ಕಲ್ಯಾಣ ಚಾಲುಕ್ಯರ ದೇವಾಲಯಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿ ಹರಡಿವೆ. ಇವುಗಳಲ್ಲಿ ಹಲವು ದೇವಾಲಯಗಳು ನೂತನ ವಿಜಯನಗರ ಜಿಲ್ಲೆಯಲ್ಲೂ ಕಾಣಬಹುದು.ಹಲವು ದೇವಾಲಯ ಗಳು ಅಲ್ಲಿನ ಬಸವಣ್ಣನ ಶಿಲ್ಪದಿಂದ ಪ್ರಸಿದ್ಧಿ ಪಡೆದಿದ್ದು ಅವುಗಳಲ್ಲಿ ಹೂವಿನಹಡಗಲಿ ತಾಲ್ಲೂಕಿನ ಕುರುವತ್ತಿಯ ಮಲ್ಲಿಕಾರ್ಜುನ ದೇವಾಲವೂ ಒಂದು.

ಇತಿಹಾಸ ಪುಟದಲ್ಲಿ ಕುರುವತ್ತಿ ಪ್ರಮುಖ ಅಗ್ರಹಾರ ವಾಗಿತ್ತು. ಇಲ್ಲಿನ ಶಾಸನವೊಂದು ಅಗ್ರಹಾರವನ್ನು ಬಣ್ಣಿಸುತ್ತದೆ. ಇಲ್ಲಿನ 1099 ರ ಶಾಸನದಲ್ಲಿ ಲಕಳೀಶ್ವರ ಪಂಡಿತರ ಸಮ್ಮುಖದಲ್ಲಿ ಅಭಿನವ ಸೋಮೇಶ್ವರ ದೇವಾಲಯದ ದತ್ತಿ ನೀಡಿದ ಉಲ್ಲೇಖ ನೋಡಬಹುದು. ಆ ಸಮಯ ದಲ್ಲಿ ಈ ಗ್ರಾಮ ಸುರೇಶ್ವರ ಪಂಡಿತರ ಬೆಣ್ಣೆವೂರು 12 ಕ್ಕೆ ಸೇರಿತ್ತು. ಹಾಗಾಗಿ ಲಕುಳೀಶ ಪಂಡಿತರು ಇಲ್ಲಿ ನೆಲೆಸಿದ ಬಗ್ಗೆ ಕುರುಹು ಸಿಗುತ್ತದೆ, ಇನ್ನು ಕಲ್ಯಾಣ ಚಾಲುಕ್ಯರು–ಹೊಯ್ಸಳರು,ಯಾದವರು ಹಾಗು ಪಾಂಡ್ಯರು ಇಲ್ಲಿ ಆಳ್ವಿಕೆ ನೆಡೆಸಿದ ಉಲ್ಲೇಖ ವಿದೆ. ಇನ್ನು 1181 ರಲ್ಲಿ ಹಿರಿಯ ವಿಕ್ರಮಾದಿತ್ಯ ಇಲ್ಲಿನ ಅಹವಮಲ್ಲೇಶ್ವರ ದೇವರ ಸೇವೆಗೆ ದತ್ತಿ ನೀಡಿದ್ದರೆ, 1195 ರಲ್ಲಿ ಎರಡನೆಯ ವಿಕ್ರಾದಿತ್ಯನ ಅಳಿಯನಾದ ಬಲ್ಲಾಳ ಭೂಪನು ದೇವರ ಸೇವೆಗೆ ದತ್ತಿ ನೀಡಿದ ಉಲ್ಲೇಖವಿದೆ. ಹೊಯ್ಸಳರ ವೀರ ಬಲ್ಲಾಳದೇವ ಅಹವಮಲ್ಲೇಶ್ವರ ದೇವಾಲಯದ ದುರಸ್ತಿಗೆ ದತ್ತಿ ನೀಡಿದ ಉಲ್ಲೇಖವಿದೆ.  ಇನ್ನು  1194, 1197 ಹಾಗು 1205 ರಲ್ಲಿ ದತ್ತಿ ನೀಡಿದ ಶಾಸನಗಳಿವೆ. ಉಳಿದ ಶಾಸನಗಳು ಇಲ್ಲಿನ ಶಂಕರದೇವ, ಸೂರ್ಯನಾರಾಯಣ ದೇವಾಲಯ (1209), ವೇಣುಗೋಪಾಲ ದೇವಾಲಯ (1215) ಕ್ಕೆ ಸಂಭಂದಿಸಿದೆ.

