ಹುಟ್ಟು ಹಬ್ಬ ಆಚರಿಸಿಕೊಳ್ಳುವುದೊಂದು ಈಗ ಒಂದು ಫ್ಯಾಶೆನ್. ಕೇಕ್ ಕತ್ತಿರಿಸುವುದು, ಒಂದಿಷ್ಟು ಬಲೂನು, ಪಟಾಕಿಗಳು,ಟೋಪಿ, ದೀಪ ಹಚ್ಚುವದು, ದೀಪ ಆರಿಸುವುದು, ಮುಖಕ್ಕೆ ಕೇಕ್ ಬಳಿಯುವದು ಇತ್ಯಾದಿ ಇತ್ಯಾದಿ. ಇವೆಲ್ಲ ನಮಗೆ ಅರ್ಥವಿಲ್ಲದ ಆಚರಣೆಯ ತರಹ ತೋರುವುದು. ಹುಟ್ಟು ಹಬ್ಬದ ಫ್ಯಾಶೆನ್ ಆಚರಿಸಿಕೊಳ್ಳು ವವರಿಗೆ ಒಂದು ಜವಾಬ್ದಾರಿ ನೀಡುವ ರೀತಿಯೂ ಮಾಡಬಹುದು. ಪ್ರತೀ ವರ್ಷ ಆ ಜವಾಬ್ದಾರಿಯ ಮೌಲ್ಯಮಾಪನ ಮಾಡುವಂತೆ ಮಾಡಬಹುದು ಈ ಯೋಚನೆ. ಮಕ್ಕಳ ಹುಟ್ಟುಹಬ್ಬಕ್ಕೊಂದು ಪುಸ್ತಕ ಕೊಡುಗೆ ಯೋಜನೆ.

ಹುಟ್ಟುಹಬ್ಬ ಒಂದು ಸ್ಮರಣೀಯ ದಿನ. ಇಂದಿನ ಮಕ್ಕಳಂತೂ ಅದಕ್ಕಾಗಿ ಕಾಯುತ್ತಿರುತ್ತಾರೆ. ಶಾಲೆಗಳ ಪ್ರಾರ್ಥನಾ ಸಮಯದಲ್ಲಿ ಅಂದು ಹುಟ್ಟು ಹಬ್ಬವಿರುವ ಮಕ್ಕಳಿಗೆ ಸಾಮೂಹಿಕವಾಗಿ ಶುಭಾಶಯ ಹೇಳುವ ಕೆಲ ಆಚರಣೆ ಗಳನ್ನು ಮಾಡುತ್ತಾರೆ. ಹಾಗೆ ಯಾರಾದರೂ ಶುಭಾಶಯ ಕೋರಿದಾಗ ಮಕ್ಕಳ ಸಂತೋಷ ಹೇಳತೀರದು. ಜನ್ಮದಿನ ಆಚರಿಸಿಕೊಳ್ಳುವ ಮಕ್ಕಳು ಅಂದು ಕಲರ್ ಡ್ರೆಸ್ ಹಾಕಿಕೊಂಡು ಶಾಲೆಗೆ ಬರುತ್ತಾರೆ. ಮನೆಯಿಂದ ತಂದ ಸಿಹಿ, ಚಾಕಲೇಟ್ ಶಿಕ್ಷಕರಿಗೆ ಕೊಟ್ಟು ಅವರ ಕಾಲಿಗೆ ನಮಸ್ಕರಿಸು ತ್ತಾರೆ. ತಮ್ಮ ಸ್ನೇಹಿತರಿಗೂ ಸಿಹಿ ಹಂಚುತ್ತಾರೆ. ಸಾಮಾನ್ಯವಾಗಿ ಇಂತಹ ಆಚರಣೆಗಳು ಶಾಲೆಯಲ್ಲಿ ಇರುವಾಗ ಹುಬ್ಬಳ್ಳಿ ತಾಲೂಕಿನ ಕಿರೇಸೂರ ಸರಕಾರಿ ಪ್ರೌಢ ಶಾಲೆಯ ಆಂಗ್ಲಭಾಷಾ ಶಿಕ್ಷಕರಾದ ಡಾ.ಲಿಂಗರಾಜ ರಾಮಾಪೂರ ಶಾಲೆಯಲ್ಲೊಂದು ಪುಸ್ತಕ ಪ್ರೀತಿ ಹೆಚ್ಚಿಸಲು ಮಕ್ಕಳ ಹುಟ್ಟುಹಬ್ಬಕ್ಕೊಂದು ಪುಸ್ತಕ ಕೊಡುಗೆಯ ಯೋಜನೆಯೊಂದನ್ನು ಹಾಕಿಕೊಂಡಿ ದ್ದಾರೆ.

ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಮಕ್ಕಳಿಗೆ ಶಿಕ್ಷಕ ಸಾಹಿತಿಗಳಾಗಿರುವ ಡಾ.ಲಿಂಗರಾಜ ರಾಮಾಪೂರ ತಾವೇ ಬರೆದಿರುವ ಒಂದು ಕೃತಿ ಯನ್ನು ತಮ್ಮ ಅಟೋಗ್ರಾಪ್ ಹಾಕಿ ಉಚಿತವಾಗಿ ಉಡುಗೊರೆ ರೂಪದಲ್ಲಿ ನೀಡುತ್ತಾರೆ. ಅಲ್ಲದೇ ಆ ಪುಸ್ತಕವನ್ನು ಓದುವ ಜವಾಬ್ದಾರಿಯನ್ನು ನೀಡುತ್ತಾರೆ. ಸಹಜವಾಗಿಯೇ ಮಕ್ಕಳಿಗೆ ಇದು ಪ್ರಭಾವಿಸುವಲ್ಲಿ ಸಂದೇಹವೇ ಇಲ್ಲ. ಹುಟ್ಟುಹಬ್ಬದ ದಿನವನ್ನು ತುಂಬಾ ಮುಖ್ಯದಿನವೆಂದು ತಿಳಿದ ಪ್ರೌಢ ವಯೋಮಾನದ ಮಕ್ಕಳು ಈ ಉಡುಗೊರೆಯ ಜೊತೆಗೆ ಜವಾಬ್ದಾರಿಯನ್ನು ಮರೆಯುವುದಿಲ್ಲ. ಸಹಜವಾಗಿಯೇ ಇದು ಮಕ್ಕಳು ಪುಸ್ತಕಗಳ ಕುರಿತು ಪ್ರೀತಿ ಹೊಂದಲು ಸಾಧ್ಯವಾಗುತ್ತದೆ. ಇದರ ಜೊತೆಗೆ ಶರಣರ ವಚನಗಳು, ಮಹಾಪುರುಷರ ಜೀವನಚರಿತ್ರೆಗೆ ಸಂಬಂಧಿಸಿದ ಪುಸ್ತಕಗಳನ್ನೂ ನೀಡಿ ಮಕ್ಕಳ ಓದನ್ನು ಪ್ರೋತ್ಸಾಹಿಸಲಾಗುತ್ತದೆ.


