ಉತ್ತರ ಕನ್ನಡ ಜಿಲ್ಲೆಯ ಪ್ರತಿಯೊಂದು ತಾಲೂಕು ಗಳು ತಮ್ಮದೇ ಆದ ವೈಶಿಷ್ಟ್ಯಗಳನ್ನು ಹೊಂದಿವೆ.. ಅಂತಹ ತಾಲೂಕು ‘ಕುಮಟ‘,ಕುಮಟಿ‘ ಒಂದು.

ಕುಮಟಾದ ಹಳೆಯ ಹೆಸರು ಕುಂಭಾಪುರ.. ಕುಂಭೇಶ್ವರ ದೇವಾಲಯದಿಂದಾಗಿ ಇದನ್ನು ‘ಕುಂಬಟುಂ‘ ಎಂದು ಕರೆಯುತ್ತಿದ್ದುದಾಗಿಯೂ ಅದರಿಂದ ‘ಕುಮಟ‘ವೆಂಬ ಹೆಸರು ಬಂತೆಂದೂ ಹೇಳಲಾಗಿದೆ. ಬ್ರಿಟಿಷರ ಕಾಲದಲ್ಲಿ ಕುಮಟಾ ಪಟ್ಟಣವು ಮುಂಬಯಿ ಪ್ರಾಂತ್ಯದ ಅಡಿಯಲ್ಲಿ ಬರುತ್ತಿದ್ದು, ಉತ್ತರ ಕನ್ನಡದ ಒಂದು ಭಾಗವಾ ಗಿತ್ತು. ಇಲ್ಲಿ ವಿಶೇಷವಾಗಿ ಹತ್ತಿ, ಗಂಧದ ಕೆತ್ತನೆ ಕೆಲಸ ಪ್ರಮುಖವಾಗಿದ್ದು ವ್ಯಾಪಾರ ವಹಿವಾಟಿ ನಲ್ಲೂ ಹೆಸರುವಾಸಿಯಾಗಿತ್ತು.ಸ್ವಾತಂತ್ರ್ಯ ಪೂರ್ವ ದಲ್ಲಿ ಇಲ್ಲಿಂದ ಇಂಗ್ಲೆಂಡಿಗೆ ಸರಬರಾಜಾಗುತ್ತಿದ್ದ ಹತ್ತಿಯು ‘ಕುಮಟಾ ಹತ್ತಿ’ಯೆಂದೇ ಪ್ರಸಿದ್ಧವಾ ಗಿತ್ತು. ಕುಮಟಾ “ತೆಂಗಿನ ಕಾಯಿಗೂ” ಪ್ರಸಿದ್ಧಿ ಪಡೆದಿದೆ.

ಕುಮಟಾ ತಾಲೂಕು ಹಿಂದೆ ಜೈನ ಕೇಂದ್ರವಾಗಿತ್ತು. ಈಗಲೂ ಇಲ್ಲಿ ಅನೇಕ ಜೈನ ಬಸದಿಗಳಿವೆ. ಪೋರ್ಚುಗೀಸರು ಇಲ್ಲಿಯ ಜನರಿಂದ ತೆರಿಗೆ ವಸೂಲಿ ಮಾಡುತ್ತಿದ್ದರೆಂದು ಹೇಳಲಾಗಿದೆ. ಟಿಪ್ಪು ಈ ಪಟ್ಟಣದ ಮೇಲೆ ಎರಡು ಸಾರಿ ಆಕ್ರಮಣ ನಡೆಸಿದ್ದ. ಕುಮಟ ಒಂದು ವ್ಯಾಪಾರ ಕೇಂದ್ರವಾ ಗಿತ್ತು. ಕುಮಟಾವನ್ನು ಅನೇಕ ರಸ್ತೆಗಳ ಸಂಧಿಸ್ಧಳ ವೆಂದು ಹೇಳಬಹುದು.ಇಲ್ಲಿಂದ ಕಾರವಾರ, ಭಟ್ಕಳ, ಯಲ್ಲಾಪುರ,ಸಿರ್ಸಿ, ಶಿವಮೊಗ್ಗ‌‌ ತಲುಪುವ ರಸ್ತೆಗಳಿವೆ. ಗಂಧದ ಕುಸುರಿ ಕೆಲಸಕ್ಕೆ ಕುಮಟಾ ತಾಲೂಕು ಪ್ರಸಿದ್ಧವಾಗಿದೆ.ಮೀನುಗಾರಿಗಾರಿಕೆ ಇಲ್ಲಿಯ ಜನರ ಜೀವನಾಂಶದ  ಉದ್ಯೋಗ ವಾಗಿದೆ. ಈ ತಾಲ್ಲೂಕಿನಲ್ಲಿ ಒಟ್ಟೂ 112 ಹಳ್ಳಿ ಗಳು  ಇವೆ. ಕುಮಟಾ, ಗೋಕರ್ಣ-ಇವು ಪ್ರಮುಖ ಪಟ್ಟಣಗಳಾಗಿವೆ. ಸಮುದ್ರ ತೀರದಲ್ಲಿ ರುವ ಈ ತಾಲೂಕಿನ ಕರಾವಳಿಯ ಹವಾಮಾನ ಹೊಂದಿದ್ದು ಬೇಸಗೆಯಲ್ಲಿ ಹೆಚ್ಚು ಬಿಸಿಯಾಗಿರು ತ್ತದೆ. ಮಳೆಗಾಲದಲ್ಲಿ ಹೆಚ್ಚು ಮಳೆಯಾಗುತ್ತದೆ.

ಇಲ್ಲಿನ ಪ್ರಮುಖ ಬೆಳೆ ಭತ್ತ, ತೆಂಗು ಮತ್ತು ಅಡಿಕೆ ಯಾಗಿದ್ದು ಇದರ ಜೊತೆ ಗೇರು, ವೀಳ್ಯದೆಲೆ, ತರಕಾರಿಗಳು ಪ್ರಮುಖ ವಾಣಿಜ್ಯ ಬೆಳೆಯಾಗಿವೆ. ವನ್ನಳ್ಳಿ ಮತ್ತು ಅಳ್ವೇಕೋಡಿ ಗ್ರಾಮಗಳಲ್ಲಿ ಬೆಳೆಯಲಾಗುವ ವಿಶಿಷ್ಟವಾದ ಸಿಹಿ ಈರುಳ್ಳಿ ಯನ್ನು ಕರ್ನಾಟಕದ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಹೀಗಾಗಿ ಕುಮಟೆಯ ಈರುಳ್ಳಿ ಪ್ರಸಿದ್ದವಾಗಿದೆ.

ಕುಮಟಾ ತಾಲೂಕಿನ ಪ್ರೇಕ್ಷಣೀಯ ಸ್ಥಳಗಳು

ಗೋಕರ್ಣ

ಗೋಕರ್ಣ ಮಹಾಬಲೇಶ್ವರ ದೇವಸ್ಥಾನವು ಕ್ರಿ.ಶ
೪ನೇಶತಮಾನದ ಹಿಂದೂ ದೇವಾಲಯವಾಗಿದ್ದು, ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿರುವುದು ಹೆಮ್ಮೆಯ ಸಂಗತಿ. ಈ ದೇವಾಲಯವನ್ನು ಶಾಸ್ತ್ರೀಯ ದ್ರಾವಿಡ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇದು ಧಾರ್ಮಿಕ ಯಾತ್ರಾ ಸ್ಥಳವಾಗಿದೆ.

