ಸೃಷ್ಟಿ ನಿಯಮ ಋತು ಆವರ್ತನ
ಕೋರುತ್ತಿದೆ ಆತ್ಮೀಯ ಆಗಮನ
ತುಂತುರು ಮಳೆ ಹನಿ ಸಿಂಚನ
ಬರುತಲಿಹನೋ ಇಳೆಗೆ ಶ್ರಾವಣ

ಸುರಿಯುತ್ತಿದೆ ಮಳೆ ಹನಿಗಳ ಸೋನೆ
ಶ್ರುತಿ ಹಿಡಿದಂತೆ ‘ಧೋ’ ಸೋಬಾನೆ
ಮಾಡಿನಂಚಿಂದ ಹರಿದಿದೆ ಜಲಧಾರೆ
ಎಲ್ಲೆಲ್ಲೂ ವರುಣನದೇ ಅಬ್ಬರ

ಶ್ರಾವಣವೆಂದರೆ ಕುಳಿರ್ಗಾಳಿಯ ತಂಪು
ಹಸಿರು ಹೊದ್ದ ಇಳೆಯ ಸೊಂಪು
ಜಡಿ ಮಳೆಯ ಸದ್ದಿನ ಇಂಪು
ಅರಳಿದ ಹೂವುಗಳ ಸುಗಂಧದ ಕಂಪು

ಶ್ರಾವಣದ ತೇರಲಿ ಹಬ್ಬಗಳ ದಿಬ್ಬಣ
ವ್ರತ ನೋಂಪಿಗಳ ಪವಿತ್ರ ಆಚರಣ
ನಾಗಪ್ಪನಿಗೆ ತನಿ ಎರೆವ ಚೌತಿ ಪಂಚಮಿ ವರಮಹಾಲಕ್ಷ್ಮಿಯ ಸಂಭ್ರಮದ ಗಣಿ

ಶ್ರಾವಣ ಶುಕ್ರವಾರದಲ್ಲಿ ಲಕ್ಷ್ಮಿಯ ಆರಾಧನೆ
ಶನಿವಾರಗಳು ತಿಮ್ಮಪ್ಪನಿಗೆ ಸಮರ್ಪಣೆ
ದೇವರ ಹೆಸರಲ್ಲಿ ಭವತಿ ಭಿಕ್ಷಾಂದೇಹಿ
ಮನುಜಗೆ ಕಲಿಸುವುದು ವಿನಯದ ಸಹಿ.

ದೂರಾಗಿಸಿದೆ ನವವಿವಾಹಿತರ ವಿರಹ
ಸುತ್ತೆಲ್ಲಾ ಹರಡಿಸಿ ಹೊಸ ಉಲ್ಲಾಸ ಉತ್ಸಾಹ
ಎಲ್ಲೆಡೆ ಕೆರೆ ಕಟ್ಟೆ ತುಂಬಿ ತುಳುಕಲಿ ಸಮೃದ್ಧಿ
ಅಂತೆಯೇ ತರಲಿ ಈಗ ಮನುಜನಿಗೆ ಸದ್ಬುದ್ಧಿ

ಸಹೃದಯಿಗಳಿಗೆಲ್ಲ ಶ್ರಾವಣದ ಸವಿ ಶುಭ ಕಾಮನೆಗಳು

✍️ಸುಜಾತ ರವೀಶ್
ಮೈಸೂರು