ಪ್ರಯೋಗಶೀಲ ಶಿಕ್ಷಕ ಡಾ.ಲಿಂಗರಾಜ ರಾಮಾಪೂರ

ತಮ್ಮ ವೃತ್ತಿಯುದ್ದಕ್ಕೂ ಸದಾ ಒಂದಿಲ್ಲೊಂದು ಹೊಸತನ, ಶೈಕ್ಷಣಿಕ ಪ್ರಯೋಗಗಳಲ್ಲಿ ನಿರತರಾಗಿ ರುವ ಶಾಲೆಯ ಆಂಗ್ಲಭಾಷಾ ಶಿಕ್ಷಕ ಡಾ.ಲಿಂಗರಾಜ ರಾಮಾಪೂರ ಶಾಲೆಯ ಮುಖವಾಣಿ ಸಾಲಿಗುಡಿ- ದ್ವಿಭಾಷಿಕ ದ್ವೈಮಾಸಿಕ ಪತ್ರಿಕೆಯ ಸಂಪಾದಕ ರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಗುಬ್ಬಚ್ಚಿ ಗೂಡು, ಟೀಚರ್, ಬಾಲವಿಜ್ಞಾನ ಮುಂತಾದ ಪತ್ರಿಕೆಗಳ ಸಂಪಾದಕ ಸದಸ್ಯರಾಗಿ ಕಾರ್ಯ ಮಾಡಿರುವ ಅನುಭವ ಅವರಿಗಿದೆ. ಅವರು ನಾಡಿನ ದಿನಪತ್ರಿಕೆ ಗಳಲ್ಲಿ 300ಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. ಹಲವು ಅಂಕಣ ಗಳನ್ನು ನಿರ್ವಹಿಸಿದ್ದಾರೆ.30ಕ್ಕೂ ಹೆಚ್ಚು ಕೃತಿಗಳನ್ನು ಬರೆದ ಅವರಿಗೆ ಸಹಜವಾಗಿ ಇಂಗ್ಲೀಷ್ ಮತ್ತು ಕನ್ನಡ ಸಾಹಿತ್ಯದಲ್ಲಿ ಆಸಕ್ತಿ,ಶಾಲೆಯಲ್ಲಿನ ಪತ್ರಿಕಾ ಚಳುವಳಿಗೆ ಪೋಷಣೆಯಾಗಿದೆ. ಸ್ವತಃ ತಾವೇ ಟೈಪ್ ಮಾಡುವುದು, ಫ್ರೂಫ್ ರೀಡ್ ಮಾಡುವುದು, ವಿನ್ಯಾಸದ ಕಾರ್ಯವನ್ನು ಮಕ್ಕಳೊಂದಿಗೆ ಕೂಡಿ ಮಾಡುತ್ತಾರೆ.

ಪ್ರಾಥಮಿಕ ವಿಭಾಗದ ಅವರ 20 ವರ್ಷಗಳ ಸೇವೆಯಲ್ಲಿ ಜೋಳಿಗೆ ಗ್ರಂಥಾಲಯ, ಪಠ್ಯಾಧಾರಿತ ನಾಟಕ ಪ್ರಯೋಗ, ಸಾವಯವ ಕೃಷಿ ಚಳುವಳಿ, ವಿಜ್ಞಾನ ಮತ್ತು ಪರಿಸರ ಆಂದೋಲನ ಗಳು, ಮಕ್ಕಳ ವಿಜ್ಞಾನ ಸಮಾವೇಶ, ಪವಾಡ ರಹಸ್ಯ ಬಯಲು ಮುಂತಾದ ವಿನೂತನ ಆವಿಷ್ಕಾರ ಗಳನ್ನು ಮಾಡಿ ಯಶಸ್ವಿಯಾಗಿದ್ದಾರೆ.

ಪ್ರೌಢಶಾಲೆಗೆ ಪದೋನ್ನತಿ ಯಾದ ಬಳಿಕ ಇಲ್ಲಿಯೂ ಪತ್ರಿಕಾ ಚಳುವಳಿ ಪ್ರಯೋಗ, ಸಂತೋಷ ಸಂಗೀತ ಶಿಕ್ಷಣ, ಹುಟ್ಟು ಹಬ್ಬಕ್ಕೊಂದು ಪುಸ್ತಕ ಕಾಣಿಕೆ ರೂಪಿಸಿದ್ದು ವಿಶೇಷವಾಗಿದೆ. ತಮಗೆ ದೊರೆತ ಪ್ರಶಸ್ತಿಗಳ ಮೊತ್ತವನ್ನು ರಾಮಾಪೂರ ಸರ್ ಫೌಂಡೇಶನ್ ವತಿಯಿಂದ ಇಂತಹ ಕಾರ್ಯಗಳಿಗೆ ವಿನಿಯೋಗಿಸಲಾಗುತ್ತದೆ.

