ಬಾ .., ಓದುಗ..,
ಮೊದಲು ನನ್ನನ್ನೇ ಓದು
ಗೊತ್ತಿಲ್ಲವೆ ನಿನಗೆ
ನಾನೊಂದು ಪುಸ್ತಕ
ಮತ್ತೂ …,
ಹೇಳುವೆ
ಗುಟ್ಟೇನಿದೆ
ನಾನೊಂದು
ತೆರೆದ ಪುಸ್ತಕ
ಕತ್ತಲಿನಷ್ಟೇ ನಿಗೂಢ
ಬಯಲಿನಷ್ಟೇ ಸತ್ಯ
ನಾನೊಂದು ಪುಸ್ತಕ
ಕಣ್ಣಾಡಿಸಿದರೆ ಹೊಳಪು
ಚಿತ್ತದಲಿ ಚಿತ್ರಗಳು
ನೂರೆಂಟು ಅರ್ಥಗಳು
ನಾನೊಂದು ಅರ್ಥಕೋಶ
ಓದಲೇಬೇಕು ನೀನು
ನಾ ನೊಂದ ಪುಸ್ತಕ
ನೇವರಿಸಿದರೆ
ಹರಕು ಮುರುಕು
ತಾಕಿದರೆ
ನುಣುಪು ಬಿಸುಪು
ನಾನೊಂದು
ಅಕ್ಕರದ ಹಾಳೆ
ಬಾ..,
ಮೊದಲು..
ನನ್ನನ್ನೇ ಓದಬೇಕು
ಧೂಳು ಕೊಡವಿ
ಮುಕ್ತಗೊಳಿಸಬೇಕು
ನಾನೇ ಆ ಪುಸ್ತಕ..!

✍️ಅನಸೂಯ ಜಹಗೀರದಾರ
ಕೊಪ್ಪಳ