ಸ್ಕಂದ ಪುರಾಣದ ಸಹ್ಯಾದ್ರಿ ಉತ್ತರ ಖಂಡದಲ್ಲಿ ಹೀಗೆ ಹೇಳಲಾಗಿದೆ.

ಧರಣೀಮಾಹ ಶಂಕರ ಮತ್ಸಂಯೋಗಾದಿಹ ಶುಭೇ ಭವಿಷ್ಯತಿ ಸುತಸ್ತವ| ಗ್ರಹಾಣಾಮಧಿಪಶ್ಚಂಡಃಸೋಂಗಾರಕ ಇತಿ ಶ್ರುತಃ ||
ಭವಿಷ್ಯತೀದಂ ಭದ್ರಂ ತೇ ಕ್ಷೇತ್ರಂ ತ್ರೈಲೋಕ್ಯ ವಿಶ್ರುತಂ |
ಗೋಶಬ್ದಃ ಪ್ರಠಮಂ ದೇವಿ ತ್ವಯಿ ಸಂಪರಿವರ್ತತೇ ||
ಕರ್ಣಶ್ಚಾಯಂ ತವ ಶುಭೇ ದೇವ್ಯಂಬುಗ್ರಹ ಯೋಗತಃ | ತಸ್ಮಾದ್ಗೋಕರ್ಣಮಿತಿ ಚ ಖ್ಯಾತಿಂ ಲೋಕೇ ಗಮಿಷ್ಯತಿ ||

ಗೋ ಎನ್ನುವುದು ಮೊಟ್ಟ ಮೊದಲಿಗೆ ಭೂಮಿಗೆ ಬಂದ ಸಂಜ್ಞೆಯಾಗಿದೆ. ಈ ಕ್ಷೇತ್ರವು ಕರ್ಣವಾಗಿದ್ದು ಶಿವನ ಸಂಯೋಗದಿಂದ ಇಲ್ಲಿ ಗ್ರಹಗಳಿಗೆ ಅಧಿಪನಾದ ಅಂಗಾರಕನು ಹುಟ್ಟುತ್ತಾನೆ. ಭೂಮಿ ಹಾಗೂ ಅಂಬುಗ್ರಹ(ಅಂಗಾರಕ) ಕೂಡುವಿಕೆ ಅಥವಾ ಭೂಮಿ ಹಾಗೂ ರುದ್ರಯೋನಿ ಎಂದು ಖ್ಯಾತವಾದ ಗೋಕರ್ಣದ ಸ್ಥಲ ಇವುಗಳ ಕೂಡುವಿಕೆಯಿಂದಾಗಿ ಇದು ಗೋಕರ್ಣ ಎಂದು ಖ್ಯಾತವಾಗುತ್ತದೆ.

ಗೋಕರ್ಣ ಶ್ರೀ ಕ್ಷೇತ್ರದಲ್ಲಿಯ ಶಿವಲಿಂಗವನ್ನು ‘ಮಹಾಬಲೇಶ್ವರ‘ ಎಂದು ಕರೆಯಲಾಗುತ್ತದೆ ಮತ್ತು ಇದು ಹಸುವಿನ ಕಿವಿಯ ಆಕಾರದಲ್ಲಿದೆ, ಆದ್ದರಿಂದ ಈ ಪಟ್ಟಣವನ್ನು ಗೋಕರ್ಣ ಎಂದು ಕರೆಯಲಾಗುತ್ತದೆ. ಗೋ ಎಂದರೆ ‘ಹಸು’ ಮತ್ತು ಕರ್ಣ ಎಂದರೆ ‘ಕಿವಿ’. ಆತ್ಮಲಿಂಗದ ಕಥೆ ಇಲ್ಲಿ ನಡೆದಿದೆ. ದೇವಾಲಯವು ಸಮುದ್ರಕ್ಕೆ ಬಹಳ ಹತ್ತಿರದಲ್ಲಿಯೆ ಇದೆ, ಇದು ಕೇವಲ ಸಮುದ್ರದ ದಡದಲ್ಲಿ ಕಾಣಿಸಿಕೊಳ್ಳುವುದರಿಂದ‌,ಈ ಸ್ಥಳವನ್ನು “ಭೂಕೈಲಾಶ್” ಎಂದೂ ಕರೆಯಲಾಗುತ್ತದೆ. 

ಗೋಕರ್ಣ ಕ್ಷೇತ್ರವು ತ್ರಿಸ್ಥಲವೆಂದು ಖ್ಯಾತವಾಗಿದೆ. ರಾಮಸೇತು,ಕಾಶಿ ಕ್ಷೇತ್ರಗಳಲ್ಲಿಯೂ ಒಂದಾಗಿದೆ. ಭರತ ಖಂಡದ ಹತ್ತು ಭಾಸ್ಕರ ಕ್ಷೇತ್ರಗಳಲ್ಲಿ ಇದು ಒಂದಾಗಿರುವುದರಿಂದ ಹಿಂದೂ ಜನರ ಪವಿತ್ರ ಪುಣ್ಯಕ್ಷೇತ್ರವಾಗಿದೆ. ಈ ಕ್ಷೇತ್ರವು ಸಮುದ್ರದಲ್ಲಿ ಸೇರಿತ್ತು. ಪರಶುರಾಮನು ಇದನ್ನು ಉದ್ಧರಿಸಿದ ನೆಂದು ಪುರಾಣ ಹೇಳುತ್ತದೆ.ವಾಯುಪುರಾಣದಲ್ಲಿ ೪೮ ನೇ ಅಧ್ಯಾಯದಲ್ಲಿ ಉಲ್ಲೇಖವಿದೆ.

ಗೋಕರ್ಣದಲ್ಲಿ‌ ನೆಲೆನಿಂತ ಶಿವನ ಆತ್ಮಲಿಂಗದ ಕಥೆಯ ಕುರಿತಾಗಿ ಹೇಳಬೇಕಾಗಿಲ್ಲ‌… ಆದರೆ ಶಿವನ ಜನ್ಮಸ್ಥಳವಾಗುವಂತೆ ಮಾಡಿದ ಬಾಲ ಗಣಪನ ಮೊದಲು ಪೂಜಿಸಿ ನಂತರ ಆತ್ಮಲಿಂಗ ವನ್ನು ಪೂಜಿಸಬೇಕೆಂದು ಅಪ್ಪಣೆ ಮಾಡಿ ಆತ್ಮ ಲಿಂಗವನ್ನು ಭಕ್ತಿಯಿಂದ ಪೂಜಿಸುವ ಭಕ್ತರ ಇಷ್ಟಾರ್ಥಗಳು ಕೈಗೂಡುವವು.ತಾನು ಇಲ್ಲಿಯೇ ವಾಸವಾಗುತ್ತೇನೆ ಎಂದು ಹೇಳಿ ಪರಮಾತ್ಮನು ಅಂತರ್ಧಾನನಾದನು. ಇದಕ್ಕೆ ಭೂ ಕೈಲಾಸ ಎಂಬ ಹೆಸರಾಗಲಿ ಎಂದು ದೇವತೆಗಳು ಹೇಳಿ ಗಣಪತಿಯನ್ನೂ ಆತ್ಮಲಿಂಗ ವನ್ನೂ ಭಕ್ತಿಯಿಂದ ಪೂಜಿಸಿ ಅಂತರ್ಧಾನರಾದರು.

