ದ್ಯಾಮ ಬಾಳ ಕಾಳಜಿಯಿಂದ ತುಂಬಾ ಆಕ್ಕರೆ ಯಿಂದ  ಅವನನ್ನು ಅಪ್ಪಿಕೊಂಡ, ಎದೆಯ ಬೆಚ್ಚಗಿನ ಗೂಡಲ್ಲಿ ಪುಟ್ಟ ಗುಬ್ಬಕ್ಕ ನಂಗೆ ಕುಳಿತುಕೊಂಡ, ಕಾವೇರಿಯ ಹಣೆಯ ಮೇಲೆ ಹೂಮುತ್ತಗಳನ್ನಿತ್ತು,  ಮೂರು ದಿನಗಳ ಹಿಂದೆ ನಡೆದ ಜಲಪ್ರವಾಹದ ನೆನಪುಗಳನ್ನು ಮೆಲಕು ಹಾಕತ್ತಿದ್ದಾನೆ.ಆ ನೆನಪುಗಳು ನುಂಗಿದಷ್ಟು ನಂಜೆರಿದಂತೆ ಭಾಸವಾಗುತ್ತಿವೆ.

ದ್ಯಾಮನಿಗೆ ತನ್ನ  ಅಪ್ಪ ಕರಿಸಿದ್ದಪ್ಪನ ಜೊತೆಗೂಡಿ ಹಟ್ಟಿಯಲ್ಲಿಯ  ಶಗಣಿನಾ ಬುಟ್ಟಿಯಲ್ಲಿ ತುಂಬುತ್ತಾ ಲಗೂನ ದಗದಾ ಮುಗಿಸಿ ಬುಗುರಿ ಆಡೋ ತವಕ. ಮೂರಂತಸ್ತಿನ ಮನೆ, ಆರು ಜೋಡೆತ್ತುಗಳ ಕಮತ ಇರೋ ಹೊನ್ನೆಗೌಡರ ಮನೆಯ ಜೀತಕ್ಕೆ ಅಪ್ಪಾ ಕರಿಸಿದ್ದಪ್ಪನೊಂದಿಗೆ ಮಗ ದ್ಯಾಮ ದಿನಾ ಮುಂಜಾನೆ ಹಟ್ಟಿ ಹಸನು ಮಾಡಲು ಬರಲೇಬೇಕು.

ಹೊನ್ನೆಗೌಡನ ಒಬ್ಬಳೆ ಮಗಳು ಬಂಗಾರ ದಂತ ಬಣ್ಣದ ಚೆಲುವಿ ಕಾವೇರಿ.ದಿನಾಲೂ ದ್ಯಾಮನಂತೆ ಅಂಗಳದಲ್ಲಿ ಆಟಾ ಆಡುವ ಕುಣಿದು ಕುಪ್ಪಳಿಸುವ ತವಕ. ಒಳಗೊಳಗೆ ದಿನವು ಏನೋ ತನ್ನಷ್ಟಕ್ಕೇ  ತಾನೇ ಕನಸು ಹೆಣೆದುಕೊಂಡು ಖುಷಿ  ಪಡುವ ಕಾವೇರಿಗೆ ಅಂಗಳದ ಆಟಗಳೆಂದ್ರೆ ಬಲು ಪ್ರೀತಿ. ಅಂತಃಪುರದ ಅರಗಿಣಿ ಅಲ್ವಾ ಕಾವೇರಿ , ಹೀಗಾಗಿ  ಅಂಗಳಕೆ ಬರೋ ಹಾಗಿಲ್ಲ ಗೌಡರ ಮನೆ ಹೆಣ್ಣುಮಕ್ಕಳು ಮುಂಗಟ್ಟಿಗೂ ಬರೋ ಹಾಗಿಲ್ಲ ಅಂತದರಲ್ಲಿ ತುಂಬಾ ಕಾಳಜಿಯಿಂದ ಜತನಮಾಡಿ ಬೆಳೆಸಿದ  ಕಾವೇರಿ ಅಂಗಳಕೆ ಬಂದು ಆಡೋ ಕನಸು ನನಸಾಗಲು ಸಾಧ್ಯವೇ ಇಲ್ಲ. ಬೆಳಕಾಗುತ್ಲೆ ಇವಕ್ಕ ಏನ ಪಿಡಗು ಬರತದೊ ಗೊತ್ತಿಲ್ಲ ಗುಂಮ್ ಅಂತಾ ಬಂದು ಕಾಲ ಮುಕ್ಕರ ತಾವು. ಈ ಬೆವಾರ್ಸಿ ಸೂರ್ಯನಿಗು ಬ್ಯಾರೆ ದಗದಾನ ಇಲ್ಲಾ ಹರಿಯಾಕ್ಲೆ  ಬೆಳಕ ಹರಡಿ ನಮ್ಮನ್ನ ಜೀತದ ಬಾಳೆಕ ದುಡಸಾಕ ಜಲಮಾ ಹಿಂಡತಾನ. ಕರಿಸಿದ್ದಾ ಗ್ವಾತಾ ಬಳಿತಾ ಲೊಚಗುಟ್ಟೊದು ೪೦ ವರ್ಷ ಗಳಿಂದಲೂ ಮಾಮೂಲಿ.ನಾಪೊಕ್ಲು ಹೊನ್ನೆಗೌಡರ ಮನಿಯಾಳು ಇವನ ಗೊಗ್ಗರ ದನಿನೇ ದಿನಾ ಮುಂಜಾನೆಯ ಸುಪ್ರಭಾತ.