ರಾಮಾಪೂರ ಸರ್ ಫೌಂಡೇಶನ್

ಕರ್ನಾಟಕದ ಒಂದೇ ಕುಟುಂಬದಲ್ಲಿ ತಂದೆ, ತಾಯಿ, ಅಜ್ಜ, ಚಿಕ್ಕಪ್ಪ, ಚಿಕ್ಕಮ್ಮ, ತಂಗಿ, ಮಾವ ಹೀಗೆ 20ಕ್ಕೂ ಹೆಚ್ಚು ಸದಸ್ಯರು ಶಿಕ್ಷಕರಾಗಿ ಕಾರ್ಯ ಮಾಡುತ್ತಿರುವ ರಾಮಾಪೂರ ಕುಟುಂಬ ಎರಡು ತಲೆಮಾರುಗಳಿಂದ ಶಿಕ್ಷಣದ ಸೇವೆಗೆ ಅರ್ಪಿಸಿ ಕೊಂಡಿದೆ. ಇವರೆಲ್ಲ ಸೇರಿ ರಾಮಾಪೂರ ಸರ್ ಫೌಂಡೇಶನ್ ಕಟ್ಟಿಕೊಂಡಿದ್ದಾರೆ. ಫೌಂಡೇಶನ್ ಮೂಲಕ ಕ್ರಿಯಾಶೀಲ ಶಿಕ್ಷಕರಾದ ಡಾ.ಲಿಂಗರಾಜ ರಾಮಾಪೂರ ತಮ್ಮ ಸೇವೆಯುದ್ದಕ್ಕೂ ಪ್ರಶಸ್ತಿ, ಬಹುಮಾನ, ಗೌರವಧನದ ಮೊತ್ತವನ್ನೆಲ್ಲ ವಿವಿಧ ಸಾಮಾಜಿಕ, ಶೈಕ್ಷಣಿಕ, ವೈಜ್ಞಾನಿಕ ಕಾರ್ಯಗಳಿಗೆ ಮೀಸಲಿರಿಸಿದ್ದಾರೆ. ಅಲ್ಲದೇ ಪ್ರತೀ ವರ್ಷ ನಿರಂತರ ವಾಗಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಇದರಲ್ಲಿ ಹುಟ್ಟುಹಬ್ಬಕ್ಕೊಂದು ಪುಸ್ತಕ ಕೊಡುಗೆ ಯೋಜನೆಯೂ ಒಂದಾಗಿದೆ.

1)ಧಾರವಾಡದ ಪ್ರತಿಷ್ಠಿತ ಕರ್ನಾಟಕ ವಿದ್ಯಾವರ್ಧಕ ಸಂಘ ದಲ್ಲಿ ಒಂದು ಲಕ್ಷ ರೂ. ದತ್ತಿ ನಿಧಿಯಿಂದ ಪ್ರತೀ ವರ್ಷ ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಓರ್ವ ದಂಪತಿಗೆ ಶ್ರೀಮತಿ ಶಿವಗಂಗಾ ಶ್ರೀ ವೀರಪ್ಪ ರಾಮಾಪೂರ ಆದರ್ಶ ಶಿಕ್ಷಕ ದಂಪತಿ ಪುರಸ್ಕಾರ.

2) ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇಪ್ಪತೈದು ಸಾವಿರ ದತ್ತಿ ನಿಧಿಯಿಂದ ಪ್ರತೀ ವರ್ಷ ನವಲಗುಂದದ ಮೊರಬ ಗ್ರಾಮದಲ್ಲಿ ಶಾಲಾ ಅಂಗಳದಲ್ಲಿ ಸಾಹಿತ್ಯ ಸಂವಾದದ ಮೂಲಕ ಮಕ್ಕಳಲ್ಲಿ ಸಾಹಿತ್ಯ, ಪರಿಸರ, ಕನ್ನಡ ಪ್ರಜ್ಞೆ ಜಾಗೃತಿ.

3)ರಾಜ್ಯ ವಿಶೇಷ ಶಿಕ್ಷಕ ಪ್ರಶಸ್ತಿ ವತಿಯಿಂದ ದೊರೆತ ಹದಿನೇಳು ಸಾವಿರ ರೂ.ಗಳ ದತ್ತಿ ನಿಧಿ ಸ್ಥಾಪನೆ. ಪ್ರತೀ ವರ್ಷ ಹುಬ್ಬಳ್ಳಿ ಆನಂದನಗರ ಸರಕಾರಿ ಶಾಲೆಯಲ್ಲಿ ಮಕ್ಕಳಿಗೆ ಚಿನ್ನರ ಚಿನ್ನ ಪ್ರಶಸ್ತಿ ಯೋಜನೆ.