ಇದಾದ ನಂತರ ರಾವಣ ಪುನಃ ತಾಯಿಯೊಡನೆ  ಗೋಕರ್ಣಕ್ಕೆ ಬಂದು ಗಣಪತಿಯನ್ನೂ ಆತ್ಮ ಲಿಂಗವನ್ನೂ ಭಕ್ತಿಯಿಂದ ಪೂಜಿಸಿದನು. ಆಗ ಶಿವನು ಪ್ರತ್ಯಕ್ಷನಾಗಿ ನೀನು ದುಃಖಿಸುವ ಕಾರಣ ವಿಲ್ಲ. ನಿನ್ನಿಂದಲೇ ಲೋಕಕ್ಕೆ ಉಪಕಾರವಾಗ ಬೇಕಿತ್ತು. ನೀನು ನೆಪ ಮಾತ್ರ. ನಿನ್ನಿಂದ ಲಿಂಗಕ್ಕೆ ಘಾಸಿಯಾದರೂ, ನನ್ನ ಜನ್ಮಸ್ಥಳದಲ್ಲಿಯೇ ನನ್ನ ಮಗನಿಂದ ಸ್ಥಾಪಿಸಲ್ಪಟ್ಟದ್ದರಿಂದ ನನಗೆ ಆನಂದ ವಾಗಿದೆ. ನಿನಗೆ ಶುಭವಾಗಲಿ ಎಂದು ಹೇಳಿ ಅಂತರ್ಧಾನನಾದನು. ಹೀಗೆ ರಾವಣನಿಂದ ಸ್ಥಾಪಿಸಲ್ಪಟ್ಟ ಶಿವನ ಆತ್ಮಲಿಂಗವು ಭಕ್ತರ ಸಕಲ ಇಷ್ಟಾರ್ಥಗಳನ್ನು ಪೂರೈಸುತ್ತ ಸಿದ್ಧಿ ಕ್ಷೇತ್ರವೆಂದು ಪ್ರಸಿದ್ಧವಾಗಿದೆ. ಈ ಕಥೆಯನ್ನು ಹಾಡಿನ ರೂಪ ದಲ್ಲಿ ಇಲ್ಲಿನ ಸ್ತ್ರೀಯರು ಹಾಡುತ್ತಾರೆ.ಪುಣ್ಯ ಕ್ಷೇತ್ರ ಗಳಲ್ಲಿ ಒಂದಾದ ಗೋಕರ್ಣವು ಇಂದಿಗೂ ಜನ ಮಾನಸ ದಲ್ಲಿ ಉಳಿದಿದ್ದು ಈ ದೈವಿ ಕೃಪೆಯಿಂದ.

ಯಾಣ

“ಸೊಕ್ಕಿದ್ದವನು ಯಾಣಕ್ಕೆ ಹೋಗುತ್ತಾನೆ; ರೊಕ್ಕಿದ್ದವನು ಗೋಕರ್ಣಕ್ಕೆ ಹೋಗುತ್ತಾನೆ.” ಎಂಬ ಮಾತಿದೆ.

ಈ ಪ್ರದೇಶದವನ್ನು ರಾಷ್ಟ್ರೀಯ ನೈಸರ್ಗಿಕ ಪಾರಂಪರಿಕ ತಾಣ ಎಂದು ಕರೆಯುತ್ತಾರೆ. ಈ ಪ್ರದೇಶವು ನಮ್ಮ ಜಿಲ್ಲೆಯ ಐತಿಹಾಸಿಕ ಪ್ರಮುಖ ಪ್ರವಾಸಿಕೇಂದ್ರವಾಗಿದೆ.ಸಹ್ಯಾದ್ರಿ ಪರ್ವತದ ಜೀವ ವೈವಿಧ್ಯದ ಪ್ರೇಕ್ಷಣೀಯ ಸ್ಥಳ ಎನ್ನಬಹುದಾಗಿದೆ. ಹಾಗಾಗಿ ಈಪ್ರದೇಶವು ಜೀವವೈವಿಧ್ಯ ಸಂರಕ್ಷಣೆಗೆ ಒಳಪಡುತ್ತದೆ ಎಂದು ಸೂಚಿಸಲಾಗಿದೆ. ಯಾಣ ದಟ್ಟವಾದ ಕಲ್ಲು ಬಂಡೆ, ಅರಣ್ಯ ಪ್ರದೇಶದಿಂದ ಕೂಡಿದ ಪುಟ್ಟ ಹಳ್ಳಿ. ಇದು ಪಶ್ಚಿಮಘಟ್ಟಗಳ ಸಹ್ಯಾದ್ರಿ ಶ್ರೇಣಿಗಳಿಂದ ಕೂಡಿದ್ದು. ಸಿರ್ಸಿಯಿಂದ ೪೫ ಕಿ.ಮೀ. ಹಾಗೂ ಕುಮಟಾದಿಂದ ೩೧ಕಿ.ಮೀ  ದೂರದಲ್ಲಿದೆ.

ಯಾಣದ ಪ್ರಮುಖವಾದ ಆಕರ್ಷಣೆ ಎಂದರೆ ಈ ಎರಡು ಶಿಖರಗಳು ಏಕಶಿಲೆಯಿಂದ ಉತ್ಪತ್ತಿಯಾ ಗಿವೆ. ಇಲ್ಲಿನ ಸುತ್ತಮುತ್ತಲಿನ ಪ್ರದೇಶವು ಹಳ್ಳ, ದಿಣ್ಣೆಗಳಿಂದ ಮತ್ತು ದಟ್ಟವಾದ ಅರಣ್ಯಗಳಿಂದ ಈ ಪ್ರದೇಶ ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಶ್ರೇಣಿ ಗಳಿಂದ ಕೂಡಿದೆ.