ಒಂದು ತಿಂಗಳುಗಳಿಂದಲೂ ಬೋ ರಬಸ ದಿಂದ ಸುರಿತಾ ಇರೊ ಮಳೆಗೆ ನಾಪೊಕ್ಲು ವಿಗೆ ಪ್ರವಾಹದ ಭೀತಿ ಬಂದಿತ್ತು. ಒಂದೆರೆಡು ವಾರಗಳಲ್ಲಿ ಗೌಡರ ಹೊಲಗಳೆಲ್ಲಾ ನೀರಲ್ಲಿ ಮುಳುಗಿದ್ದವು.ನೋಡ ನೋಡತಾ ಪ್ರವಾಹ ಊರನ್ನು ನುಂಗಿತು.

ಧೋ ಧೋ ಸುರಿವ ಮಳೆ, ಜೊತೆಯಲ್ಲಿ ರಭಸದಿಂದ ಹರಿವ ನೀರು, ಒಮ್ಮೆಲೇ ಗೌಡರ ಬಂಗ್ಲೆತಾವ ಹೊಂಡದಂತೆ ಜಮಾಯಿಸಿದ ನೀರು, ಜಲಪ್ರಳಯದ  ಮುನ್ಸುಚನೆ ಕೊಟ್ಟಂತಾಗಿತ್ತು. ಬಹುತೇಕ ಈ ಬಾರಿಯೂ ಅತೀವೃಷ್ಟಿ ಆಗೋದಂತು ಸತ್ಯ ಅಂತಾ ಊರಿನ ಜನ ಭಯಭೀತರಾಗಿ ಸರಕಾರಿ ನಿರಾಶ್ರಿತರ ಟೆಂಟ್ ಸೇರಿದ್ರು.

ಗೌಡರ ಕುಟುಂಬವು ಕೂಡಾ ಮನೆ ಮುಂದಿನ ಹೊಂಡ ದಾಟಲು ಸಣ್ಣ ತೆಪ್ಪದ ಸಹಾಯ ತೊಗೊಂಡು ನಿರಾಶ್ರಿತರ ಶಿಬಿರ ಸೇರಿ ಆಗಿತ್ತು. ಹೊತ್ತು ಹೊಡಮರಳಿತ್ತು ಸೂರ್ಯ ಮಗ್ಗಲು ಹೊರಳಿದ್ದ ಮಬ್ಬುಗತ್ಲೆಲಿ ಕಾವೇರಿ ಮಹಡಿಯ ಮೇಲೆಯೇ ಉಳಿದು ಬಿಟ್ಟಿದ್ದಳು. ಅವಸರದಲ್ಲಿ ಕಾವೇರಿಯ ಕಡೆಗೆ ಯಾರೂ ನೋಡಿರಲಿಲ್ಲ. ಜೋರಾಗಿ ಬೀಸುತ್ತಿದ್ದ ಗಾಳಿಯ ಥಂಡಿ ತಡೆಯದೆ ರಜಾಯಿಹೊದ್ದು ಕಾವೇರಿ ಮಲಗಿದ್ದಳು. ಅವಸರದಲ್ಲಿ ಆ ಮಬ್ಬುಗತ್ತಲೆಯಲ್ಲಿ ಅವಳನ್ನು ಯಾರೂ ಗಮನಿಸಿದೆ ತೆಪ್ಪಹತ್ತಿ ನಿರಾಶ್ರಿತರ  ಟೆಂಟ್ ಸೇರಿದ್ದರು.