4) ಟೈಮ್ಸ್ ಗ್ರುಪ್ ವತಿಯಿಂದ ದೊರೆತ ಹತ್ತು ಸಾವಿರ ಪ್ರಶಸ್ತಿ ಮೊತ್ತದಿಂಧ ಕಲಘಟಗಿಯ ಶಿಂಗನಹಳ್ಳಿ ಸರಕಾರಿ ಶಾಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಿರಂತರ ಪ್ರೋತ್ಸಾಹ.

5) ವಿಜ್ಞಾನದ ಅಲೆದಾಟ-ಕೃತಿಗೆ ದೊರೆತ ಅಕಾಡೆಮಿ ಪ್ರಶಸ್ತಿ ಹದಿನೈದು ಸಾವಿರ ರೂಪಾಯಿ ಹಣವನ್ನು ಚಿಲಿಪಿಲಿ ಪುಸ್ತಕ ಪ್ರಕಟಣೆ ಯೋಜನೆಗೆ ನೆರವು.

6) ಧಾರವಾಡ ಗುಬ್ಬಚ್ಚಿ ಗೂಡು ವಿಶೇಷ ಶಾಲೆ ಯಲ್ಲಿ ಐವತ್ತು ಸಾವಿರ ದತ್ತಿ ಮೂಲಕ ನಿರಂತರ ವಿಶೇಷ ಚಟುವಟಿಕೆಗಳಿಗೆ ಪ್ರೋತ್ಸಾಹ.

7) ಏನು ಏಕೆ ಹಿಂಗೇಕೆ-ಕೃತಿಗೆ ದೊರೆತ ಅಕಾಡೆಮಿ ಪ್ರಶಸ್ತಿ ಹಣ ಹದಿನೈದು ಸಾವಿರ ರೂ. ದತ್ತಿ ಮೂಲಕ ಕಿರೇಸೂರ ಸರಕಾರಿ ಪ್ರೌಢಶಾಲೆಯಲ್ಲಿ ಕ್ರೀಡೆ. ಪಠ್ಯೇತರ ಚಟುವಟಿಕೆ ಪ್ರೋತ್ಸಾಹಿಸುವುದ ಕ್ಕೋಸ್ಕರ ಪ್ರತೀ ವರ್ಷ ಯುವ ಚೇತನ ಪುರಸ್ಕಾರ.

8) ಧಾರವಾಡ ಡೈಯಟ್ ನ ಕಟ್ಟೀಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನಕ್ಕೆ ಡಾ.ಡಿ.ಎಸ್.ಕರ್ಕಿ ಸ್ಮರಣಾರ್ಥ ವಾಗಿ ಶಿಕ್ಷಣ ಪರಿಶ್ರಮ ದತ್ತಿಗೆ ನೆರವು. ಪ್ರತೀ ವರ್ಷ ಕಾರ್ಯಕ್ರಮ.

9) ಶಾಲಾ ವಿದ್ಯಾರ್ಥಿಗಳ ಹುಟ್ಟುಹಬ್ಬಕ್ಕೊಂದು ನಿರಂತರ ಪುಸ್ತಕ ಕೊಡುಗೆ ಪುಸ್ತಕ ಪ್ರೀತಿಗೆ ಕಾರಣಗಳು, ಜ್ಞಾನಾರ್ಜನೆಗಾಗಿ ಗ್ರಂಥಕೋಶ ಪುಸ್ತಕಗಳನ್ನು ಓದುವುದು, ಪ್ರವಾಸ ಕೈಗೊಳ್ಳು ವುದು ಬಹುಮುಖ್ಯ. ಇದರಿಂದ ಜ್ಞಾನ ಸಂಪತ್ತು ಅಧಿಕಗೊಳ್ಳುವುದು. ಅಷ್ಟೇ ಅಲ್ಲ ಓದುಗರ ವ್ಯಕ್ತಿತ್ವ ಬೆಳೆದು ಅವರ ಮಾನಸಿಕ ಸಮತೋಲನ ರೂಪು ಗೊಳ್ಳುತ್ತದೆ. ವರ್ತಮಾನ, ಭೂತಕಾಲ ಹಾಗೂ ಭವಿಷ್ಯತ್ ಕಾಲದ ಜ್ಞಾನವನ್ನು ಬೆಳೆಸಿಕೊಳ್ಳಲು ಪುಸ್ತಕಗಳು ನೆರವಾಗುತ್ತವೆ.