ಮೊದಲನೆ ಶಿಖರ  ಭೈರವೇಶ್ವರ ಶಿಖರ ಮತ್ತು ಎರಡನೆಯ ಶಿಖರ ಮೊಹಿನಿ ಶಿಖರ ಈ ಎರಡು ಶಿಖರಗಳು ಕಡಿದಾದ ಕಪ್ಪು ಕಲ್ಲಿನಿಂದ ಕೂಡಿದೆ. ಭೈರವೇಶ್ವರ ಶಿಖರವು ೧೨೦ ಮೀಟರ್ (೩೯೦ ಅಡಿ) ಎತ್ತರವಿದೆ. ಮೋಹಿನಿ ಶಿಖರವು ೯೦ ಮೀಟರ್ (೩೦೦ಅಡಿ) ಎತ್ತರವಿದೆ. ಯಾಣದ ಶಿಖರ (ದೇವಾಲಯ) ವೆಂದು ಕರೆಯಲ್ಪಡುವ ಹಿರಿಬಂಡೆ ೧೨೦ ಮೀಟರ್ ಎತ್ತರವಾದ ಸುಮಾರು ಅಷ್ಟೇ ಅಗಲವಾದ ನೆಲಮುಗಿಲನ್ನು ಜೋಡಿಸುವ ಕಪ್ಪು ಪರದೆಯಂತೆ ಬೃಹದಾಕಾರದ ಶಿಲಾರೂಪವಾಗಿದೆ. ಈ ಬಂಡೆಯ ಮಧ್ಯದಲ್ಲಿ ಸೀಳು ಇದ್ದು ನೆತ್ತಿಯ ಮೇಲೆ ಜಲ ಸಂಚಯವಿದೆ. ಈಬಂಡೆಯ ಸೀಳಿನ ಗುಹೆಯಲ್ಲಿ ತಾನಾಗಿಮೂಡಿ ನಿಂತ ಭೈರವೇಶ್ವರ ಲಿಂಗ ಎರಡು ಮೀಟರ್ ಎತ್ತರ ವಾಗಿದೆ. ಈ ಲಿಂಗದ ಮೇಲೆ ಸದಾಅಂಗುಲ ಗಾತ್ರದ ನೀರು ಮೇಲಿನಿಂದ ಒಸರುತ್ತಿರುತ್ತದೆ. ಈ ಗುಹೆಯಲ್ಲಿ ಚಂಡಿಕಾದೇವಿಯ ಕಂಚಿನ ಮೂರ್ತಿ ಇದೆ. ಈ ಶಿಖರದ ಮತ್ತೂಂದು ತುದಿಯಲ್ಲಿ ಚಂಡಿ ಹೊಳೆ ಹರಿಯುತ್ತದೆ. ಈ ನದಿ ಮುಂದೆ ಉಪ್ಪಿನ ಪಟ್ಟಣ ಎಂಬ ಹಳ್ಳಿಯಲ್ಲಿ ಅಘನಾಶಿನಿ ನದಿ ಯನ್ನು ಸಂಧಿಸುತ್ತದೆ. ಈ ಸಂಗಮವನ್ನು ಇಲ್ಲಿನ ಸ್ಥಳೀಯರು ಗಂಗೋದ್ಬವ ಎಂದುಕರೆಯುತ್ತಾರೆ. ಸ್ಕಂದ ಪುರಾಣದಲ್ಲಿ ಯಾಣದ ಕತೆ ನಿರೂಪಿತವಾಗಿದೆ.

ಭಸ್ಮಾಸುರನು ಈಶ್ವರನಿಂದ ಉರಿಹಸ್ತದ ವರ ಪಡೆದುಕೊಂಡು ಕೊನೆಗೆ ಸುಡುವುದಾಗಿ ಅಟ್ಟಿಸಿ ಕೊಂಡು ನಡೆದಾಗ ಭೈರವೇಶ್ವರನ ರಕ್ಷಣೆಗಾಗಿ ವಿಷ್ಣು ಮೋಹಿನಿಯಾಗಿ ಬಂದು ಭಸ್ಮಾಸುರನನ್ನು ಒಲಿಸಿ ಕುಣಿಸಿ ಅವನ ಹಸ್ತವನ್ನೆ ಅವನ ತಲೆಯ ಮೇಲಿರಿಸುವಂತೆ ಮಾಡಿ ಭಸ್ಮಾಸುರನನ್ನು ಭಸ್ಮ ಮಾಡಿದ ಸ್ಥಳವಿದೆಂದು ಪ್ರತೀತಿ. 

ಈ ಸಮಯದಲ್ಲಿ ಉದ್ಭವಿಸಿದ ಬೆಂಕಿ ಬಹಳ ತೀವ್ರವಾಗಿದ್ದರಿಂದ ಈ ಪ್ರದೇಶದಲ್ಲಿ ಬಂಡೆಗಳ ರಚನೆಯಾಯಿತು ಎಂಬುದು ನಂಬಿಕೆ. ಮತ್ತು ಇಲ್ಲಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ಘಟನೆ ಯಿಂದ ನಡೆದ ಬೂದಿ(ಭಸ್ಮ) ಕಂಡುಬರುತ್ತದೆ. ನಂತರದ ದಿನಗಳಲ್ಲಿ ಜನರು ದೂಡ್ಡದಿರುವ ಶಿಖರವನ್ನು ಭೈರವೇಶ್ವರ ಶಿಖರ(ಶಿವ) ಎಂದೂ, ಸ್ವಲ್ಪ ಚಿಕ್ಕದಾದ ಶಿಖರವನ್ನು ಮೋಹಿನಿ ಶಿಖರ (ಮೋಹಿನಿ/ವಿಷ್ಣು) ಎಂದೂ ಕರೆದರು. ನಂತರ ಇಲ್ಲಿ ಪಾರ್ವತಿಯ ವಿಗ್ರಹವನ್ನು ಸಹ ಸ್ಥಾಪಿಸಲಾ ಗಿದೆ. ಇಲ್ಲಿ ಹಲವಾರು ಗುಹೆಗಳು ಇವೆ ಮತ್ತು ಇಲ್ಲೆ ಹತ್ತಿರದಲ್ಲಿ ಗಣೇಶ ದೇವಸ್ಥಾನವಿದೆ. ಶಿವರಾತ್ರಿಯ ದಿನ ಇಲ್ಲಿ ಪೂಜೆ ಸಲ್ಲಿಸಿ ದಂಡಿ ತೀರ್ಥದ ನೀರನ್ನು ತಂದು ಗೋಕರ್ಣದ ಮಹಾ ಬಲೇಶ್ವರನಿಗೆ ಅರ್ಪಿಸಿದರೆ ಪುಣ್ಯವೆಂಬ ನಂಬಿಕೆ ಇದೆ.ಸುನೀಲ್ ಕುಮಾರ್ ದೇಸಾಯಿ ಯವರ “ನಮ್ಮೂರ ಮಂದಾರ ಹೂವೆ” ಸಿನಿಮಾದ ಮೂಲಕ ಮತ್ತಷ್ಟು ಹೆಸರುವಾಸಿಯಾಗಿದೆ.

ಮಿರ್ಜಾನ್ ಕೋಟೆ

ಪುರಾಣದಲ್ಲಿ ಈ ಊರಿಗೆ ಇದ್ದ ಹೆಸರು ಮಿಡಜಿ. ಬ್ರಿಟಿಷರು ಕರೆದಿದ್ದು ಮಿರಜಿ. ಅಘನಾಶಿನಿ ನದಿಯ ದಡದಲ್ಲಿರುವ ಮಿರ್ಜಾನ್ ಕೋಟೆಯು ನಮ್ಮ ವೈಭವದ ಇತಿಹಾಸದ ರಾಜಮನೆತನದ ಕನ್ನಡಿಯಾಗಿದೆ. ಇದು ಕುಮಟಾ ಪಟ್ಟಣದಿಂದ ಸುಮಾರು 11 ಕಿ.ಮೀ ದೂರದಲ್ಲಿದೆ ಮತ್ತು 4.1 ಹೆಕ್ಟೇರ್ ಪ್ರದೇಶದಲ್ಲಿ ಹರಡಿದೆ.ಈ ಭವ್ಯವಾದ ಕೋಟೆಯು 16 ಮತ್ತು 17 ನೇ ಶತಮಾನಕ್ಕೆ ಸೇರಿದ್ದು, ಗಮನಾರ್ಹ ವಾಸ್ತುಶೈಲಿಯಿಂದ ಅಲಂಕರಿಸಲ್ಪಟ್ಟಿದೆ. ಮಳೆಗಾಲದ ಅವಧಿಯಲ್ಲಿ ಕೋಟೆಯ ಸೌಂದರ್ಯ ದುಪ್ಪಟ್ಟಾಗುತ್ತದೆ.