ಮುಂಜಾನೆ ಎಚ್ಚರವಾದಾಗ ಗೌಡರು ಪ್ರೀತಿಯ ಮಗಳು ಕಾವೇರಿ ಹೆಂಗ ಅದಾಳ ಅಂತಾ ಗೌಡಶಾನಿ  ಯಶೋಧಮ್ಮನನ್ನು ಕೇಳಿದ್ರು. ಬಹುತೇಕ ಮಗಳು ತಾಯಿಯ ಸೆರಗಿನಲ್ಲಿ ಬೆಚ್ಚಗೆ ಕುಳಿತಿರಬಹುದು ಅಂತಾ ಗೌಡರು ತಿಳಿದಿದ್ರು.ಗೌಡರು ಬಂದು ಕೇಳಿದಾಗಲೇ ಒಮ್ಮೆಲೇ ಗೌಡಶಾನಿಗೆ ಗರ ಬಡಿದಂಗಾತು. ಬಹುತೇಕ ಕಾವೇರಿ ತನ್ನ ಮುದ್ದಿನ ಅಪ್ಪನೊಂದಿಗೆ ಜತನದಿಂದ ಅದಾಳಂತ ಆಕೆ ತಿಳಿದಿದ್ಲು. ಗಾಭರಿಯಿಂದ ಎಲ್ಲಾ ಕಡೆಗೂ  ಹುಡಕಿದ್ರೆ  ಟೆಂಟಿನೊಳಗ ಎಲ್ಲಿಯೂ ಕಾವೇರಿಯಿಲ್ಲ. ಬಹುತೇಕ ಪ್ರವಾಹದಲ್ಲಿ ಕೊಚ್ಚಿ ಹೊಗಿದ್ದಾಳೆಂಬ ಸುದ್ದಿ.

ಇದನ್ನೆಲ್ಲಾ ಗಮನಿಸ್ತಾ ಮೂಲೆಯಲ್ಲಿ ಗದಗದ ನಡಗ್ತಾ ಕುಳಿತಿದ್ದ ದ್ಯಾಮ ಕಾವೇರಿ ಟೆಂಟ್ ನಲ್ಲಿ ಇಲ್ಲಾ ಎಂಬ ಸುದ್ದಿ ಕೇಳಿದವ್ನೆ,  ಹಿಂದ ಮುಂದ ನೋಡದ ಪ್ರವಾಹದ ವಿರುದ್ಧ ತೆಪ್ಪ ತೊಗೊಂಡು ಗೌಡರ ಅಂಗಳಕ ಬಂದಾ. ಕಾವೇರಿ ಮಹಡಿಯ ಮೇಲೆ ಅಳತಾ ನಿಂತಿದ್ಲು, ಬೆಳತನಕ ಹೊಡೆದ ಮಳೆಗೆ ಕುಸಿದು ಬಿಳತಿರೊ ಮನೆ ಮತ್ತು ಗೊಡೆಗಳನ್ನು  ಲೆಕ್ಕಿಸದೆ ಅವಳ ಕೈ ಹಿಡಿದು ತೆಪ್ಪ ಹತ್ತಿಸಿದಾ. ಅತ್ತು ಅತ್ತು ಸುಸ್ತಾಗಿ ತೊಯ್ದು ತಪ್ಪಲದಂತಾಗಿದ್ದ ಕಾವೇರಿ ಜೋರಾಗಿ ಅಳತಾ ಗಡಗಡ ನಡಗತಾ ಸಣ್ಣ ದನಿಯಲ್ಲಿ ದ್ಯಾಮ  ತೆಪ್ಪ ನಿನ್ನ ಹಟ್ಟಿತಾವ ಹೊಡಿ ಅಂದಳು.ದ್ಯಾಮನ ಕಣ್ಣುಗಳು ಮಂಜು ಮಂಜಾದವು ಒಮ್ಮೆಲೇ ಕಾವೇರಿ ಮಾತು ಗರಬಡಿದಂತಾತು ಎಲ್ಲಾ ನಿಶ್ಯಬ್ಧ, ಇಬ್ಬರು ಕಣ್ಣಲ್ಲಿ ಕಣ್ಣಿಟ್ಟು ನೋಡಿದರು.

