ್ ಕುಮಾರ್ ಎ.ಜಿ
ಶಿಕ್ಷಕರು ಹಾಗೂ ಸಾಹಿತಿ
ವಿಶ್ವದರ್ಶನ ಪ್ರೌಢಶಾಲೆ
ಪೊ:ಇಡಗುಂದಿ ಪೋಸ್ಟ
ತಾ:ಯಲ್ಲಾಪುರ ಜಿ: ಉತ್ತರ ಕನ್ನಡ