ಮಲ್ಲಿಕಾರ್ಜುನ ದೇವಾಲಯ

ಮಲ್ಲಿಕಾರ್ಜುನ ದೇವಾಲಯ ಸುಮಾರು 12 ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಾಣಗೊಂಡಿದ್ದು ಗರ್ಭಗುಡಿ, ಅಂತರಾಳ, ನವರಂಗ ಹಾಗು ಪ್ರತ್ಯೇಕ ನಂದಿ ಮಂಟಪವನ್ನು ಹೊಂದಿದೆ. ಗರ್ಭಗುಡಿಯಲ್ಲಿ ಮಲ್ಲಿಕಾರ್ಜುನ ಎಂದು ಕರೆಯುವ ಶಿವಲಿಂಗವಿದೆ. ಈ ದೇವಾಲಯವನ್ನು 1190 ರಲ್ಲಿ ಅಹವಮಲ್ಲ ನಿರ್ಮಿಸಿದ ಕಾರಣ ಶಾಸನಗಳಲ್ಲಿ “ಅಹವ ಮಲ್ಲೇಶ್ವರ ದೇವಾಲಯ“ಎಂದೇ    ಕರೆಯಲಾಗಿೆದೆ. ನವರಂಗಕ್ಕೆ ಮೂರು ದಿಕ್ಕಿನಿಂದ ಪ್ರವೇಶದ್ವಾರವಿದೆ. ಗರ್ಭಗುಡಿಯ ಬಾಗಿಲುವಾಡ ಅತ್ಯಂತ ಸುಂದರವಾಗಿದ್ದು ಪಂಚಶಾಖೆಯಿಂದ ಅಲಂಕೄತಗೊಂಡಿದ್ದು ಲಲಾಟದಲ್ಲಿ ಗಜಲಕ್ಶ್ಮೀ ಕೆತ್ತೆನೆ ಇದೆ.

ಅಂತರಾಳದಲ್ಲಿ ಹಲವು ಶಿಲ್ಪಗಳಿದ್ದು, ಇಲ್ಲಿ ರಾಜ ರಾಣಿಯರ ಶಿಲ್ಪ ಅಹವಮಲ್ಲ ಹಾಗು ಆತನ ರಾಣಿಯ ಶಿಲ್ಪವಿರಬಹುದು. ಇನ್ನು ಅಂತರಾಳ ದಲ್ಲಿನ ಮಕರ ತೋರಣದ ಭಾಗ ಚಾಲುಕ್ಯರ ಕೆತ್ತೆನೆಯ ವೈಭವದ ಕುರುಹು. ಇಲ್ಲಿ ಮಧ್ಯದಲ್ಲಿ ಬ್ರಹ್ಮ, ವಿಷ್ಣು ಹಾಗು ಮಹೇಶ್ವರರ ಶಿಲ್ಪ ಮಕರದ ಸುತ್ತಲೂ ಸೂಕ್ಷ್ಮ ಕೆತ್ತೆನೆಗಳಿಂದ ಅವರಿಸಿದೆ.   ಇನ್ನು ನವರಂಗದಲ್ಲಿ ಕಂಭಗಳು ಸುಂದರವಾಗಿ ಅಲಂಕೃತಗೊಂಡಿದೆ.ಇನ್ನು ಇಲ್ಲಿ ವೀರಭದ್ರ ಹಾಗು ಗಣಪತಿಯರ ಶಿಲ್ಪವಿದೆ. ಪಕ್ಕದಲ್ಲಿನ ಸೂರ್ಯ ಅಧ್ಬುತವಾಗಿದ್ದು ಏಳು ಹೆಡೆಗಳಿಂದ ಕೂಡಿದ್ದು, ಇಲ್ಲಿನ ಸೂರ್ಯ ದೇವಾಲಯದ ವೈಭವದ ಕುರುಹಾಗಿ ಉಳಿದಿದೆ. ಇನ್ನು ಇಲ್ಲಿ ಚಾಲುಕ್ಯ ದೊರೆ ಶ್ರೀ ಸೋಮೇಶ್ವರನ ಹಾಗು ಆತನ ನಾಲ್ಕು ಪತ್ನಿಯರ (ಬಾಚಲದೇವಿ, ಚಂದ್ರಲಾ ದೇವಿ, ಮೈಳಲಾದೇವಿ ಹಾಗು ಕೇತಲಾದೇವಿ) ಸುಂದರ ವಿಗ್ರಹವಿದೆ. ನದಿಯಲ್ಲಿ ಸಿಕ್ಕ ಶಿಲ್ಪವನ್ನು ಇರಿಸಲಾಗಿದೆ. ತನ್ನ ಕೌಟಂಬಿಕ ಸಮಸ್ಯೆ ಹಾಗು ಗಂಭಿರ ಖಾಯಿಲೆಯಿಂದ ಇಲ್ಲಿ ದೇವರಿಗೆ ನಮಿಸಿ ತುಂಗಭದ್ರ ನದಿಯಲ್ಲಿ ಅತ್ಮಾರ್ಪಣೆ ಮಾಡಿ ಕೊಳ್ಳುತ್ತಾನೆ. ಈತನ ಶಿಲ್ಪವೂ ಅವನಂತೆ ನದಿಯ ಪಾಲಾಗಿದ್ದು  ವಿಪರ್ಯಾಸವೇ ಸರಿ.