ಮಿರ್ಜಾನ ಕೋಟೆಯ ನಿರ್ಮಾಣ

ಕರ್ನಾಟಕದ ಇತಿಹಾಸದಲ್ಲಿ ಕಾಳುಮೆಣಸಿನ ರಾಣಿ ಎಂದೇ ಪ್ರಖ್ಯಾತಿಗೊಂಡಿದ್ದ ಸಾಳುವ ವಂಶದ ಗೇರುಸೊಪ್ಪೆಯ ರಾಣಿ ಚೆನ್ನಭೈರಾ ದೇವಿ ಈಕೋಟೆಯನ್ನು 16ನೇ ಶತಮಾನದಲ್ಲಿ ನಿರ್ಮಿಸಿದ್ದಾಳೆ ಎಂದು ಇತಿಹಾಸದ ಪುಟಗಳಲ್ಲಿ ಉಲ್ಲೇಖಿಸಲಾಗಿದೆ.

ಸುಮಾರು 11.5 ಎಕರೆಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿ ಈ ಕೋಟೆಯಿದ್ದು ನೋಡಲು ತುಂಬಾ ಆಕರ್ಷಕವಾಗಿದೆ. ಈ ಕೋಟೆಯು ಕರಾವಳಿ ಪ್ರದೇಶದಲ್ಲಿ ಕಂಡುಬರುವ ಜಂಬಿಟ್ಟಿಗೆ ಕಲ್ಲಿನಿಂದ (ಲ್ಯಾಟರೈಟ್) ನಿರ್ಮಾಣವಾಗಿದ್ದು, ಇಂದಿಗೂ ಅದರ ಗೋಡೆಗಳು ಗಟ್ಟಿಯಾಗಿವೆ. ಇದರಲ್ಲಿ ಒಂದು ಮುಖ್ಯ ದ್ವಾರವಿದ್ದು, ಮೂರು ಉಪ ದ್ವಾರಗಳು ಕಂಡುಬರುತ್ತವೆ. ಕೋಟೆ ಸುತ್ತ ತಗ್ಗು ಪ್ರದೇಶವಿದ್ದು ಹಲವಾರು ಗುಪ್ತದ್ವಾರಗಳನ್ನ ಹೊಂದಿದೆ. ಅದಲ್ಲದೇ ಇಲ್ಲಿ ಹಲವಾರು ಕಂದಕ ಗಳು, ದರ್ಬಾರ ಹಾಲ್, ರಾಣಿಯ ಸಿಂಹಾಸನ, ಪಾಕಶಾಲೆ, ಮಾರುಕಟ್ಟೆ ದೇವಸ್ಥಾನ, ಮಸೀದಿ ಯಂತಹ ಅವಶೇಷಗಳು ಮತ್ತು 09 ಭಾವಿಗಳನ್ನು ಕಾಣಬಹುದು. ಇದಲ್ಲದೆ ಕೋಟೆಯ ಧ್ವಜಸ್ತಂಭ, ಕಾವಲು ಗೋಪುರದಿಂದ ಕಾಣುವ ಅಘನಾಶಿನಿ ನದಿ ನೋಡುಗರನ್ನು ಆಕರ್ಷಿಸುವು ದಂತೂ ಸುಳ್ಳಲ್ಲ. ಕೋಟೆಯ ಸುತ್ತ ೧೨ ಬುರುಜು ಗಳಿವೆ.

ಮೆಟ್ಟಿಲುಗಳ ನಿರ್ಮಾಣವು ಆಕರ್ಷಕವಾಗಿದ್ದು ಪ್ರತಿಯೊಂದು ದ್ವಾರ  ಹಾಗೂ ಕೋಟೆ ಕಲ್ಲುಗಳು ಜನರನ್ನು ಆಕರ್ಷಿಸುತ್ತದೆ. ಅಲ್ಲದೇ ಕೋಟೆಯ ನಿರ್ಮಾಣವು ಅಚ್ಚುಕಟ್ಟಾಗಿದ್ದು ಪ್ರತಿಯೊಂದು ಸೌಕರ್ಯವನ್ನು ಈ ಕೋಟೆ ಹೊಂದಿರುವುದಕ್ಕೆ ಸಾಕ್ಷಿ ಲಭಿಸುತ್ತದೆ.

ಈ ಕೋಟೆಯನ್ನು ಕಟ್ಟಿರುವವರ ಕುರಿತು ಹಲವಾರು ಭಿನ್ನಾಭಿಪ್ರಾಯಗಳಿದ್ದು, ಬಿಜಾಪುರದ ಸುಲ್ತಾನ ನಿರ್ಮಿಸಿದ ಕೋಟೆಯೊಂದು ಇಲ್ಲಿದೆ. ಸರ್ಪಮಲ್ಲಿಕ ಎಂಬುವವನು ಇದನ್ನು ಗೆದ್ದು ಅಂಕೋಲೆಯ ವರೆಗಿನ ಪ್ರದೇಶವನ್ನು‌ ಆಳಿದನು ಎಂಬ ದಂತ ಕಥೆಯಿದೆ. ಅವನು ಇದಕ್ಕೆ ಮೇರಿಜಾನ್ ಎಂದ ಹೆಸರಿಟ್ಟನೆಂದು, ಮುಂದೆ‌ ರೂಪಾಂತರ ಹೊಂದಿ ‘ಮಿರ್ಜಾನ್’ ಆಯಿತೆಂದು ಹೇಳಲಾಗುತ್ತಿದೆ. ಪ್ರವಾಸಿ ಇಬ್ನಬಟೂಟರವರು ನವಾಯತ ರಾಜ ಕ್ರಿ.ಶ.1200 ರಲ್ಲಿ ಕಟ್ಟಿರುವು ದಾಗಿ ಹೇಳುತ್ತಾರೆ. ಮತ್ತೊಂದು ವಾದದ ಪ್ರಕಾರ ಈ ಕೋಟೆಯನ್ನು ಬಿಜಾಪುರದ ಸುಲ್ತಾನ ಶರೀಫ್ ಉಲ್ ಮುಲ್ಕ್ ಇದನ್ನು 1608-1640 ರ ಕಾಲದಲ್ಲಿ ಕುಮಟಾ ಪಟ್ಟಣ ರಕ್ಷಣೆ ದೃಷ್ಟಿ ಯಿಂದ ಕಟ್ಟಿದನೆಂದು ಹೇಳುತ್ತಾರೆ. ಹೆಚ್ಚಿನವರ ಪ್ರಕಾರ ಇದು ಗೇರುಸೊಪ್ಪೆ ರಾಣಿ ಚೆನ್ನಭೈರಾದೇವಿ ಕಟ್ಟಿರುವುದು ಎಂಬ ಮಾತು ಸ್ಥಳೀಯ ವಲಯ ದಲ್ಲಿದೆ. ರಾಣಿ ಚೆನ್ನ ಭೈರಾದೇವಿ ವಿಜಯನಗರ ಅರಸರ ಸಾಮಂತ ರಾಣಿಯಾಗಿದ್ದು, ಸುಮಾರು 54 ವರ್ಷಗಳ ಕಾಲ ಈ ಪ್ರಾಂತ್ಯದ ರಾಜ್ಯಭಾರ ಮಾಡಿರುವುದು ವಿಶೇಷ ವಾಗಿದೆ. ಈ ರಾಣಿಯ ಆಳ್ವಿಕೆಯ ಅವಧಿಯಲ್ಲಿ ಇಲ್ಲಿ ವ್ಯಾಪಾರ ವಹಿವಾಟು ತುಂಬ ಜೋರಾಗಿಯೇ ಇತ್ತು.ಈ ಪ್ರದೇಶ ಅಕ್ಕಿ ಮತ್ತು ಕಾಳುಮೆಣಸಿನ ವ್ಯಾಪಾರದ ಪ್ರಮುಖ ಕೇಂದ್ರವಾಗಿತ್ತು.