ಎಲ್ಲಿಯ ಹಟ್ಟಿ, ಎಲ್ಲಿಯ ಗುಡಿಸಲುಗಳು, ಎಲ್ಲಿಯ ಬಂಗ್ಲೆ, ಎಲ್ಲಾ ಪ್ರವಾಹಕ್ಕೆ ಸಿಲುಕಿ ಕೆಲ ಅವಶೇಷಗಳು ಮಾತ್ರ ಕಾಣತಿದ್ವು. ದ್ಯಾಮ ಸ್ವಲ್ಪ  ಧೈರ್ಯ ಮಾಡಕೊಂಡು, ಕಾವೇರಮ್ಮ ನಿಮ್ಮ ಮನೆಯವರು ಮತ್ತು ಊರಿನವರೆಲ್ಲಾ ಸದ್ಯ ಸರಕಾರಿ ನಿರಾಶ್ರಿತರ ಟೆಂಟನಲ್ಲಿದ್ದಾರೆ ನಡಿ ಅಲ್ಲಿಗೇಯೆ ಹೋಗೊಣ, ಬಹುತೇಕ ಎಲ್ಲರೂ ನೀ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದಿ ಅಂತಾ ತಿಳಿದು ಅಳತಾ ಇದಾರೆ. ಬೇಗನೆ ಟೆಂಟ ಸೇರೋಣ ಅಂದಾ ದ್ಯಾಮ.

ದ್ಯಾಮ ನೋಡು ನೀ ಬಾಳ ಒಳ್ಳೆಯವನು ಸಣ್ಣಂದಿರುವಾಗಲೇ ದಿನಾ ನಿನ್ನ  ನೋಡತಾನೇ ಅದಿನಿ ನೀ ಅಂದರೆ ನಂಗು ಬೋ ಇಷ್ಟ. ದಿನಾ ನೀ ನಮ್ಮ ಅಂಗಳದಲ್ಲಿ ಆಡೊ ಆಟ ನೋಡತಾ ಯಾವಾಗ್ಲಾದ್ರು ನಿನ್ನ ಜೊತೆಯಲ್ಲಿ  ಸ್ವಚ್ಛಂದವಾಗಿ ಅಂಗಳ ದಲ್ಲಿ ಆಡಬೇಕು ಅಂತಾ ದಿನಾ ಕನಸು ಕಾಣತಿದ್ದೆ. ನೋಡಿದ್ಯಾ ದ್ಯಾಮ ಇಂದು ಕನಸು ನನಸಾಗೇದ .ಅಂಗಳ ಮಾತ್ರ ತೋಯ್ದ ತಪ್ಪಡಿ ಆಗೇದ ಆದರ ಈ ತೆಪ್ಪಾ ಮಾತ್ರ ನಮಗಾಗಿ ಕಾದಿದೆ.

ಅಪ್ಪಾ ಅವ್ವಾ ಜೀವಾ ಕೊಟ್ಟರು, ಆದರೆ ಪ್ರವಾಹದ ಸಮಯದಲ್ಲಿ ನನ್ನ  ಮರೆತು ಕಾಳಜಿಯಿಲ್ಲದೇ ಟೆಂಟ ಸೇರಿದಾರೆ, ಆದರೆ ನೀ ಮಾತ್ರ ಬಂದು ಇಷ್ಟೊಂದು  ಕಷ್ಟಪಟ್ಟು  ನನ್ನ ಜೀವಾ ಉಳಿಸಿದಿ. ನಿನ್ನಿಂದ ಬದಕೇನಿ ನಿನ್ನ ಜೊತೆಯಲ್ಲಿ ಬದಕಿತಿನಿ. ನಿನ್ನ ಬಿಟ್ಟು  ಎಲ್ಲಿಯೂ ಹೋಗೊದಿಲ್ಲ ನನಗೆ ಯಾರೂ ಬೇಡಾ, ತೆಪ್ಪದ ದಿಕ್ಕನ್ನು ಬದಲಿಸು ನಾವಿಬ್ರೂ ಜಲಪ್ರಳಯ ದಲ್ಲಿ ಕೊಚ್ಚಿ ಹೊದವರು ತಾನೆ. ಎಲ್ಲರೂ ಹಾಗೆಯೇ  ತಿಳಿದುಕೊಳ್ಳಲಿ, ಆದರೆ ನಾವಿಬ್ರೂ ಒಂದಾಗಿ ಖುಷಿಯಾಗಿ ಜೊತೆಯಲ್ಲಿ  ಇರೋಣ ಅಷ್ಟೇ ಸಾಕು ನಂಗೆ. ಕಾವೇರಿಯ ಮಾತುಗಳನ್ನು  ಅವನ ತುಟಿಗಳು ನಿಶ್ಯಬ್ಧ ವಾಗಿ ಹೀರಿಕೊಂಡವು.

