ಸಿಹಿ ನೆನಪುಗಳ ಮೆಲುಕಲಿ
ಕೆದಕಿದ ಕಹಿಯ ಮರೆವಲಿ
ಸಹಿಸಿ ಬದುಕುವ
ಗಹಗಹಿಸುವುದ ಬಿಟ್ಟು
ಹೊಸ ಹುರುಪಿನಲಿ.

ಪ್ರೀತಿ,ನಂಬಿಕೆ,ಭರವಸೆಗಳಲಿ
ಸಂತಸದ ಬುಗ್ಗೆ ಚಿಮ್ಮುತ
ಹೊಂಬೆಳಕ ಆಶಾಕಿರಣ
ಗುರುತರದ ಗುರಿಯೆಡೆಗೆ
ಗುರುತಾಗುವಂತೆ ಸಾಗಲಿ.

ಉರುಳುತಿಹ ದಿನಮಾನ
ನರಳುವಿಕೆಯ ಬದಿಗಿರಿಸಿ
ಹೊಸ ಕನಸುಗಳ ಕಲೆ ಹಾಕಿ
ಹಳೆಯ ಗಾಯಗಳ ಉಪಚರಿಸಿ
ಸ್ವಾಗತಿಸೋಣ ನವ ವರ್ಷವ.

ಹೊಂದಾಣಿಕೆ ಬದುಕಾಗಲಿ
ಸ್ನೇಹ ವಿಶ್ವಾಸ ಮನಗಳ ಅರಳಿಸಿ
ಕೆರಳಿಸುವ ಬಗೆಗಳಿಗೆ
ಧೈರ್ಯದಿ ಎದುರಿಸುತ
ಸಾಧನೆಯೆಡೆಗೆ ಪ್ರತಿ ಪಯಣ.

ಸಿಂಹಾವಲೋಕನದಿ ನಡೆ
ಭ್ರಮೆಯ ಪರಿಧಿ ಕಳಚಿ
ಅನುಕ್ರಮದಿ ಕಾರ್ಯ ಶೀಲದಿ
ತಾರೆಗಳ ಹಿಡಿವ ತವಕದಿ
ಸಮರಸದಿ ಜೀವಯಾನ.

✍️ರೇಷ್ಮಾ ಕಂದಕೂರ
ಶಿಕ್ಷಕಿ, ಸಿಂಧನೂರು