ಮಿರ್ಜಾನ್ ಕೋಟೆಯ ನಕಾಶೆ ಫಲಕ

ಮಹಾಬಲೇಶ್ವರ ದೇವಸ್ಥಾನ

ಮಹಾಬಲೇಶ್ವರ ದೇವಸ್ಥಾನವು ಶೈವ ಭಕ್ತರಿಗೆ ಅತ್ಯಂತ ಪವಿತ್ರವಾದ ಯತ್ರಾ ಸ್ಥಳವಾಗಿದೆ.ಈ ದೇವಾಲಯದಲ್ಲಿ ಪ್ರತಿಷ್ಟಾಪನೆ ಮಾಡಲಾದ ಆತ್ಮಲಿಂಗ ಸುಮಾರು 6 ಅಡಿ ಎತ್ತರದವಿದೆ.     ಶಿವಲಿಂಗವನ್ನು ನಿತ್ಯವೂ ನೇಮ ನಿಷ್ಠೆಯಿಂದ ಪೂಜಿಸಲಾಗುತ್ತಿದೆ. ಈ ದೇವಸ್ಥಾನದ ಆವರಣದ ಸೌಂದರ್ಯವನ್ನು ವರ್ಣಿಸಲು ಪದಗಳೇ ಸಾಲುವು. ಏಕೆಂದರೆ ಇದು ದ್ರಾವಿಡ ವಾಸ್ತುಶಿಲ್ಪದ ಸೌಂದರ್ಯಕ್ಕೆ ಒಂದು ಶ್ರೇಷ್ಠ ಉದಾಹರಣೆ. ಈ ಪವಿತ್ರ ತಾಣವು ಕಾಶಿಯಷ್ಟೇ ಮಹತ್ವದ್ದಾಗಿದೆ ಎಂದು ಹೇಳಲಾಗುತ್ತದೆ, ಆದ್ದರಿಂದ ಇದನ್ನು ‘ದಕ್ಷಿಣ ಕಾಶಿ’ ಎಂಬ ಬಿರುದನ್ನು ಗಳಿಸಿದೆ.

ಪ್ರಸಿದ್ಧ ಗಣೇಶ ದೇವಸ್ಥಾನ

ಸ್ಪರ್ಶ ದರ್ಶನದ ನಂತರ, ಪ್ರತಿಮೆಯ ಮೇಲೆ ಯಜ್ಞೋಪವೀತ, ಸುದರ್ಶನ ಚಕ್ರದ ಛಾಯೆ, ನಾಗಾಭರಣವನ್ನು ವೀಕ್ಷಿಸಬಹುದು. ಇವೆಲ್ಲವೂ ಶಿವನ ಆತ್ಮಲಿಂಗ ಪ್ರತಿಷ್ಠಾಪನೆಯ ಸಮಯದಲ್ಲಿ ಗಣೇಶನಿಗೆ ಶಿವನ ದರ್ಶನದ ಸಮಯದಲ್ಲಿ ವಿಶೇಷ ಪೂಜೆ ಸಮರ್ಪಿತ.

ದತ್ತ ಮಂದಿರ

ದತ್ತಾತ್ರೇಯ ತಪಸ್ಸು ಮಾಡಿದ ಸ್ಥಳ. ಈಗ ಈ ಸ್ಥಳವನ್ನು ದತ್ತ ಮಂದಿರ ಎಂದು ಕರೆಯಲಾಗು ತ್ತದೆ. ಮಂದಿರದಲ್ಲಿ ನಿತ್ಯ ಪೂಜೆಗಳು ಮತ್ತು ಅಭಿಷೇಕಗಳು, ಭಜನೆಗಳು ನಡೆಯುತ್ತಿವೆ.

ಓಂ ಬೀಚ್

ಗೋಕರ್ಣ ಪಟ್ಟಣದಲ್ಲಿರುವ ಓಂ ಬೀಚ್ ಒಂದು ಅದ್ಭುತವಾದ ಬೀಚ್ ಆಗಿದೆ.‘ಓಂ’ ಚಿಹ್ನೆಯ ಆಕಾರದಲ್ಲಿರುವ ಈ ಬೀಚ್ ಗೆ ಇಂತಹ ಹೆಸರಿ ನಿಂದ ಕರೆಯಲಾಗುತ್ತದೆ. ಇದು ಪ್ರಮುಖವಾಗಿ ಥ್ರಿಲ್-ಅನ್ವೇಷಕರಿಗೆ ಸಾಕಷ್ಟು ಸಾಹಸ ಕ್ರೀಡೆಗಳ ಅವಕಾಶಗಳಿರುತ್ತವೆ.

ಸೂರ್ಯಾಸ್ತದ ಸಮಯದಲ್ಲಿ ಈ ಕಡಲತೀರದ ನೋಟವು ನಿಜಕ್ಕೂ ಮನಸ್ಸಿಗೆ ಉಲ್ಲಾಸವನ್ನು ಉಂಟು ಮಾಡುತ್ತದೆ.ಇಲ್ಲಿ ಸ್ಪೀಡ್‌ಬೋಟ್‌ಗಳು, ಸರ್ಫಿಂಗ್ ಮೋಜಿನ ಜಲಕ್ರೀಡೆಗಳನ್ನು ಬಹಳ ಏಂಜಾಯ್ ಮಾಡಬಹುದು.

ಬಾಡ ಬೀಚ್/ಅಳ್ವೆಕೋಡಿ ಬೀಚ್

ಬಾಡ ಇಲ್ಲಿ ಕಾಂಚಿಕಾಪರಮೇಶ್ವರಿ ದೇವಾಲಯ ಸಮುದ್ರ ತಟದಿಂದ ಎತ್ತರದಲ್ಲಿದೆ. ಪ್ರತಿವರ್ಷ ಮೇ ತಿಂಗಳಲ್ಲಿ ತೇರು ಉತ್ಸವ ಪ್ರಸಿದ್ದ.