ದ್ಯಾಮನ ತಲೆಯನ್ನು ತನ್ನೆದೆಯಲಿ ಹುದುಗಿಸಿ ಕೊಂಡಳು. ಕಣ್ಣಿರು ಒರಿಸಿ- ಕೊಂಡ ಅವನು ಹಣೆಗೆ ಚುಂಬಿಸಿದ. ಕಣ್ಣುಗಳು ಮುಚ್ಚಿದವು ಮೆಲ್ಲಗೆ ಮನಸ್ಸು ದೇಹಗಳೆರೆಡಕ್ಕೂ ತೃಪ್ತಿ. ದ್ಯಾಮ ಏನು ಯೋಚಿಸದೆ ತೆಪ್ಪದ ದಿಕ್ಕು ಬದಲಿಸಿದ. ದ್ಯಾಮನ ಅಂತರಂಗದ ಖುಷಿ ಯಿಂದ  ಮುಖದ ತುಂಬ ಸಂಜೆ ಸೂರ್ಯ ರಂಗೇರಿದ್ದ ಒಲವಿನ  ಋಜು ಹಾಕಿದ್ದ.    

  

ದೂರದಲ್ಲಿ ಕಾಣುವ ಮನೆಗಳೆಲ್ಲ ಕಡ್ಡಿ ಪೆಟ್ಟಿಗೆಯಂತೆ ಕಾಣತೊಡಗಿದವು. ಹೊಲಗದ್ದೆಗಳೆಲ್ಲ ಕುಂಟೆಪಿಲ್ಲೆಗೆ ಕೊರೆದ ಚೌಕಳಿಯಂತಾಗಿದ್ವು ಪ್ರವಾಹ ಏರತಾನೇ ಇತ್ತು ಧೋ ಧೋ ಮಳೆ ಸುರಿತಾನೆ ಇತ್ತು.

ದ್ಯಾಮ ನನಗೆ ಸಹಿಸಲಾರದ ಭಾರವೇ ನಿನ್ನ ಪ್ರಾಮಾಣಿಕತೆ,ಕಾವೇರಿಯ ಮಾತು ಮಾರ್ದನಿಸಿತ್ತು. ಇಬ್ಬರ ಭಾವಗಳು ಕಣ್ಣು ಗಳಲ್ಲಿ ಅನುವಾದಗೊಂಡು ರೆಪ್ಪೆಗಳಗುಂಟ ಗೀತವಾಗುತ್ತ ಹನಿಗೊಂಡವು.

ಸಮುದ್ರದ ಅಂಚಿಗೆ ಬಂದು ತೆಪ್ಪ  ನಿಂತಂತೆ, ಅಲೆಗಳು ಕುಣಿದು ಪಾದಗಳನ್ನಪ್ಪಿದಂತೆ, ದ್ಯಾಮನ ಬೆಚ್ಚಗಿನ ಕೊರಳು ಬಳಸಿ ಸ್ವಾತಂತ್ರ್ಯದ ಸುಖದಲ್ಲಿ ಅವರಿಬ್ಬರೂ ಜೊತೆಯಲ್ಲಿ ಸಾಗಿದ್ದು ದೂರದ ಹಾದಿ. ಅವನು ಸಮುದ್ರದ ಅಲೆ,ಅವಳು ತಂಪಾದ ಗಾಳಿ, ಪ್ರಕ್ಷುಬ್ಧ ಅಲೆಗಳನ್ನು ಮೀರಿ ಸದಾ ತೇಲುತಿರಲಿ ತೆಪ್ಪ.

ಪ್ರೀತಿಯ ದಡಸೇರಿಸು ದೇವರೇ ಈ ಬದುಕು ನುಂಗಿದಷ್ಟು ನಂಜಾಗದಿರಲಿ. ಲೋಕದ ದೃಷ್ಟಿಯಿಂದ ಕೊಚ್ಚಿಹೋದ ದ್ಯಾಮ ಕಾವೇರಿಯರ ಜೀವನ ಬಂಡೆಗಲ್ಲಿನ ಹೊಡೆತಗಳಿಂದ ತಪ್ಪಿಸಿಕೊಂಡು ಹಾಸುಗಲ್ಲಿನ ಮೇಲೆ ಹಸನಾದ ಬಾಳು  ಬದುಕುವಂತಾಗಲಿ. ಅನುನಯದ ಜೀವನ ಪ್ರಕೃತಿಯೊಂದಿಗೆ ಬೆರೆಯಲಿ, ಪ್ರೀತಿ ಅರಿಯಲಿ, ವರ್ಗ ವರ್ಣದ ಬೇಧ ಭಾವ ಅಳಿಯಲಿ, ಮನುಷ್ಯ ಜಾತಿ ತಾನೊಂದೆ ವಲಂ  ಎಂಬುದು ಸದಾ ಶಾಶ್ವತವಾಗಿ ಪ್ರತಿಧ್ವನಿಸುತ್ತಿರಲಿ.

✍️ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ
ಬೆಳಗಾವಿ