ಗಾಂಧೀಜಿಯವರು ‘ಪುಸ್ತಕ ಓದುವ ಹವ್ಯಾಸ ಉಳ್ಳವರು ಎಲ್ಲಿ ಹೋದರೂ ಸುಖ,ಸಂತೋಷ ದಿಂದ ಸುಖವಾಗಿರಬಲ್ಲರು’ ಎಂದಿದ್ದಾರೆ. ಮಾನವೀಯ ಮೌಲ್ಯಗಳುಳ್ಳ ಪುಸ್ತಕವನ್ನು ಯಾವುದನ್ನೇ ಓದಿದರೂ ಉದಾತ್ತವೂ,ಉನ್ನತವೂ ಆದ ವಿಚಾರ ಧಾರೆಯಾಗಿರುತ್ತದೆ. ಅಮರತ್ವದ ತಿಳಿವು ಇದರಿಂದ ಸಾಧ್ಯವಾಗುತ್ತದೆ. ಉತ್ತಮ ಪುಸ್ತಕಗಳು ನಮ್ಮ ಸಂಗಾತಿಗಳಾಗಿದ್ದರೆ ಮನಸ್ಸು ಸಂತಸ ದಿಂದ ಇರುವುದು. ವಿ.ಸ್ಕಾರೆಟ್ ಎನ್ನುವ ವಿದ್ವಾಂಸರು ‘ಸುಖವನ್ನು ಸಂಗ್ರಹಿಸುವುದಾದರೆ ಪುಸ್ತಗಳನ್ನು ಸಂಗ್ರಹಿಸು’ ಎಂದಿದ್ದಾರೆ.ಮನುಷ್ಯನ ಏಕಾಂತವನ್ನು ಹೊಡೆದೊಡಿಸಿ ಬದುಕಿಗೆ ಸ್ಪಷ್ಟವಾದ ನೆಲೆಯನ್ನು ಪುಸ್ತಕಗಳು ನೀಡುತ್ತವೆ. ಆಗ ಸುಖ ಪ್ರಾಪ್ತವಾಗುತ್ತದೆ.

ಓದು ಎಲ್ಲವನ್ನೂ ಸಾಧ್ಯವಾಗಿಸುತ್ತದೆ.ಪುಸ್ತಕಗಳನ್ನ ಓದುವುದರಿಂದ ಏನನ್ನಾದರೂ ಸಾಧಿಸಬಹುದು ಎಂಬುದು ಅಮೆರಿಕದ ಜೇಮ್ಸ್ ಎ.ಗಾರಪೀಲ್ಸ್ ಉದಾಹರಣೆ. ತೀರ ಬಡಕುಟುಂಬದಲ್ಲಿ ಜನಿಸಿದ ಈತ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡಿದ್ದ. ಅವರಿವರ ಮನೆಗೆಲಸ ಮಾಡಿ, ಕಲ್ಲು ಒರೆಸಿ, ಕೆತ್ತನೆ ಕೆಲಸ ಮಾಡಿ ಅದರಿಂದ ಬಂದ ಕೂಲಿಯಿಂದ ಪುಸ್ತಕ ಕೊಂಡುಕೊಳ್ಳುತ್ತಿದ್ದ. ಸ್ನೇಹಿತರಿಂದ ಪುಸ್ತಕ ಗಳನ್ನು ಪಡೆಯುತ್ತಿದ್ದ.ದಿನದ ದುಡಿಮೆ ಉಪಹಾರ, ಊಟದ ಸಮಯದಲ್ಲಿಯೂ ಪುಸ್ತಕಗಳನ್ನು ಒದುತ್ತಿದ್ದ. ಬಸ್ಸಿಗಾಗಿ ಕಾಯುವಾಗ ಪುಸ್ತಕ ಓದುತ್ತಿದ್ದ. ಕೇವಲ ಇಪ್ಪತ್ತಾರನೇ ವಯಸ್ಸಿನಲ್ಲಿ ಅಮೆರಿಕದ ಓಹಿಯೋ ಪ್ರಾಂತದ ಸಿನೇಟ್ ಸದಸ್ಯ ನಾದ. ತನ್ನ ಮೂವತ್ಮೂರನೇ ವಯಸ್ಸಿನಲ್ಲಿ ತನ್ನ, ಜ್ಞಾನ, ಅನುಭವದ ಮೂಲಕ ಅಮೆರಿಕದ ರಾಷ್ಟ್ರದ ಅಧ್ಯಕ್ಷನಾದ.