ಬಾಡ ಬೀಚ್‌ ಈ ಪ್ರದೇಶದಲ್ಲಿನ ಸ್ವಚ್ಛ ಬೀಚ್‌ ಗಳಲ್ಲಿ ಒಂದಾಗಿದೆ. ಎರಡು ಬದಿಗಳಲ್ಲಿ ಬೆಟ್ಟಗಳು ಮತ್ತು ಮಧ್ಯದಲ್ಲಿ ಕಲ್ಲಿನ ರಚನೆಯಿಂದ ಸುತ್ತು ವರೆದಿರುವ ಈ ಕಡಲತೀರವು ನೆಮ್ಮದಿ ಬಯಸು ವವರಿಗೆ ಪರಿಪೂರ್ಣವಾಗಿದೆ. ಕುಮಟಾದ ಸಮೀಪದಲ್ಲಿರುವ ಅಳ್ವೆಕೋಡಿ ಗ್ರಾಮದಲ್ಲಿ ಅಡಗಿರುವ ಕಡಲತೀರವು ಪ್ರಾಚೀನವಾಗಿದೆ.

ಸಾಣಿಕಟ್ಟಾ

ಇಲ್ಲಿ ಬೃಹತ್ ಪ್ರಮಾಣದಲ್ಲಿ ಉಪ್ಪನ್ನು ತಯಾರಿ ಸುತ್ತಾರೆ.ಕರ್ನಾಟಕದಲ್ಲೇ ಉಪ್ಪು ತಯಾರಿಕೆಯ ಬಹುದೊಡ್ಡ ಕೇಂದ್ರವೆಂದರೆ ತಪ್ಪಾಗಲಾರದು.

ತದಡಿ

ಸಣ್ಣ ಮೀನುಗಾರಿಕಾ ಬಂದರು. ಅಘನಾಶಿನಿ ನದಿಯು ಸಂಗಮಿಸುವ ಈ ಪ್ರದೇಶ ನೋಡಲು‌ ಕಣ್ಣೇರಡು ಸಾಲದು.

ಮೇದಿನಿ ಕೋಟೆ

ಇದು ಸಾಂತಗಲ್ ಆಗ್ನೇಯಕ್ಕೆ ೧೮ ಕಿ.ಮೀ   ದೂರದಲ್ಲಿದೆ. ದಟ್ಟ ಅರಣ್ಯಪ್ರದೇಶದಲ್ಲಿರುವ ಈ ಪ್ರದೇಶದಲ್ಲಿ ಶಿಲಾಶಾಸನಗಳು ಇವೆ ಹಾಗೂ ಹಲವಾರು ಔಷಧೀಯ ಸಸ್ಯಗಳು ಲಭ್ಯವಿವೆ.

ಹನೇಹಳ್ಳಿ ಮಂಕಾಳಮ್ಮ ದೇವಾಲಯ

158 ವರ್ಷಗಳ ಹಿಂದೆಯೇ ಕುಮಟಾ ಹನೇಹಳ್ಳಿ ಯ ಮಂಕಾಳಮ್ಮ ದೇವರ ಬಂಡಿಹಬ್ಬಕ್ಕೆ ಚಿನ್ನದ ಕಳಸವಿತ್ತು ಎಂಬುದಂತೂ ಸತ್ಯ ಸಂಗತಿ.

ಉತ್ತರ ಕನ್ನಡ ಕುಮಟಾ ತಾಲೂಕಿನ ಹನೇಹಳ್ಳಿ ಗ್ರಾಮದ ಶ್ರೀ ಅಮ್ಮನವರ (ಶ್ರೀ ಮಂಕಾಳಮ್ಮ) ಬಂಡಿ ಹಬ್ಬದ ಕಳಸದ ಗಿಂಡಿಯ ಮೇಲೆ ಶಾಸನ ವಿರುವುದು ಪತ್ತೆಯಾಗಿದೆ. ಕಳಸ ಗಿಂಡಿಯ ತಳ ಭಾಗದಲ್ಲಿ ಬರವಣಿಗೆ ಇರುವುದನ್ನು ಕಂಡ ದೇವಸ್ಥಾನದ ವಹಿವಾಟುದಾರರು ಅದನ್ನು ಜಿಲ್ಲೆಯ ಇತಿಹಾಸ ಸಂಶೋಧಕ ಶ್ಯಾಮಸುಂದರ ಗೌಡ ಅಂಕೋಲಾರವರ ಗಮನಕ್ಕೆ ತಂದಿದ್ದಾರೆ.

ಕಳಸಗಿಂಡಿಯಲ್ಲಿರುವ ಬರಹವನ್ನು ಪರಿಶೀಲಿಸಿದ ಗೌಡರು ಇದು ಶಕವರ್ಷ 1788ರಲ್ಲಿ ಬರೆದದ್ದಾ ಗಿದೆ, ಇದನ್ನು ಶಾಸನವೆಂದು ಪರಿಗಣಿಸಬಹುದು ಎಂದಿದ್ದಾರೆ. ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಶ್ಯಾಮಸುಂದರ ಅವರು ಹನೇಹಳ್ಳಿ ಅಮ್ಮನವರ ಬಂಡಿಹಬ್ಬದ ಕಳಸ ಗಿಂಡಿ ತಳಭಾಗ ದಲ್ಲಿ ಐದು ಸಾಲಿನ ಶಾಸನವಿದ್ದು, ಹನೇಹಳ್ಳಿಯ ಲಿದು ದೇವ ಶಕ 1788ರ ಅಕ್ಷಯ ಸಂವತ್ಸರ ಕಾರ್ತಿಕ ಮಾಸದ ಬಹುಳ ಆರು’ ಎಂದು ತೇದಿ  ಯನ್ನು ತಿಳಿಸಿ ಶೇರು ಹತ್ತು’ ಎಂದು ಉಲ್ಲೇಖಿಸು ತ್ತದೆ.

ಅಮ್ಮನವರ ಕಳಸದ ಗಿಂಡಿಯು ಚಿನ್ನದಾಗಿದ್ದು, ಬಹುಶಃ ಶಾಸನೋಕ್ತ ದಿನಾಂಕದಂದು ಅಮ್ಮ ನವರ ಕಳಸಕ್ಕೆ ಚಿನ್ನದ ಗಿಂಡಿಯನ್ನು ಮಾಡಿಸಿ ಅರ್ಪಿಸಿರಬೇಕು. ಶಾಸನದ ಕೊನೆಯಲ್ಲಿ ಶೇರು 10 ಎಂದು ಬರೆಯಲಾಗಿದೆ. ಒಂದು ಶೇರು ಅಥವಾ ಸೇರು ಅಂದರೆ ಅದು ನಮ್ಮ ಸಿದ್ದೆ ಅನ್ನುವ ಸ್ಥಳಿಯ ಅಳತೆ ಮಾಪನಕ್ಕೆ ಸಮ.   ಪ್ರಸ್ತುತ ಹನೇಹಳ್ಳಿಯ ಅಮ್ಮನವರ ಕಳಸದ ಗಿಂಡಿಯಲ್ಲಿ ಹತ್ತು ಸಿದ್ದೆ ಅಕ್ಕಿ ಹಿಡಿಯುತ್ತದೆ. ಅಂದಾಗ ಶಾಸನೋಕ್ತ ಶೇರು 10 ಅನ್ನುವುದು ಕಳಸದ ಗಿಂಡಿಯ ಸಾಮರ್ಥ್ಯ ಎನ್ನುವುದು ಸ್ಪಷ್ಟ ವಾಗುತ್ತದೆ.

