ಕವಿಭಾವಕೆ ನಿಲುಕದ
ಅಚ್ಚ ಹಸಿರಿನ ಪರಿಸರಕೆ
ಹರಿವ ನದಿ-ತೊರೆಗಳಿಗೆ
ಹೆಣ್ಣೆಂದು ಹೆಸರಿಟ್ಟವರಾರೋ?

ಮೈ ಸುಡುವ ಉರಿ ಬಿಸಿಲಿಗೆ
ಚಳಿ ಮಳೆ ಗಾಳಿಗೆ
ತನ್ನ ಸೆರಗೊಡ್ಡಿ ತಂಪೆರೆದು
ಎದೆಹಾಲ ಕುಡಿಸಿ ಸಲುಹಿದವರಾರೋ?

ಮುಂಜಾನೆಯ ಮಂಜಿನಲಿ
ಮನದ ಮನೆಯ ಮುಂದೆ
ಚಿಕ್ಕ ಚಿಕ್ಕ ಚುಕ್ಕೆ ಸೇರಿಸಿ
ಚೊಕ್ಕದಾದ ರಂಗೋಲಿಯ ಬಿಡಿಸಿದವರಾರೋ?

ಕಿರಿದಾದ ಬದುಕಿನೊಳಗೆ
ಗಿರಿಯೆತ್ತರದ ಪ್ರೀತಿ ಮೂಡಿಸಿ
ಸ್ನೇಹಜೀವಿಯಾಗಿ
ಜೀವನೋತ್ಸಾಹವ ತುಂಬಿದವರಾರೋ?

ಹೆತ್ತು,ಹೊತ್ತು ತುತ್ತಿಡುವ ತಾಯಾಗಿ;
ಅಕ್ಕರೆಯ ಅನುಬಂಧಕೆ ಅಕ್ಕ- ತಂಗಿಯಾಗಿ
ಮಡಿಲ ಮಗವೊಂದು ಹೂವಾಗಿ
ಸುಖ ದು:ಖದಲಿ ಬೆರೆವ ಸಹಧರ್ಮಿಣೀಯಾಗಿ..
ಇರಬೇಕು ಹೆಣ್ಣೊಂದು ಬದುಕಿಗೆ!

ಹೆಣ್ಣಿಂದರೆ ಬದುಕು; ಹೆಣ್ಣಿಂದರೆ ಬೆಳಕು

✍️ವಿಶ್ವಾರಾಧ್ಯಪ್ರಿಯ.
(ಚನ್ನಬಸಪ್ಪ ಚೌಗಲಾ)
ಹುಬ್ಬಳ್ಳಿ