ಮುಂಜಾನೆಯ ಮಬ್ಬ ಬೆಳಕಿಗೆ
ಇಬ್ಬನಿಯ ಸ್ನೇಹದ ತವಕ
ಮೂಡಣದಿ ನೇಸರನ ಇಣುಕಿಗೆ
ತಳಿರು ಕುಸುಮಗಳ ಮೈಯೊಡ್ಡು ಬಯಕೆ
ಜೇಡರ ಬಲೆಯ ಸುರುಳಿ ಸರಕೆ
ಮುತ್ತಿನಹಾರ ಮಂಜಲ್ಲಿ ಪೋಣಿಸಿದೆ
ಭೃಂಗ ಹೂವಿನ ಮಕರಂದ ಮೇಯ್ದು
ಮೇಲಕ್ಕೆ ಹಾರಿ ತಪ್ಪಿಸಿದೆ ದಾರಿ
ಕೆರೆಯ ದಂಡೆಯ ಕರಲಿನ ಹುದಲಲ್ಲಿ
ಸಣ್ಣಹೆಜ್ಜೆಗಳ ರಂಗೋಲಿ ಮೂಡಿ
ಏಣಿಕಾಲಿನ ಬೆಳ್ಳಕ್ಕಿ ಹಿಂಡು
ಬೇಟೆಗೆ ಹವಣಿಸಿ ಕಾದು ನಿಂತಿದೆ
ಗಿಳಿಗುಬ್ಬಿ ಜೋಳದ ತೆನೆತೆನೆಗೆ
ಜೋತುಬಿದ್ದು ಆಡುತಿವೆ ಜೋಕಾಲಿ
ಮಂಚದ ಬಗಲಾನ ಬೆದರಕಕಂಜಿ
ಬೆದರಿ ಹಾರ್ಯಾವ ಚಿಂವಗೂಡಿ ಬಾನಿಗೆ
ಪಡುವಗಾಳಿಗೆ ಪೈರು ಚಾಮರಬಿಸಿ
ಸಾಂವಿಹಕ್ಕಲದಾನ ನವಿಲು ಅಂಜಿ ಮುಖವೆತ್ತಿ
ಗೂಟಗೂಟಕ ಕಟ್ಟಿದ ಕಾಂತಟೇಪುವಿನ ಸುರುಳಿಗೆ
ಸ್ವರಹೊಮ್ಮಿ ಜಿಂಕೆ ಹಿಂಡು ಬೆದರಿದೆ
ಪಡುವಣದ ಕಾರ್ಮೋಡ ಜಂಗುಳಿ
ಒಟ್ಟುಗೂಡುತಿವೆ ಭೂತಾಯಿ ಅಭಿಷೇಕಕೆ
ಮೂಡಣದ ನೇಸರನ ಮುತ್ತಿಗೆ ಹಾಕಲು
ಸಂಚು ಮಾಡಿ ಓಡುತಿವೆ ಪಂಕ್ತಿ ಪಂಕ್ತಿ
✍️ ಮೈಲಾರಲಿಂಗ ದ್ಯಾ.ಕಬ್ಬೂರ
ಗಳಿಗಿ ಹುಲಕೊಪ್ಪ
ತಾ: ಕಲಘಟಗಿ ಜಿ:ಧಾರವಾಡ

ಉತ್ತಮವಾಗಿದೆ ಸರ್
LikeLiked by 1 person
ಸೊಗಸಾಗಿದೆ
LikeLike