ಶಕವರ್ಷ 1788 ಎಂಬುದು ಕ್ರಿಸ್ತ.ಶಕ 1866ಕ್ಕೆ ಸಮವಾಗುತ್ತದೆ. ಇಂದಿಗೆ (2024ಕ್ಕೆ) 158 ವರ್ಷ ಗಳ ಹಿಂದೆಯೇ ಹನೇಹಳ್ಳಿಯ ಶ್ರೀ ಮಂಕಾಳಮ್ಮ ದೇವರ ಬಂಡಿ ಹಬ್ಬಕ್ಕೆ ಚಿನ್ನದಿಂದ ಕಳಸದ ಗಿಂಡಿ ಯನ್ನು ಮಾಡಿದ್ದರು ಎನ್ನುವುದು ಈ ಶಾಸನದಿಂದ ದೃಢವಾಗುತ್ತದೆ ಎಂದು ವಿವರಿಸಿದರು.

ಸದಾಶಿವ ಧೋಂಡು ಗಾವಡಿ ಹಾಗೂ ರಾಘೋಬಾ ಸಗುಣ ಗಾವಡಿ ಎನ್ನುವವರು ಶ್ರೀಗಳ ಅಪ್ಪಣೆಯಂತೆ ಕಟ್ಟಡ ಕೆಲಸ ನಿರ್ವಹಿಸಿ ಕೊಟ್ಟರು ಅನ್ನುವ ಮಾಹಿತಿ ದೊರೆಯುತ್ತದೆ. ಹನೇಹಳ್ಳಿಯ ಕಳಸದ ಗಿಂಡಿಯ ಶಾಸನ ಮತ್ತು ಅಂಕೋಲೆಯ ಕಳಸ ದೇವಸ್ಥಾನದ ಶಾಸನಗಳು ಬಹುತೇಕ ಒಂದೇ ಅವಧಿಯವು. ಇವುಗಳ ನಡುವೆ ಕೇವಲ ಹತ್ತು ವರ್ಷಗಳ ಅಂತರವಿದೆ. ಕ್ರಿ.ಶ. 1877ರ ಜನವರಿಯಿಂದ ಮೇ ತಿಂಗಳವರೆಗೆ ಅಂಕೋಲೆಯ ಕಳಸ ದೇವಸ್ಥಾನದ ಕಟ್ಟಡ ಕೆಲಸ ನಡೆದಿತ್ತು ಅನ್ನುವ ಸಂಗತಿಗಳನ್ನು ತಿಳಿಸಿದರು.

ಹನೇಹಳ್ಳಿ ಕಳಸದ ಗಿಂಡಿಯ ಶಾಸನ ಪಾಠ:

  1. ಶ್ರೀ ಹನೇಹಳಿ ಲಿ
  2. ದು ದೇವ ಶಖೆ
  3. 1788 ನೇ ಅಕ್ಷಯ
  4. ಸಂ | ಕಾ ಮಾಶದ ಬ 6
  5. ಶೇರು 10
    ಹನೇಹಳಿ=ಹನೇಹಳ್ಳಿ, ಶಖೆ=ಶಕವರ್ಷ, ಸಂ=ಸಂವತ್ಸರ, ಕಾ=ಕಾರ್ತಿಕ, ಮಾಶದ=ಮಾಸದ, ಬ=ಬಹುಳ,
    ಶಕವರ್ಷ 1788= ಕ್ರಿ.ಶ. 1866, ಶೇರು 10= ಹತ್ತು ಸಿದ್ಧೆ

(ಮಾಹಿತಿ ಶ್ಯಾಮಸುಂದರ್ ಗೌಡ ಅಂಕೋಲಾ.)

ಮುಂಬೈ ಮತ್ತು ಮಂಗಳೂರು ನಡುವೆ ಸಾಗುವ ಕೊಂಕಣ ರೈಲು ಮಾರ್ಗದ ಪ್ರಮುಖ ನಿಲ್ದಾಣಗಳಲ್ಲಿ ಕುಮಟಾವು ಒಂದಾಗಿದೆ.

ಒಟ್ಟಾರೆ ಹೇಳುವುದಾದರೆ,ಉತ್ತರ ಕನ್ನಡ ಜಿಲ್ಲೆಯ ಪ್ರತಿಯೊಂದು ತಾಲೂಕುಗಳು ತಮ್ಮದೇ ಆದ ವೈಶಿಷ್ಟ್ಯಗಳನ್ನು ಹೊಂದಿದ್ದು.. ಅವುಗಳ‌ ಒಂದು ಅವಲೋಕನ ಮಾಡಿದಷ್ಟೂ ಕಡಿಮೆಯೇ,  ಕಾರಣ ಎಲ್ಲ ತಾಲೂಕಿನ ಎಲ್ಲ ವಿಶೇಷತೆಗಳನ್ನು ಐತಿಹಾಸಿಕ ದೃಷ್ಟಿಕೋನದಿಂದ ನೋಡುವ ತಾಳ್ಮೆ ಎಲ್ಲಿದೆ? ಬೆಳಿಗ್ಗೆ ಹೊರಟರೆ ಸಂಜೆ ಮನೆಯನ್ನು ಸೇರಬೇಕು. ನೀರಿದ್ದರೆ ಮುಗಿತು…ಮಕ್ಕಳನ್ನು ಯಾಕೆ ದೊಡ್ಡವರನ್ನು ನೀರಿನಿಂದ ಹೊರತರಲು ಆಗದಿದ್ದಾಗ.. ಇನ್ನೂ ಸಮುದ್ರದ ನೀರಿನಲ್ಲಿ ಆಟ ವಾಡಲು ಯಾರು ತಾನೆ ಹಿಂದೆ ಬೀಳುತ್ತಾರೆ? ನಿಮಗೆಲ್ಲ‌ ಗೊತ್ತಿರೋ ವಿಷಯವೇ.. ಅದರೊಟ್ಟಿಗೆ ನಮ್ಮೂರ ಬಗ್ಗೆಯೂ ಸ್ವಲ್ಪ ಗೊತ್ತಿದ್ದಷ್ಟು ಇನ್ನು ಖುಷಿ…ನಮ್ಮ ಜಿಲ್ಲೆಯ ಬಗ್ಗೆ ಈ ನಿಟ್ಟಿನಲ್ಲಿ ನಾವು ಗಳು ಅಧ್ಯಯನಶೀಲರಾದಷ್ಟು ಒಳಿತು. ನಮ್ಮ ಜಿಲ್ಲೆ ಸರ್ವ ಜನಾಂಗದ ಶಾಂತಿಯ ತೋಟ ಎಂಬುದನ್ನು ಪುನಃ ಉಚ್ಚರಿಸುವೆ…

✍️ಶ್ರೀಮತಿ ಶಿವಲೀಲಾ ಹುಣಸಗಿ
ಯಲ್ಲಾಪೂರ