ಹೂಮುಡಿದ ತೇರು
ಬಾಳಿನ ಇಳಿಸಂಜೆಯಲಿ
ನಮ್ಮ
ಬೆಳಗಿನ ನೆನಪು ಮಾಡಿದೆ
ಇದೇ
ನಾವು ನೋಡಿದ
ಮದುವೆಯ ಮೊದಲ ತೇರೋ
ಎನಿಸಿದೆ!
ಕೆನ್ನೆಯ ಅರಿಶಿನವಿನ್ನೂ
ಹಸಿರು
ಇಂದಿನ ನಮ್ಮ ನೆನಪಿನಂತೆ…
“ಅದು ಹೇಗೆ
ನೀನು ಹಾಗೆ ಹೊಳೆಯುತ್ತಿ..?!”
ಅಂದಾಗ
ನಿನ್ನ ಕಣ್ಣಲ್ಲಿ ಮೂಡಿದ
ಮತ್ತೊಂದು ಮಿಂಚಿಗೆ
ಕಣ್ಣರಳಿಸಿದ್ದೆ ನಾನು!
ಬಿಡದೇ ನಾನು
ನಿನ್ನ ಕೈ ಹಿಡಿದು ನಡೆದ
ಓಣಿ ಇದೇ ಅಲ್ಲವೇ?!
ನಮ್ಮ ಹೆಜ್ಜೆಯ
ಗುರುತುಗಳಿನ್ನೂ ನಮ್ಮ ಗುರುತಿದೆ
ಐಸ್ ಕ್ಯಾಂಡಿ ತಿಂದು
ಕೈ ಬಾಯಿ
ಅಂಟು ಮಾಡಿಕೊಂಡು
ನೀರರಸಿ ಬಂದು ಕೂತ
ಮಂಟಪದ ಜಾಗ
ಇದೇ ಅಲ್ವಾ..!
ಬಾ..ನಮ್ಮ ಕೆತ್ತನೆಯ
ಅಕ್ಷರಗಳ ಹುಡುಕೋಣ..
ಬಾಳೆಹಣ್ಣನ್ನು ತೇರಿಗೆಸೆದು
ದವನವನ್ನು
ಯಾರಿಗೂ ಕಾಣದಂತೆ
ನಿನಗೆ ಮುಡಿಸಿದ್ದು
ನೆನಪಿದೆಯಾ?!
ನನಗೀಗಲೂ ಅದನ್ನು
ತೇರಿಗೆಸೆಯುವ ಇರಾದೆಯಿಲ್ಲ!
ಜಾತ್ರೆಯಲ್ಲಿ ತೊಡಿಸಿದ
ಆ ಹಸಿರು ಬಳೆಗಳೇ ಅಲ್ವಾ
ನಮ್ಮ ಬಾಳನ್ನು
ಹಸಿರಾಗಿಸಿದ್ದು…
ತೊಡಿಸುವಾಗ ಆದ
ಗಾಯಕ್ಕಿಟ್ಟ ಮುತ್ತು
ಆ ಕೆಂಪನ್ನು
ಕೆನ್ನೆಗೆ ರವಾನಿಸಿದ್ದು ಮಾತ್ರ ಸೋಜಿಗ!
ಮರುವರ್ಷ
ನಾನೊಬ್ಬನೇ ಬಂದು
ಒಂಟಿಯಾಗಿ ತಿರುಗಾಡಿ
ಬಳೆಗಳೊಂದಿಗೆ ಗಿಲಕಿಯ ಕೊಂಡದ್ದು
ಒಂಟಿಯಲ್ಲೂ ಕುಣಿಸಿತ್ತು ನನ್ನ!
ನೀನಲ್ಲಿ ನಗಿಸಿರಬೇಕು ಮಗನನ್ನ
ಬೆಂಡು ಬತ್ತಾಸಿಗೆ ಇಲ್ಲಿ
ಸಿಹಿ ಹೆಚ್ಚಾಗಿತ್ತು
ಹೆಗಲಮೇಲೆ ಮಗನ ಹೊತ್ತು
ಜಾತ್ರೆಯೊಳಗೆ ಒಂದು ಸುತ್ತು
ಅವನ ಹಠವೂ ಎಂಥಾ ಹಿತ
ಬಣ್ಣದ ಕನ್ನಡಕ ಕಣ್ಣಿಗೆ
ತುತ್ತೂರಿ ಬಾಯಿಗೆ
ಅವನೇ ತೇರಿನ ರಾಯಭಾರಿ
ನಾನವನ ಕಾರ್ಯಭಾರಿ
ಇಬ್ಬರು ಮೂವರಾಗಿ
ನಾಲ್ವರಾಗಿ ಐವರಾಗಿ
ಬದುಕು ಕಾಲದಲ್ಲಿ ಕರಗಿ
ಮೊಮ್ಮಕ್ಕಳಿಗೆ ಕೊಂಡುಕೊಂಡ
ಬಣ್ಣದ ಆಟಿಕೆಗಳು ‘ಶೋ ಕೇಸ್’ ಸೇರಿ
ನೋಡಿಲ್ಲಿ, ಮತ್ತೀಗ
ನಿನಗೆ ನಾನು; ನನಗೆ ನೀನು..
ಕಾಲ ಮುಂದಕ್ಕೆ ನಾವು ಹಿಂದಕ್ಕೆ!
ನನ್ನ ಕಣ್ಣಿಗೆ ಕನ್ನಡಕ
ಹಸಿರು ಬಳೆ
ನಿನ್ನ ನಡುಗುವ ಕೈಗಳಿಗೆ
ಬಾಳೆ ಹಣ್ಣು ತೇರಿಗೆ
ದವನ ನಿನ್ನ ನೆರೆಮುಡಿಗೆ
ಮಾಯದ ನೆನಪು
ಆ ಮಾದ ಗಾಯದ ಗುರುತಿಗೆ!
ತೇರಿನ ರಂಗು ಬಾನಿಗೆ
ಉಸಿರು ಕಳೆದು
ಒಡೆದ ಕನಸುಗಳು ದಾರಿಗೆ
ಹಾದಿ ಮುಗಿಸಿ ಹೋಗಬೇಕು
ನಾವು ನಮ್ಮ ಮನೆಗೆ
ಉತ್ಸವ ಮೂರ್ತಿ ಸೇರಿದಂತೆ
ಗರ್ಭಗುಡಿಯ ಒಳಗೆ

✍️ ಸೌಮ್ಯ ದಯಾನಂದ
ಡಾವಣಗೆರೆ

👌👏👏👏
LikeLike