ಬಂಕಿಮಚಂದ್ರ ಚಟರ್ಜಿಯವರು ಹೇಳುವಂತೆ ‘ಮೈಮೇಲೆ ಹರಕು ಬಟ್ಟೆಯಿದ್ದರೂ ಚಿಂತೆ ಯಿಲ್ಲ. ಕೈಯಲ್ಲೊಂದು ಪುಸ್ತಕವಿರಲಿ.’ ಎಷ್ಟು ಅರ್ಥಗರ್ಭಿತ ಮಾತು. ಎಲ್ಲ ಪುಸ್ತಕಗಳನ್ನು ಕೊಂಡು ಓದಲಿಕ್ಕಾಗದು. ಅದಕ್ಕಾಗಿಯೇ ಡಾ.ರಾಮಾಪೂರವರು ಇಂತಹ ಪ್ರಯೋಗವನ್ನು ಮಾಡುತ್ತಿದ್ದಾರೆ.

ಓದುವ ಮಾತುಗಳು

*ಒಳ್ಳೆಯ ಓದುಗರು ಮಾತ್ರ ಒಳ್ಳೆಯ ಪುಸ್ತಕ ರಚಿಸಲು ಸಾಧ್ಯ-ಎಮರ್ಸನ್ 
*ಕಡಿಮೆ ಖರ್ಚಿನಲ್ಲಿ ಅತೀಹೆಚ್ಚು ಮನೋ ರಂಜನೆ ಕೊಡುವ ಸಾಧನ ಪುಸ್ತಕ -ಬರ್ನಾಡ್ ಷಾ
*ಶ್ರೇಷ್ಠ ಪುಸ್ತಕಗಳನ್ನು ಓದುವುದ ರಿಂದ ಉತ್ತಮ ಅಭಿಪ್ರಾಯಗಳು ನೆಲೆಗೊಂಡು ನಾವೂ ಉತ್ತಮರಾಗು ತ್ತೇವೆ‌ -ಡಾ.ಎಸ್.ರಾಧಾಕೃಷ್ಣನ್.

*ಮನುಷ್ಯರಿಂದ ಮನುಷ್ಯರು ಹುಟ್ಟುವ ಹಾಗೆ ಪುಸ್ತಕದಿಂದ ಪುಸ್ತಕಗಳು ಹುಟ್ಟುತ್ತವೆ -ಡಾ.ವಿ.ಕೃ.ಗೋಕಾಕ್.

*ಅತ್ಯುತ್ತಮ ಪುಸ್ತಕಗಳು ಉತ್ತಮ ಸಂಗಾತಿಗಳು -ಪಾರ್ಕರ್

*ಗ್ರಂಥವಿಲ್ಲದ ಕೋಣೆ ಆತ್ಮವಿಲ್ಲದ ಶರೀರದಂತೆ -ಬುಜೋ.

*ನಿಮ್ಮ ಮತ್ತು ಪ್ರಪಂಚದ ನಡುವೆ ಪುಸ್ತಕದ ಅಡ್ಡಗೋಡೆಯಿರಲಿ -ರವೀಂದ್ರನಾಥ ಟ್ಯಾಗೋರ್.

ಹೇಗಿವೆ ಪುಸ್ತಕ ಓದುವ ಮಾತುಗಳು? ಬನ್ನಿ ಓದೋಣ ಎನ್ನುತ್ತಾರೆ ಶಿಕ್ಷಕ ಸಾಹಿತಿ ಡಾ. ಲಿಂಗರಾಜ ರಾಮಾಪೂರ.