ಇಲ್ಲಿನ ಪೂರ್ವದ್ವಾರ ಸಪ್ತಶಾಖೆಯಿಂದ ಕಲಾತ್ಮಕ ವಾಗಿ ಅಲಂಕೄತಗೊಂಡಿದ್ದು ಕಂಭಗಳ ಮೇಲೆ ಸುಂದರವಾದ ಮದನಿಕೆಯರ ವಿಗ್ರಹದ ಕೆತ್ತೆನೆ ಇದೆ. ಈ ಮದನಿಕೆಯರ ಶಿಲ್ಪಗಳೇ ನಂತರ ಹೊಯ್ಸಳರಿಗೆ ಪ್ರೇರಣೆಯಾಗಿದ್ದು, ಬೇಲೂರಿನಲ್ಲಿ ನೋಡಬಹುದು. ಇನ್ನು ಇದರ ಎದುರಲ್ಲಿ ಶಿವನಿಗೆ ಎದುರಾಗಿ ನಂದಿ ಮಂಟಪವಿದ್ದು, ಇಲ್ಲಿ ಕುಳಿತ ಭಂಗಿಯಲ್ಲಿನ ಬೄಹತ್ ನಂದಿ ಇದೆ. ನಂದಿ ಯಲ್ಲಿನ  ಘಂಟಾಸರ ಹಣೆಯ ಮೇಲಿನ ಕೆತ್ತೆನೆ ಇದ್ದು, ಕುರುವತ್ತಿ ಬಸವೇಶ್ವರ ಎಂದೇ ಪ್ರಸಿದ್ದಿ ಯಾಗಿದೆ. ಹಲವು ಕುಟಂಬಕ್ಕೆ ಮನೆದೇವರಾದ ಈ ಬಸವೇಶ್ವರನ ನೋಡಲು ಬಹಳ ಜನ ಭಕ್ತರು ಬರುತ್ತಾರೆ.

ಇಲ್ಲಿ ಫೆಬ್ರವರಿ – ಮಾರ್ಚನಲ್ಲಿ ಮಲ್ಲಿಕಾರ್ಜುನ ದೇವರಿಗೆ ರಥೋತ್ಸವ ನಡೆಯಲಿದ್ದು, ಕಾರ್ತೀಕ ಮಾಸದಲ್ಲಿ ಬಸವಣ್ಣನಿಗೆ ದೀಪೋತ್ಸವ ಹಾಗು ನಿತ್ಯ ತ್ರಿಕಾಲ ಪೂಜೆ ನಡೆಯಲಿದ್ದು, ಸೋಮವಾರ ವಿಶೇಷ ಪೂಜೆ ನಡೆಯಲಿದೆ.

ತಲುಪುವ ಬಗ್ಗೆ : ಕುರುವತ್ತಿ ಪ್ರಸಿದ್ದ ಮೈಲಾರ ದಿಂದ ಸುಮಾರು ಕುರುವತ್ತಿಯಿಂದ ಸುಮಾರು ನಾಲ್ಕು ಕಿ.ಮೀ ದೂರದಲ್ಲಿದ್ದು ಹಾವೇರಿಯಿಂದ 39 ಕಿ ಮೀ, ರಾಣಿಬೆನ್ನೂರಿನಿಂದ 35 ಕಿ.ಮೀ ಹಾಗು ಹರಿಹರದಿಂದ ಸುಮಾರು 44 ಕಿ.ಮೀ ದೂರದಲ್ಲಿದೆ.

✍️ಶ್ರೀನಿವಾಸ ಮೂರ್ತಿ ಎನ್. ಎಸ್.
ಬೆಂಗಳೂರು